ಕನ್ನಡ ವಾರ್ತೆಗಳು

ಉಳ್ಳಾಲ ದರ್ಗಾಕ್ಕೆ ಕೊಲ್ಯ ಸ್ವಾಮಿ ಭೇಟಿ

Pinterest LinkedIn Tumblr

Uroos_kolya_svamiji_1

ಉಳ್ಳಾಲ,ಎಪ್ರಿಲ್.06:  ಉಳ್ಳಾಲ ಉರೂಸ್ ಕಾರ್ಯಕ್ರಮದ ಅಂಗವಾಗಿ ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ ಸೋಮವಾರ ದರ್ಗಾಕ್ಕೆ ಭೇಟಿ ನೀಡಿದರು. ಬಳಿಕ ದರ್ಗಾ ಕಚೇರಿಯಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು ಉಳ್ಳಾಲ ದರ್ಗಾ ಶತಶತಮಾನಗಳಿಂದ ದೀನ ದಲಿತರ ಬಡವರ ಕಣ್ಣೀರು ಒರೆಸುತ್ತಾ ಬಂದಿದ್ದು ಆ ಪ್ರಯತ್ನದಲ್ಲಿ ಸಂತಸ ಕಂಡಿದ್ದು ಅದು ಹಾಗೆಯೇ ಮುಂದುವರಿಯಲಿ ಎಂದು ಆಶಿಸಿದರು.

ಸಮಾಜದಲ್ಲಿ ಶಾಂತಿ ಸಾಮರಸ್ಯ ಇದ್ದರೆ ಮಾತ್ರ ಬದುಕು ಚಂದ. ಬದುಕು ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಒಬ್ಬರಿಗೊಬ್ಬರು ಅರಿತು ಬಾಳಬೇಕು. ಸೋದರತೆ ಎತ್ತಿ ಹಿಡಿಯುವ ಕಾರ್ಯ ನಡೆಯಬೇಕಿದೆ. ಯಾವುದೇ ಕ್ಷಣದಲ್ಲೂ ಯುವಜನತೆ ಸುಳ್ಳು ವದಂತಿಗಳಿಗೆ ಕಿವಿಕೊಡದೆ ವಾಸ್ತವ ಅರಿತು ಮುನ್ನಡೆಯಬೇಕು. ಹಾಗೆ ಮುಂದುವರಿಯುವುದರಿಂದ ಎಲ್ಲರಲ್ಲೂ ಸಹೋದರತೆ ಕಾಣಲು ಸಾಧ್ಯವಾಗುತ್ತದೆ ಎಂದು ಆಶೀರ್ವಚನದಲ್ಲಿ ನುಡಿದರು.

Uroos_kolya_svamiji_2 Uroos_kolya_svamiji_3 Uroos_kolya_svamiji_4 Uroos_kolya_svamiji_5

ನುಡಿದಂತೆ ನಡೆಯುತ್ತಿರುವುದರಿಂದ ಐಷಾರಾಮಿ ಬದುಕು ತನ್ನತ್ತ ಸುಳಿಯದು. ಮಿತ ಆಹಾರ. ಆಶ್ರಮವನ್ನು ಬಂಗಲೆಯಂತೆ ಕಟ್ಟಿಕೊಂಡಿಲ್ಲ. ಕುಠೀರದಂತೆ ಬದುಕು ಕಟ್ಟಿಕೊಂಡಿದ್ದೇನೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡುತ್ತಾ ಸನ್ಯಾಸಿ ಬದುಕು ಹೇಗಿರಬೇಕು ಎಂಬುದನ್ನು ಸಮಾಜಕ್ಕೆ ನಿರೂಪಿಸಿ ಕೊಟ್ಟಿದ್ದೇನೆ ಎಂದು ನುಡಿದರು. ನಮ್ಮ ಗುಣ, ನಡತೆ, ಆಚಾರ, ವಿಚಾರಗಳು ಇತರರಿಗೆ ಮಾದರಿಯಾಗಬೇಕು. ನಮ್ಮಿಂದ ಇತರರಿಗೆ ಉಪಕಾರವಾಗದಿದ್ದರೂ ಪರವಾಗಿಲ್ಲ. ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಉಪದ್ರ ಆಗದಂತೆ ಜಾಗೃತರಾಗಿರಬೇಕು ಎಂದು ನುಡಿದರು.

ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಳ್ಳಾಲ ಖಾಝಿ ಆಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್‌ಬುಖಾರಿ, ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟಿನ ಉಪಾಧ್ಯಕ್ಷ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಕೋಶಾಧಿಕಾರಿ ಮಹಮ್ಮದ್ ಹಾಜಿ ಬಿಲಾಲ್, ಲೆಕ್ಕ ಪರಿಶೋಧಕ ಹಮೀದ್ ಕಲ್ಲಾಪು, ಉಪ ಕಾರ್ಯದರ್ಶಿಗಳಾದ ಅಶ್ರಫ್ ಹಾಜಿ ಹಾಗೂ ಫಾರೂಕ್ ಮಾರ್ಗತ್ತಲೆ ಹಾಗೂ ಉರೂಸ್ ಸಮಿತಿಯ ಎಲ್ಲ ಸದಸ್ಯರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
_ ಎಂ.ಆರೀಫ್ ಕಲಕಟ್ಟ.

Write A Comment