ಕರ್ನಾಟಕ

ಮದುವೆ ವ್ಯವಹಾರವಲ್ಲ…

Pinterest LinkedIn Tumblr

bhec14maduve new

ಗರ್ಭ ಶ್ರೀಮಂತ ದಂಪತಿಗೆ ಇರುವ ಒಬ್ಬನೇ ಮಗನಿಗೆ ಎರಡು ಹೆಣ್ಣುಮಕ್ಕಳು. ಮೊದಲನೇ ಮೊಮ್ಮಗಳ ಮದುವೆಯ ಪ್ರಸ್ತಾಪವನ್ನು ಮೊದಲು ಅಜ್ಜನೇ ಶುರುಮಾಡಿದರು. ಮೊಮ್ಮಗಳು ಬೇರೆಕಡೆ ಇದ್ದು ಓದಿದ್ದು ಮುಗಿಯಿತು. ಇನ್ನು ಅವಳು ಕೆಲಸ ಮಾಡಿ ಯಾರನ್ನೂ ಸಲಹುವ ಅಗತ್ಯವಿಲ್ಲ, ಹೇಗಿದ್ದರೂ ನಮ್ಮ ಮಗಳ ಮಗ ಗಿರೀಶನೇ ಇದ್ದಾನಲ್ಲ, ಎಂಜಿನಿಯರು, ವಯಸ್ಸು ಚಿಕ್ಕದೆ, ಕಣ್ಣೆದುರಿಗೇ ಬೆಳೆದಿರುವ ಇಬ್ಬರಿಗೂ ಮದುವೆ ಮಾಡಿದರಾಯ್ತು- ಎನ್ನುವುದು ಶ್ರೀಮಂತ ಅಜ್ಜನ ಧೋರಣೆ.

ಆದರೆ ಇಲ್ಲಿ ಮೊಮ್ಮಗಳ ಮನಸ್ಸೇ ಬೇರೆ. ಆಕೆ ತನ್ನ ಸಂಗಾತಿಯನ್ನು ಆಗಲೇ ಹುಡುಕಿಕೊಂಡಿದ್ದಳು. ಇದು ಅಜ್ಜನಿಂದ ಹಿಡಿದು ಆ ಮನೆಯ ಎಲ್ಲ ಸದಸ್ಯರಿಗೂ ಗೊತ್ತಿತ್ತು. ಆದರೆ ಅಜ್ಜನ ಮಗಳ ಮಗನಿಗೆ ಮಾತ್ರ ಯಾವ ವಿಷಯವೂ ಗೊತ್ತಿರಲ್ಲಿಲ್ಲ. ಗೊತ್ತು ಮಾಡಲೂ ಇಲ್ಲ! ಮೊಮ್ಮಗಳಿಗೆ ಬುದ್ಧಿ ಹೇಳಿ ತಮ್ಮ ಆಸ್ತಿಯನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುವ ದೂರಾಲೋಚನೆ ಅಜ್ಜನದ್ದಾದರೆ, ಯಾವ ಸಂದರ್ಭದಲ್ಲಿಯೂ ತನ್ನ ಪ್ರಿಯಕರನನ್ನು ಬಿಟ್ಟುಕೊಡಲು ಒಪ್ಪದ ಮೊಮ್ಮಗಳ ನಡುವೆ ಬಲಿಪಶು ಆದದ್ದು ಏನೂ ಅರಿಯದ ಆ ಮೊಮ್ಮಗ!

ಅಂತೂ ಇಂತೂ ಯಾವ ಗುಟ್ಟನ್ನೂ ಬಿಟ್ಟುಕೊಡದೆ ಒಂದು ಸುಮುಹೂರ್ತದಲ್ಲಿ ಇಬ್ಬರು ಮೊಮ್ಮಕ್ಕಳಿಗೂ ಮದುವೆ ಮಾಡಿಸಿ ಬೀಗಿದರು ಆ ಹಿರಿಯಜ್ಜ. ಸುಂದರ ಕನಸನ್ನು ಕಟ್ಟಿಕೊಂಡು ಹಸೆಮಣೆ ಏರಿ ಮಾವನ ಮಗಳನ್ನು ವರಿಸಿದ ಪ್ರಥಮ ರಾತ್ರಿಯಲ್ಲಿಯೇ ಆತನ ಮನಸ್ಸಿಗಾದ ಆಘಾತ ಯಾವ ಹುಡುಗರಿಗೂ ಬರಬಾರದು. ವೃತ್ತಿಜೀವನದಲ್ಲಿ ಯಶಸ್ಸು ಕಂಡ ಈತ ತನ್ನ ಗೃಹಸ್ಥ ಜೀವನದಲ್ಲಿ ಫೇಲ್ ಆಗಿದ್ದ!

‘ನನ್ನ ಪ್ರಿಯಕರನ ವಿಷಯವನ್ನು ಈ ಮೊದಲೇ ನಿನಗೆ ತಿಳಿಸುವ ಅವಕಾಶ ಸಿಗಲಿಲ್ಲ. ಈಗ ಹೇಳುತ್ತಿದ್ದೇನೆ, ದಯವಿಟ್ಟು ನನ್ನನ್ನು ನನ್ನ ಸಂಗಾತಿಯೊಡನೆ ಸೇರಿಸುತ್ತೀಯಾ?’ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿರುವ, ಸಮಾಜದೆದುರಿಗೆ ತನ್ನ ಹೆಂಡತಿಯಾಗಿರುವ ಇವಳ ಮೇಲೆ ಕೋಪ ಮಾಡಿಕೊಳ್ಳಬೇಕೊ, ಅಥವಾ ಮೋಸ ಮಾಡಿ ಈಕೆಯನ್ನು ತನಗೆ ಕಟ್ಟಿದ ಅಜ್ಜನ ಮನೆಯವರನ್ನು ದೂಷಿಸಬೇಕೋ ಎನ್ನುವ ಪರಿಸ್ಥಿತಿ ಈ ಹುಡುಗನದ್ದು.

ಕೊನೆಗೆ ತಾನು ತಾಳಿ ಕಟ್ಟಿದ ಹೆಂಡತಿಗೆ  ನ್ಯಾಯ ಕೊಡಿಸುತ್ತೇನೆಂದು ಅಭಯವಿತ್ತು ನಟನಾ ನಿದ್ರೆಗೆ ಹೊರಳಿದ. ಮರುದಿನ ಬೆಳಗಾಗುತ್ತಲೇ ತನಗೆ   ಕೆಲಸವಿದೆಯೆಂದು ಹೇಳಿ ಹೆಂಡತಿಯನ್ನು ಕರೆದು ಕೊಂಡು ಬೆಂಗಳೂರಿಗೆ ಹೊರಟೇ ಬಿಟ್ಟ. ಇತ್ತ ಅಜ್ಜನಿಗೆ ಅಂತೂ ಬೇರೆಯವರ ಪಾಲಾಗುತ್ತಿದ್ದ ಆಸ್ತಿ ಉಳಿಸಿಕೊಂಡ ಹೆಮ್ಮೆಯ ಜೊತೆಗೆ ನಿರಾತಂಕವಾಗಿ ಮದುವೆಯಾಯಿತೆಂಬ ಸಮಾಧಾನ.

ತಾಳಿ ಕಟ್ಟಿದ ಹೆಂಡತಿಯನ್ನು ಆಕೆಯ ಪ್ರಿಯಕರನಿಗೆ ಒಪ್ಪಿಸಿ, ತನಗೆ ಮೋಸ ಮಾಡಿದ ಅಜ್ಜನಿಗೆ ದೂರವಾಣಿ  ಕರೆ ಮಾಡಿ ಮನಸ್ಸಿನ ಭಾರ ಇಳಿಸಿಕೊಂಡ ಮೊಮ್ಮಗ. ಅವನೊಂದಿಗೆ ಮಾತನಾಡಲೂ ಮುಜುಗರ ಪಡುವ ಆ ಮನೆಯವರು ಈಗ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಮೊಮ್ಮಗನ ಬಾಳನ್ನು ಹಾಳು ಮಾಡಿದ್ದು ಇವರೇ ತಾನೇ?

ಆದರೆ ತಾನು ಮಾಡದ ತಪ್ಪಿಗೆ ಮರುಮದುವೆಯ ಹುಡುಗನೆಂಬ ಹಣೆಪಟ್ಟಿಕಟ್ಟಿಕೊಂಡು ಒಳಗೊಳಗೇ ಕೊರಗುತ್ತಿರುವ ಈ ಹುಡುಗನ ಮನಸ್ಸನ್ನು ಅರ್ಥಮಾಡಿಕೊಳ್ಳುವವರೇ ಇಲ್ಲ. ಕೇವಲ ಆಸ್ತಿ, ಪ್ರತಿಷ್ಠೆಗಾಗಿ ಮೊಮ್ಮಗನ ಬಾಳನ್ನೇ ಹಾಳು ಮಾಡಿದ ಅಜ್ಜನಿಗೆ ಎಷ್ಟು ಶಾಪ ಹಾಕಿದರೂ ಈ ಹುಡುಗನಿಗೆ ಆದ ಅನ್ಯಾಯ ಸರಿಹೋಗುತ್ತದೆಯೇ?

ಪ್ರೇಮಿಗಳನ್ನು ಒಂದು ಮಾಡಿದ ಸಮಾಧಾನ ಇದ್ದರೂ ತನ್ನ ಸಂಬಂಧಿಕರೇ ಮೋಸ ಮಾಡಿದ ಕೊರಗು ಕಾಡದೆ ಇದ್ದೀತೇ?  ಹಿರಿಯರು ಎನಿಸಿಕೊಂಡವರು ಮಕ್ಕಳ ಬದುಕಿಗೆ ದಾರಿದೀಪವಾಗಬೇಕು. ಮುಳ್ಳಾಗಬಾರದು. ಮರ್ಯಾದೆಯ ಹೆಸರಿನಲ್ಲಿ  ಮದುವೆ ಮಾಡಿಸುತ್ತೇನೆಂಬುದು ಹುಂಬತನದ ಮಾತೇ ಸರಿ.

ಪ್ರೀತಿಸಿದವರನ್ನು ದೂರ ಮಾಡಿ ಮದುವೆ ಮಾಡಿದರೆ ಯಾರ ಬದುಕೂ  ಹಸನಾಗಲು ಸಾಧ್ಯವಿಲ್ಲ ಎಂಬ ಸತ್ಯ ಇವರೇಕೆ  ಒಪ್ಪಿಕೊಳ್ಳುತ್ತಿಲ್ಲ! ವರ್ಷಕ್ಕೆ ಇಂತಹ ಹಲವಾರು ಘಟನೆಗಳು ನಮ್ಮ ಕಣ್ಣು ಮುಂದೆ ನಡೆಯುತ್ತಿದ್ದರೂ ಇನ್ನೂ ಈ ಪೋಷಕರು ಪಾಠ ಕಲಿಯುತ್ತಿಲ್ಲವಲ್ಲ ಎಂದು ಬೇಸರವಾಗುತ್ತದೆ. ಮದುವೆಯೆಂಬುದು ಎರಡು ಮನಸ್ಸುಗಳ ನಡುವೆ ನಡೆಯುವ ಪ್ರೀತಿ, ವಾತ್ಸಲ್ಯವೆಂಬ ಪವಿತ್ರ ಬಂಧನವೇ ಹೊರತು, ಆಸ್ತಿ, ಪ್ರತಿಷ್ಠೆಗಳ ವಿನಿಮಯವಲ್ಲ.

Write A Comment