ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಹೆಕ್ಕುವ ಕೆಲಸದಲ್ಲಿ ನಿರತರಾಗಿದ್ದ 9 ಬಾಲ ಕಾರ್ಮಿಕರನ್ನು ಶುಕ್ರವಾರ ಬೆಳಗ್ಗೆ 5.30ರ ವೇಳೆಗೆ ಬಾಲ ಕಾರ್ಮಿಕ ಇಲಾಖಾ ಅಧಿಕಾರಿಗಳು ವಶಕ್ಕ್ಕೆ ತೆಗೆದುಕೊಂಡು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.
9 ಮಕ್ಕಳಲ್ಲಿ 5 ಬಾಲಕಿಯರು ಹಾಗೂ 4 ಬಾಲಕರಾಗಿದ್ದಾರೆ. ಇವರು ಹೊರೆ ಜಿಲ್ಲೆಗಳಿಂದ ಬಂದ ವಲಸೆ ಕಾರ್ಮಿಕರ ಮಕ್ಕಳು. ಮಲ್ಪೆ ಬಂದರಿನಲ್ಲಿ ಮಕ್ಕಳು ಕೆಲಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಶಿಕ್ಷಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಾಳಿ ನಡೆಸಿತು.
ಹೆಣ್ಣು ಮಕ್ಕಳನ್ನು ನಿಟ್ಟೂರಿನ ಬಾಲಕಿಯರ ಬಾಲ ಮಂದಿರಕ್ಕೆ, ಗಂಡು ಮಕ್ಕಳನ್ನು ವಿಶ್ವಾಸದ ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.