ಮನೋರಂಜನೆ

‘ಭಲೇ ಜೋಡಿ’: ಹರಿಪ್ರಿಯಾ ಸ್ಪೆಶಲ್ ಮತ್ತು ಐಟಂ

Pinterest LinkedIn Tumblr

20bhale-jodi‘ನನ್ನದು ಸ್ಪೆಶಲ್ ಸಾಂಗು’ ಎಂದು ಹರಿಪ್ರಿಯಾ ಹೇಳಿಕೊಂಡರು. ಸ್ವಲ್ಪ ಹೊತ್ತಿನ ಬಳಿಕ ನಿರ್ದೇಶಕ ಸಾಧು ಕೋಕಿಲ, ‘ಇದು ಐಟಂ ಸಾಂಗು’ ಎಂದು ಹೇಳಿಬಿಟ್ಟರು!

ಶೈಲೇಂದ್ರ ಬಾಬು ನಿರ್ಮಾಣದ ‘ಭಲೇ ಜೋಡಿ’ ಚಿತ್ರಕ್ಕೆಂದು ಬೆಂಗಳೂರಿನ ರಾಕ್‌ಲೈನ್‌ ಸ್ಟುಡಿಯೊದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಚಿನ್ನಿಪ್ರಕಾಶ್ ನೃತ್ಯ ಸಂಯೋಜನೆಯ ಈ ಹಾಡಿಗೆಂದೇ ಅದ್ಧೂರಿ ಸೆಟ್ ಹಾಕಲಾಗಿತ್ತು. ನೃತ್ಯ ಕಲಾವಿದರೊಂದಿಗೆ ಸುಮಂತ್ ಹಾಗೂ ಹರಿಪ್ರಿಯಾ ಹೆಜ್ಜೆ ಹಾಕುತ್ತಿದ್ದ ದೃಶ್ಯಗಳ ಚಿತ್ರೀಕರಣ ನೋಡಲು ಸುದ್ದಿಮಿತ್ರರನ್ನು ಆಹ್ವಾನಿಸಲಾಗಿತ್ತು. ಝಗಮಗಿಸುತ್ತಿದ್ದ ಬೆಳಕಿನಲ್ಲಿ ಒಂದಷ್ಟು ಹೊತ್ತು ಚಿತ್ರೀಕರಣ ನಡೆದ ಬಳಿಕ, ಚಿತ್ರತಂಡ ಪತ್ರಿಕಾಗೋಷ್ಠಿಗೆ ಹಾಜರಾಯಿತು.

ತೆಲುಗಿನ ‘ಅಲಾ ಮಾದಲಂಡಿ’ ಚಿತ್ರದ ರೀಮೇಕ್ ಇದು. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಉಳಿದಿರುವುದು ಹಾಡುಗಳ ಭಾಗವಷ್ಟೇ. ‘ರೊಮ್ಯಾಂಟಿಕ್ ಲವ್‌ ಸ್ಟೋರಿ ಹೊಂದಿರುವ ಭಲೇ ಜೋಡಿಯಲ್ಲಿ ಆ್ಯಕ್ಷನ್ ಹಾಗೂ ಕಾಮಿಡಿ ಸಾಕಷ್ಟಿದೆ’ ಎಂದು ಶೈಲೇಂದ್ರ ಬಾಬು ಮಾಹಿತಿ ನೀಡಿದರು. ಈ ಹಾಡಿನ ಚಿತ್ರೀಕರಣದ ಖರ್ಚು ಸುಮಾರು 27 ಲಕ್ಷ ರೂಪಾಯಿಗಳು ಎಂದೂ ಅವರು ಹೇಳಿದರು. ಉಳಿದ ಹಾಡುಗಳನ್ನು ಬ್ಯಾಂಕಾಕ್ ಹಾಗೂ ಬರ್ಮಾ ಗಡಿ ಭಾಗದ ಹೊಸ ಸ್ಥಳದಲ್ಲಿ ಚಿತ್ರೀಕರಿಸುವ ಯೋಜನೆ ಇದೆ. ಅದರಲ್ಲೂ ಬರ್ಮಾ ಗಡಿ ಭಾಗದ ತಾಣವನ್ನು ಈವರೆಗೆ ಯಾವುದೇ ಚಿತ್ರದಲ್ಲೂ ತೋರಿಸಿಲ್ಲವಂತೆ.

ಸುಮಂತ್ ಅವರದು ಚಿತ್ರದಲ್ಲಿ ಲವರ್ ಬಾಯ್ ತರಹದ ಪಾತ್ರ. ‘ಸದಾ ಚುರುಕಾಗಿ ಓಡಾಡಿಕೊಂಡಿರುವ ಹಾಗೂ ಎಲ್ಲರೊಂದಿಗೆ ಬೆರೆಯುವ ಯುವಕನಾಗಿ ಕಾಣಿಸಿಕೊಳ್ಳಲಿದ್ದೇನೆ’ ಎಂದರು. ಕಣ್ಣು ಕೋರೈಸುವ ಉಡುಗೆಯಲ್ಲಿದ್ದ ಹರಿಪ್ರಿಯಾ, ‘ಇದೊಂದು ಸ್ಪೆಶಲ್ ಸಾಂಗ್. ಈ ಹಾಡಿನಿಂದಲೇ ಕಥೆಗೆ ಮುಖ್ಯ ತಿರುವುದು ಸಿಗುತ್ತದೆ’ ಎಂದರು.

ಅದಾದ ಸ್ವಲ್ಪ ಹೊತ್ತಿಗೆ ಸುದ್ದಿಗೋಷ್ಠಿಗೆ ಹಾಜರಾದ ನಿರ್ದೇಶಕ ಸಾಧು ಕೋಕಿಲ, ‘ಈ ಐಟಂ ಸಾಂಗ್ ಚಿತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಸುಳಿವು ಬಿಟ್ಟುಕೊಟ್ಟರು! ಅವರು ನಿರ್ದೇಶನದ ಜತೆಗೆ ಕುಡುಕನ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ನಾಗೇಂದ್ರ ಪ್ರಸಾದ್ ಬರೆದ ಐದು ಹಾಡುಗಳಿಗೆ ಸಂಗೀತ ನಿರ್ದೇಶನ ಕೂಡ ಅವರದೇ. ಸಾನ್ವಿ ಶ್ರೀವಾಸ್ತವ್, ಹರ್ಷಿಕಾ ಪೂಣಚ್ಚ ನಾಯಕಿಯರು. ಖಳನಟನಾಗಿ ರವಿಶಂಕರ್ ಹಾಗೂ ನಾಯಕನ ತಾಯಿ ಪಾತ್ರದಲ್ಲಿ ಸುಮಲತಾ ಕಾಣಿಸಿಕೊಳ್ಳಲಿದ್ದಾರೆ.

ಅಂದ ಹಾಗೆ, ಸಾಧು ಕೋಕಿಲ ಇನ್ನು ಮುಂದೆ ರೀಮೇಕ್ ಚಿತ್ರಗಳನ್ನು ಮಾಡುವುದಿಲ್ಲವಂತೆ. ‘ಭಲೇ ಜೋಡಿ ಸಿನಿಮಾ ನನ್ನ ಕೊನೆಯ ರೀಮೇಕ್’ ಎಂದು ಸಾಧು ಘೋಷಿಸಿದರು.

Write A Comment