ಕರ್ನಾಟಕ

ಪರೀಕ್ಷಾ ಅಕ್ರಮಕ್ಕೆ ಪೋಷಕರ ದುಂಬಾಲು

Pinterest LinkedIn Tumblr

examweb

ಬೆಂಗಳೂರು: ‘ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ನೀಡದಿದ್ದರೆ ಹೇಗೆ ಸ್ವಾಮಿ ಎಂದು ಪಾಲಕರೇ ಕೇಳುತ್ತಿದ್ದಾರೆ…!’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ವಿಧಾನ ಪರಿಷತ್ತಿನಲ್ಲಿ ಖೇದ ಮತ್ತು ಆಶ್ಚರ್ಯ ವ್ಯಕ್ತಪಡಿಸಿದ ಪ್ರಸಂಗ ಸೋಮವಾರ ನಡೆಯಿತು.

ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ನಕಲು ತಡೆಯಲು ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಹೇಳಿಕೆ ನೀಡಿತ್ತು. ಅದರ ಕತೆ ಏನಾಯಿತು ಎಂದು ಬಿಜೆಪಿಯ ಎಸ್‌.ವಿ. ಸಂಕನೂರ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ರತ್ನಾಕರ ಅವರು ಪ್ರತಿಕ್ರಿಯೆ ನೀಡಿದರು.

‘ಇತ್ತೀಚೆಗೆ ನಡೆದ ಒಂದು ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಪಾಲಕರೊಬ್ಬರು ನನಗೆ ಕರೆ ಮಾಡಿದ್ದರು. ತಮ್ಮ ಪುತ್ರ 100ರಲ್ಲಿ 20 ಅಂಕಗಳಿಗೆ ಸಾಕಾಗುವಷ್ಟು ಮಾತ್ರ ಓದಿದ್ದಾನೆ. ನಕಲು ಮಾಡಲು ಅವಕಾಶವಿಲ್ಲದಿದ್ದರೆ ಇನ್ನುಳಿದ 80 ಅಂಕಗಳನ್ನು ಹೇಗೆ ಗಳಿಸುವುದು ಎಂಬುದು ಆ ಪಾಲಕರ ಸಮಸ್ಯೆಯಾಗಿತ್ತು’ ಎಂದು ಸಚಿವ ರತ್ನಾಕರ ಅವರು ಸದನಕ್ಕೆ ವಿವರಿಸಿದರು.

ಇಷ್ಟು ದಿನ ಮಾಮೂಲಾಗಿ ಮಾಡಿಕೊಂಡು ಬಂದಿದ್ದ ವ್ಯವಹಾರವೊಂದನ್ನು ಇನ್ನು ಮಾಡಲು ಸಾಧ್ಯವಾಗದು ಎಂಬ ಆತಂಕ ಅವರಲ್ಲಿ ಇದ್ದಂತಿತ್ತು ಎಂದು ಸಚಿವರು ಸದನಕ್ಕೆ ವಿವರಿಸಿದರು.

ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ ಎಂದು ಹೇಳಿರಲಿಲ್ಲ. ಸಂಚಿತ ನಿಧಿಯಲ್ಲಿ ದುಡ್ಡು ಇದ್ದರೆ ಮಾತ್ರ ಅದನ್ನು ಅಳವಡಿಸಿ ಎಂದು ಸೂಚಿಸಲಾಗಿತ್ತು ಎಂದು ಸಚಿವರು ಸ್ಪಷ್ಟನೆ ನೀಡಿದರು.

Write A Comment