ಬೆಂಗಳೂರು,ಮಾರ್ಚ್.19: ಸಾಮಾಜಿಕ ಜಾಲ ತಾಣಗಳು ಬರೀ ಹರಟೆ, ಕಾಲಹರಣಕ್ಕೆ ಹೇಳಿ ಮಾಡಿಸಿದ ತಾಣ ಎಂದು ಎಲ್ಲರೂ ಮೂಗು ಮುರಿಯುವ ಸಂದರ್ಭದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಬೇರೆ ರೀತಿಯಲ್ಲಿ ಯೋಚಿಸುತ್ತಿದೆ. ಟ್ವಿಟ್ಟರ್ ನಂತರ ಈಗ ಫೇಸ್ ಬುಕ್ ಬಳಸಿ ಕೂಡಾ ನಿಮ್ಮ ಆಪ್ತರಿಗೆ ಹಣ ರವಾನಿಸಬಹುದು. ಟ್ವಿಟ್ಟರ್ ಖಾತೆ ಬಳಸಿ ರಿಯಲ್ ಟೈಮ್ ಹಣ ರವಾನೆ, ಪ್ರೀಪೇಯ್ಡ್ ಮೊಬೈಲ್ ರೀಚಾರ್ಚ್ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ಪಡೆಯುವ ಸೌಲಭ್ಯವನ್ನು ಐಸಿಐಸಿಐ ಬ್ಯಾಂಕ್ ಇತ್ತೀಚೆಗೆ ತನ್ನ ಗ್ರಾಹಕರಿಗೆ ಒದಗಿಸಿತ್ತು. ನೋಂದಾಯಿಸಿದ ಮೊಬೈಲ್ ಫೋನ್ ಉಳ್ಳ ಐಸಿಐಸಿಐ ಉಳಿತಾಯ ಖಾತೆದಾರರೆಲ್ಲರೂ icicibankpay ಸೌಲಭ್ಯ ಪಡೆದುಕೊಳ್ಳಬಹುದು. ಹಣ ಪಡೆದುಕೊಳ್ಳುವವರು ಐಸಿಐಸಿಐ ಖಾತೆ ಹೊಂದಿರಲೇಬೇಕಾಗಿಲ್ಲ ಎಂಬ ಅಂಶ ಈ ಸೌಲಭ್ಯವನ್ನು ಜನಪ್ರಿಯಗೊಳಿಸಿತ್ತು.
ಫೇಸ್ ಬುಕ್ ಹಣ ರವಾನೆ ಹೇಗೆ: ಆದರೆ, ಫೇಸ್ ಬುಕ್ ಮೂಲಕ ಹಣ ರವಾನೆ ಸದ್ಯಕ್ಕೆ ಯುಎಸ್ಎಗೆ ಮಾತ್ರ ಸೀಮಿತವಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲೆಡೆ ವಿಸ್ತರಿಸಲಾಗುತ್ತದೆ. ಈ ಸೌಲಭ್ಯ ಉಚಿತವಾಗಿದ್ದು, ಎಲ್ಲರಿಗೂ ಮುಕ್ತವಾಗಿದೆ. ಡೆಬಿಟ್ ಕಾರ್ಡ್ ಬಳಕೆದಾರರು ಈ ಸೌಲಭ್ಯ ಬಳಸಬಹುದಾಗಿದೆ. ಡೆಸ್ಕ್ ಟಾಪ್ ಕಂಪ್ಯೂಟರ್ಸ್, ಆಪಲ್, ಆಂಡ್ರಾಯ್ಡ್ ಸಾಧಕಗಳನ್ನುಳ್ಳವರು ಕೂಡಾ ಫೇಸ್ ಬುಕ್ ಮೂಲಕ ಹಣ ರವಾನಿಸಬಹುದು. ಇದಕ್ಕಾಗಿ ಪ್ರತ್ಯೇಕ PIN ಹಾಗೂ ಐಓಸ್ ಸಾಧಕಗಳಲ್ಲಿ ಟಚ್ ಐಡಿ ನೀಡಲಾಗುತ್ತದೆ.
ಹಣ ಕಳಿಸುವ ವಿಧಾನ:
* ನಿಮ್ಮ ಗೆಳೆಯ/ಗೆಳತಿಗೆ ಹಣ ರವಾನೆ ಬಗ್ಗೆ ಸಂದೇಶ ಕಳಿಸಿ.
* ಡಾಲರ್ ಚಿಹ್ನೆಯನ್ನು ಒತ್ತಿ ಹಾಗೂ ಮೊತ್ತವನ್ನು ದಾಖಲಿಸಿ.
* ನಿಮ್ಮ ಡೆಬಿಟ್ ಕಾರ್ಡ್ ಸೇರಿಸಿ ಹಾಗೂ ಹಣ ಕಳಿಸಿ ಹಣ ಪಡೆಯುವ ವಿಧಾನ:
* ನಿಮ್ಮ ಕಾರ್ಡ್ ಸೇರಿಸಿ ಹಾಗೂ ಹಣ ಪಡೆಯುವ ಬಗ್ಗೆ ಸೂಚನೆ ಕೊಡಿ.
* ಮೊದಲ ಬಾರಿಗೆ ಸ್ವಲ್ಪ ವಿಳಂಬವಾದರೂ ಎರಡು ಕಡೆ ಸಂಪರ್ಕ ಸಾಧಿಸಿದ ನಂತರ ತ್ವರಿತವಾಗಿ ಹಣ ರವಾನೆ ಸಾಧ್ಯವಿದೆ.