ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಶಿಷ್ಯೆ ಶ್ರೀಮತಿ ಸ್ಮಿತಾ ನೂಜಿಬೈಲ್ ಅವರ ನೇತೃತ್ವದಲ್ಲಿ ಶುಕ್ರವಾರ , ದಿನಾಂಕ 27 ಮಾರ್ಚ್ 2015 ರಂದು ದುಬೈ ನಗರದ ಅಲ್ ಕರಾಮಾದ ಎಸ್ ಎನ್ ಜಿ ಸಭಾಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸುಂದರ ಸಂಜೆ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು.
ಶ್ರೀಮತಿ ಸ್ಮಿತಾರೊಂದಿಗೆ ಅವರ ಶಿಷ್ಯರಾದ ಶ್ರೀಮತಿ ಜಯಲಕ್ಷ್ಮೀ ಪ್ರಸಾದ್, ಕು. ಸುಮಾಲಕ್ಷ್ಮೀ , ಕು. ಕ್ಷಮಾ ವೋರುಂಬುಡಿ , ಕು. ಶ್ರೇಯಾ ಶಾಂತಿ ಪ್ರಸಾದ್, ಕು. ಸುಧೀಕ್ಷಾ ಮಂಜುನಾಥ್ , ಕು. ಸಂಜನಾ ನೂಜಿಬೈಲ್ , ಅಮಿತ್ ಭಟ್ ನೆಕ್ಕರೆ ಮತ್ತು ಅನಿರುದ್ದ ಭಟ್ ನೆಕ್ಕರೆ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಕು.ಸುಮಾಲಕ್ಷ್ಮೀಯವರು “ನಿನ್ನು ಕೋರಿ…” ವರ್ಣದೊಂದಿಗೆ ಆರಂಭಿಸಿದರು.ನಂತರ ಶ್ರೀ ಮುತ್ತಯ್ಯ ಭಾಗವತರ್ ಅವರ ಕೃತಿ ಅದ್ಬುತವಾಗಿ ಮೂಡಿ ಬಂತು. ಕು.ಸಂಜನಾ ಹಾಗೂ ಕು. ಸುಧೀಕ್ಷಾ ತಿಲಂಗ್ ರಾಗದಲ್ಲಿ “ತಾರಕ್ಕ ಬಿಂದಿಗೆ..” ಸುಶ್ರಾವ್ಯವಾಗಿ ಹಾಡಿದರು.
ಖರಹರ ಪ್ರಿಯ ರಾಗದಲ್ಲಿ ಅನಿರುದ್ಧ ಭಟ್ ನೆಕ್ಕರೆ ಅವರ ಕಂಠದಿಂದ “ ರಾಮ ನೀ ಸಮಾನವೆಮರು..” ಮಧುರವಾಗಿ ಹೊರಹೊಮ್ಮಿತು. ಶ್ರೀ ತ್ಯಾಗರಾಜರ ಕೃತಿ “ ತುಳಸೀದಳ…” ವನ್ನು ಕು.ಶ್ರೇಯಾ ಹಾಗೂ ಕು. ಕ್ಷಮಾ ಜಂಟಿಯಾಗಿ ಹಾಡಿದರು. ಶ್ರೀಮತಿ ಜಯಲಕ್ಷ್ಮೀ ಪ್ರಸಾದ್ ‘ ಆರಭೀ ’ ರಾಗದಲ್ಲಿ ಪಾಹಿಪರ್ವತ…ವನ್ನು ಸುಶ್ರಾವ್ಯವಾಗಿ ಹಾಡಿದರು.
ಶ್ರೀಮತಿ ಸ್ಮಿತಾ ನೂಜಿಬೈಲು ಇವರ ಕಂಠಸಿರಿಯಿಂದ ಹಲವು ಕೃತಿಗಳು ಅದ್ಭುತವಾಗಿ ಮೂಡಿ ಬಂದು ಕಿಕ್ಕಿರಿದು ಸೇರಿದ್ದ ಸಂಗೀತ ಪ್ರಿಯರ ಮನರಂಜಿಸಿತು.’ ನಾಟರಾಗ ’ ದ “ ಗಜಮುಖನೆ ಸಿದ್ಧಿದಾಯಕನೆ..” ಕೃತಿಯಿಂದ ಪ್ರಾರಂಭಗೊಂಡು ಮೋಹನ-ಕಲ್ಯಾಣಿ ರಾಗದಲ್ಲಿ ಭುವನೇಶ್ವರಿಯ .., , ಶ್ರೀರಂಜಿನಿ ರಾಗದ ಸೊಗಸುಗಾ ಮೃದಂಗ ತಾಳಮು, ಬಿಲಹರಿ ರಾಗದಲ್ಲಿ ನಾರಾಯಣ ತೀರ್ಥರ ತರಂಗ ಪೂರಯ ಮಮಕಾಮಮ್ ಗೋಪಾಲಮ್, ಮೈಸೂರು ವಾಸುದೇವಾಚಾರ್ಯ ರಚಿತ ರಾಗ ಸಿಂಹೇಂದ್ರ ಮಧ್ಯಮದಲ್ಲಿ “ ನಿನ್ನೇ ನಮ್ಮೀತಿ ..” ಶಿವರಂಜಿನಿ ರಾಗದಲ್ಲಿ –ಶಿವ ಶಿವ ರೇವತಿ ರಾಗದ “ ಪಾರ್ವತಿ ಭಗವತಿ “ ಸಿಂಧೂ ಬೈರವಿ ರಾಗದ ‘ ವೆಂಕಟಾಚಲ ನಿಲಯಂ..’ ಶ್ರೀ ಬಾಲಮುರಳೀ ಕೃಷ್ಣ ರಚಿತ ‘ ಬೃಂದಾವನಿ ‘ ರಾಗದ ‘ ತಿಲ್ಲಾನ ಪ್ರಸತ್ತುಪಡಿಸಿದ್ದು, ಸುಶ್ರಾವ್ಯವಾಗಿ ನೆರೆದಿದ್ದ ಸಂಗೀತಪ್ರಿಯರಿಂದ ಭಾರೀ ಕರತಾಡನದೊಂದಿಗೆ ಪ್ರಶಂಸೆಗೊಳಗಾಯಿತು. ಸ್ಮಿತಾ ರವರು ಪ್ರಧಾನ ರಾಗವಾಗಿ ಸಿಂಹೇಂದ್ರ ಮಧ್ಯಮವನ್ನು ಆರಿಸಿಕೊಂಡು’ ನಿನ್ನೇ ನಮ್ಮಿತಿ….’ ಕೃತಿಯನ್ನು ಉತ್ತಮವಾಗಿ ಪ್ರಸ್ತುತಪಡಿಸಿದರು. ವೆಂಕಟೇಶ್ ಅವರ ತನಿ ಆವರ್ತನ ಎಲ್ಲರ ಪ್ರಶಂಸೆಗೊಳಗಾಯಿತು. ಕಾರ್ಯಕ್ರಮವು ‘ ಮಧ್ಯಮಾವತಿ ‘ ರಾಗದ ‘ ರಾಮ ನಾಮ ಭಜರೇ ‘ ಸಮೂಹ ಗಾಯನದೊಂದಿಗೆ ಮುಕ್ತಾಯಗೊಂಡಿತು.
ವಯೊಲಿನ್ ನಲ್ಲಿ ಶ್ರೀಮತಿ ಸಂಗೀತಾ ರಾಜೇಶ್ ಹಿತವಾಗಿ ಹಾಗೂ ಮೃದಂಗದಲ್ಲಿ ಶ್ರೀ ವೆಂಕಟೇಶ್ ಸ್ಪೂರ್ತಿದಾಯಕ ಸಾಥ್ ನೀಡಿದರು.
ಶ್ರೀಮತಿ ಶಂಕರಿ ತಂತ್ರಿಯವರಿಂದ ತಮ್ಮ 10ನೇ ವಯಸ್ಸಿನಲ್ಲಿ ಸಂಗೀತಭ್ಯಾಸ ಆರಂಭಿಸಿದ ಸ್ಮಿತಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ಶಾಸ್ತ್ರೀಯ ಸಂಗೀತದ ತವರು ಎಂದೇ ಪ್ರಖ್ಯಾತವಾಗಿರುವ ಕಾಂಚನದವರಾದ ಪುತ್ತೂರಿನ ವಿದ್ವಾನ್ ಕಾಂಚನ ಈಶ್ವರ ಭಟ್ ಇವರ ಶಿಷ್ಯೆ.
ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ದಿ. ವಿದ್ವಾನ್ ಕಾಂಚನ ಸುಬ್ಬರತ್ನಂ ಅವರ ಶಿಷ್ಯರಾದ ವಿದ್ವಾನ್ ಕಾಂಚನ ಈಶ್ವರ ಭಟ್ ಅವರು ಸಂಗೀತದ ಗುರು ಮಾತ್ರವಲ್ಲ ಪ್ರಸಿದ್ಧ ಮೃದಂಗವಾದಕರು. ಡಾ. ಬಾಲಮುರಳಿ ಕೃಷ್ಣ ಮೊದಲಾದ ಖ್ಯಾತ ಕಲಾವಿದರಿಗೆ ಪಕ್ಕವಾದ್ಯದಲ್ಲಿ ಸಹಕರಿಸಿದ ಖ್ಯಾತಿ ಇವರದು.
ವರದಿ: ಪದ್ಮನಾಭ ಪ್ರಸಾದ್ ನೆಕ್ಕರೆ.
1 Comment
ಕಲೆಯ ಪ್ರವಾಹ ನುಗ್ಗಿ ಬಂದಿದೆ ದುಬೈ ನಗರಕ್ಕೆ, ಆಧುನಿಕತೆಯೊಂದಿಗೆ ಮೇಳೈಸಿದ ಶಾಸ್ತ್ರೀಯತೆ….