ಕರ್ನಾಟಕ

‘ಸಾಮಾಜಿಕ ನ್ಯಾಯಕ್ಕೆ ಆದ್ಯತೆ’; ಒಟ್ಟು 1,42,534 ಲಕ್ಷ ಕೋಟಿ ರೂ.ಗಳ ಗಾತ್ರದ ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ

Pinterest LinkedIn Tumblr

SIDDUWEB_0

ಬೆಂಗಳೂರು: 2015-16 ನೇ ಸಾಲಿನ ಬಜೆಟ್‌ ಮಂಡನೆ ಆರಂಭಿಸಿದ ಸಿದ್ದರಾಮಯ್ಯ ಅವರು, ಸಾಮಾಜಿಕ ನ್ಯಾಯ ಮತ್ತು ಕೋಮುಸೌಹಾರ್ದತೆ ಸರ್ಕಾರದ ಆದ್ಯತೆ ಎಂದರು. ಇದಕ್ಕಾಗಿ ಎಲ್ಲ ಜನಸಮುದಾಯದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಯೋಜನಾ ವೆಚ್ಚವನ್ನು ಹಂಚಿಕೆ ಮಾಡಲಾಗಿದೆ ಎಂದರು.

2014-15ನೇ ಸಾಲಿನಲ್ಲಿ ರಾಜ್ಯದ ಆರ್ಥಿಕ ವೃದ್ಧಿ ದರ (ಜಿಡಿಪಿ) ಸರಾಸರಿ ಶೇ 7 ರಷ್ಟು ಏರಿಕೆ ಕಂಡಿದೆ. 2015-16 ನೇ ಸಾಲಿನ ಯೋಜನಾ ವೆಚ್ಚವನ್ನು ರೂ 72,597 ಕೋಟಿಗೆ ಹೆಚ್ಚಿಸಲಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ , ಸಮಾಜಕಲ್ಯಾಣ, ಕೃಷಿಯಂತಹ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿರುವ ಮುಖ್ಯಮಂತ್ರಿಗಳು, ಐಷಾರಾಮಿ ಹಾಗೂ ಶ್ರೀಮಂತ ವರ್ಗಗಳಿಗೆ ತೆರಿಗೆ ಹೊರೆಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿ ನಿಲಯಗಳ ನಿರ್ವಹಣಾ ವೆಚ್ಚವನ್ನು ಹೆಚ್ಚಿಸಲಾಗಿದ್ದು, ದೇವದಾಸಿಯರು, ಅಂಗನವಾಡಿ ಕಾರ್ಯಕರ್ತೆಯರು, ವಿಆರ್‌ಡಬ್ಲ್ಯೂ ಮತ್ತು ಎಂಆರ್‌ಡಬ್ಲ್ಯೂ ಕಾರ್ಯಕರ್ತರಿಗೆ ನೀಡಲಾಗುತ್ತಿದ್ದ ಗೌರವ ಧನವನ್ನು ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಹೆಚ್ಚಿಸಿದ್ದಾರೆ. ಒಟ್ಟು 1,42,534 ಲಕ್ಷ ಕೋಟಿ ರೂ.ಗಳ ಗಾತ್ರದ ಮುಂಗಡ ಪತ್ರ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಯೋಜನಾ ಗಾತ್ರವನ್ನು 72,592 ಕೋಟಿ ರೂ.ಗಳಿಗೆ ಹೆಚ್ಚಿಸಿದ್ದಾರೆ. ಕಳೆದ ವರ್ಷದ 65,904 ಕೋಟಿ ರೂ. ಯೋಜನಾ ಗಾತ್ರವನ್ನು ಈ ಬಾರಿಗೆ ಶೇ.10.67ಕ್ಕೆ ಹೆಚ್ಚಿಸಿದ್ದು , ಒಟ್ಟಾರೆ ಜಿಡಿಪಿ ಬೆಳವಣಿಗೆಯನ್ನು ಶೇ.4.7ರ ದರದಲ್ಲಿ ನಿರೀಕ್ಷಿಸಲಾಗಿದೆ.

ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ರಾಜ್ಯದ ಪಾಲು ಶೇ 33 ರಿಂದ ಶೆ 35ಕ್ಕೆ ಏರಿಕೆ ಕಂಡಿದೆ ಎಂದ ಅವರು ಐ.ಟಿ ಜತೆಗೆ ಕೃಷಿ ಕ್ಷೇತ್ರಕ್ಕೂ ಉತ್ತೇಜನ ನೀಡಲಾಗುವುದು. ವೈಜ್ಞಾನಿಕ ಬೆಂಬಲ ಬೆಲೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗಳನ್ನು ಹೆಚ್ಚಿನ ಬೆಳೆಗಳಿಗೆ ವಿಸ್ತರಿಸಲಾಗಿದೆ ಎಂದರು. ಅಬಕಾರಿ ಇಲಾಖೆಯಿಂದ ನಿರಾ ಇಳಿಸಲು ರೈತರಿಗೆ ಪರವಾನಗಿ ನೀಡಲಾಗುವುದು ಎಂದರು.

ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಒಂದೇ ಸೂರಿನಡಿ ರೈತರಿಗೆ ಎಲ್ಲ ಮಾಹಿತಿಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬಜೆಟ್‌ ಮುಖ್ಯಾಂಶಗಳು

* ಹಾವೇರಿ ತಾಲೂಕಿನ ದೇವಿ ಹೊಸೂರು ಗ್ರಾಮದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ
* ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಯಾಂಪಸ್‌
* ರೈತರಿಗೆ ಅಲ್ಪಾವಧಿ ಸಾಲ ನೀಡಲು ರೂ 10 ಸಾವಿರ ಕೋಟಿ
* ಕೆಆರ್‌ಎಸ್‌ ಜಲಾಶಯದ ವೃಂದಾವನ ವಿಶ್ವದರ್ಜೆಗೆ ಏರಿಕೆ
* 5 ರೈತ ಉತ್ಪಾದಕ ಸಂಘ ರಚನೆ
* ಪಶು ಭಾಗ್ಯ ಎಂಬ ಹೊಸ ಯೋಜನೆ. ಹಸು, ಹಂದಿ, ಕೋಳಿ ಸಾಕಲು ಸಹಾಯ ಧನ.
* ಸಹಕಾರಿ ಬ್ಯಾಂಕುಗಳಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ 50 ಸಾವಿರದವರೆಗೆ ಸಾಲ
* ಅಂಗನವಾಡಿ ಕಾರ್ಯಕರ್ತೆಯರಿಗೆ ರೂ 250 ಸಹಾಯಧನ ಏರಿಕೆ
* ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ರೂ 110 ಕೋಟಿ
* ತಾಲೂಕಿಗೊಂದು ‘ಹಸಿರು ಗ್ರಾಮ ’ ಸ್ಥಾಪನೆ

*ಸಿಗರೇಟು, ಬೀಡಿ, ಗುಟುಕಾ ಮೇಲಿನ ಮೌಲ್ಯರ್ಧಿತ ತೆರಿಗೆ ಶೇ 17 ರಿಂದ ಶೇ 20ಕ್ಕೆ ಏರಿಕೆ.
* ಪೆಟ್ರೋಲ್‌ ಡೀಸೆಲ್‌ ಮೇಲಿನ ತೆರಿಗೆ 1 ರಷ್ಟು ಹೆಚ್ಚಳ
* 3 ವರ್ಷಗಳಲ್ಲಿ 1886 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ಅಭಿವೃದ್ಧಿ
* ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ 25 ಸ್ಕೈವಾಕರ್‌ಗಳ ನಿರ್ಮಾಣ
* ಯಶಸ್ವಿನಿ ಯೋಜನೆಗೆ 110 ಕೋಟಿ, ತೋಟಗಾರಿಕೆ ಇಲಾಖೆಗೆ 75 ಕೋಟಿ, ರೈತರಿಗೆ ಅಲ್ಪಾವಧಿ ಸಾಲ ನೀಡಲು 10 ಸಾವಿರ ಕೋಟಿ
* 2014-15 ರಲ್ಲಿ ಶೇ 5 ರಿಂದ ಶೇ 7ಕ್ಕೆ ಪ್ರಗತಿ
* ಡಾ. ಯು.ಆರ್‌. ಅನಂತಮೂರ್ತಿ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ

* ವಕ್ಫ್‌ ಆಸ್ತಿ ಅತಿಕ್ರಮಣ ತೆರವಿಗೆ ‘ವಿಶೇಷ ಕ್ರಿಯಾ ಪಡೆ’
* ಉದ್ದೇಶಿತ ಕೊಳವೆ ಬಾವಿ ವಿಫಲವಾದರೆ ಸಾಲ ಮನ್ನಾ
*ಅಂತರಜಾತಿ ವಿವಾಹಕ್ಕೆ – ಲಕ್ಷ ಪ್ರೋತ್ಸಾಹಧನ
* ಶಾಲೆಗಳಲ್ಲಿ ‘ಇ- ಲರ್ನಿಂಗ್‌’ ಸೌಲಭ್ಯ
* ದಾವಣಗೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆ, 3 ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 750 ಹಾಲು ಉತ್ಪಾದಕರ ಸಂಘ ಸ್ಥಾಪನೆ
ಮಂಗಳೂರು ವಿವಿಯಲ್ಲಿ ರಾಣಿ ಅಬ್ಬಕ್ಕ ಪೀಠ ಸ್ಥಾಪನೆಗೆ ₹ 2 ಕೋಟಿ
*ಕುರಿ ಸುರಕ್ಷಾ ಯೋಜನೆಯಡಿ 5 ಸಾವಿರ ಪರಿಹಾರ
*ಕಲಬುರಗಿಯಲ್ಲಿ ಹೃದ್ರೋಗ ಚಿಕಿತ್ಸೆ ಘಟಕ
* ರೈತರಿಗೆ ಮೌಲ್ಯಧಾರಿತ ಸೇವೆ ಒದಗಿಸಲು ‘ಆನ್‌ಲೈನ್‌ ಮಾರಾಟ ವ್ಯವಸ್ಥೆ’ ಸುಧಾರಣೆ

ಪ್ರಸಕ್ತ ಸಾಲಿನ ಹೊಸ ಯೋಜನೆಗಳು

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.

* ರಾಜ್ಯದ ಕೃಷಿ ಕ್ಷೇತ್ರದ ಬಗ್ಗೆ ಸಮಗ್ರ ದೂರದೃಷ್ಟಿ ರೂಪಿಸಲು ಕೃಷಿ, ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ವಲಯಗಳಿಗೆ ತಜ್ಞರ ಅಧ್ಯಕ್ಷತೆಯಲ್ಲಿ ‘ವಿಷನ್‌ ಗ್ರೂಪ್‌’ ರಚಿಸಲಾಗುವುದು.

* ನೀರಿನ ಸಮರ್ಥ ಬಳಕೆ ಮತ್ತು ಮಣ್ಣಿನಲ್ಲಿ ಲಘು ಪೋಷಕಾಂಶಗಳನ್ನು ಅಳವಡಿಕೆ ಉತ್ತೇಜನಕ್ಕೆ ‘ಲಘು ನೀರಾವರಿ ನೀತಿ’ ಜಾರಿಗೆ ತರಲಾಗುವುದು.

* ಐಸಿಆರ್‌ಐಎಸ್‌ಎಟಿ, ಐಸಿಎಆರ್‌ಡಿಎ ಮತ್ತು ಸಿಐಎಂಎಂವವೈಟಿ ಮುಂತಾದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ತಜ್ಞರ ನೆರವಿನೊಂದಿಗೆ ‘ಉತ್ಕೃಷ್ಟ ಜ್ಞಾನ ಕೇಂದ್ರ’ವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

* ಪ್ರಸಕ್ತ ಮುಂಗಾರು ಮತ್ತು ಹಿಂಗಾರು ಪ್ರಾರಂಭದಲ್ಲಿ ಕೃಷಿ ವಿವಿ ತಜ್ಞರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಸಂವಾದ ನಡೆಸುವ ‘ಕೃಷಿ ಅಭಿಯಾನ’ ಕಾರ್ಯಕ್ರಮ ಜಾರಿಗೆ ತರಲಾಗುವುದು.

* ಹೋಬಳಿ ಮಟ್ಟದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಗೆ ಸಿಬ್ಬಂದಿ ಒಟ್ಟಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಕ್ರಮ.

* ಕಳೆದ ನಾಲ್ಕು ವರ್ಷಗಳಲ್ಲಿ ಬರಕ್ಕೆ ತುತ್ತಾದ ರಾಜ್ಯದ 7 ಜಿಲ್ಲೆಗಳ 23 ತಾಲ್ಲೂಕುಗಳಿಗೆ ವಿಶೇಷ ಪ್ಯಾಕೇಜ್‌ ಸಿದ್ಧ. ಹನಿ / ತುಂತುರು ನೀರಾವರಿ ಜತೆಗೆ ಫರ್ಟಿಗೇಷನ್‌ ಹಾಗೂ ಪಾಲಿಹೌಸ್‌ಗಳ ನಿರ್ಮಾಣಕ್ಕೆ ಉತ್ತೇಜನ.

* 556 ಹೋಬಳಿಗಳ 63,677 ಹೆಕ್ಟೇರ್‌ ಪ್ರದೇಶದಲ್ಲಿ ಕೈಗೊಳ್ಳಲಾಗಿರುವ ಸಾವಯವ ಭಾಗ್ಯ ಯೋಜನೆಗೆ ಬಲ.

* ರೈತರಿಗೆ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವ 278 ಹೊಸ ಸೇವಾ ಕೇಂದ್ರಗಳ ಸ್ಥಾಪನೆ.

* ಇನ್ನೂ 4 ಜಿಲ್ಲೆಗಳಿಗೆ ‘ಭೂ ಸಮೃದ್ಧಿ’ ಯೋಜನೆ ವಿಸ್ತರಣೆ.

* ಆರ್‌.ಎಸ್‌.ಕೆ ಮಟ್ಟದಲ್ಲಿ ಕೆ–ಕಿಸಾನ್‌ ವಿದ್ಯುನ್ಮಾನ ವೇದಿಕೆ ಸ್ಥಾಪಿಸಿ ಪ್ರತಿ ರೈತರಿಗೂ ‘ರೈತಮಿತ್ರ’ ಕಾರ್ಡ್‌ ಹಾಗೂ ‘ಮಣ್ಣು ಆರೋಗ್ಯ ಕಾರ್ಡ್‌’ ನೀಡಲಾಗುವುದು.

* ವೈಜ್ಞಾನಿಕ ಜಲಾನಯನ ನಿರ್ವಹಣೆಗಾಗಿ ಡಿಜಿಟಲ್ ಗ್ರಂಥಾಲಕ ಹಾಗೂ ನಿರ್ಣಯ ಬೆಂಬಲ ವ್ಯವಸ್ಥೆ ಜಾರಿ.

* ಐಬಿಎಬಿ ಮತ್ತು ಕೃಷಿ ವಿವಿ ಸಹಯೋಗದಲ್ಲಿ ರಾಗಿ, ತೊಗರಿಕಾಳುಮ ಜೋಳ ಮತ್ತು ಕಾಬೂಕು ಕಡಲೆಗಳಲ್ಲಿ ಸುಧಾರಿತ ಬೀಜ ವೈವಿಧ್ಯ ರೂಪಿಸಲು ಯೋಜನೆ.

ಮೀನುಗಾರಿಕೆಗೆ ಉತ್ತೇಜನ

ಬೆಂಗಳೂರು: ರಾಜ್ಯದಲ್ಲಿ ಮೀನುಗಾರಿಕೆ ಉತ್ತೇಜಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.

‘ಮೀನುಗಾರಿಕೆಗೆ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ ₹ 1 ಲಕ್ಷದವರೆಗೆ ಸಾಲ ನೀಡಲಾಗುವುದು. ಯಾಂತ್ರೀಕೃತ ದೋಣಿಗಳಿಗೆ ನೇರವಾಗಿ ಮಾರಾಟ ಕರ ಮರುಪಾವತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದ 5 ಜಲಾಶಯಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಲಾಗುವುದು. 5 ಮೊಬೈಲ್‌ ಮೀನು ಉತ್ಪನ್ನ ಮಾರಾಟ ಕೇಂದ್ರಗಳನ್ನು ಆರಂಭಿಸಲಾಗುವುದು. ಮೀನುಗಾರಿಕೆ ಉತ್ತೇಜನಕ್ಕೆ ರಾಜ್ಯದ ವಿವಿಧೆಡೆ ಬೃಹತ್‌ ಮೀನುಗಾರಿಕೆ ಮಾಹಿತಿ ಮೇಳ ಆಯೋಜಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

ಬೀಡಿ, ಸಿಗರೇಟು ತುಟ್ಟಿ, ಪೆಟ್ರೋಲ್‌, ಡೀಸೆಲ್‌ ತೆರಿಗೆ ಹೆಚ್ಚಳ

ಬೆಂಗಳೂರು: 2015-16ನೇ ಸಾಲಿನ ಯೋಜನಾ ಗಾತ್ರವನ್ನು ಸರ್ಕಾರ ರೂ 72,597 ಕೋಟಿ ಎಂದು ನಿಗದಿಪಡಿಸಿದೆ. ಈ ಯೋಜನಾ ಗಾತ್ರದಲ್ಲಿ ರಾಜ್ಯ ಸರ್ಕಾರದ ಸಂಪನ್ಮೂಲಗಳು ರೂ 67,882 ಕೋಟಿ ಮತ್ತು ಸರ್ಕಾರಿ ಸ್ವಾಮ್ಯದ ಉದ್ಯಮಗಳ ಸಂಪನ್ಮೂಲ ರೂ 8645 ಕೋಟಿ ಸೇರಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಬಜೆಟ್‌ನ ಯೋಜನಾ ಗಾತ್ರ ಶೇ 10.67 ರಷ್ಟು ಹಿಗ್ಗಿದೆ.

ತೆರಿಗೆ ಪ್ರಸ್ತಾವಗಳು

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರಲು ಅನುಕೂಲವಾಗುವಂತೆ ವಾಣಿಜ್ಯೋದ್ಯಮಗಳನ್ನು ಸಿದ್ಧಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿಗೆ ವಾಣಿಜ್ಯ ತೆರಿಗೆಗಳ ಅಡಿಯಲ್ಲಿ ರೂ 42 ಸಾವಿರ ಕೋಟಿ ತೆರಿಗೆ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ ಎಂದು ಸಿದ್ದರಾಮ್ಯ ಹೇಳಿದರು.

ತಂಬಾಕು ಬಳಕೆ ತಗ್ಗಿಸಲು ಬೀಡಿ, ಸಿಗರೇಟು, ಗುಟ್ಕಾ ಮತ್ತಿತರ ತಂಬಾಕು ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ 17 ರಿಂದ ಶೇ 20 ಕ್ಕೆ ಹೆಚ್ಚಿಸಲಾಗಿದೆ. ಡೀಸೆಲ್‌ ಮತ್ತು ಪೆಟ್ರೋಲ್‌ ಮೇಲಿನ ತೆರಿಗೆ ದರವನ್ನು ಶೇ 1 ರಷ್ಟು ಹೆಚ್ಚಿಸಲಾಗಿದೆ. 17 ಶ್ರೇಣಿಗಳ ಮೇಲಿನ ಅಬಕಾರಿ ಸುಂಕವನ್ನು ಶೇ 6 ರಿಂದ ಶೇ 20ಕ್ಕೆ ಹೆಚ್ಚಿಸಲಾಗಿದೆ. ಇದರಿಂದ 2015-16 ರಲ್ಲಿ ರೂ 15,200 ಕೋಟಿ ರಾಜಸ್ವ ಸಂಗ್ರಹಣೆ ಆಗಲಿದೆ.

ರೂ 500 ವರೆಗಿನ ಪಾದರಕ್ಷೆಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ. ಸೀಮೆ ಎಣ್ಣೆ ಸ್ಟೌವ್‌ ಮೇಲಿನ ತೆರಿಗೆ ಶೇ 14.5ರಿಂದ ಶೇ 5.5ಕ್ಕೆ ಇಳಿಕೆ.

ಬೆಂಗಳೂರಿನಲ್ಲಿ ಸಿಸಿ ಟಿವಿ ಅಳವಡಿಸಲು 8 ಕೋಟಿ ರೂ

ಬೆಂಗಳೂರು: ಬೆಂಗಳೂರು ನಗರವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ನಗರದಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಈ ಬಾರಿಯ ಬಜೆಟ್‌ನಲ್ಲಿ 8 ಕೋಟಿ ರೂ ಮೀಸಲಿಡಲಾಗಿದೆ.

ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಮತ್ತು ‘ನಮ್ಮ ಮೆಟ್ರೊ’ ನಿಗಮಕ್ಕೆ ಒಟ್ಟು ರೂ 4,770 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

ಬೆಂಗಳೂರಿನಲ್ಲಿರುವ 117 ಕೆರೆಗಳನ್ನು ಪುನಶ್ಚೇತನದ ಹೊಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಗಿದೆ.

ಮುಖ್ಯಮಂತ್ರಿಯವರ ನಗರಾಭಿವೃದ್ಧಿ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ರೂ 1 ಸಾವಿರ ಕೋಟಿ ಮೀಸಲಿಡಲಾಗಿದೆ.

ಕೃಷಿ ‘ವಿಷನ್ ಗ್ರೂಪ್’ ಆರಂಭ

ಸಗ್ಗವನೇ ದಿನವು ತೆರೆವ ಕೀಲಿ ಕೈಗಳು’ -ಎಂಬ ಕುವೆಂಪು ಅವರ ಸುಗ್ಗಿ ಹಾಡು ಉಲ್ಲೇಖಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಕೃಷಿಗೆ ರೂ. 3,883 ಕೋಟಿ ಮತ್ತು ನೀರಾವರಿ ಸಂಬಂದಿತ ವಲಯಕ್ಕೆ ರೂ 12,956 ಕೋಟಿಗಳನ್ನು ಬಜೆಟ್ ನಲ್ಲಿ ಮೀಸಲಿರಿಸಿದ್ದಾರೆ.

‘ಸಾವಯವ ಭಾಗ್ಯ’ ಯೋಜನೆ ಆರಂಭಿಸಿದ್ದು, 566 ಹೋಬಳಿಗಳ 63,677 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿಗೆ ಒತ್ತು ನೀಡಲಾಗಿದೆ. ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿಯಲ್ಲಿ ಕೃಷಿ ಜೈವಿಕ ಮತ್ತು ಸಾವಯವ ಕೃಷಿ ಅಭಿವೃದ್ಧಿ ಕೇಂದ್ರ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಾಲ್ಕುವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಗೆ ಹನಿ ನೀರಾವರಿ ಅಳವಡಿಕೆಗೆ ಬಜೆಟ್ ನಲ್ಲಿ ಆಧ್ಯತೆ ನೀಡಲಾಗಿದೆ.

ಪ್ರಸಕ್ತ ಬಜೆಟ್ ನಲ್ಲಿ ಕೃಷಿಗೆ ಒಟ್ಟಾರೆ 3,883 ಕೋಟಿ ರೂಪಾಯಿ ಹಾಗೂ ನೀರಾವರಿಗೆ ಪೂರಕವಾಗಿ ಜಲಸಂನ್ಮೂಲ ಇಲಾಖೆಗೆ ಪ್ರಸಕ್ತ ಬಜೆಟ್ ನಲ್ಲಿ ಒಟ್ಟಾರೆ 12,956 ಕೋಟಿ ರೂಪಾಯಿ ಒದಗಿಸಲಾಗಿದೆ.

ಕೃಷಿ ಕ್ಷೇತ್ರ

* ಆರ್ ಎಸ್ ಕೆ ಮಟ್ಟದಲ್ಲಿ ಕೆ ಕಿಸಾನ್ ವಿದ್ಯುನ್ಮಾನ ವೇದಿಕೆ ಸ್ಥಾಪಿಸಿ, ಪ್ರತಿ ರೈತನಿಗೂ ರೈತ ಮಿತ್ರ ಕಾರ್ಡ್ ಹಾಗೂ ಮಣ್ಣು ಆರೋಗ್ಯ ಕಾರ್ಡ್ ನೀಡಲಾಗುವುದು.

* ಕೃಷಿ ಕ್ಷೇತ್ರದ ಸಂಕೀರ್ಣ ಸವಾಲುಗಳ ನಿವಾರಣೆಗೆ ‘ವಿಷನ್ ಗ್ರೂಪ್’ ರಚನೆ

* ನೀರಿನ ಸಮರ್ಥ ಬಳಕೆ ಲಘು ಪೋಷಕಾಂಶ ಅಳವಡಿಕೆಗೆ ‘ಲಘು ನೀರಾವರಿ ನೀತಿ 2015 16’ ರಚನೆ

* ಒಣ ಭೂಮಿ ಕೃಷಿ ಅಭಿವೃದ್ಧಿಗೆ ‘ಉತ್ಕೃಷ್ಟ ಜ್ಞಾನ ಕೇಂದ್ರ’ ಆರಂಭ

* ಹಾವೇರಿ ತಾಲ್ಲೂಕಿನ ದೇವಿ ಹೊಸೂರು ಗ್ರಾಮದಲ್ಲಿ ತೋಟಗಾರಿಕೆ ಕಾಲೇಜು ಆರಂಭಿಸಲಾಗುವುದು

* ಮುಂಗಾರು ಪೂರ್ವದಲ್ಲಿ ಕೃಷಿ ವಿಶ್ವ ವಿದ್ಯಾಲಯ ವಿಜ್ಞಾನಿಗಳು ಹೋಬಳಿಗಳಿಗೆ ಭೇಟಿ ನೀಡಿ ರೈತರೊಂದಿಗೆ ಬೆಳೆ ಯೋಜನೆ ಬಗ್ಗೆ ಚರ್ಚಿಸಿ ಸಮಸ್ಯೆ ನಿವಾರಣೆಗೆ ‘ಕೃಷಿ ಅಭಿಯಾನ’ ಆರಂಭಿಸಲಾಗಿದೆ.

* ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆ ಇಲಾಖೆ ಸಿಬ್ಬಂದಿ ರೈತ ಸಂಪರ್ಕ ಕೇಂದ್ರದ ಒಂದೇ ಸೂರಿನಡಿ ಕಾರ್ಯ ನಿರ್ವಹಣೆ

* ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹೊಸ ಆವರಣವನ್ನು ನಿರ್ಮಿಸಲಾಗುವುದು.

* ಖಾಸಗಿ ಸಹ ಭಾಗಿತ್ವ ಉತ್ತೇಜನಕ್ಕೆ ಮಂಡ್ಯ ಮತ್ತು ಮುಧೋಳದಲ್ಲಿ ಎರಡು ಸಾವಯವ ಬೆಲ್ಲದ ಪಾರ್ಕ್ ಗಳ ಅಭಿವೃದ್ಧಿ.

* ರೈತರು ಸಂಗ್ರಹಾಗಾರ ಹಾಗೂ ಶೈತ್ಯಾಗಾರ ಮತ್ತು ಕೃಷಿ ಯಾಂತ್ರೀಕರಣ ಸಲಕರಣೆ ಹೊಂದಲು ಶೇ 90ರಷ್ಟು ಸಹಾಯಧನ ನೀಡಲಾಗುವುದು.

* ಆನ್ ಲೈನ್ ಆಧಾರಿತ ಮಾರುಕಟ್ಟೆಯಲ್ಲಿ ಸುಧಾರಣೆ.

* ಮಾರುಕಟ್ಟೆ ನಿಧಿಯಿಂದ ಎಪಿಎಂಸಿ ಸುಧಾರಣೆ: ಮಾರುಕಟ್ಟೆ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

* ಮೈಸೂರು, ಹುಬ್ಬಳ್ಳಿ, ಕಲಬುರ್ಗಿ, ದಾವಣಗೆರೆಗಳಲ್ಲಿ ಭಾನುವಾರದ ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ

* ನಿರ್ಮಲ ಮಾರುಕಟ್ಟೆ ಯೋಜನೆ ಅಡಿ ಘನತ್ಯಾಜ್ಯ ಘಟಕ ಸ್ಥಾಪನೆ

* ಎಪಿಎಂಸಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ

* ಮೈಸೂರು ತುಮಕೂರು, ರಾಯಚೂರುಗಳಲ್ಲಿ ಕೃಷಿ ವೈಜ್ಞಾನಿಕ ವಿಶ್ಲೇಷಣಾ ಕೇಂದ್ರ ಸ್ಥಾಪನೆ

* ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಮತ್ತು ಕಸಬಾ ಹೋಬಳಿ ಏತ ನೀರಾವರಿ ಯೋಜನೆಯನ್ನು ಎರಡು ಹಂತದಲ್ಲಿ 267 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಚನ್ನಗಿರಿ, ಮಾಯಕೊಂಡ, ಹೊನ್ನಾಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 77 ಕೆರೆಗಳನ್ನು ತುಂಗಭದ್ರಾ ನದಿ ನೀರಿನಿಂದ ತುಂಬಿಸಲು ಯೋಜನೆ ರೂಪಿಸಲಾಗಿದೆ. 2015 – 16ನೇ ಸಾಲಿನಲ್ಲಿ ಈ ಯೋಜನೆಗೆ ರೂ 50 ಕೋಟಿ ಮೀಸಲಿಡಲಾಗಿದೆ.

* ನಾಲ್ಕುವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಗೆ ಹನಿ ನೀರಾವರಿ

* ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆಗೆ ಒತ್ತು.

* ಪಿಕಾರ್ಡ್ ಬ್ಯಾಂಕ್ ಗಳ ಮೂಲಕ ಕೊಳವೆ ಬಾವಿಗಳಿಗೆ ನೀಡಲಾಗಿದ್ದ ಸಾಲವನ್ನು ಕೊಳವೆ ಬಾವಿ ವಿಫಲವಾಗಿದ್ದಲ್ಲಿ ಮನ್ನಾ ಮಾಡಲಾಗುವುದು.

* ತೋಟಗಾರಿಕಾ ವಲಯಕ್ಕೆ ಒಟ್ಟು 760 ಕೋಟಿ ರೂಪಾಯಿ ಒದಗಿಸಲಾಗಿದೆ.

* ‘ಭೂ ಸಮೃದ್ಧಿ’ ಯೋಜನೆಯನ್ನು ನಾಲ್ಕು ಜಿಲ್ಲೆಗಳಿಂದ ಮತ್ತೆ ನಾಲ್ಕು ಜಿಲ್ಲೆಗಳಿಗೆ ವಿಸ್ತರಣೆ.

* ರೇಷ್ಮೆ: ವಿಶಾಲ, ಜಿ 2, ಸುವರ್ಣ ಮುಂತಾದ ಅಧಿಕ ಇಳುವರಿ ನೀಡುವ ಹಿಪ್ಪುನೇರಳೆ ತಳಿಗಳ ಜನಪ್ರಿಯತೆಗೆ ಒತ್ತು. ಘಟಕ ವೆಚ್ಚವನ್ನು ಒಂದು ಎಕರೆಗೆ ರೂ 14 ಸಾವಿರಗಳಲ್ಲಿ ಶೇ 75ರಷ್ಟನ್ನು ಪ್ರೋತ್ಸಾಹ ಧನವನ್ನಾಗಿ ನೀಡಲು ಉದ್ದೇಶಿಸಲಾಗಿದೆ.

* ರಾಮನಗರ, ಶಿಡ್ಲಘಟ್ಟ ಮತ್ತು ಕೊಳ್ಳೆಗಾಲಗಳಲ್ಲಿ ಸಾಮಾನ್ಯ ರೀಲಿಂಗ್ ಸೌಲಭ್ಯ ಒದಗಿಸಲು ರೂ 10 ಕೋಟಿ ವೆಚ್ಚದಲ್ಲಿ ‘ರೀಲಿಂಗ್ ಪಾರ್ಕ್’ ಸ್ಥಾಪನೆ

ಇತರ ಮುಖ್ಯಾಂಶಗಳು

* ಮಾಜಿ ದೇವದಾಸಿಯರಿಗೆ ಮಾಸಿಕ ವೇತನ 500 ರಿಂದ ಒಂದು ಸಾವಿರ ರೂಗೆ ಹೆಚ್ಚಳ.

* ದಾವಣಗೆರೆ ಶಾಮನೂರು ಗ್ರಾಮ, ಮೈಸೂರಿನ ಕುಪ್ಪಣ್ಣ ಉದ್ಯಾನ ಮತ್ತು ಬಳ್ಳಾರಿಯಲ್ಲಿ ಗಾಜಿನ ಮನೆ ನಿರ್ಮಿಸಲಾಗುವುದು

* ದಾವಣಗೆರೆ- ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ.

* ಹೇಮಾವತಿ, ವೃಷಭಾವತಿ ನದಿ ತಟದಲ್ಲಿ ಅಭಿವೃದ್ಧಿ ಕೈಗೊಂಡು ಪ್ರವಾಸಿ ತಾಣ ಮಾಡಲು ಕ್ರಮ.

* ಕೆಆರ್ ಎಸ್ ಉದ್ಯಾನ ಅಭಿವೃದ್ಧಿಪಡಿಸಿ ವಿಶ್ವದರ್ಜೆಗೆ ಏರಿಸಲು ಕ್ರಮ

* ಬಳ್ಳಾರಿ, ಹುಬ್ಬಳ್ಳಿ, ಬಾಗಲಕೋಟೆ, ಮಂಗಳೂರಿನಲ್ಲಿ ಸಾಂಕ್ರಾಮಿಕ ರೋಗ ತಡೆ ಕೇಂದ್ರ ಆರಂಭ

Write A Comment