ಮಂಗಳೂರು,ಮಾರ್ಚ್.19 : ನಗರದ ಸಂತ ಆಗ್ನೆಸ್ ಕಾಲೇಜು ಹಾಗೂ ಆಗ್ನೇಶಿಯನ್ ಹಳೆ ವಿದ್ಯಾರ್ಥಿನಿಯರ ಸಂಘದ ವತಿಯಿಂದ ಬುಧವಾರ ನಡೆದ “ಮದರ್ ಮೇರಿ ಆಲ್ವಿಶಾ ದತ್ತಿನಿಧಿ ಉಪನ್ಯಾಸ’ ಕಾರ್ಯಕ್ರಮದಲ್ಲಿ ಉತ್ತರಾಖಂಡ, ರಾಜಸ್ಥಾನ, ಗುಜರಾತ್ ಮತ್ತು ಗೋವಾ ರಾಜ್ಯಗಳ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಅವರು “ರಾಜಕಾರಣದಲ್ಲಿ ಮಹಿಳೆ-ಒಲವುಗಳು ಮತ್ತು ಸವಾಲುಗಳು’ ಎಂಬ ವಿಷಯದ ಕುರಿತು ಪ್ರಸ್ತುತ ಇರುವ ಮಹಿಳಾ ಮೀಸಲಾತಿ ಪ್ರಮಾಣವನ್ನು ಶೇ. 33ರಿಂದ ಶೇ. 50ಕ್ಕೇರಿಸಬೇಕು. ಸರಕಾರಿ ಯೋಜನೆಗಳನ್ನು ನಿರ್ಧರಿಸುವಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ಅವಶ್ಯ ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ಶೇ. 21ರಷ್ಟು ಮಹಿಳೆಯರು ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಭಾರತದ ರಾಜಕೀಯ ಕ್ಷೇತ್ರದಲ್ಲಿ ಮಹಿಳಾಬಲ ತೀರಾ ಕಡಿಮೆಯಿದೆ. ಪ್ರಸ್ತುತ ಶೇ. 12ರಷ್ಟು ಮಹಿಳೆಯರು ಮಾತ್ರ ಲೋಕಸಭಾ ಸದಸ್ಯರಿದ್ದಾರೆ. ಸರಕಾರಿ ಮಟ್ಟದ ಅಭಿವೃದ್ಧಿಪರ ಯೋಜನೆಗಳನ್ನು ನಿರ್ಧರಿಸುವಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮತದಾರರಾಗಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುತ್ತಾರೆ. ಸಕ್ರಿಯ ರಾಜಕಾರಣದತ್ತಲೂ ಒಲವು ಬೆಳೆಸಿಕೊಂಡು ದೇಶವನ್ನು ಉನ್ನತಿ ಪಥದಲ್ಲಿ ಕೊಂಡೊಯ್ಯಲು ಮಹಿಳೆಯರು ಶ್ರಮಿಸಬೇಕು. ಸರಕಾರ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ತರಬೇತಿ ನೀಡಬೇಕು ಎಂದು ಅವರು ಆಶಿಸಿದರು.
ಮಾರ್ಗರೇಟ್ ಆಳ್ವ ಅವರನ್ನು “ಮದರ್ ಮೇರಿ ಅಲ್ವಿಶಾ ದತ್ತಿನಿಧಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕಾಲೇಜು ಪ್ರಾಂಶುಪಾಲೆ ಸಿ. ಎಂ. ಸುಪ್ರಿಯಾ, ಸಿ. ಮರಿಯ ರೂಪಾ, ಕಾರ್ಯಕ್ರಮ ಸಂಯೋಜಕಿ ಡಾ. ದೇವಿಪ್ರಭಾ ಆಳ್ವ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಉಷಾ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿನಿ ಕೋರಲ್ ಪಾಯಸ್ ಸ್ವಾಗತಿಸಿದರು. ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಮಾಳವಿಕಾ ಶೆಟ್ಟಿ ನಿರೂಪಿಸಿದರು.