ಕನ್ನಡ ವಾರ್ತೆಗಳು

ಪೊಸ್ರಾಲು ದೇವಳಕ್ಕೆ ರಥ ಸಮರ್ಪಣೆ : ವಸಂತ ರಾಮ ಶೆಟ್ಟಿ ದಂಪತಿಗೆ ಸನ್ಮಾನ.

Pinterest LinkedIn Tumblr

mulk_sanmana_photo_1

ಮಂಗಳೂರು,ಮಾರ್ಚ್.24  : ಮನುಷ್ಯ ತನ್ನ ಸಂಪಾದನೆಯನ್ನು ದೇವರು ಮೆಚ್ಚುವ ರೀತಿಯಲ್ಲಿ ವಿನಿಯೋಗಿಸಬೇಕು. ಇದು ಸಮಾಜದಲ್ಲಿ ಸತ್ಪರಿಣಾಮವನ್ನು ಉಂಟು ಮಾಡುವುದಲ್ಲದೆ ವೈಯಕ್ತಿಕ ಮತ್ತು ಕೌಟುಂಬಿಕ ನೆಮ್ಮದಿಗೆ ಕಾರಣವಾಗುತ್ತದೆ, ಎಂದು ಪೊಸ್ರಾಲು ರಾಧಾಕೃಷ್ಣ ತಂತ್ರಿ ಹೇಳಿದ್ದಾರೆ. ದಿ| ಸಚ್ಚರ ಪರಾರಿ ಸುಬ್ಬಯ್ಯ ಶೆಟ್ಟರ ಹೆಸರಿನಲ್ಲಿ ಅವರ ಸುಪುತ್ರ ಬಡಿಲಗುತ್ತು ವಸಂತ ರಾಮ ಶೆಟ್ಟಿ ಮತ್ತವರ ಪತ್ನಿ ಪ್ರೇಮಕಲಾ ವಿ. ಶೆಟ್ಟಿ ಮಾವಂತೂರು ಬಾರ್ಲಗುತ್ತು ಇವರು ಸುಮಾರು 14 ಲಕ್ಷ ರೂಪಾ ವೆಚ್ಚದಲ್ಲಿ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ನೂತನ ಚಂದ್ರಮಂಡಲ ರಥ ಸಮರ್ಪಣೆ ಮಾಡಿದ ಸಂದರ್ಭದಲ್ಲಿ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗುರುಪುರ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ ಅವರು ‘ತಮ್ಮ ತಂದೆ ನೇರವಾಗಿ ಹೇಳದೆ ಇದ್ದರೂ, ಅವರು ಗತಿಸಿ ಹಲವು ವರ್ಷಗಳಾದ ಬಳಿಕ ಬಡಿಲಗುತ್ತು ವಸಂತರಾಮ ಶೆಟ್ಟರು ಕೇವಲ ಪಿತೃಪ್ರೇಮದಿಂದ ಅವರ ಆರಾಧ್ಯ ದೇವರಿಗೆ ಸುಂದರವಾದ ರಥವನ್ನು ಸಮರ್ಪಿಸಿದ್ದಾರೆ. ಇದರ ಮೌಲ್ಯಕ್ಕಿಂತಲೂ ಅದರ ಹಿಂದಿರುವ ಶ್ರದ್ಧೆ ಬಹಳ ಮುಖ್ಯವಾದುದು’ ಎಂದರು. ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳ್ತೆ ಮೊಕ್ತೇಸರ ಡಾ | ಎಂ. ಸುಧಾಕರ ಶೆಟ್ಟಿ ಸಚ್ಚರಪರಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ರಥ ಸಮರ್ಪಣೆ ಮಾಡಿದ ಬಡಿಲಗುತ್ತು ವಸಂತರಾಮ ಶೆಟ್ಟಿ ಮತ್ತು ಪ್ರೇಮಕಲಾ ವಿ. ಶೆಟ್ಟಿ ದಂಪತಿಯನ್ನು ದೇವಳದ ವತಿಯಿಂದ ಶಾಲು, ಫಲಕ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅಳಪೆ ಕರ್ಮಾರ್ ಸತ್ಸಂಗ ಸಮಿತಿ ಸಂಚಾಲಕ ವಾಸುದೇವ ಆರ್. ಕೊಟ್ಟಾರಿ ಅಭಿನಂದನಾ ಭಾಷಣ ಮಾಡಿದರು. ಭಾಗವತ ಹರೀಶ್ ಶೆಟ್ಟಿ ಸೂಡ ಸನ್ಮಾನ ಪತ್ರ ವಾಚಿಸಿದರು. ದೇವಳದ ಹಿರಿಯ ಅರ್ಚಕ ಶ್ರೀ ರಂಗಭಟ್ ಮತ್ತು ಉದ್ಯಮಿ ಧನಪಾಲ ಶೆಟ್ಟಿ ವೇದಿಕೆಯಲ್ಲಿದ್ದರು.

ದೇವಸ್ಥಾನದ ಪರವಾಗಿ ಅರ್ಚಕ ಸಂದೇಶ ಭಟ್ ಸ್ವಾಗತಿಸಿದರು; ಉದಯ ಭಟ್ ವಂದಿಸಿದರು. ರಾಘವೇಂದ್ರ ಭಟ್, ಪುರುಷೋತ್ತಮ ಭಟ್, ಲತಾ ಭಟ್ ಮತ್ತು ರಥ ಸಮರ್ಪಣಾ ಸಮಿತಿಯ ಧನರಾಜ್ ಶೆಟ್ಟಿ, ಸುಬ್ಬಯ್ಯ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಶಿವಭಕ್ತ ವೀರಮಣಿ’ ತಾಳಮದ್ದಳೆ ಜರಗಿತು.

Write A Comment