ಬೆಂಗಳೂರು: ಉದ್ದೇಶಿಸಿತ ಭೂ ಸ್ವಾಧೀನ ಮಸೂದೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ನಗರದ ಅಶೋಕ ಹೋಟೆಲ್ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದ ಮೋದಿ, ಭೂ ಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಅನಗತ್ಯ ಹೋರಾಟ ನಡೆಸುತ್ತಿದೆ. ಆದರೂ ಪ್ರತಿಪಕ್ಷಗಳ ಹೋರಾಟಕ್ಕೆ ನಾವು ಎದೆಗುಂದುವುದು ಬೇಡ. ಕಾಂಗ್ರೆಸ್ ಹೋರಾಟವನ್ನು ರಾಜಕೀಯವಾಗಿ ಎದುರಿಸೋಣ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪಕ್ಷ ಜನರಲ್ಲಿ ಅರಿವು ಮೂಡಿಸಬೇಕು ಎಂದು ಪ್ರಧಾನಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಇದೇ ವೇಳೆ ಕಾರ್ಯಕಾರಣಿಯುದ್ದಕ್ಕೂ ಮೌನವಾಗಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರನ್ನು ಹೊಗಳಿದ ಮೋದಿ, ಪಕ್ಷಕ್ಕೆ ಆಡ್ವಾಣಿ ಅವರ ಮಾರ್ಗದರ್ಶನ ಹಾಗೂ ಕೊಡುಗೆ ಕುರಿತು ಬಣ್ಣನೆ ಮಾಡಿದರು. ಈ ಮೂಲಕ ಆಡ್ವಾಣಿಯವರನ್ನು ಕಡೆಗಣಿಸಲಾಗಿದೆ ಎಂಬ ಮಾಧ್ಯಮಗಳ ವರದಿಗೆ ತೆರೆ ಎಳೆಯಲು ಪ್ರಧಾನಿ ಯತ್ನಿಸಿದರು.