ಕರ್ನಾಟಕ

ರವಿ ಪ್ರಕರಣ ಸಿಬಿಐಗೆ ಸೋನಿಯಾ ತಾಕೀತು

Pinterest LinkedIn Tumblr

pvec21march2015Ravirally16_0

ನವದೆಹಲಿ: ಕರ್ನಾಟಕದ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಕೀತು ಮಾಡಿದೆ.

ಈ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿದ ಸೂಚನೆಯನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸಲಾಗಿದೆ ಎಂದು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಸ್ವತಃ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ರವಿ ಕುಟುಂಬದ ಸದಸ್ಯರನ್ನು ಖುದ್ದು ಕಂಡು ಪಕ್ಷದ ನಿಲುವನ್ನು ತಿಳಿಸುವಂತೆ  ಸೋನಿಯಾ ಅವರು ಪಕ್ಷದ ಹಿರಿಯ ಮುಖಂಡ ಎಸ್‌.ಎಂ. ಕೃಷ್ಣ ಅವರಿಗೆ ಸೂಚಿಸಿದ್ದಾರೆ.  ಇದನ್ನು ನಾಗರಬಾವಿಯಲ್ಲಿರುವ ರವಿ ಅವರ ಪತ್ನಿ ಕುಸುಮಾ, ಮಾವ ಹನುಮಂತರಾಯಪ್ಪ ಅವರ ಗಮನಕ್ಕೂ  ತರಲಾಗಿದೆ.

ಎರಡು ದಿನಗಳಿಂದ ಸೋನಿಯಾ ಅವರ ಜತೆ ಕೃಷ್ಣ ದೂರವಾಣಿಯಲ್ಲಿ ಮಾತನಾಡಿದ್ದರು. ‘ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸದಿದ್ದರೆ ಪಕ್ಷ, ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ’ ಎಂದು ಅವರು  ಸೋನಿಯಾ ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದರು.

ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜತೆಗೂ ಸೋನಿಯಾ ಚರ್ಚಿಸಿದ್ದಾರೆಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರವಿ ಅಸಹಜ ಸಾವಿನ ಹಿಂದೆ ಕೆಲವು ಪ್ರಭಾವಿ ರಾಜಕಾರಣಿಗಳ ಕೈವಾಡವಿರಬಹುದು ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಗೃಹ ಸಚಿವರ ಹೆಸರೂ ಪ್ರಕರಣದಲ್ಲಿ ತಳಕು ಹಾಕಿಕೊಂಡಿರುವುದರಿಂದ ಇದಕ್ಕೆ ತುಂಬ ಮಹತ್ವ ಬಂದಿದೆ.

ಅಸಮಾಧಾನ
ರಾಜ್ಯ ಸರ್ಕಾರ ಪ್ರಕರಣವನ್ನು ನಿರ್ವಹಿಸಿದ ರೀತಿ ಬಗ್ಗೆ ಸೋನಿಯಾ ಅಸಮಾಧಾನಗೊಂಡಿದ್ದಾರೆ. ವೈಯಕ್ತಿಕ ಕಾರಣದಿಂದ ರವಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಸಿಬಿಐಗೆ ಒಪ್ಪಿಸಲು ಏಕೆ ಹಿಂಜರಿಯಬೇಕೆಂದೂ ಅವರು ಪ್ರಶ್ನಿಸಿದ್ದಾರೆ. ರವಿ ತಂದೆ, ತಾಯಿ ಹಾಗೂ ಸಾರ್ವಜನಿಕರಿಂದ ವಿಪರೀತ ಒತ್ತಾಯ ಬಂದ ಮೇಲೂ ಮುಖ್ಯಮಂತ್ರಿ ಪ್ರಕರಣವನ್ನು ಸರಿಯಾಗಿ ನಿಭಾಯಿಸಲಿಲ್ಲವೆಂದೂ ಅಸಹನೆ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

Write A Comment