ಕರ್ನಾಟಕ

ಈ ಬಾರಿ ದಲಿತರಿಗೆ ಬಜೆಟ್‌ ಭಾಗ್ಯ: ₨1,42,534 ಕೋಟಿ: ಬಜೆಟ್‌ ಗಾತ್ರ ₨72,597 ಕೋಟಿ: ಯೋಜನಾ ಗಾತ್ರ ₨911ಕೋಟಿ: ರಾಜಸ್ವ ಉಳಿಕೆ

Pinterest LinkedIn Tumblr

pvec14budgetp7-cabinetnew

ಬೆಂಗಳೂರು: ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನದಲ್ಲಿನ ಕೊರತೆಯನ್ನು  ತುಂಬಿಕೊಳ್ಳಲು ರಾಜ್ಯದ ಜನರ ಮೇಲೆ ₨ 600 ಕೋಟಿ ಹೆಚ್ಚುವರಿ ತೆರಿಗೆ ಭಾರ ಹೊರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2015–16ನೇ ಹಣಕಾಸು ವರ್ಷಕ್ಕೆ ₨20,220 ಕೋಟಿ ಕೊರತೆಯ ಬಜೆಟ್‌ ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದರು.

ಈ ಕೊರತೆ ತುಂಬಲು ಪ್ರೆಟೋಲ್‌, ಡೀಸೆಲ್‌, ಮದ್ಯ, ಸಿಗರೇಟ್‌ ಸೇರಿದಂತೆ ಇತರ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವುದರ ಮೂಲಕ ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ಕೊಟ್ಟಿದ್ದಾರೆ. ವಿವಿಧ ಬಗೆಯ ಕ್ರಯಪತ್ರ ಮತ್ತು ಕರಾರುಗಳ ನೋಂದಣಿಗಳ ಮೇಲೂ ಶುಲ್ಕ ವಿಧಿಸುವ ಕುರಿತಂತೆ ಪ್ರಸ್ತಾಪಿಸಿದ್ದಾರೆ.

ಇದು ಸಿದ್ದರಾಮಯ್ಯ ಅವರ 10ನೇ ಬಜೆಟ್‌, ಮುಖ್ಯಮಂತ್ರಿಯಾಗಿ 3ನೇ ಬಜೆಟ್‌. ಕಳೆದ ಎರಡು ಬಜೆಟ್‌ಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿದ್ದ ಮುಖ್ಯಮಂತ್ರಿಯವರು ಈ ಬಾರಿ ಅಂತಹ ಸಾಹಸಕ್ಕೆ ಕೈಹಾಕಿಲ್ಲ. ಆದರೆ ಕೆಲವು ‘ಭಾಗ್ಯ’ಗಳ ಘೋಷಣೆ ಮುಂದುವರಿಸಿದ್ದಾರೆ.

‘ದಲಿತ ಮುಖ್ಯಮಂತ್ರಿ’ ಕುರಿತು ನಡೆಯುತ್ತಿರುವ ಬಿಸಿ ಚರ್ಚೆಯ ಪರಿಣಾಮ  ಈ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ. ಅದರ ಕಾವನ್ನು
10ನೇ ಬಾರಿಗೆ ಹಣಕಾಸು ಸಚಿವರಾಗಿ, 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ

ಶಮನಗೊಳಿಸುವ ಕಸರತ್ತಿಗೆ ಮುಖ್ಯಮಂತ್ರಿ ಮುಂದಾಗಿದ್ದಾರೆ. ಅದಕ್ಕಾಗಿಯೇ  ದಲಿತ, ಹಿಂದುಳಿದ ವರ್ಗಗಳನ್ನು ಓಲೈಸಲು ಭರಪೂರ ಕೊಡುಗೆಗಳನ್ನು ನೀಡಿದ್ದಾರೆ.   ಈ ವರ್ಗಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ.  ವಿದ್ಯಾರ್ಥಿವೇತನ, ಹಾಸ್ಟೆಲ್‌ ಭೋಜನ ವೆಚ್ಚವನ್ನು ಹೆಚ್ಚಿಸಿದ್ದಾರೆ. ಅಂತರ್ಜಾತಿ ವಿವಾಹಕ್ಕೆ ನೀಡುವ  ಪ್ರೋತ್ಸಾಹ ಧನದಲ್ಲಿ ಗಣನೀಯ ಏರಿಕೆ ಮಾಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಕಳೆದ ಬಾರಿಗಿಂತ ₨200 ಕೋಟಿಯಷ್ಟು ಹೆಚ್ಚು ಅಂದರೆ ₨ ಒಂದು ಸಾವಿರ ಕೋಟಿ  ಒದಗಿಸಿದ್ದಾರೆ.

ಅನ್ನಭಾಗ್ಯ ‘ಉಚಿತ’: ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು  ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಇನ್ನು ಮುಂದೆ ಘಟಕ ಪದ್ಧತಿಯಡಿ ಉಚಿತವಾಗಿಯೇ ಅಕ್ಕಿ ನೀಡಲಾಗುತ್ತದೆ. ಇದುವರೆಗೂ ಕುಟುಂಬವೊಂದಕ್ಕೆ ಸಿಗುತ್ತಿದ್ದ 30 ಕೆ.ಜಿ ಬದಲಿಗೆ, ಕುಟುಂಬದಲ್ಲಿನ ಜನಸಂಖ್ಯೆ ಆಧಾರದ ಮೇಲೆ ತಲಾ ಒಬ್ಬರಿಗೆ ಐದು ಕೆ.ಜಿ ಲೆಕ್ಕದಲ್ಲಿ ಪಡಿತರ ಸಿಗಲಿದೆ. ಇದರಿಂದ ಅನ್ನಭಾಗ್ಯದಿಂದ ಆಗುತ್ತಿದ್ದ ಆರ್ಥಿಕ ಹೊರೆ ಕಡಿಮೆ  ಆಗಲಿದೆ ಎಂಬುದು ಮುಖ್ಯಮಂತ್ರಿಗಳ ನಿರೀಕ್ಷೆ.

ಶೂ ಭಾಗ್ಯ: ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದ ಮಕ್ಕಳಿಗೆ ಇದುವರೆಗೂ ಸಮವಸ್ತ್ರ ನೀಡಲಾಗುತ್ತಿತ್ತು. ಈಗ ಅದರ ಜತೆಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲುಚೀಲ ನೀಡುವ ವಿಷಯ ಪ್ರಸ್ತಾಪಿಸಿದ್ದಾರೆ.

‘ಮುನ್ನೋಟ ತಂಡ’: ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ಕೊಟ್ಟಿರುವ ಮುಖ್ಯಮಂತ್ರಿ ಆ ವಲಯದ ಸಮಗ್ರ ಅಭಿವೃದ್ಧಿಗಾಗಿ ತಜ್ಞರ ನೇತೃತ್ವದಲ್ಲಿ ‘ಮುನ್ನೋಟ ತಂಡ’ ರಚಿಸುವುದಾಗಿ ಪ್ರಕಟಿಸಿದ್ದಾರೆ.

ಒಣಭೂಮಿ ಬೇಸಾಯದಲ್ಲಿ ಬೆಳೆ ಪದ್ಧತಿಗಳ ಸುಧಾರಣೆ, ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಇತ್ಯಾದಿ ಸುಧಾರಿತ ಕ್ರಮಗಳಿಗೆ ಸಲಹೆ ನೀಡಲು ತಜ್ಞರ ನೆರವು ಪಡೆದು ಉತ್ಕೃಷ್ಟ ಜ್ಞಾನ ಕೇಂದ್ರ ಸ್ಥಾಪಿಸುವುದಾಗಿ ವಿವರಿಸಿದ್ದಾರೆ. ಕೃಷಿಗೆ ಸ್ವಲ್ಪ ಹೆಚ್ಚು ಹಣ ಕೊಟ್ಟಿದ್ದಾರೆ. ಆದರೆ ತೋಟಗಾರಿಕೆ ಅನುದಾನವನ್ನು ಅರ್ಧಕ್ಕರ್ಧ ಇಳಿಸಿದ್ದಾರೆ.

ನೀರಾ ಭಾಗ್ಯ: ತೆಂಗು ಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ, ನೀರಾ ಇಳಿಸಲು ಅನುಮತಿ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರುವುದಾಗಿಯೂ ವಿವರಿಸಿದ್ದಾರೆ.

ಈ ವರ್ಷದ ಬಜೆಟ್‌ನಲ್ಲಿ ಮತ್ತೊಂದು ‘ಭಾಗ್ಯ’ ಯೋಜನೆ ಸೇರಿಕೊಂಡಿದೆ. ‘ಪಶು ಭಾಗ್ಯ’ ಎನ್ನುವ ಈ ಕಾರ್ಯಕ್ರಮದಡಿ ಹಸು, ಕುರಿ, ಆಡು, ಹಂದಿ, ಕೋಳಿ ಸಾಕಣೆ ಘಟಕಗಳನ್ನು ಸ್ಥಾಪಿಸುವುದಕ್ಕೆ ವಾಣಿಜ್ಯ ಬ್ಯಾಂಕುಗಳಲ್ಲಿ ಗರಿಷ್ಠ ₨ 1.2 ಲಕ್ಷವರೆಗೆ ಸಾಲ ಪಡೆಯಬಹುದು. ಇದಕ್ಕೆ ಸರ್ಕಾರದಿಂದ ರಿಯಾಯಿತಿ ಕೂಡ ಇದೆ. ಇದೇ ಮೊದಲ ಸಲ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ರಾಜ್ಯದ 7 ಪ್ರಮುಖ  ದೇವಸ್ಥಾನಗಳ ಅಭಿವೃದ್ಧಿಗೆ ₨400 ಕೋಟಿ ಮೀಸಲಿಟ್ಟಿದ್ದಾರೆ.  ಬಿಬಿಎಂಪಿ ಚುನಾವಣೆ ಮೇಲೆ ಕಣ್ಣು ಇಟ್ಟಿರುವ ಮುಖ್ಯಮಂತ್ರಿ, ಬಜೆಟ್‌ನಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ₨4,770 ಕೋಟಿ ನಿಗದಿಪಡಿಸಿದ್ದಾರೆ.

Write A Comment