ಮಂಗಳೂರು,ಮಾರ್ಚ್.16 : ನ್ಯಾಯಾಂಗವನ್ನು ರಕ್ಷಿಸಲು, ಇನ್ನಷ್ಟು ಸದೃಢ ಗೊಳಿಸುವುದಕ್ಕಾಗಿ ಅತ್ಯುತ್ತಮ ವಕೀಲರು ಹಾಗೂ ನ್ಯಾಯಾಧೀಶರು ಈ ಕ್ಷೇತ್ರಕ್ಕೆ ಬರುವ ಅಗತ್ಯವಿದೆ ಎಂದು ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಎನ್. ಕುಮಾರ್ ಹೇಳಿದರು. ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕಾಲೇಜಿನ ಆವರಣದಲ್ಲಿ ರಾಷ್ಟ್ರ ಮಟ್ಟದ ಕಾನೂನು ಉತ್ಸವ ‘ವಿಕ್ಟೋರಿಯಾ ಐರಿಸ್ 2015’ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾರ್ ಕೌನ್ಸಿಲ್ನಲ್ಲಿ ನೊಂದಾಯಿಸಿಕೊಳ್ಳುತ್ತಿರುವ ಶೇ.90ರಷ್ಟು ವಕೀಲರು ನ್ಯಾಯಾಂಗ ಕ್ಷೇತ್ರದಲ್ಲಿ ಪರಿಣಿತಿ ಪಡೆದು ಯೋಗ್ಯರೆನಿಸಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಿಂದ ಪ್ರತಿಭಾವಂತ ಅತ್ಯುತ್ತಮ ಯುವ ವಕೀಲರು ನ್ಯಾಯಾಂಗ ಕ್ಷೇತ್ರಕ್ಕೆ ಬರಬೇಕು. ಕಠಿಣ ಪರಿಶ್ರಮ, ಅರ್ಪಣಾಭಾವದಿಂದ ಕೆಲಸ ಮಾಡಿದರೆ, ಇದರಷ್ಟು ಗೌರವಯುತ ಶ್ರೇಷ್ಠ ವೃತ್ತಿ ಬೇರೊಂದಿಲ್ಲ ಎಂದರು.
ವಿದೇಶಿ ವಕೀಲರು ಬರಲಿ: ವಿದೇಶಿ ವಕೀಲರು ಬಂದು ಇಲ್ಲಿ ಅಭ್ಯಾಸ ಮಾಡುವುದಕ್ಕೆ ಬಾರ್ ಕೌನ್ಸಿಲ್ನವರು ನಿಯಂತ್ರಣ ಹಾಕುವುದು ಸರಿಯಲ್ಲ. ನಮ್ಮಲ್ಲಿ ಪ್ರತಿಭೆ ಇದ್ದರೆ, ಅವರಿಗೆ ಹೆದರುವ ಅಗತ್ಯವಿಲ್ಲ. ಅವರಿಗೆ ಅವಕಾಶ ನೀಡುವ ಮೂಲಕ ನಮ್ಮಲ್ಲಿರುವ ವಕೀಲರಿಗೆ ಇಡೀ ವಿಶ್ವದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಲಭಿಸುತ್ತದೆ ಎಂದರು.
ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಮಾತನಾಡಿ, ಕಾನೂನು ವಿದ್ಯಾರ್ಥಿಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಿದ್ದು, ತಮ್ಮ ಪದವಿ ಪೂರ್ತಿಯಾದ ಬಳಿಕ ಅವರು ಕಾನೂನು ವೃತ್ತಿಗೆ ಬರುವ ಅಗತ್ಯವಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಈ ಹಿನ್ನೆಲೆಯಿಂದ ಯುವ ವಕೀಲರ ಅಗತ್ಯ ನ್ಯಾಯಾಂಗ ಕ್ಷೇತ್ರಕ್ಕಿದೆ ಎಂದರು.
ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ವೇಣುಗೋಪಾಲ ಗೌಡ ಮಾತನಾಡಿ, ಇದೊಂದು ಶ್ರೇಷ್ಠ ವೃತ್ತಿಯಾಗಿದ್ದು, ವ್ಯಾಪಕ ಅವಕಾಶ ಇದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಪಿ. ಪಿ. ಹೆಗ್ಡೆ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಒಟ್ಟು 84,500 ಮಂದಿ ನೊಂದಾಯಿತ ವಕೀಲರಿದ್ದಾರೆ.
2013ನೇ ಸಾಲಿನಲ್ಲಿ 2ರಿಂದ 3000ಸಾವಿರ ವಕೀಲರ ನೋಂದಣಿಯಾಗಿದ್ದರೆ, 2005ರಲ್ಲಿ ಇದರ ಸಂಖ್ಯೆ 5 ಸಾವಿರದಷ್ಟಿತ್ತು. ಪ್ರತಿ ವರ್ಷ ಸರಾಸರಿ ಒಂದು ಸಾವಿರದಷ್ಟು ವಕೀಲರ ನೋಂದಾಣಿ ಕಡಿಮೆಯಾಗುತ್ತಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಯುವ ವಕೀಲರಿಗೆ ಅವಕಾಶಗಳು ವಿಪುಲವಾಗಿವೆ. ಕಲಿಕೆ ಬಳಿಕ ವಕೀಲಿ ವೃತ್ತಿ ನಿರ್ವಹಿಸುವುದಕ್ಕೆ ಮುಂದಾಗಬೇಕು ಎಂದರು.
ಎಸ್ಡಿಎಂ ಶಿಕ್ಷಣ ಸೊಸೈಟಿಯ ಸದಸ್ಯ ಪ್ರೊ.ಎ.ರಾಜೇಂದ್ರ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ಮೆಲ್ವಿನ್ ಪ್ರಕಾಶ್ ನೊರೊನ್ಹಾ ಹಾಗೂ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ. ಪಿ. ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಮೂಟ್ ಕೋರ್ಟ್ನ ತೀರ್ಪುಗಾರರ ಪರವಾಗಿ ಹಿರಿಯ ವಕೀಲ ಶಂಕರ ಭಟ್ ಮಾತನಾಡಿದರು.
ಮೂಟ್ ಕೋರ್ಟ್ನ ಸಂಘಟಕ ಸಮಿತಿಯ ರಾಘವೇಂದ್ರ ರಾವ್, ಕಾಲೇಜಿನ ಉಪ ಪ್ರಿನ್ಸಿಪಾಲ್ ಉದಯ ಕುಮಾರ್, ಕಾರ್ಯಕ್ರಮದ ಸಹ ಸಂಚಾಲಕರಾದ ಸಂತೋಷ್ ಪ್ರಭು, ರಕ್ಷಿತ್ ಬಿ.ವಿ., ಲೈನಲ್ ತೌರೊ, ಸುಮಿತ್ ಎಸ್. ಭಟ್, ಅಂಜಲಿ ಮೆನನ್, ರೌನಕ್ ನಾಯಕ್ ಉಪಸ್ಥಿತರಿದ್ದರು. ಪ್ರಿನ್ಸಿಪಾಲ್ ಡಾ.ಪಿ.ಡಿ. ಸೆಬಾಸ್ಟಿಯನ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಡಾ.ತಾರಾನಾಥ್ ನಿರೂಪಿಸಿದರು. ಮೂಟ್ ಕೋರ್ಟ್ ಸೊಸೈಟಿಯ ಉಪಾಧ್ಯಕ್ಷ ಚಿರಾಗ್ ಅರಿಗ ವಂದಿಸಿದರು.
ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಪ್ರಥಮ ಬಹುಮಾನ ಪಡೆದುಕೊಂಡಿತು. ಅತ್ಯುತ್ತಮ ವಕೀಲರಾಗಿ ನ್ಯಾಶನಲ್ ಲಾ ಸ್ಕೂಲ್ ಬೆಂಗಳೂರಿನ ನಿಕ್ಕಿ ಕೊಲಿನ್ಸ್ ಹಾಗೂ ಅತ್ಯುತ್ತಮ ಮಹಿಳಾ ವಕೀಲರಾಗಿ ಜೆಎಸ್ಎಸ್ ಮೈಸೂರಿನ ರಿಧಿಮಾ ತುನೋಲಿ ಪಡೆದುಕೊಂಡರು.