ಮಧುರೈ: ಮೈಬಣ್ಣ ಕಪ್ಪು ಎಂದು ಪತ್ನಿಯನ್ನು ಹೀಯಾಳಿಸುವುದರ ಮೂಲಕ ಆಕೆಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದಾನೆ ಎಂದು ಆರೋಪಿಸಿ ಕೆಳ ಹಂತದ ನ್ಯಾಯಾಲಯ ಆರೋಪಿಯೊಬ್ಬನಿಗೆ ನೀಡಿದ್ದ ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ.
ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪರಮ ಶಿವಂ ಎಂಬ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಮ್. ಸತ್ಯನಾರಾಯಣನ್, ಪತ್ನಿಯನ್ನು ಕಪ್ಪು ಮೈಬಣ್ಣದವಳೆಂದು ಜರಿಯುವುದು ದೌರ್ಜನ್ಯದಡಿ ಬರುವುದಿಲ್ಲ. ಇದೇ ಆಕೆಯನ್ನು ಆತ್ಮಹತ್ಯೆಗೆ ಪ್ರಚೋದಿಸಿತು ಎಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಅರ್ಜಿದಾರ ಪರಮಶಿವಮ್ ಪತ್ನಿ ಸುಧಾ ಸೆಪ್ಟೆಂಬರ್ 12, 2001 ರಂದು ಸಾವನ್ನಪ್ಪಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ತಿರುನಲ್ವೇಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪರಮಶಿವಮ್, ಪತ್ನಿಗೆ ಆತ್ಮಹತ್ಯೆಗೈಯ್ಯುವಂತೆ ಪ್ರಚೋದಿಸಿದ್ದಾನೆ ಎಂದು ನಿರ್ಧರಿಸಿ ಆತನನ್ನು ಅಪರಾಧಿ ಎಂದು ಘೋಷಿಸಿತ್ತು ಮತ್ತು ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಅಲ್ಲದೇ ಅಕ್ಟೋಬರ್ 27, 2006 ರಂದು ವರದಕ್ಷಿಣೆ ಕಿರುಕುಳ ಕಾಯಿದೆಯಡಿ ಆತನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಈ ತೀರ್ಪು ಮತ್ತು ಶಿಕ್ಷೆಯ ವಿರುದ್ಧ ಶಿವಂ ಹೈಕೋರ್ಟ್ ಮೆಟ್ಟಿಲೇರಿದ್ದ.