ಕನ್ನಡ ವಾರ್ತೆಗಳು

ಹಿಟಾಜಿ ಮೇಲೆ ಗುಡ್ಡದ ಮಣ್ಣು ಕುಸಿತ : ಆಪರೇಟರ್ ಗಂಭೀರ ಗಾಯ.

Pinterest LinkedIn Tumblr

 hitachi_collpsed_photo

ಮಂಗಳೂರು,ಮಾರ್ಚ್.13 : ಹಿಟಾಚಿ ಯಂತ್ರದ ಮೂಲಕ ಮಣ್ಣು ತೆಗೆಯುತ್ತಿದ್ದ ವೇಳೆ ಗುಡ್ಡದ ಮಣ್ಣು ದಿಢೀರ್ ಕುಸಿದು ಹಿಟಾಚಿ ಯಂತ್ರದ ಮೇಲೆ ಬಿದ್ದ ಪರಿಣಾಮ ಹಿಟಾಚಿ ಆಪರೇಟರ್ ಗಂಭೀರವಾಗಿ ಗಾಯಗೊಂಡ ಘಟನೆ ಗುರುಪುರದ ಬೆಳ್ಳಿಬೆಟ್ಟು ಸಮೀಪದ ಗುಡ್ಡದಲ್ಲಿ ಗುರುವಾರ ಸಂಜೆ 5ರ ಸುಮಾರಿಗೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಬೆಳ್ತಂಗಡಿಯ ಅರುಣ್ ಕುಮಾರ್(30) ಎಂದು ಗುರುತಿಸಲಾಗಿದೆ. ಬಜ್ಪೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಕಾರ್ಯಾಚರಣೆ ನಡೆಸಿದ್ದರು. ಗುಡ್ಡ ಕುಸಿದು ಜೆಸಿಬಿ ಯಂತ್ರದ ಮೇಲೆ ಮಣ್ಣು ಬಿದ್ದ ಪರಿಣಾಮ ಒಳಗಿದ್ದ ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಹಿಟಾಚಿ ಯಂತ್ರ ಮಣ್ಣಿನಿಂದ ಸಂಪೂರ್ಣವಾಗಿ ಆವರಿಸಿದ್ದು, ಹಿಟಾಚಿಯಂತ್ರದ ಮೇಲಿದ್ದ ಮಣ್ಣನ್ನು ತೆಗೆಯಲು ಜೆಸಿಬಿ ಯಂತ್ರವನ್ನು ತರಲಾಗಿತ್ತು. ಕೊನೆಗೆ ಕೈಯಿಂದ ಮಣ್ಣು ತೆಗೆದು ಗಾಯಾಳುವನ್ನು ರಕ್ಷಿಸಲಾಗಿದೆ. ಗುಡ್ಡ ಬಿದ್ದ ರಭಸಕ್ಕೆ ಹಿಟಾಚಿ ಯಂತ್ರ ಜಖಂಗೊಂಡಿದೆ. ಮಣ್ಣನ್ನು ಲಾರಿಗಳ ಮುಖಾಂತರ ತುಂಬಿಸಿ ಕಳಿಸಲಾಗಿದ್ದು, ಮತ್ತೊಂದು ಲಾರಿ ಬರುತ್ತಿದ್ದಂತೆ ಲಾರಿಯ ಚಾಲಕನಿಗೆ ಘಟನೆಯ ಅರಿವಾಗಿದೆ. ಲಾರಿ ಚಾಲಕ ತಕ್ಷಣ ಇತರ ಲಾರಿ ಚಾಲಕರಿಗೆ ಹಾಗೂ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿ ಹಿಟಾಚಿ ಚಾಲಕನನ್ನು ಹಿಟಾಚಿಯಿಂದ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಪೊಲೀಸರಿಗೆ ಸ್ಥಳೀಯರು ಸಹಕರಿಸಿದ್ದರು.

ಬಜ್ಪೆ ಇನ್ಸ್‍ಪೆಕ್ಟರ್ ನರಸಿಂಹ ಮೂರ್ತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment