ಕರ್ನಾಟಕ

ಮಲ್ಲಕಂಬದ ಛಲದಂಕಮಲ್ಲರು!

Pinterest LinkedIn Tumblr

kbec12lead1_0

ಗದಗದ ಲಕ್ಷ್ಮೇಶ್ವರದಲ್ಲಿ ‘ಮಲ್ಲಕಂಬ’ ಎಂದರೆ ಬೆಳೆಯುವ ಮಕ್ಕಳು ಬಾಲ್ಯದಲ್ಲಿ ಆಡಲೇಬೇಕಾದ ಆಟ ಮತ್ತು ಕಲಿಯಬೇಕಾದ ಜನಪದ ಕಲೆ. ಮಲ್ಲಕಂಬ, ಕುಸ್ತಿಪಟು, ಕಬಡ್ಡಿ ಆಟಗಾರರು ಇಲ್ಲಿ ಹಾದಿಗೊಬ್ಬರಂತೆ ಸಿಗುತ್ತಾರೆ.
ಮಲ್ಲಕಂಬದ ಕಠಿಣ ಪಟ್ಟುಗಳನ್ನು ಲೀಲಾಜಾಲವಾಗಿ ಮಾಡಿ ತೋರುವ ಈ ಕ್ರೀಡಾಕಲೆ ಇಲ್ಲಿನ ಮಕ್ಕಳಲ್ಲಿ ರಕ್ತಗತವಾಗಿದೆ. ಗಂಡು ಹೆಣ್ಣೆಂಬ ಭೇದವಿಲ್ಲದೇ ಈ ಕಲೆಯಲ್ಲಿ ಪಳಗಿದವರ ಹಲವು ಉದಾಹರಣೆಗಳೂ ಸಿಗುತ್ತವೆ. ಮಲ್ಲಕಂಬದ ತವರೂರಾಗಿರುವ ಇಲ್ಲಿ ಹಲವು ಕ್ರೀಡಾಪಟುಗಳ ಕಥೆಗಳು ಹಾಸುಹೊಕ್ಕಾಗಿವೆ.
ಆಂಜನೇಯನೆಂದರೆ ಆ ಹುಡುಗ, ಹುಡುಗಿಯರಿಗಿಷ್ಟ. ಮರದ ಮೇಲೆ ಹನುಮಂತರಾಯ ಮಾಡುವ ಕಸರತ್ತುಗಳನ್ನೆಲ್ಲ ಅವರು ಲೀಲಾಜಾಲವಾಗಿ ಮಾಡಿ ತೋರಿಸುವರು. ಆಂಜನೇಯ ಮರದ ಕೊರಡೊಂದನ್ನು ಮುರಿದು ತೋಡಿ ರಾಗ (ಹನುಮ ತೋಡಿ) ನುಡಿಸಿ ಕಲ್ಲು ಕರಗಿಸಿದ.
ಆದರೆ ಈ ಬಾಲಕ, ಬಾಲಕಿಯರು ಕಲ್ಲು ಕರಗಿಸುವುದಿಲ್ಲ, ಬದಲಾಗಿ ಎಣ್ಣೆ ಸವರಿದ ಕಂಬದ ಮೇಲೆ ಕಸರತ್ತು ಮಾಡಿ ಜನರ ಮನಸ್ಸು ಕರಗಿಸುತ್ತಾರೆ. ಅವರೆಲ್ಲ ಬಡ ರೈತಾಪಿ ಕುಟುಂಬದ ಮಕ್ಕಳು. ಟ್ರ್ಯಾಕ್‌ಸೂಟು, ಸ್ಪೋರ್ಟ್‌ ಬೂಟು ತೊಟ್ಟು ಬಂದವರಲ್ಲ. ಆದರೆ ಅವರ ಮಲ್ಲಕಂಬದ ಕಸರತ್ತು, ಗತ್ತು ಯಾವ ಆಟಕ್ಕೂ ಕಡಿಮೆಯಿಲ್ಲ.
ಮುದ್ರಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಬರದ ಸೀಮೆ ಗದಗ ಜಿಲ್ಲೆಯ ಆಕರ್ಷಣೆ ಮಲ್ಲಕಂಬ. ಕಲೆ, ಕ್ರೀಡೆ ಎರಡೂ ಆಗಿರುವ ಮಲ್ಲಕಂಬವನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಕೆಲ ಕಲಿಗಳು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ಷ್ಮೇಶ್ವರವನ್ನು ‘ಮಲ್ಲಕಂಬದ ತವರೂರು’ ಎಂದೂ ಕರೆಯುತ್ತಾರೆ.
ಪೌರಾಣಿಕ ಹಿನ್ನೆಲೆ ಹೊಂದಿರುವ ಮಲ್ಲಕಂಬ, ಹನುಮ, ಭೀಮ, ಜರಾಸಂಧರ ನೆಚ್ಚಿನ ಆಟವಾಗಿತ್ತಂತೆ. ತಮಗಿಂತಲೂ ಬಲಿಷ್ಠವಂತರು ಸಿಗದಿದ್ದಾಗ ಅವರು ಕಂಬದ ಜೊತೆ ಸೆಣಸುತ್ತಿದ್ದರಂತೆ. ಇಂತಹ ಐತಿಹಾಸಿಕ ಮಲ್ಲಕಂಬದಾಟ ಲಕ್ಷ್ಮೇಶ್ವರದಂತಹ ಊರಲ್ಲಿ ಇನ್ನೂ ಜೀವಂತವಾಗಿದೆ.
ಕರ್ನಾಟಕ ರಾಜ್ಯ ಮಲ್ಲಕಂಬ ಸಂಸ್ಥೆ ಲಕ್ಷ್ಮೇಶ್ವರದಲ್ಲಿದ್ದು, ಅಲ್ಲಿಂದಲೇ ರಾಜ್ಯ ಹಾಗೂ ರಾಷ್ಟ್ರತಂಡದ ಆಯ್ಕೆ ಪ್ರ­ಕ್ರಿಯೆ ನಡೆಯುತ್ತದೆ. ಜೊತೆಗೆ ಸಂಘದ ವತಿಯಿಂದ ಉತ್ತರ ಕರ್ನಾಟಕದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಮಲ್ಲಕಂಬ ಚಾಂಪಿಯನ್‌ಶಿಪ್‌ ನಡೆಯುತ್ತವೆ.
ಸಾಹಸಿಗರ ಊರು ತುಳಸಿಗಿರಿ
ಲಕ್ಷ್ಮೇಶ್ವರ ತಾಲ್ಲೂಕಿನ ‘ತುಳಸಿಗಿರಿ’ ಸಾಹಸಿಗರ ಊರು ಎಂದೇ ಪ್ರಸಿದ್ಧಿ. ಇಲ್ಲಿರುವ ಐತಿಹಾಸಿಕ ಹನುಮಂತ ದೇವಾಲಯ ಗ್ರಾಮಸ್ಥರಲ್ಲಿ ಕ್ರೀಡಾ ಮನೋಭಾವ ತುಂಬುವ ಜಾಗ. ಗ್ರಾಮದ ಪ್ರತಿ ಮನೆಯಲ್ಲಿ ಕುಸ್ತಿಪಟುಗಳು, ಕಬಡ್ಡಿ ಆಟಗಾರರಿದ್ದಾರೆ.
ಈಗಾಗಲೇ ತುಳಸಿಗಿರಿ ಮಲ್ಲಕಂಬ ಹಾಗೂ ಸೈಕ್ಲಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ರಾಜ್ಯ ಮಲ್ಲಕಂಬ ತಂಡದಲ್ಲಿ ಬಹುತೇಕ ಮಂದಿ ತುಳಸಿಗಿರಿಯವರು ಎನ್ನುವುದು ವಿಶೇಷ. ಈ ಊರಿನಲ್ಲಿ ಮಲ್ಲಕಂಬ ಎಂದರೆ ಬೆಳೆಯುವ ಮಕ್ಕಳು ಬಾಲ್ಯದಲ್ಲಿ ಆಡಲೇಬೇಕಾದ ಆಟ ಮತ್ತು ಕಲಿಯಬೇಕಾದ ಜನಪದ ಕಲೆ ಆಗಿದೆ.
2004ರಲ್ಲಿ ತುಳಸಿಗಿರಿ ಸರ್ಕಾರಿ ಪ್ರೌಢಶಾಲೆಗೆ ಮಲ್ಲಕಂಬ ಪಟು ಸಿ.ಕೆ. ಚನ್ನಾಳ ಅವರು ದೈಹಿಕ ಶಿಕ್ಷಣ ನಿರ್ದೇಶಕರಾಗಿ ಬಂದಮೇಲೆ ಗ್ರಾಮ ಮಲ್ಲಕಂಬದಲ್ಲಿ ಪ್ರಸಿದ್ಧಿ ಪಡೆಯಿತು. ಗ್ರಾಮದಲ್ಲಿದ್ದವರ ಕ್ರೀಡಾ ಮನೋಭಾವವನ್ನು ಬಳಸಿಕೊಂಡ ಚನ್ನಾಳರು ತುಳಸಿಗಿರಿಯನ್ನು ಮಲ್ಲರ ಊರನ್ನಾಗಿ ನಿರ್ಮಿಸುವಲ್ಲಿ ಯಶಸ್ವಿಯಾದರು.
ಆರಂಭದಲ್ಲಿ ಐದಾರು ಅಡಿಯ ಕಂಬದಲ್ಲಿ ಮಲ್ಲಕಂಬ ಆಡುತ್ತಿದ್ದ ಮಕ್ಕಳು ಇಂದು 16 ಅಡಿ ಎತ್ತರದ ಮಲ್ಲಕಂಬದಲ್ಲಿ ಕಸರತ್ತು ಮಾಡುತ್ತಾರೆ. ಮಲ್ಲಕಂಬ ಅಭ್ಯಾಸ ನಡೆಯದ ದಿನವೇ ಇಲ್ಲ. ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ 8 ಗಂಟೆವರೆಗೆ, ಸಂಜೆ 4.30ರಿಂದ 6.30ರವರೆಗೆ ಮಲ್ಲಕಂಬ ಅಭ್ಯಾಸ ನಡೆಯುತ್ತದೆ.
ಬಾಲ್ಯದಲ್ಲೇ ಮಲ್ಲಕಂಬ ಅಭ್ಯಾಸ ಮಾಡುವ ಈ ಮಕ್ಕಳು ಬದುಕಿನಲ್ಲೂ ಕ್ರೀಡಾ ಮನೋಭಾವ ಮೆರೆದಿದ್ದಾರೆ. ಕೆಲ ಯುವಕರು ದೈಹಿಕ ಶಿಕ್ಷಣದಲ್ಲಿ ಪದವಿ ಪಡೆದು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ. ಬಿ.ಪಿಎಡ್‌ ಮಾಡಿಕೊಂಡು ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ತುಳಸಿಗಿರಿಯ ಮಾರುತಿ ಬಾರಕೇರ ಹನ್ನೊಂದು ಬಾರಿ ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಸಾಧನೆ ಮೆರೆದಿದ್ದಾರೆ.
ಕಂಬದ ಮೇಲೆ ತಲೆ ಕೆಳಗೆ ಮಾಡಿ ಕೈಗಳ ಮೇಲೆ ನಿಲ್ಲುವ (ಹ್ಯಾಂಡ್‌ಸ್ಟ್ಯಾಂಡ್‌) ಪಟ್ಟಿನಲ್ಲಿ ಪರಿಣತಿ ಹೊಂದಿರುವ ಮಾರುತಿ, ಸದ್ಯ ಮಲ್ಲಕಂಬ ತರಬೇತುದಾರರಾಗಿದ್ದಾರೆ. ಮಲ್ಲಕಂಬ ಇಡೀ ತುಳಸಿಗಿರಿ ಗ್ರಾಮವನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಬೆಸೆದಿದ್ದು ಊರಿನ ಹಿರಿಮೆ ಹೆಚ್ಚಿಸಿದೆ.
ಗ್ರಾಮಸ್ಥರೆಲ್ಲ ಒಟ್ಟಾಗಿ ಹಣ ಹೊಂದಿಸಿ ಊರಿನ ಮಕ್ಕಳನ್ನು ಮಲ್ಲಕಂಬ ಪ್ರದರ್ಶನಕ್ಕೆ ಕಳಿಸುತ್ತಾರೆ. ತುಳಸಿಗಿರಿ ಮಾತ್ರವಲ್ಲದೆ ರಾಮಗಿರಿ, ನರೇಗಲ್ಲ, ಶಿರಗುಪ್ಪಿ, ಕೋಳಿವಾಡ, ಎಲವಿಗಿ, ಚಿಕ್ಕೂರು, ಉಪ್ಪಿನ ಬೆಟಗೇರಿ, ಹರ್ಲಾಪುರ, ಸುಲ್ತಾನ್‌ಪುರ ಮುಂತಾದ ಊರುಗಳಲ್ಲೂ ಮಲ್ಲಕಂಬ ಪಟುಗಳಿದ್ದಾರೆ.
ಅವಳಿ ಮಕ್ಕಳಿಗೆ ತಾಯಿಯೇ ಗುರು
ಅಜಯ್‌–ವಿಜಯ್‌ ಸಹೋದರರು ಹಾಗೂ ದೀಪಾ– ರೂಪಾ ಸಹೋದರಿಯರು ಅವಳಿ ಜವಳಿ ಮಕ್ಕಳು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಇವರಿಗೆ ತಾಯಿಯೇ ಗುರು. ಟೈಲರಿಂಗ್‌ ಮಾಡುತ್ತಾ ತಾಯಿ ಮಕ್ಕಳನ್ನು ಸಾಕಿದರು. ಓದಿನಲ್ಲೂ ಮುಂದಿರುವ ಈ ಮಕ್ಕಳಿಗೆ ವಿಶ್ವಾಸ ಕೊಟ್ಟಿದ್ದು ಮಲ್ಲಕಂಬ.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುವ ಅಜಯ್‌ ಮಲ್ಲಕಂಬದಲ್ಲಿ ಭರವಸೆಯ ಹುಡುಗ. ಸ್ಪರ್ಶಿಸದೆ ಕುದುರೆ ಏರುವ (ಬಿನ್‌ ಹಾಥ್‌ ಘೋಡಾ–ಯುದ್ಧಪಟ್ಟು) ಹಾಗೆಯೇ ಕಂಬ ಏರುವ ಅಜಯ್‌, ದೇಹವನ್ನು ಕಡ್ಡಿಯಂತೆ ಹದ ಮಾಡಿಕೊಂಡಿದ್ದಾರೆ. ತಮ್ಮ ವಿಜಯ್‌ ಕೂಡ ಕಂಬದ ಮೇಲೆ ವೀರಭದ್ರಾಸನ, ಓಂಕಾರಾಸನ, ಏಕಪಾದ, ದ್ವಿಪಾದ ಕಂದರಾಸನ ಹಾಕುವಲ್ಲಿ ಪರಿಣತಿ ಪಡೆದಿದ್ದಾರೆ.
ಹಗ್ಗದ ಮಲ್ಲಕಂಬದಲ್ಲಿ ಸಾಧನೆ ಮಾಡಿರುವ ರೂಪಾ– ದೀಪಾ ಸಹೋದರಿಯರು ಮೂರು ಬಾರಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಕಾಲೇಜು ಕಲಿಯುತ್ತಿರುವ ಈ ಸಹೋದರಿಯರು ರಾಜ್ಯದ ಎಲ್ಲ ಉತ್ಸವಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಹಗ್ಗದ ಮಲ್ಲಕಂಬ ಮತ್ತು ಬಾಲಿಕೆಯರು
ತುಳಸಿಗಿರಿ ಅನುಪಮಾ, ಮಲ್ಲಕಂಬ ಕಲಿಯಲು ಹೊರಟಾಗ ಕೃಷಿಕ ತಂದೆ ಹನುಮಂತ ಬೇಡ ಎಂದಿದ್ದರು. ಹೆಣ್ಣುಮಕ್ಕಳ ದೇಹಕ್ಕೆ ಮಲ್ಲಕಂಬ ಕಲೆ ಸರಿಹೊಂದುವುದಿಲ್ಲ ಎಂದು ವೈದ್ಯರು ಹೇಳಿದ್ದ ಮಾತು ಅವರ ತಲೆ ಕೊರೆಯುತ್ತಿತ್ತು. ಆದರೆ ಅನುಪಮಾ ಇಟ್ಟ ಹೆಜ್ಜೆಯನ್ನು ಹಿಂದಿಕ್ಕಲಿಲ್ಲ.
ತಂದೆಯ ಮಾತು ಮೀರಿ ಕಂಬ ಏರಿದ ಅನುಪಮಾ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದಾಗ ತಂದೆ ಹನುಮಂತ ಹೆಮ್ಮೆಪಟ್ಟರು. ಕಂಬದ ಮೇಲೆ ನಟರಾಜಾಸನ, ನಿದ್ರಾಸನ, ಶವಾಸನವನ್ನು ಸಹಜ ಎನ್ನುವಂತೆ ಮಾಡುವಷ್ಟು ಪರಿಣಿತರು. ಮಗಳ ಸಾಧನೆ ಕಂಡ ತಂದೆ ಹನುಮಂತ, ವೈದ್ಯರ ಮಾತನ್ನು ಪಕ್ಕಕ್ಕಿಟ್ಟು ಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಮಲ್ಲಕಂಬ ತರಬೇತುದಾರ ಮೊಹಮ್ಮದ್‌ ಐ ಕಣಕೆ ಅವರ ಮಗಳು ಕೆ.ಬಿ.ಎ ಸಿದ್ದಿಕಾ ಕಂಬದಿಂದ ಬಿದ್ದು ಗಾಯ ಮಾಡಿಕೊಂಡಿದ್ದರು. ವೈದ್ಯರು ತಕ್ಷಣ ಮಲ್ಲಕಂಬ ಆಟ ನಿಲ್ಲಿಸುವಂತೆ ಸೂಚಿಸಿದರು. ಆದರೆ ಸಿದ್ದಿಕಾ ಕಂಬದಾಟ ಮಾತ್ರ ನಿಲ್ಲಲಿಲ್ಲ. ಇವರಷ್ಟೇ ಅಲ್ಲದೆ ಲಕ್ಷ್ಮೇಶ್ವರ ಸಮೀಪದ ಗ್ರಾಮಗಳ ಹೆಣ್ಣುಮಕ್ಕಳು ಹಗ್ಗದ ಮಲ್ಲಕಂಬದಲ್ಲಿ ಸಾಧನೆ ಮಾಡಿದ್ದಾರೆ.
ಹಗ್ಗ ಹಿಡಿದು ನೇತಾಡುತ್ತಾ ಜಿಗಿಯುವ ‘ಜ್ವಾಪ್‌’ ಬಗ್ಗೆ ಅನ್ನಪೂರ್ಣಾ ದಂಡಿನಾಗೆ ಯಾವ ಭಯವೂ ಇಲ್ಲ. ಪದ್ಮಾಸನದಲ್ಲಿ ತೇಜಸ್ವಿನಿ ಕುಂಬಾರ ಗಮನ ಸೆಳೆದರೆ, ಓಂಕಾರಾಸನದಲ್ಲಿ ಶಿಲ್ಪಾ ಅಡಗಲ್‌, ಈಶ್ವರಿ ರಾಠೋಡ್‌, ದ್ವಾಮವ್ವ, ಅಕ್ಷತಾ ಮುಂತಾದವರು ಗಮನ ಸೆಳೆಯುತ್ತಾರೆ.
ಸಂಬರ್‌ಶಾಟ್‌ ಮಾರುತಿ
ಮಲ್ಲಕಂಬದಲ್ಲಿ ಸಂಬರ್‌ಶಾಟ್‌ ಅತ್ಯಂತ ಕಠಿಣ ಆಸನ. ಈ ಆಸನಕ್ಕೆ ಮಾರುತಿಯದ್ದು ಹೇಳಿ ಮಾಡಿಸಿದ ದೇಹ. ಲೀಲಾಜಾಲ ಪಟ್ಟುಗಳಿಗೆ ಹೆಸರಾಗಿರುವ ಮಾರುತಿ ‘ಕ್ರೀಡಾರತ್ನ’ ಪ್ರಶಸ್ತಿ ಪುರಸ್ಕೃತ. ಸೂಜಿಯೊಳಗೆ ದಾರ (ಸೂಯಿದಾರ) ಪೋಣಿಸುವ ಹಾಗೆ ದೇಹವನ್ನು ಕಂಬಕ್ಕೆ ಪೋಣಿಸಿಕೊಳ್ಳುವ ಮಾರುತಿ ನೋಡುಗರ ಹೃದಯ ಅರಳಿಸುತ್ತಾರೆ.
ಧ್ವಜ ಹಾರಾಡುವ ಹಾಗೆ (ಫ್ಲ್ಯಾಗ್‌) ಸಂಗಪ್ಪ ದೇಹವನ್ನು ಹಾರಾಡಿಸುತ್ತಾರೆ. ಓಂಕಾರಾಸನ ಹಾಕುತ್ತಾ ವಾತಾವರಣವನ್ನು ನಿಶ್ಶಬ್ದಗೊಳಿಸುವ ದಾದಾಪೀರ್‌ ಬಂಡಿವಾಡ ನೋಡುಗರ ಕಣ್ಣರಳಿಸುತ್ತಾರೆ. ಬ್ಯಾಕ್‌ ಸಂಬರ್‌ಶಾಟ್‌ನಲ್ಲಿ ಪರಿಣತಿ ಪಡೆದಿರುವ ವೀರಭದ್ರಪ್ಪ, ಮಂಜುನಾಥ, ಲಕ್ಷ್ಮಣ, ದುಂಡಪ್ಪ ಮುಂತಾದವರು ಮಲ್ಲಕಂಬದಲ್ಲಿ ಭರವಸೆ ಮೂಡಿಸಿದ್ದಾರೆ.
ಎಲ್ಲರೂ ಸೇರಿ ಹಾಕುವ ‘ಪಿರಮಿಡ್‌’ ಮಲ್ಲಕಂಬದ ಕಿರೀಟ. ಎಲ್ಲರೂ ಹುತ್ತದಿಂದ ಇರುವೆಗಳು ಸಾಲಾಗಿ ಬರುವಂತೆ ಬಂದು ಪಿರಮಿಡ್‌ ಆಕಾರದಲ್ಲಿ ನಿಂತು ಒಂದೇ ಸಮಯದಲ್ಲಿ 30 ಆಸನ ಮಾಡಿ ತೋರಿಸುತ್ತಾರೆ. ಇದು ನೋಡುಗರಲ್ಲಿ ರೋಮಾಂಚನ ಮೂಡಿಸುತ್ತದೆ.
ಸ್ಫೂರ್ತಿಯಾದ ಹನುಮಂತನ ಬಾಲ
ಪೇಶ್ವೆ ಮಹರಾಜರ ಆಸ್ಥಾನದಲ್ಲಿ ಕುಸ್ತಿಪಟುವಾಗಿದ್ದ ಬಾಳಂಭಟ್ಟ ದೇವಧರ ಮಲ್ಲಕಂಬದ ಪಿತಾಮಹ. ಮಲ್ಲಕಂಬದ ಉಗಮಕ್ಕೊಂದು ಐತಿಹಾಸಿಕ ಹಿನ್ನೆಲೆಯಿದ್ದು, ಒಮ್ಮೆ ಭಾಳಂಭಟ್ಟನಿಗೆ ಪರರಾಜ್ಯದ ಬಲಿಷ್ಠ ಪೈಲ್ವಾನನೊಬ್ಬ ತನ್ನನ್ನು ಸೋಲಿಸುವಂತೆ ಸವಾಲು ಹಾಕಿದ.
ಬಾಳಂಭಟ್ಟನಿಗೆ ರಾಜ ಮರ್ಯಾದೆ ಕಾಪಾಡಬೇಕಾದ ಅನಿವಾರ್ಯತೆ ಎದುರಾಯಿತು. ಅದೇ ಚಿಂತೆಯಲ್ಲಿ ಹನುಮಂತನ ದೇವಾಲಯದ ಮುಂದೆ ಬಂದು ನಿಂತ. ದೇವಾಲಯದ ಮುಂದಿನ ಬೃಹತ್‌ ದೀಪದ ಕಂಬವೊಂದರ ಮೇಲೆ ಬಾಲದಿಂದ ಜಾರುತ್ತಿದ್ದ ಮಂಗವೊಂದು ಕಣ್ಣಿಗೆ ಬಿತ್ತು. ಇದೇ ಬಾಳಂಭಟ್ಟನಿಗೆ ಸ್ಫೂರ್ತಿಯಾಯಿತು.
ನಾನು ಗೆದ್ದೆ ಎಂದು ಹನುಮಂತನಿಗೆ ಕೃತಜ್ಞತೆ ಹೇಳಿದ. ಕಂಬವೊಂದಕ್ಕೆ ಎಣ್ಣೆ ಸವರಿ, ಹಗ್ಗ ಕಟ್ಟಿಕೊಂಡು ಮಂಗದ ಹಾಗೆ ಕಸರತ್ತು ಮಾಡಿದ. ಇದನ್ನೇ ಅಸ್ತ್ರ ಮಾಡಿಕೊಂಡು ಪರರಾಜ್ಯದ ಬಲಿಷ್ಠ ಪೈಲ್ವಾನನನ್ನು ಸೋಲಿಸಿ ರಾಜ್ಯದ ಮರ್ಯಾದೆ ಕಾಪಾಡಿದ. ಇದಕ್ಕೆ ಮಲ್ಲಕಂಬ ಎಂದು ನಾಮಕರಣ ಮಾಡಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಪೈಲ್ವಾನರಿಗೆ ತರಬೇತಿ ಕೊಟ್ಟ. ಇದರ ಫಲವಾಗಿ ಪೇಶ್ವೆಗಳ ಮರಾಠಿ ಆಡಳಿತ ಪ್ರದೇಶದ ಪ್ರತಿ ಗರಡಿ ಮನೆಯಲ್ಲಿ ಮಲ್ಲಕಂಬ ಪ್ರಮುಖ ಸ್ಥಾನ ಪಡೆಯಿತು.
ಪುನರ್ಜನ್ಮ ಕೊಟ್ಟ ಎನ್‌.ಎಸ್‌. ಪಾಟೀಲ
1940ರವರೆಗೂ ಮಿರಜ್‌ ಸಂಸ್ಥಾನಕ್ಕೆ ಸೇರಿದ್ದ ಲಕ್ಷ್ಮೇಶ್ವರಕ್ಕೆ ಪಾಠಕ್‌ ಮಾಸ್ತರ ಎನ್ನುವ ಮಲ್ಲಕಂಬ ಪಟುವೊಬ್ಬರು ರಜಾದಿನಗಳಲ್ಲಿ ಬಂದು ಹೋಗುತ್ತಿದ್ದರು. ಅವರು ಇಲ್ಲಿಯ ಮಕ್ಕಳಿಗೆ ಮಲ್ಲಕಂಬ ತರಬೇತಿ ನೀಡಿದರು. ಇದು ಲಕ್ಷ್ಮೇಶ್ವರದಲ್ಲಿ ಮಲ್ಲಕಂಬ ಪ್ರಸಿದ್ಧಿ ಪಡೆಯಲು ಕಾರಣವಾಯಿತು.
ಅದಕ್ಕೆ ಮುಖ್ಯ ಕಾರಣ ದೈಹಿಕ ಶಿಕ್ಷಣ ತಜ್ಞ ಎನ್‌.ಎಸ್‌ ಪಾಟೀಲರು. ಪಾಠಕ್‌ ಮಾಸ್ತರರಿಂದ ಬಂದ ಕಲೆಗೆ ಪಾಟೀಲರು ಪುನರ್ಜನ್ಮ ನೀಡಿದರು. ಕರ್ನಾಟಕ ಮಲ್ಲಕಂಬ ಸಂಸ್ಥೆ ಸ್ಥಾಪಿಸಿ ರಾಜ್ಯ ತಂಡ ಕಟ್ಟಿಕೊಂಡು ದೇಶದಾದ್ಯಂತ ಪ್ರವಾಸ ಮಾಡಿದರು. 1980ರಲ್ಲಿ ಅಮೃತಸರದಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಮಲ್ಲಕಂಬ ಸಂಘಕ್ಕೆ ಉಪಾಧ್ಯಕ್ಷರಾದರು. 1982ರಲ್ಲಿ ರಷ್ಯಾದಲ್ಲಿ ನಡೆದ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಿದರು.
ದೇಶದಾದ್ಯಂತ ಹಲವು ಮಲ್ಲಕಂಬ ಚಾಂಪಿಯನ್‌ಶಿಪ್‌ ಆಯೋಜಿಸಿರುವ ಪಾಟೀಲರು 2012ರಲ್ಲಿ ಹಾನಗಲ್‌ ನಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ ನಡೆಸಿ ಇಡಿ ರಾಷ್ಟ್ರದ ಮಲ್ಲಕಂಬ ಪಟುಗಳನ್ನು ರಾಜ್ಯಕ್ಕೆ ಆಹ್ವಾನಿಸಿದ್ದರು. ಇಂದಿಗೂ ರಾಜ್ಯ ಮಲ್ಲಕಂಬ ಸಂಸ್ಥೆಗೆ ಅಧ್ಯಕ್ಷರಾಗಿರುವ ಎನ್‌.ಎಸ್‌. ಪಾಟೀಲರು ಕರ್ನಾಟಕದಲ್ಲಿ ಮಲ್ಲಕಂಬದ ಪಿತಾಮಹ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಜೊತೆಗೆ ಪಾಟೀಲರ ಶಿಷ್ಯರಾದ ಎಸ್‌.ಎಫ್‌. ಕೊಡ್ಲಿ, ವೀರೇಶ್‌ಲಿಂಬಿಕಾಯಿ, ಹವಳದ ಸಹೋದರರು, ಎಂ.ಐ. ಕಣಕೆ, ಶಂಬಯ್ಯ ಹಿರೇಮಠ ಮುಂತಾದವರು ಮಕ್ಕಳಿಗೆ ಮಲ್ಲಕಂಬ ತರಬೇತಿ ನೀಡುತ್ತಾ ಕಲೆ ಬೆಳವಣಿಗೆಗೆ ಕಾರಣರಾಗಿದ್ದಾರೆ. ಲಕ್ಷ್ಮೇಶ್ವರದಲ್ಲಿ ಮಲ್ಲಕಂಬ ಕಲಿತು ತರಬೇತಿ ನೀಡುತ್ತಿರುವವರು ರಾಜ್ಯದಾದ್ಯಂತ ವಿವಿಧ ತಂಡ ಕಟ್ಟಿಕೊಂಡಿದ್ದಾರೆ.
ಬೆಳಗಾವಿಯ ಕಿತ್ತೂರು ಸೈನಿಕ ಶಾಲೆ, ಚಿಕ್ಕೋಡಿಯ ಅವರಾದಿ, ಮೂಡಲಗಿ, ಇಡಕಲ್‌ ಡ್ಯಾಂ, ಧಾರವಾಡದ ಉಪ್ಪಿನಬೆಟಗೇರಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಮೈಸೂರಿನ ಸುತ್ತೂರು ಮಠ, ಬೆಂಗಳೂರಿನ ನಿತ್ಯಾನಂದ ಆಶ್ರಮ ಸೇರಿ ರಾಜ್ಯದಲ್ಲಿ 28 ಮಲ್ಲಕಂಬ ತಂಡಗಳಿವೆ. ವಿಶೇಷವೆಂದರೆ ಲಕ್ಷ್ಮೇಶ್ವರ ಶ್ರವಣ ನ್ಯೂನತೆ ಮಕ್ಕಳ ವಸತಿ ಶಾಲೆಯ ಕಿವುಡ ಮತ್ತು ಮೂಕ ಮಕ್ಕಳಿಗೂ ಮಲ್ಲಕಂಬ ಕಲೆ ಕಲಿಸಿದ್ದು ಈ ತಂಡ ರಾಜ್ಯದ ವಿವಿಧೆಡೆ ಪ್ರದರ್ಶನ ನೀಡಿದೆ.
‘ಲಕ್ಷ್ಮೇಶ್ವರದಲ್ಲಿ ನಿಂತು ಕಲ್ಲೆಸೆದರೆ ಅದು ಮಲ್ಲಕಂಬ ಪಟುವೊಬ್ಬರ ಮನೆ ಮೇಲೆ ಬೀಳುತ್ತದೆ’ ಎನ್ನುವಷ್ಟು ಇಲ್ಲಿ ಮಲ್ಲಕಂಬ ಕಲೆ ಮನೆಮಾತಾಗಿದೆ. ಮಹಾರಾಷ್ಟ್ರ ಸರ್ಕಾರ ಈ ಕ್ರೀಡೆಯನ್ನು ‘ರಾಜ್ಯಕ್ರೀಡೆ ’ ಘೋಷಣೆ ಮಾಡಿ ಕ್ರೀಡಾಳುಗಳಿಗೆ ಉದ್ಯೋಗ ಮೀಸಲಾತಿ ನೀಡುತ್ತಿದೆ.
ಕರ್ನಾಟಕದಲ್ಲೂ ಮಲ್ಲಕಂಬವನ್ನು ರಾಜ್ಯಕ್ರೀಡೆ ಎಂದು ಘೋಷಣೆ ಮಾಡಿ, ಮೀಸಲಾಗಿ ನೀಡಬೇಕು ಎಂಬುದು ಲಕ್ಷ್ಮೇಶ್ವರದ ಕ್ರೀಡಾಪಟುಗಳ, ಕಲಾವಿದರ ಬಹುಕಾಲದ ಬೇಡಿಕೆಯಾಗಿದೆ. ಹೆಚ್ಚಿನ ಮಾಹಿತಿಗೆ ಮಲ್ಲಕಂಬ ತರಬೇತುದಾರ ಎಂ.ಐ. ಕಣಕೆ (9945859815) ಅವರನ್ನು ಸಂಪರ್ಕಿಸಬಹುದು.

Write A Comment