ರಾಷ್ಟ್ರೀಯ

ಕಪ್ಪು ಮಹಿಳೆಯರು ಸುಂದರಿಯರು; ವಿವಾದಿತ ಹೇಳಿಕೆಗೆ ವಿರೋಧ; ಕ್ಷಮೆ ಕೋರಲು ಶರದ್‌ ಯಾದವ್‌ ನಕಾರ

Pinterest LinkedIn Tumblr

Sharad-Yadavweb

ನವದೆಹಲಿ: ದಕ್ಷಿಣ ಭಾರತದ ಮಹಿಳೆಯರ ಕುರಿತ ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದಿರುವ ಜಿಡಿಯು ಅಧ್ಯಕ್ಷ ಶರದ್  ಯಾದವ್‌,  ಈ ಕುರಿತು ಕ್ಷಮೆ ಕೋರಲು ನಿರಾಕರಿಸಿದ್ದಾರೆ. ಆದರೆ,  ಈ ವಿಚಾರವಾಗಿ ಚರ್ಚೆಗೆ  ಸಿದ್ಧ ಎಂದು  ಅವರು ಹೇಳಿದ್ದಾರೆ.

‘ದಕ್ಷಿಣ ಭಾರತದ ಮಹಿಳೆಯರು ಕಪ್ಪಗಿದ್ದರೂ ಅವರ ದೇಹದಷ್ಟೇ ಸುಂದ­ರ­­­ವಾಗಿರುತ್ತಾರೆ’ ಎಂದು ಶರದ್‌ ಯಾದವ್‌ ರಾಜ್ಯಸಭೆಯಲ್ಲಿ ಗುರುವಾರ ಹೇಳಿಕೆ ನೀಡಿದ್ದರು. ಯಾದವ್‌ ಹೇಳಿಕೆಯಿಂದಾಗಿ ಸದನ ಕೆಲವು ಕಾಲ ನಗೆಗಡಲಲ್ಲಿ ಮುಳುಗಿತು. ಡಿಎಂಕೆ ಸದಸ್ಯೆ ಕನಿಮೋಳಿ ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಉಳಿದ ಮಹಿಳಾ ಸದಸ್ಯರು ಮೂಕ ಪ್ರೇಕ್ಷಕರಾಗಿದ್ದರು. ನಂತರ ಈ ವಿವಾದಿತ ಹೇಳಿಕೆಗೆ ಸಾಮಾಜಿಕ ಜಾಲ ತಾಣಗಳಲ್ಲಿ  ತೀವ್ರ ವಿರೋಧ ವ್ಯಕ್ತವಾಗಿತ್ತು.

ಸೋಮವಾರ ಯಾದವ್‌  ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ‘ಮಹಿಳೆಯರ ಚರ್ಮದ ಬಣ್ಣದ ಬಗ್ಗೆ ಹೇಳಿಕೆ ನೀಡುವ ಅಗತ್ಯ ಯಾದವ್‌ಗೆ ಇರಲಿಲ್ಲ. ಅವರು ರಾಜ್ಯಸಭೆಯ ಹಿರಿಯ ಸದಸ್ಯರು.  ಈ ರೀತಿಯ ವಿವಾದಿತ ಹೇಳಿಕೆ ನೀಡುವ ಮೂಲಕ ಇಡೀ ದೇಶಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ’ ಎಂದರು. ಇರಾನಿ ಹೇಳಿಕೆಗೆ ಡಿಎಂಕೆ ಸದಸ್ಯೆ ಕನಿಮೋಳಿ ಸಹ ಧ್ವನಿಗೂಡಿಸಿದರು.  ಎಲ್ಲ ಪಕ್ಷಗಳ ಮಹಿಳೆಯರು ಸೇರಿ ಈ ವಿಚಾರವಾಗಿ ಯಾದವ್‌ ಕ್ಷಮೆ ಕೋರಬೇಕೆಂದು ಆಗ್ರಹಿಸುತ್ತೇವೆ ಎಂದರು.

ಆದರೆ, ರಾಜ್ಯಸಭೆಯ ಉಪ ಸಭಾಪತಿ ಪಿ.ಜೆ ಕುರಿಯನ್‌ ಈ ಕುರಿತು ಚರ್ಚೆ ನಡೆಸಲು ಅವಕಾಶ ನಿರಾಕರಿಸಿದರು. ಅದರ ಬೆನ್ನಲ್ಲೇ, ಯಾದವ್‌, ತಾವು ಈ ಕುರಿತು ಕ್ಷಮೆ ಕೋರುವುದಿಲ್ಲ. ಯಾರೊಂದಿಗೆ ಯಾವ ಸಮಯದಲ್ಲಿ ಬೇಕಿದ್ದರೂ ಚರ್ಚೆಗೆ ಸಿದ್ಧ ಎಂದರು.

ಹಿನ್ನೆಲೆ: ಕಳೆದ ವಾರ ವಿಮಾ ಮಸೂದೆ ಮೇಲೆ ನಡೆ­ಯುತ್ತಿದ್ದ ಚರ್ಚೆಯಲ್ಲಿ ಭಾಗವಹಿಸಿದ್ದ ಶರದ್‌ ಯಾದವ್, ‘ದಕ್ಷಿಣ ಭಾರತದ ಮಹಿಳೆಯರು ಕಪ್ಪಗಿದ್ದರೂ ಅವರ ದೇಹದಷ್ಟೇ ಸುಂದರವಾಗಿರುತ್ತಾರೆ. ಅವ­­ರಿಗೆ ನೃತ್ಯವೂ ಗೊತ್ತಿದೆ. ಅಂಥ ಮಹಿಳೆಯರು ಇಲ್ಲಿ ಕಾಣುವುದಿಲ್ಲ’ ಎಂದಿದ್ದರು.

Write A Comment