ಧಾರವಾಡ, ಮಾ.10: ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಇಂದು ಮುಂಜಾನೆ ನಡೆದಿದೆ.
ಇಲ್ಲಿನ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಾರಲಿಂಗ ನಗರದ ಗೃಹಿಣಿ ಗೀತಾ (33) ಆತ್ಮಹತ್ಯೆ ಮಾಡಿಕೊಂಡವರು. ಮನೋಹರ(7), ಮೇಘಾ (12) ಜನ್ಮ ಕೊಟ್ಟ ತಾಯಿಯಿಂದಲೇ ಸಾವಿಗೀಡಾದ ನತದೃಷ್ಟ ಮಕ್ಕಳು. ಪತಿ ಮಡಿವಾಳಪ್ಪ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ.
ಜೀವನ ನಿರ್ವಹಣೆಗೆ ಬಿಡಿಗಾಸು ನೀಡದೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಂಡತಿ ಮಕ್ಕಳನ್ನು ಹಿಂಸಿಸುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಗೀತಾ ಮನನೊಂದು ತನ್ನ ಇಬ್ಬರು ಮಕ್ಕಳನ್ನು ಕೊಂದು ನಂತರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ-ಮಕ್ಕಳ ಸಾವಿನ ನಂತರ ಪತಿ ಮಡಿವಾಳಪ್ಪ ಪರಾರಿಯಾಗಿದ್ದಾನೆ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.