ರಾಷ್ಟ್ರೀಯ

ಪ್ರೀತಿಯ ಮಗನೇ ರಾಹೂ, ಎಲ್ಲಿದ್ದರೂ ತಕ್ಷಣ ಘರ್‌ ವಾಪಸಿ ಆಗು!

Pinterest LinkedIn Tumblr

pvec08Labo

ಪ್ರೀತಿಯ ರಾಹೂ,
ಎಲ್ಲಿದ್ದೀಯ? ಏನು ಮಾಡುತ್ತಿದ್ದೀಯ? ನೀನು ಮನೆ ಬಿಟ್ಟು ಹೋದಂದಿನಿಂದ ಇಲ್ಲಿ ನಾವು ಅನ್ನ, ನೀರು ಬಿಟ್ಟು ಬಿಟ್ಟು ಸೇವಿಸುತ್ತಿದ್ದೇವೆ. (ಆದರೆ ಯಾವುದೂ ಪಿಜ್ಜಾ, ಬರ್ಗರ್‌ನಂತೆ ರುಚಿಸುತ್ತಿಲ್ಲ) ನೀನು ಹಠಾತ್ತಾಗಿ ಹೇಳದೇ ಕೇಳದೇ ಎಲ್ಲಿ ಹೋಗಿದ್ದೀಯ ಎಂದು ಇಲ್ಲಿ ಎಲ್ಲರೂ ಕೇಳುತ್ತಿದ್ದಾರೆ. ಅಮ್ಮನಾದ ನನಗೇ ಗೊತ್ತಿಲ್ಲದಿರುವಾಗ ಉಳಿದವರಿಗೆ ಏನೆಂದು ಉತ್ತರ ಕೊಡಲಿ?

ನಿನ್ನ ಗೆಳೆಯರನ್ನು ಕೇಳಿದರೆ, ಫ್ರೆಶ್‌ ಆಗಲು ಹಿಮಾಲಯದ ಉತ್ತರಾ­ಖಂಡ­ದಲ್ಲಿ ಅಡ್ಡಾಡುತ್ತಿದ್ದೀಯ ಎಂದು ಹೇಳಿದರು. ನೀನು ಬಯಸಿದ್ದರೆ ಹರ್ಯಾಣಾದಲ್ಲಿರುವ ನಮ್ಮ ಫಾರ್ಮ್‌­ಹೌಸಿ­ನಲ್ಲೇ ಒಂದು ಹಿಮಾಲಯ­­­ವನ್ನು ಸೃಷ್ಟಿಸುತ್ತಿದ್ದೆವಲ್ಲ? ಅಲ್ಲೇ ಫ್ರೆಶ್‌ ಆಗಬಹುದಿತ್ತಲ್ಲ! ಅಂದ ಹಾಗೆ, ಹಿಮಾಲಯ­ದಲ್ಲೂ ಇತ್ತೀಚೆಗೆ ತುಂಬ ಪೊಲ್ಯೂಶನ್‌ ಆಗಿ, ಫ್ರೆಶ್‌ ಏರ್‌ ಸಿಗುತ್ತಿಲ್ಲ­ವಂತೆ. ಹಾಗೆ ನೋಡಿದರೆ, ಹಿಟ್ಟಲಿ­ಯಲ್ಲಿರುವ ನಿನ್ನ ತಾತನ ಮನೆಯಲ್ಲಿ ಹಿಮಾಲಯಕ್ಕಿಂತ ಹೆಚ್ಚು ಫ್ರೆಶ್‌ ಗಾಳಿ- ಬೆಳಕು ಇದೆ. ಫ್ರೆಶ್‌ ಆಗಲೇಬೇಕೆಂದಿದ್ದರೆ ಅಲ್ಲಿಗಾದರೂ ಹೋಗ­ಬಹುದಿತ್ತಲ್ಲ…?

ಅಷ್ಟಕ್ಕೂ ಫ್ರೆಶ್‌ ಆಗುವಂತಹದ್ದು ನಿನಗೆ ಏನಾಗಿದೆ? ನಿನ್ನ ಮುಖ­ವನ್ನು ನೋಡಿದರೆ ನೀನು ಸದಾ ಫ್ರೆಶ್‌ ಆಗಿಯೇ ಕಾಣಿಸು­ತ್ತೀಯ. ಗಡ್ಡ ಬಿಟ್ಟಾಗಲೂ ನೀನೊಬ್ಬ ಎಳೇ ಮಗುವಿನಂತೆ. ನಿನ್ನ ಗುಳಿ ಬೀಳುವ ಕೆನ್ನೆಯಂತೂ ನಿನ್ನಲ್ಲಿರುವ ಮಗುತನ ಇನ್ನೂ ಹೋಗಿಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ. ಹೀಗಿರುವಾಗ ನೀನು ಹೀಗೆ ಹೇಳದೇ ಕೇಳದೇ ಮನೆ ಬಿಟ್ಟು ಹೋದದ್ದಕ್ಕೆ ನನಗೆ ಕಾರಣಗಳೇ ಹೊಳೆಯುತ್ತಿಲ್ಲ.
ದೆಹಲಿಯಲ್ಲಿ ಮನೆಯ ಮುಂದೆ ಜಾಡಮಾಲಿಗಳು ಕಸ ಗುಡಿಸು­ವಾಗ ನಿನ್ನ ಹೊಸ ಜುಬ್ಬಾ, ಪ್ಯಾಂಟುಗಳನ್ನು, ಪರ್ಸ್‌, ಆಟಿಕೆ­ಗಳ ಸಮೇತ ಗುಡಿಸಿಕೊಂಡು ಹೋದರೆಂದು ನೀನೇನಾ­ದರೂ ಬೇಜಾರಾಗಿದ್ದೀಯ? ಹಾಗಿದ್ದರೆ ಹೇಳು, ನಾವು ನಮ್ಮದೇ ಆದ ಹೊಸ ಜಾಡಮಾಲಿಗಳ ಟೀಮ್‌ ಕಟ್ಟೋಣ.

ಇವತ್ತು ಇಡೀ ದೆಹಲಿ ಅವರ ಕಂಟ್ರೋಲ್‌ನಲ್ಲಿ ಇರಬಹುದು; ಆದರೆ ಈ ಜಾಡಮಾಲಿಗಳು ಎಲ್ಲೂ ಹೆಚ್ಚು ದಿನ ಬಾಳಿಕೆ ಬಂದಿಲ್ಲ. ದೆಹಲಿಯಲ್ಲೂ ಅಷ್ಟೆ- ಈಗಾಗಲೆ ಅವರ ಮಧ್ಯೆ ‘ಯಾದವೀ ಕಲಹ’ ಶುರುವಾದ ಸುದ್ದಿ ಬಂದಿದೆ. ಪೊರಕೆ ಹಿಡಿದ­ವರು ಗೊರಕೆ ಹೊಡೆಯಲೇಬೇಕು. ಆಗ ಅವರಲ್ಲಿ ಕೆಲವರು ನಮ್ಮ ಮನೆಗೇ ಕೆಲಸಕ್ಕೆ ಬರುವ ಸಂಭವವೂ ಇದೆ. ಜಾಡ­ಮಾಲಿಗಳಿಂದ ನಿನಗೇನಾದರೂ ಬೇಜಾರಾಗಿದ್ದರೆ ಅದನ್ನು ಮರೆತು ಬಿಟ್ಟು ಸಾಧ್ಯವಾದಷ್ಟು ಬೇಗ ಮನೆಗೆ ವಾಪಸ್ಸು ಬಾ.

ನಮ್ಮ ಮನೆಯಲ್ಲಿ ತುಂಬಿ ತುಳುಕುತ್ತಿರುವ ಹಿರಿ­ಯರು ನಿನಗೇನಾ­ದರೂ ಬೈದರೆ? ಅವರ ಬಗ್ಗೆ ಏಕೆ ಬೇಜಾರು ಮಾಡಿ­ಕೊಳ್ಳು­ತ್ತೀಯ? ನಿನ್ನ ಅಜ್ಜನ, ಅಪ್ಪನ ಕಾಲ­ದಿಂದಲೂ ಇವರು ನಮ್ಮ ಮನೆ­ಯಲ್ಲೇ ಸುಖವಾಗಿ ಇರುವ­ವರು. ಈಗ ಕಷ್ಟಕಾಲದಲ್ಲಿ ಇವರನ್ನು ಮನೆ­ಯಿಂದ ಹೊರ­ಹಾಕು­ವುದು ತರವೇ? ಅವರಾದರೂ ಈ ಕಷ್ಟ­ಕಾಲ­ದಲ್ಲಿ ಎಲ್ಲಿಗೆ ಹೋಗ­ಬೇಕು? ಏನೋ ವಯಸ್ಸಿಗೆ ತಕ್ಕಂತೆ ಆಗಾಗ್ಗೆ ಸ್ವಲ್ಪ ಗೊಣಗು­­­­­ತ್ತಾರೆ.

ಮಣಿ­ಯಯ್ಯ, ದಿಗ್ಗಿಸಿಂಗಣ್ಣ, ಕಮಲಣ್ಣ, ಹಾಮ­ದಣ್ಣ, ಹಾಸ್ಕರಣ್ಣ ಎಲ್ಲರೂ ನಮ್ಮ ಫ್ಯಾಮಿಲಿಗೆ ಪ್ರಾಚೀನ ಕಾಲ­ದಿಂದಲೂ  ನಿಷ್ಠ­ರಾ­ಗಿ­­ರುವವರು. ಅವರೇನಾದರೂ ಹೇಳಿ­ದ್ದರೆ ಅದು ನಿನ್ನ ‘ಬೆನಿಫಿಟ್‌ ಷೋ’ಗೆಂದೇ ಹೇಳಿರುತ್ತಾರೆ. ಅದ­ನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳಬೇಡ. ಹಾಗೂ ಒಬ್ಬಿಬ್ಬರನ್ನು ಮನೆಯಿಂದ ಹೊರಗೆ ಕಳಿಸಬೇಕಿದ್ದರೆ ಹೇಳು- ಹಿಂದೆ ಸೀರಾಕೇ ಅವರಂತಹ ಸಿಂಹವನ್ನೇ ಮನೆಯಿಂದ ಹೊರಗೆ ಹಾಕಿಲ್ಲವೆ?

ನಿನಗೆ ಇನ್ನೂ ಮದುವೆಯನ್ನೇ ಮಾಡಿಸಿಲ್ಲ ಎಂದೇನಾದರೂ ಮುನಿಸು ಇದೆಯೆ? ಇದರಲ್ಲಿ ನನ್ನ ತಪ್ಪೇನೂ ಇಲ್ಲ. ನೀನು ಇಂತಹ ಹುಡುಗಿ ಬೇಕು ಅನ್ನು- ಕರೆದುತಂದು ಮದುವೆ ಮಾಡಿಸು­ತ್ತೇನೆ. ನಮ್ಮ ಮನೆಯಲ್ಲಿ ಅಂತರ್ಜಾತೀಯ ಮದುವೆ­ಗಳು ಹೇರಳವಾಗಿ ನಡೆದಿವೆ ಎನ್ನುವುದು ನಿನಗೆ ಗೊತ್ತೇ ಇದೆ­ಯಲ್ಲ! ನಿನ್ನ ಮುತ್ತಜ್ಜ ಮದುವೆಯಾದ ಬಳಿಕವೂ ಆಂಗ್ಲೊ ಇಂಡಿ­ಯನ್ ಬೆಡಗಿಯ ಸ್ನೇಹ ಬೆಳೆಸಿದ್ದು ಹಳೇ ಸ್ಟೋರಿ. ನಿನ್ನ ಅಜ್ಜ-ಅಜ್ಜಿ ಅವರದ್ದೂ ಅಂತರ್‌ ಧರ್ಮೀಯ ಮದುವೆ. ನಾನೂ ದೂರದ ದೇಶದಿಂದ ನಿನ್ನ ಅಪ್ಪನನ್ನು ನಂಬಿಕೊಂಡು ಬಂದ­ವಳು.

ಹೀಗಿರುವಾಗ ನಿನ್ನ ಮದುವೆ ಯಾವ ಹುಡುಗಿಯ ಜತೆಗೆ ಆದರೂ ನನಗೆ ಆಕ್ಷೇಪವಿಲ್ಲ. ನೀನು ಮದುವೆಯಾಗುತ್ತೀ ಎಂದು ಹೇಳಿದರೆ, ಈ ದೇಶದಲ್ಲಿ ಲಕ್ಷಾಂತರ ಹೆಣ್ಣು ಮಕ್ಕಳು ನಿನ್ನ ಕೈ ಹಿಡಿಯಲು ತುದಿಗಾಲಲ್ಲಿ ನಿಂತಿದ್ದಾರೆ. (ಕೆಲವರು ನಿಂತು ನಿಂತು ಸುಸ್ತಾಗಿ ಮಲಗಿದ್ದಾರೆ!) ನಿನ್ನ ಅಕ್ಕನನ್ನು ನೋಡು- ಲಕ್ಷಣವಾಗಿ ಮದುವೆಯಾಗಿ ಎರಡು ಮಕ್ಕಳನ್ನೂ ಹೆತ್ತು ಕಳಕಳೆಯಾಗಿ ಓಡಾಡಿಕೊಂಡಿಲ್ಲವೆ? ನಿನ್ನ ಭಾವನ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ನ ತಲೆಬಿಸಿ ನೂರೆಂಟು ಇದ್ದರೂ, ಅದ್ಯಾವುದನ್ನೂ ಮನಸ್ಸಿಗೆ ಹಚ್ಚಿ­ಕೊಳ್ಳ­ದಂತೆ ಅವಳು ಸದಾ ನಗುತ್ತಲೇ ಇರುವುದಿಲ್ಲವೆ?

‘ಅವನಿ­ಗೊಂದು ಮದುವೆಯನ್ನು ಬೇಗ ಮಾಡಿಬಿಡಿ; ಎಲ್ಲ ಸರಿ­ಹೋಗುತ್ತೆ’ ಅಂತ ಬೆಂಗಳೂರಿನ ಥ್ರೀ ಶ್ರೀ ಗುರುಗಳೂ ಇಲ್ಲಿಗೆ ಬಂದು ಪದೇ ಪದೇ ಹೇಳುತ್ತಿದ್ದಾರೆ. ಮೊನ್ನೆ ರಾಜ್‌ಪಥ್‌ನಲ್ಲಿರುವ ನಿನ್ನ ಅಜ್ಜಿ ಮನೆಯಲ್ಲಿ ನಿನ್ನ ಬಗ್ಗೆಯೇ ದೊಡ್ಡ ಗಲಾಟೆಯಾಯಿತು ನೋಡು. ಅಲ್ಲಿರುವ ಸಿಂಹಾ­ಸ­ನದಲ್ಲಿ ಹಿಂದೆ ನಿನ್ನ ಮುತ್ತಜ್ಜ, ಅಜ್ಜಿ, ಅಪ್ಪ ಎಲ್ಲರೂ ಎಷ್ಟೊಂದು ಆನಂದದಿಂದ  ಕುಳಿತುಕೊಳ್ಳುತ್ತಿದ್ದರು! ನಿನ್ನ ಅಜ್ಜಿಯ ಅಜ್ಜ ಆನಂದ ಭವನವನ್ನೇ ದೇಶಕ್ಕಾಗಿ ಬಿಟ್ಟುಕೊಟ್ಟರೆ, ದೇಶ­ದವರೆಲ್ಲ ಸೇರಿ ಅವರ ಮಕ್ಕಳು, ಮೊಮ್ಮಕ್ಕಳಿಗಾಗಿ ರಾಜ­ಪಥ­ದಲ್ಲೇ ಪರಮಾನಂದ ಭವನವನ್ನು ಬಿಟ್ಟುಕೊಟ್ಟರು.

ಈಗ ಇನ್ಯಾವುದೋ ಭವನದಲ್ಲಿ ಚಹಾ, ಕಾಫಿ ಕುಡಿದೋರೆಲ್ಲ ಅಜ್ಜಿ ಮನೆಗೆ ನುಗ್ಗಿ ಬಂದು, ನಮ್ಮ ಚಹಾದ ಕಪ್‌ನಲ್ಲೇ ದೊಡ್ಡ ಬಿರು­ಗಾಳಿ ಎಬ್ಬಿಸಿದ್ದಾರಲ್ಲ! ಅಜ್ಜಿ ಮನೆಯ ಸಂಸಭವನದಲ್ಲಿ ವರ್ಷಾ­ವಧಿ ತಾಳಮದ್ದಲೆಯ ಸಮಯದಲ್ಲಿ, ಜೇಟ್ಲೀವಾಲ, ಬಾಟ್ಲೀ­ವಾಲ, ವೆಂಕಿ, ಪಿಂಕಿ ಮುಂತಾದವರೆಲ್ಲ ನಿನ್ನನ್ನು ಲೇವಡಿ ಮಾಡಿ­ದರು! ಅಯ್ಯೋ ಪಾಪ, ಮನೆ ಬಿಟ್ಟು ಹೋದವನು ಇನ್ನೂ ವಾಪಸ್‌ ಬಂದಿಲ್ಲವಾ… ಎಂದು ಅಮಾಯಕರಂತೆ ಪ್ರಶ್ನೆ ಕೇಳಿದರು. ನನಗೆ ಏನು ಉತ್ತರ ಹೇಳಬೇಕೆಂದೇ ಹೊಳೆಯಲಿಲ್ಲ.

ಮನೆ ಬಿಟ್ಟು ಹೋದವರೆಲ್ಲ ಪ್ರಧಾನಿಯೇ ಆಗುತ್ತಾರೆ ಎಂದೇ­ನಾದರೂ ಭಾವಿಸಿಕೊಂಡು, ನೀನೂ ಮನೆ ಬಿಟ್ಟು ಹೋಗಿ­ದ್ದೀಯಾ ಹೇಗೆ? ಹಾಗೇನಾದರೂ ಮನಸ್ಸಿನಲ್ಲಿ ಇದ್ದರೆ ಅಂತಹ ತಪ್ಪುಕಲ್ಪನೆಯನ್ನು ತೊಡೆದು ಹಾಕಿಬಿಡು. ಇಂತಹ ಘಟನೆ ಇತಿಹಾಸದಲ್ಲಿ ಎಷ್ಟೋ ಶತಮಾನಗಳಿಗೆ ಒಮ್ಮೆ ಮಾತ್ರ ಸಂಭವಿಸುತ್ತದೆ- ಸುನಾಮಿಯ ಹಾಗೆ. ಹಾಗೆಯೇ ಪ್ರಧಾನಿ ಆಗಲೆಂದು ಕಾದೂ ಕಾದೂ ಕೊನೆಗೂ ಆಸೆ ಕೈಗೂಡಲಿಲ್ಲ ಎಂದು ಇರೋ ಮನೆ ಬಿಟ್ಟು ಹೋಗೋದಾದರೆ, ನಮ್ಮ ಎದುರು ಮನೆಯ ಅಧ್ವಾನಜ್ಜ ಇಷ್ಟೊತ್ತಿಗಾಗಲೇ ಕರಾಚಿ­ಯಲ್ಲಿರುವ ಪೂರ್ವಜರ ಮನೆಗೇ ಹೋಗಬೇಕಿತ್ತು.

ನೂರು ವರ್ಷ ದಾಟಿರುವ ನಮ್ಮ ಹಳೇ ಮನೆಯಲ್ಲಿ ಇಲಿ ಹೆಗ್ಗಣ­ಗ­ಳೆಲ್ಲ ತುಂಬಿಕೊಂಡಿವೆ, ಚಾವಣಿಯೆಲ್ಲ ಗೆದ್ದಲು ಹಿಡಿದಿದೆ ಎನ್ನುವ ನಿನ್ನ ಅಳಲು ನನಗೆ ಅರ್ಥವಾಗುತ್ತದೆ. ನೀನು ಹೊಸ ತಲೆಮಾರಿನ ಯುವಕ. ಹಳೇ­ಮನೆಯನ್ನು ಪೂರ್ತಿ ಕೆಡವಿ ಹೊಸ ಮನೆಯನ್ನು ನಿರ್ಮಿಸೋಣ ಎನ್ನುವ ನಿನ್ನ ಉತ್ಸಾಹ ಸಹಜವೇ. ಆದರೆ ‘ಓಲ್ಡ್‌ ಈಸ್‌ ಗೋಲ್ಡ್‌’ ಎನ್ನು­­­ವು­ದನ್ನು ಮರೆಯಬೇಡ. ಈ ಮನೆಯ ವಾಸ್ತು ಅತ್ಯದ್ಭುತವಾಗಿದೆ ಎನ್ನು­­ವುದು ಹಲವು ಸಲ ಚುನಾವಣೆಯಲ್ಲಿ ಸಾಬೀತಾಗಿದೆ. ಅದೂ ಅಲ್ಲದೆ, ನಮ್ಮ ಮನೆಗೆ ವರ್ಷ ಕಳೆದಂತೆ ಆ್ಯಂಟಿಕ್‌ ವ್ಯಾಲ್ಯೂ ಹೆಚ್ಚಾ­ಗು­ತ್ತಲೇ ಇದೆ. ಅದನ್ನೇ ಕ್ಯಾಶ್‌ ಮಾಡಿ­ಕೊಳ್ಳಲು ನಾವು ಪ್ರಯತ್ನಿಸಬೇಕು.

ಗೋಡೆಗೆ ಹೊಸ ಸುಣ್ಣ-ಬಣ್ಣ ಬಳಿಯೋಣ. ಕಿಟಕಿ, ಬಾಗಿಲು­ಗ­ಳನ್ನು ಬದಲಾಯಿಸೋಣ. ಈಗಿರುವ ಇಟಲಿ ಟೈಲ್ಸ್್ ನಿನಗೆ ಇಷ್ಟ­ವಿಲ್ಲ ಎಂದಾದರೆ, ಅವುಗಳನ್ನು ಅಡುಗೆ ಮನೆಗೆ ಮಾತ್ರ ಸೀಮಿತ­ಗೊಳಿಸೋಣ. ಹಜಾರ, ಎಕ್ಸ್‌ಟ್ರಾ ಹಾಲ್‌, ಬೆಡ್‌ರೂಂ, ಮೀಟಿಂಗ್‌ರೂಂ, ಪಾರ್ಟಿ ಹಾಲ್‌, ಗೆಸ್ಟ್‌ ರೂಮ್‌, ಗೇಮ್ಸ್‌ ರೂಮ್‌ ಮತ್ತಿತರ ಕೋಣೆಗಳನ್ನು ಈಗಿನ ಕಾಲದ ವಾಸ್ತುವಿಗೆ ತಕ್ಕಂತೆ ಬದಲಾಯಿಸು- ನನ್ನ ಅಭ್ಯಂತರ­ವೇನಿಲ್ಲ. ಆದರೆ ಯಾವುದಕ್ಕೂ ಮೊದಲು ನೀನು ಘರ್‌ವಾಪಸಿ ಆಗು.

ಹಿಂದೆ ನಿನ್ನ ಮುತ್ತಜ್ಜ ತನ್ನ ಪ್ರಿಯದರ್ಶಿನೀ ಮಗಳಿಗೆ ಜೈಲಿ­ನಿಂದ ನಿರಂತರ ಪತ್ರಗಳನ್ನು ಬರೆಯುತ್ತಿದ್ದರಂತೆ. ಆ ಪತ್ರಗಳನ್ನೇ ಒಟ್ಟು ಸೇರಿಸಿ ದೊಡ್ಡ ಪುಸ್ತಕವೇ ಬಂದಿದೆಯಂತೆ. ನಿನಗೆ ಈ ಪತ್ರ ಬರೆಯುತ್ತಿರುವಾಗ ನನಗೆ ನಿನ್ನ ಮುತ್ತಜ್ಜನ ನೆನಪಾ­ಗು­ತ್ತಿದೆ. ಅವರನ್ನು ಬ್ರಿಟಿಷರು ಜೈಲಿಗೆ ಹಾಕಿದರು. ನನಗೋ ನೀನಿ­ಲ್ಲದ ಈ ಮನೆಯೇ ಜೈಲಿನಂತಿದೆ.   ಆದರೆ ಅವರಂತೆ ನಾನು ನಿರಂತರ ಪತ್ರಗಳನ್ನು ನಿನಗೆ ಬರೆಯಲಾರೆ. ನಾನು ಪತ್ರ ಪ್ರೇಮಿ­ಯಲ್ಲ; ಪುತ್ರ ಪ್ರೇಮಿ. ದಯವಿಟ್ಟು ನಿನ್ನ ಹಿಮಾಲಯ ವಾಸ­ವನ್ನು ಕೊನೆಗೊಳಿಸಿ ಶೀಘ್ರವೇ ಮನೆಗೆ ಬಂದು ಬಿಡು. ಬಾಕಿ ಮೊಖ್ತಾ.
ಇತೀ ನಿನ್ನ ಮಮ್ಮಿ
ಶೂನ್ಯಾ

Write A Comment