ಕರ್ನಾಟಕ

ಬಿಜೆಪಿ -ಜೆಡಿಎಸ್ ಅಧಿಕಾರವಧಿಯಲ್ಲಿ ಪ್ರಕರಣಗಳನ್ನು ಸಿಬಿಐ ಒಪ್ಪಿಸಿ

Pinterest LinkedIn Tumblr

BJP-and-JDS

ಬೆಂಗಳೂರು, ಮಾ.25: ಬಿಜೆಪಿ -ಜೆಡಿಎಸ್ ಅಧಿಕಾರವಧಿಯಲ್ಲಿ ನಡೆದಿರುವ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕಾಂಗ್ರೆಸ್ ಎಲ್ಲಾ ಶಾಸಕರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದಾರೆ.

ವಿಧಾನಸೌಧದಲ್ಲಿಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ 2008ರಿಂದೀಚೆಗೆ ನಡೆದ ಹಗರಣಗಳನ್ನು ಸಿಬಿಐ ತನಿಖೆಗೆ ವಹಿಸುವ ಕುರಿತು ಮರುಪರಿಶೀಲನೆ ನಡೆಸುವಂತೆ ಒತ್ತಾಯಗಳು ಕೇಳಿ ಬಂದಿದ್ದು, ಇದಕ್ಕೆ ಎಲ್ಲಾ ಶಾಸಕರು ಕೈ ಮೇಲೆತ್ತಿ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಕಾಂಗ್ರೆಸ್‌ನಲ್ಲೀಗ ಸೇಡಿನ ರಾಜಕಾರಣ ಆರಂಭವಾಗಿದ್ದು, ಪ್ರತಿಪಕ್ಷಗಳ ನಾಯಕರು ಉಗುಳು ನುಂಗುವ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಮನಗರ , ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಣ ದುರುಪಯೋಗ ಪ್ರಕರಣ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ಪ್ರಕರಣದ ಹಗರಣಗಳಲ್ಲಿ ಕಾಂಗ್ರೆಸ್ ನಾಯಕರ ಹೆಸರು ಕೇಳಿ ಬಂದ ಹೊರತಾಗಿಯೂ ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ.

ಧರ್ಮಸ್ಥಳದ ಉಜಿರೆ ಬಳಿ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷ ಸಿಬಿಐಗೆ ಒಪ್ಪಿಸಿದ್ದಾರೆ. ಈಗ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣವೂ ಸಿಬಿಐ ತನಿಖೆಗೆ ಒಳಪಡಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಒಟ್ಟು 4 ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ. ಆದರೆ, 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ದಿನಗಳಿಂದ 2008ರ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಒಟ್ಟು 13 ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಕಾಂಗ್ರೆಸ್ ಸದನದ ಒಳಗೆ, ಹೊರಗೆ ಹೋರಾಟ ನಡೆಸಿದೆ.

ಅವುಗಳಲ್ಲಿ ಪ್ರಮುಖವಾಗಿ 2008ರಲ್ಲಿ ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರಾಗಿದ್ದ ರಘುಪತಿಭಟ್ ಅವರ ಪತ್ನಿ ಪದ್ಮಪ್ರಿಯ ಅಸಹಜ ಸಾವಿನ ಪ್ರಕರಣ, 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಕೇಳಿ ಬಂದ 150 ಕೋಟಿ ಗಣಿ ಲಂಚ ಪ್ರಕರಣ, ಬಳ್ಳಾರಿ, ತುಮಕೂರು, ಚಿತ್ರದುರ್ಗದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಹಾಗೂ ಗಡಿರೇಖೆ ನಾಶ ಪ್ರಕರಣ,2008ರಲ್ಲಿ ಚರ್ಚ್‌ಗಳ ಮೇಲಿನ ದಾಳಿ, 2010ರಲ್ಲಿ ಸಚಿವರಾಗಿದ್ದ ಹರತಾಳ ಹಾಲಪ್ಪ ಅವರ ಮೇಲೆ ಕೇಳಿ ಬಂದ ಅತ್ಯಾಚಾರ ಆರೋಪ, 2006ರಲ್ಲಿ ವರ ನಟ ಡಾ.ರಾಜ್‌ಕುಮಾರ್ ನಿಧನದ ಬಳಿಕ ನಡೆದ ಭಾರಿ ಗಲಭೆ ಹಾಗೂ ಸಾವು, ನೋವಿನ ಪ್ರಕರಣ, 2010ರಲ್ಲಿ ಮಾಗಡಿ ರಸ್ತೆಯ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿನ ಸರಣಿ ಸಾವು ಪ್ರಕರಣ, 2011ರಲ್ಲಿ ಮರುಕಳಿಸಿದ ಚರ್ಚ್ ಮೇಲಿನ ದಾಳಿ ಪ್ರಕರಣ, 2012ರಲ್ಲಿ ನಡೆದ ಸಹಕಾರ ಇಲಾಖೆಯ ಅಧಿಕಾರಿ ಮಹಂತೇಶ್ ಹತ್ಯೆ ಪ್ರಕರಣ, ಬೆಂಗಳೂರು ಸಿಟಿ ಕೋರ್ಟ್ ಆವರಣದಲ್ಲಿ ವಕೀಲರು-ಪೊಲೀಸರು-ಮಾಧ್ಯಮದವರ ನಡುವೆ ನಡೆದ ಘರ್ಷಣೆ ಪ್ರಕರಣ, ಬಿಬಿಎಂಪಿಯ ವಿವಿಧ ವಲಯಗಳಲ್ಲಿ ನಡೆದಿರುವ ಅಕ್ರಮಗಳ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಒತ್ತಾಯಿಸಿತ್ತು.

ಇದರ ಜತೆಗೆ ಬಹಳ ವರ್ಷಗಳ ಹಿಂದೆ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅಸಹಜ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ. ಆದರೆ, ಈ ಹಿಂದಿನ ಸರ್ಕಾರಗಳು ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ವಿದ್ದುದ್ದರಿಂದ ಹೆದರಿ ಸಿಬಿಐಗೆ ಒಪ್ಪಿಸಲಿಲ್ಲ. ರಾಜ್ಯದ ಪೊಲೀಸರಿಂದಲೂ ಸರಿಯಾದ ತನಿಖೆ ನಡೆಸಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಮ್ಮ ವಿರುದ್ಧ ಅನಗತ್ಯ ಆರೋಪ ಮತ್ತು ಪ್ರತಿಭಟನೆಗಳು ನಡೆದವು.

ನಮಗೆ ಯಾವುದೇ ಅಳುಕಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ವಿದ್ದಾಗಿಯೂ ಧೈರ್ಯವಾಗಿ ನಾಲ್ಕು ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪ್ರತಿಪಕ್ಷಗಳು ನನ್ನನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಆರೋಪ ಮಾಡುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಬೇಕಾದರೆ ಎಲ್ಲಾ ಶಾಸಕರ, ಸಚಿವರ ಬೆಂಬಲ ಅಗತ್ಯ. ರಾಜಕೀಯ ಪ್ರೇರಿತ ಆರೋಪಗಳಿಗೆ ನಮ್ಮದೇ ಆದ ಹೋರಾಟದ ಮೂಲಕ ತಕ್ಕ ಉತ್ತರ ನೀಡಬೇಕು ಮತ್ತು ಪ್ರತಿ ದಾಳಿಗೂ ಸಜ್ಜಾಗಬೇಕೆಂದು ಸಭೆಯ ಆರಂಭದಲ್ಲಿ ಶಾಸಕರಿಗೆ ಮನವಿ ಮಾಡಿದರು.

ಈ ಮಧ್ಯೆ ಮಾತನಾಡಿ ಶಾಸಕ ಮುನಿರತ್ನ, ಬಿಬಿಎಂಪಿಯಲ್ಲಿ ನಡೆದಿರುವ ಎಲ್ಲ ಹಗರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿ. ಬಿಬಿಎಂಪಿಗೆ ಸೇರಿದ ಎಲ್ಲ ಕಡತಗಳನ್ನು ನನ್ನ ಮನೆಯಲ್ಲಿಟ್ಟುಕೊಂಡಿದೆ ಎಂಬ ಆರೋಪವನ್ನು ಕೂಡ ಸಿಬಿಐಗೆ ಒಪ್ಪಿಸಿ. ನನಗೆ ಯಾವುದೇ ಹಿಂಜರಿಕೆ, ಭಯವಿಲ್ಲ. ತಪ್ಪು ಮಾಡದೇ ಹೋದ ಮೇಲೆ ಹೆದರುವ ಅಗತ್ಯವಿಲ್ಲ. ಬಿಬಿಎಂಪಿಯಲ್ಲಿ ನಡೆದಿರುವ ರಾತ್ರಿ ಟೆಂಡರ್ ಪ್ರಕರಣ, ವಾರ್ಡ್ ಮಟ್ಟದಲ್ಲಿನ ಅಕ್ರಮ ಬಿಲ್‌ಗಳು, ತ್ಯಾಜ್ಯವಿಲೇವಾರಿ ಹಗರಣ ಸೇರಿದಂತೆ ಎಲ್ಲವನ್ನೂ ಸಿಬಿಐಗೆ ಒಪ್ಪಿಸಿ ಎಂದು ಸಲಹೆ ಮಾಡಿದರು.

ಅಧಿಕಾರಕ್ಕೆ ಸಚಿವರು, ಸಮರ್ಥನೆಗೆ ಶಾಸಕರು
ಡಿ.ಕೆ.ರವಿ ಪ್ರಕರಣವನ್ನು ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಸಚಿವರು ಸಮರ್ಥವಾಗಿ ನಿಭಾಯಿಸಲಿಲ್ಲ ಎಂದು ಶಾಸಕಾಂಗ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಅಸ್ಪಷ್ಟ ಹೇಳಿಕೆಗಳು, ಅಧಿಕಾರಿಯ ವರ್ಗಾವಣೆ ಸೇರಿದಂತೆ ನಾನಾ ಗೊಂದಲಗಳನ್ನು ಸೃಷ್ಟಿಸಲಾಯಿತು. ಈ ಮೂಲಕ ಸಾರ್ವಜನಿಕ ವಲಯದಲ್ಲೂ ಪ್ರತಿಭಟನೆಗಳಾದವು. ಸರ್ಕಾರದ ಮೇಲೆ ಅಪನಂಬಿಕೆ ಬರುವಂತಾಯಿತು. ಅನಿವಾರ್ಯವಾಗಿ ಸಿಬಿಐಗೆ ವಹಿಸುವ ಸನ್ನಿವೇಶ ನಿರ್ಮಾಣವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರಾಗಲು ಲಾಬಿ ನಡೆಸಿ ಬಾಲಂಗೋಚಿ ಕೆಲಸ ಮಾಡುವ ನಾಯಕರು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಳ್ಳುವ ಬದಲು ಎಲ್ಲಿ ಹೋಗಿದ್ದಾರೆ. ಸಚಿವರಾಗಿ ಅಧಿಕಾರ ಅನುಭವಿಸಲು ಅವರು ಬೇಕು. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ನಾವು ಬೇಕಾ ಎಂದು ಖಾರವಾಗಿ ಪ್ರಶ್ನಿಸಲಾಯಿತು.

ಹೆಚ್ಚಿನ ಅನುದಾನಕ್ಕೆ ಮನವಿ:
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು 5 ಕೋಟಿ ರೂ.ಗಳಿಗೆ ಹೆಚ್ಚಿಸುವಂತೆ ಶಾಸಕರು ಒತ್ತಾಯಿಸಿದ್ದಾರೆ. ಆದರೆ, ಇದನ್ನು ತಳ್ಳಿಹಾಕಿರುವ ಸಿಎಂ, ಈ ವರ್ಷ ನೀಡಿರುವ 2 ಕೋಟಿ ಹಣವನ್ನು ಪೂರ್ತಿಯಾಗಿ ಬಳಸಿಕೊಂಡಿಲ್ಲ. ಇನ್ನು ಐದು ಕೋಟಿ ಕೊಟ್ಟ್ಟರೆ ಹೇಗೆ ಖರ್ಚು ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಎಚ್.ಆಂಜನೇಯ, ಎಲ್ಲಾ ಶಾಸಕರು ವಿಧಾನಮಂಡಲದ ಅಧಿವೇಶನದಲ್ಲಿ ಹಾಜರಿದ್ದು, ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಶಾಸಕರು ಗಮನ ಸೆಳೆದಿದ್ದಾರೆ. ವೈಯಕ್ತಿಕವಾಗಿ ಯಾವುದೇ ಸಚಿವರ ವಿರುದ್ಧ ಟೀಕೆಗಳು ಕೇಳಿ ಬಂದಿಲ್ಲ ಎಂದರು.

ಸರ್ಕಾರಿ ಮುಖ್ಯಸಚೇತಕ ಪಿ.ಎಂ.ಅಶೋಕ್ ಪಟ್ಟಣ್ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ನಡೆದಿರುವ ಹಗರಣಗಳು, ಕ್ರಿಮಿನಲ್ ಮೊಕದ್ದಮೆಗಳು ಹಾಗೂ ಪ್ರತಿಪಕ್ಷದ ನಾಯಕರ ಮೇಲೆ ಕೇಳಿ ಬಂದಿರು ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸಲು ಪರಿಶೀಲನೆ ನಡೆಸಬೇಕು. ಸೂಕ್ತವಾದ ಪ್ರಕರಣಗಳು ಸಿಬಿಐ ತನಿಖೆಗೆ ವಹಿಸಬೇಕೆಂದು ಎಲ್ಲ ಶಾಸಕರು ಮನವಿ ಮಾಡಿದ್ದಾರೆ ಎಂದು ಹೇಳಿದರು.

Write A Comment