ಕರ್ನಾಟಕ

ಮಗನನ್ನು ಡಾಕ್ಟರ್‌ ಮಾಡ್ಬೇಕು: ಪ್ರಕಾಶ್‌ ಶೆಟ್ಟಿ ಕಂಡ ಸಿಟಿಜನ್ರು

Pinterest LinkedIn Tumblr

psmec20shetty.srinivas

ಹಾಗೇ ಸುಮ್ಮನೆ ಮಾತಿಗೆ ಸಿಗುವ ಮಂದಿಗೆ ಕೊರತೆ ಇಲ್ಲ. ಕೆಲವೇ ನಿಮಷಗಳಲ್ಲಿ ಉಭಯ ಕುಶಲೋಪರಿಯನ್ನೂ ಮೀರಿ ಅವರವರ ಆಸಕ್ತಿ, ಒಲವು–ನಿಲುವು, ವಿಚಾರಗಳವರೆಗೆ ಮಾತುಕತೆ ವಿಸ್ತರಿಸುವುದುಂಟು. ಹಾಗೆ ಮಾತಿಗೆ ಸಿಗುವವರಲ್ಲಿ ಕೆಲವು ಚಹರೆಗಳು ‘ಕ್ಯಾರಿಕೇಚರ್‌’ಗೆ ಯೋಗ್ಯ ಅನಿಸಿಬಿಡುತ್ತದೆ. ಹಾಗೆ ತಮ್ಮ ಮಾತು, ಚಹರೆ ಎರಡರ ಮೂಲಕ ದಕ್ಕುವ ಸಾಮಾನ್ಯರ ಮನದನಿ ಇದು. ಇದು ಪ್ರತಿ ಶುಕ್ರವಾರದ ವಿಶೇಷ. ಈ ಸಲ ಆರ್‌.ಟಿ. ನಗರದ ವೆಂಕಟೇಶಮೂರ್ತಿ ‘ಕ್ಯಾರಿಕೇಚರ್‌’ ಆಗಿದ್ದಾರೆ.

ಫೋನ್ ಎಸ್ಸೆಮ್ಮೆಸ್ ಓದ್ಬಿಟ್ಟು ಮಸ್ತ್ ಖುಷಿಯಲ್ಲಿದ್ದೀರಲ್ಲ! ಏನ್ ಸಮಾಚಾರ?
ಹೂಂ ಸಾರ್! ಸಕತ್ ಖುಷಿಯಾಗಿದೆ.  ಕೊನೆಗೂ ಬಿಪಿಎಲ್ ಕಾರ್ಡ್ ರೆಡಿಯಿದೆಯಂತ ಮೆಸೇಜು ಬಂದಿದೆ ಸಾರ್! ಅಬ್ಬಾ! ಎರಡು ವರ್ಷ ಕಾಯಬೇಕಾಯಿತು!

ಬಿಪಿಎಲ್ ಕಾರ್ಡ್ ಬೇಕಾದರೆ ಒಬ್ಬ ವ್ಯಕ್ತಿಯನ್ನು ಎರಡು ವರ್ಷ ಕಾಯಿಸ್ತಾರೆ ಅಥವಾ ಸತಾಯಿಸ್ತಾರೆ ಅನ್ನುವುದಾದರೆ ನಮ್ಮ ಆಹಾರ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಅಂದಂಗಾಯ್ತು!
ನನ್ನನ್ನ ಬಿಡಿ ಸಾರ್, ವೀಲ್ ಚೇರ್‌ನಲ್ಲಿ ಹೋಗುವ ಬಡಪಾಯಿಗಳ ಮೇಲೂ ಅವರು ಕರುಣೆ ತೋರಲ್ಲ!

ನೀವು ಬಡತನ ರೇಖೆಗಿಂತ ಕೆಳಗಿರುವುದನ್ನು ಹೇಗೆ ಸಾಬೀತು ಪಡಿಸುತ್ತೀರಾ? ಹೀಗೆ ಗಡ್ದ ಬಿಟ್ಟು ಜೋಲು ಮುಖ ಮಾಡಿಕೊಂಡರೆ ಸಾಕೇ?
ವರ್ಷಕ್ಕೆ ಹದಿಮೂರು ಸಾವಿರ ಸಂಪಾದನೆ ಅಂತ ಹೇಳ್ಬೇಕು. ತಾರಸಿ ಮನೆ ಚಾವಣಿ ಇರಕೂಡದು.  ಟೀವಿ, ಪ್ರಿಡ್ಜು ಇರಬಾರದು.

ತಾರಸಿ ಮನೆ, ಟೀವಿ, ಪ್ರಿಡ್ಜು, ಬೈಕು ಇದ್ದರೂ ಬಿಪಿಎಲ್ ಕಾರ್ಡ್ ಸಿಗುತ್ತೆ ಬಿಡಿ….. ಆಹಾರ ಇಲಾಖೆಯಲ್ಲಿರುವ ನುಂಗಪ್ಪರ ‘ಹಸಿವೆ’ ನೀಗಿಸಬೇಕಷ್ಟೆ!  ಅದು ಬಿಡಿ, ನಿಮ್ಮ ಹಣೆಬರಹ ಹೇಳಿ.
ನನ್ನ ಹಣೆಬರಹ ಏನು ಹೇಳುವುದು ಸಾರ್! ನಾನು ಬಳ್ಳಾರಿಯಿಂದ ಬಂದವ್ನು. ಹೆಂಡತಿ, ಇಬ್ಬರು ಮಕ್ಕಳಿದ್ದಾರೆ. ವಾಹನಗಳಿಗೆ ಬೇಕಾಗುವಂತಹ ಚಿಕ್ಕಪುಟ್ಟ ಹಾರ್ಡ್‌ವೇರ್ ಸಾಮಾಗ್ರಿಗಳನ್ನು ಒದಗಿಸ್ತೀನಿ.

ಅಲ್ರೀ, ಅಷ್ಟೊಂದು ಗಣಿ ಸಂಪತ್ತು ಇರುವ ಬಳ್ಳಾರಿಯಿಂದ ಇಲ್ಯಾಕೆ ಬಂದ್ರೀ?
ಅಲ್ಲಿರುವ ಗಣಿಗಳನ್ನೆಲ್ಲಾ ರೆಡ್ಡಿಗಳಿಗೆ ಬಿಟ್ಟು ನಾನು ಬೆಂಗಳೂರಿಗೆ ಬಂದ್ಬಿಟ್ಟೆ. ಗಣಿ ಧಣಿಯಾಗಿದ್ದ ರೆಡ್ಡಿಗೆ ಈಗ ಏನಾಯ್ತು ನೋಡಿ!

ಹೌದು, ಈಗ ರೆಡ್ಡಿ ನಿಮ್ಮ ಥರಾನೇ… ಬಿಪಿಎಲ್! ಅವರ ಕತೆ ಬಿಡಿ, ನೀವು ಹಾರ್ಡ್ ವೇರ್ ಫೀಲ್ಡ್ ನಲ್ಲಿದ್ದೀರಿ, ನಿಮ್ಮ ಮಕ್ಕಳನ್ನು ಸಾಫ್ಟ್ ವೇರ್ ಫೀಲ್ಡ್‌ನಲ್ಲಿ ನೋಡಬೇಕೆಂಬ ಆಸೆಯಿದೆಯಾ? ಸಾಫ್ಟ್‌ವೇರ್ ಅಂದರೆ ಬಡತನ ರೇಖೆಗಿಂತ ತುಂಬ ಅಂದರೆ ತುಂಬಾ ಮೇಲೆ ಹಾರಾಡಬಹುದು.
ಒಬ್ಬ ಮಗನನ್ನು ಡಾಕ್ಟರ್ ಮಾಡ್ಬೇಕು. ಕಲಿಯುವುದರಲ್ಲಿ ಜೋರಾಗಿದ್ದಾನೆ. ಇನ್ನೊಬ್ಬನ ಬಗ್ಗೆ ಈಗ ಹೇಳೋಕಾಗಲ್ಲ. ಯಾಕೆಂದರೆ ಅವನಿಗೆ ಗುರುಬಲ ಬರೋಕೆ ವಯಸ್ಸು  ಒಂಬತ್ತಾಗಬೇಕಂತೆ.

ಕಾಲ ಕೆಟ್ಟುಹೋಗಿದೆ ಅನ್ನುತ್ತಾರಲ್ಲ… ಕಾಲ ಯಾವಾಗ ಚೆನ್ನಾಗಿತ್ತು?
ಈಗ ಕಾಲ ಹಿಂದಿನಿದಕ್ಕಿಂತಲೂ ಕೆಟ್ಟುಹೋಗಿದೆ ಸಾರ್! ಅಪ್ಪ ಮಗಳನ್ನು ಅತ್ಯಾಚಾರ ಮಾಡ್ತಾನೆ.. ಪುಟ್ಟ ಕೂಸುಗಳ ಮೇಲೆ ಅತ್ಯಾಚಾರ ಮಾಡ್ತಾರೆಂದರೆ…! ಛೆ!

ಕಾಲ ಎಷ್ಟು ಕೆಟ್ಟು ಹೋಗಿದೆ ಎಂದು ತಿಳಿದುಕೊಳ್ಳುವುದಕ್ಕೇ ನೀವು  ದಿನಪತ್ರಿಕೆ ಕೊಂಡುಕೊಳ್ತೀರಾ?
ಒಂದಲ್ಲ.. ಎರಡು ದಿನಪತ್ರಿಕೆ ಓದ್ತೀನಿ ಸಾರ್. ಹತ್ತಿರ ಸೆಲೂನು ಇದೆ. ಅಲ್ಲಿ ಹೋಗಿ ಓದ್ತೀನಿ.

Write A Comment