– ಶೈಲಜಾ ಹೂಗಾರ
ಸಾಲು ಸಾಲು ರಜೆಯಂತೆ ಏಪ್ರಿಲ್‌ನಲ್ಲಿ. ನಡುವೆ ಒಂದೆರಡು ದಿನ ರಜೆ ಹಾಕಿದರೆ ಸಾಕು. ಮಕ್ಕಳಿಗೆ ಹೇಗೂ ಶಾಲೆ, ಟ್ಯೂಷನ್ ಇಲ್ಲ. ಯಾವುದಾದರೂ ಶಿಬಿರಕ್ಕೆ ಸೇರಿಸಿದರೂ ಸ್ವಲ್ಪ ತಡ ಮಾಡಿ ಹೋದರೆ ನಡೆದೀತು. ಇಂಥ ಸಮಯ ಮತ್ತೆ ಬರುವುದೆ ಎಂದು ಹಲವು ಯೋಜನೆ ಹಾಕುತ್ತದೆ ಮನ. ಸಂಬಂಧಿಕರು ಇರುವ ಊರಿಗೆ ಹೋದರೆ ಅವರನ್ನು ಭೇಟಿ ಮಾಡಿ ಅವರೊಡನೆ ನಾವು ಬೆರೆತಂತೆಯೂ ಆಗುತ್ತದೆ.
ಅಲ್ಲೆ ಸುತ್ತಮುತ್ತಲಿನ ಊರು ನೋಡಿಕೊಂಡು ಬರಬಹುದು ಎಂದೂ ಒಂದು ಲೆಕ್ಕ. ಆದರೆ ಓ ಅಲ್ಲೇನು ಫಂಕ್ಷನ್ ಅದೂ ಇದೂ ಅಂತ ಹೋಗೋದು ಇದ್ದೇ ಇರುತ್ತೆ. ಒಟ್ಟಿಗೇ ಇಷ್ಟು ರಜೆ ಇದ್ದಾಗ ಎಲ್ಲಾದರೂ ದೂರ ಪ್ರವಾಸ ಹೋದರೆ ಸಾಲು ರಜೆ ಸಿಕ್ಕಿದ್ದಕ್ಕೂ ಸಾರ್ಥಕ ಎನ್ನುತ್ತಾರೆ ಅಮ್ಮ. ಹೌದಲ್ಲವಾ, ಸರಿ ನೋಡಿದ, ನೋಡದೇ ಇದ್ದ ಊರುಗಳ ಲಿಸ್ಟ್ ಶುರು. ಅಯ್ಯೋ ಅಲ್ಲಿ ಈಗ ವಿಪರೀತ ಬಿಸಿಲು, ಸೆಕೆ. ಈ ಕಡೆ ಹೋಗೋಣ ಅಂತ ಒಬ್ಬರ ಸಲಹೆ.
ಬಿಸಿಲಿದ್ದರೇನಂತೆ ಪೂರಾ ಬಿಸಿಲಿನಲ್ಲೇ ಹೊರಗಿರೋದು ಏನಿರುತ್ತೆ? ಏ.ಸಿ ಗಾಡಿ, ಪ್ಯಾಕೇಜ್ ಟೂರ್, ಹೋಟೆಲ್, ಗಾರ್ಡನ್ ಅಂತೆಲ್ಲ ಬಿಸಿಲಿನೂರು ಅನ್ನೋದೂ ಮರೆತಿರುತ್ತೆ ಅಂತ ಅಪ್ಪನ ಸಲಹೆ. ಅಂತೂ ಊರು ಡಿಸೈಡ್ ಆಗಿ, ಹೋಗುವ ದಿನಾಂಕಕ್ಕೆ ರಜೆ ಹೊಂದಾಣಿಕೆಯೂ ಆದ ಮೇಲೆ ಮುಂದಿನ ಕೆಲಸ, ಪ್ಯಾಕೇಜ್ ಟೂರ್ ಬುಕ್ ಮಾಡಲು ಹೊರಡುವುದು, ಇದೂ ಆಗಿಬಿಟ್ಟರೆ ಉಳಿದುಕೊಳ್ಳುವುದಕ್ಕೆ, ಊಟ ತಿಂಡಿಗೆ ಅಂತ ಬೇರೆ ಯೋಚನೆ ಮಾಡಬೇಕಿಲ್ಲ. ಆದರೆ ಪ್ಯಾಕೇಜ್ ಟೂರ್ ಹೆಚ್ಚಾಗಿ ಮೊದಲೇ ಬುಕ್ ಆಗಿರುವುದೇ ಹೆಚ್ಚು.
ತಡ ಮಾಡಿದರೆ ಅದೇ ಟೂರ್ಸ್ ಅಂಡ್ ಟ್ರಾವೆಲ್ಸ್‌ನವರೇ ಆದರೂ ಹೋಟೆಲ್ ವಿಷಯದಲ್ಲಿ, ಊಟದ ವಿಷಯದಲ್ಲಿ ವಾಹನದ ಉತ್ತಮ ಸ್ಥಿತಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕಾದೀತು. ಅಲ್ಲದೇ ಹೋದರೆ, ಕುಟುಂಬ ಸದಸ್ಯರಷ್ಟೇ ಹೋಗುವುದಾದರೆ, ಸ್ವಂತ ವಾಹನವೆ, ಅಲ್ಲಲ್ಲೆ ಟ್ರೇನ್, ಬಸ್, ಟ್ಯಾಕ್ಸಿ ಮೂಲಕ ಪ್ರಯಾಣವೆ ಅಂತೆಲ್ಲ ಇನ್ನೂ ಹಲವು ವಿಷಯಗಳು ತಲೆಕೆಡಿಸಿಕೊಳ್ಳಲು.
ಅಬ್ಬ, ಪ್ರವಾಸವೆಂದರೆ ಎಷ್ಟೆಲ್ಲ ತಯಾರಿ ಬೇಕು.
ಸಮಯ ಸ್ವಲ್ಪವೇ ಇದ್ದರಂತೂ ಬಹಳ ಗಡಿಬಿಡಿ, ಏನಾದರೂ ಮರೆತರೆ ಎಂಬ ಆತಂಕ, ಯೋಚನೆ ತಪ್ಪಿದ್ದಲ್ಲ. ಈ ಕೊನೇ ಕ್ಷಣದ ಗಡಿಬಿಡಿ ಮತ್ತಷ್ಟು ಟೆನ್ಶನ್ ಉಂಟು ಮಾಡಿದರೆ ದೈನಂದಿನ ಜಂಜಾಟಗಳಿಂದ ದೂರವಾಗಿ ಹಾಯಾಗಿ ಕುಟುಂಬದೊಡನೆ ಕಳೆಯಬೇಕಾದ ಸ್ಮರಣೀಯ ಕ್ಷಣಗಳಿಗೆ ನಾವೇ ಮತ್ತಷ್ಟು ಸಿಟ್ಟು, ಮರೆವು, ದೂರು, ಆತಂಕಗಳನ್ನೇ ಸೇರಿಸುವಂತಾಗಿರುತ್ತದೆ. ಹೋಗುವಾಗಲೇ ಹೀಗಿದ್ದ ಸ್ಥಿತಿ ಇನ್ನು ದಾರಿಯಲ್ಲಿ, ಗಮ್ಯ ತಲುಪಿದ ಮೇಲೆ ಹೇಗಿರಲು ಸಾಧ್ಯ? ಸಾಕಷ್ಟು ತಯಾರಿಯಿಲ್ಲದೆ ಆರಂಭಿಸಿದ ಪ್ರಯಾಣ ಅದು ಹೇಗೆ ಸುಖಕರವಾದೀತು? ಸುಲಲಿತವಾಗಲು ಯೋಜನೆ ಅಗತ್ಯ. ಸಾಕಷ್ಟು ಮೊದಲೇ ನಿರ್ಧಾರಗಳು, ಅದಕ್ಕೆ ತಕ್ಕಂತೆ ಸಿದ್ಧತೆಗಳು ಬೇಕು.
ಅಕ್ಕ ಪಕ್ಕದವರಿಗೆ ಸ್ವಲ್ಪ ಮನೆ ಕಡೆ ಲಕ್ಷ್ಯ ಇರಲಿ ಎಂದು ಒಂದು ಮಾತು ಹೇಳಿರುತ್ತೇವೆ. ಆದರೆ ಪ್ಯಾಕಿಂಗ್ ಅನ್ನು ನಿರ್ಲಕ್ಷಿಸುವಂತಿಲ್ಲ. ಮಾಡಿದರಾಯಿತು ಎಂದುಕೊಂಡರೆ ಕೊನೆಕ್ಷಣದ ಅವಸರದಲ್ಲಿ ಏನಾದರೂ ಮುಖ್ಯವಾದುದನ್ನೇ ಮರೆಯುವುದು ಹೆಚ್ಚು. ಬಟ್ಟೆ ಬರೆ ಅಗತ್ಯದ್ದು ಅಂತ ಮಾತ್ರವಲ್ಲದೆ, ಹೊರಗಿನ ವಾತಾವರಣಕ್ಕೆ ಹೊಂದುವ ಹಾಗೆ ಹೊಂದಿಸಿಕೊಳ್ಳಬೇಕಾಗುತ್ತದೆ. ಸಂಜೆ ಹೊಟೆಲ್ ರೂಮ್‌ಗೆ ಬಂದ ಮೇಲೆ ಹಾಕುವ ಉಡುಪುಗಳು ಆರಾಮದಾಯಕವಾಗಿ ದಿನದ ದಣಿವನ್ನೆಲ್ಲ ಮರೆಸುವ ನಿದ್ರೆಗೆ ತೊಡಕಾಗದಂತೆ ಇರಬೇಕು. ವಿಶೇಷವಾಗಿ ಮಕ್ಕಳಿಗೆ ಒಂದಷ್ಟು ಹೆಚ್ಚೇ ಬಟ್ಟೆ ಇಟ್ಟುಕೊಳ್ಳಬೇಕು. ಹಾಗಂತ ಲಗೇಜಿನ ಭಾರವೇ ಹೆಚ್ಚಾಗಿ ಪರದಾಡುವುದಾಗಬಾರದು.
ಮಕ್ಕಳ ಉಡುಪುಗಳಲ್ಲಿ ಹತ್ತಿಯ ಉಡುಪಾದರೂ ಹಗುರ ಹತ್ತಿಯ ವಿಧದ ಬಟ್ಟೆ ಆರಿಸಿದರೆ ಉತ್ತಮ. ಅದರಲ್ಲೂ ಈಜಿಪ್ಷಿಯನ್ ಕಾಟನ್ ಬಟ್ಟೆಯಾದರೆ ಮುಷ್ಟಿಯಲ್ಲೇ ಮಡಚಿ ಹಿಡಿದಿಟ್ಟುಕೊಳ್ಳಬಹುದಾದಷ್ಟು ಮೃದು ಮತ್ತು ತೆಳುವಾಗಿ ರುತ್ತದೆ. ಇನ್ನು ಈಗಿನ ಲೆಗ್ಗಿನ್‌ಗಳು, ಥ್ರೀಫೋರ್ತ್‌ಗಳು, ಶಾರ್ಟ್ಸ್ ಅಂತ ಕಡಿಮೆ ಜಾಗ ಹಿಡಿಯುವ ಬಟ್ಟೆಗಳನ್ನೇ ಪ್ಯಾಕ್ ಮಾಡಿಕೊಳ್ಳಬಹುದು. ಊಟ ಮಾಡುವಾಗ, ಪ್ರಯಾಣದಲ್ಲಿ ಡ್ರೆಸ್ ಮೇಲೆ ಏನಾದರೂ ಬೀಳಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಬಟ್ಟೆ ತೊಳೆಯಲು ಬಹಳಷ್ಟು ಹೋಟೆಲ್‌ಗಳಲ್ಲಿ ಅನುಮತಿ ಇರುವುದಿಲ್ಲ. ಹಾಗಾಗಿ ಎಷ್ಟು ದಿನದ ಪ್ರಯಾಣ, ಹೋಗುವಾಗ, ಬರುವಾಗ, ಮಲಗುವ ಡ್ರೆಸ್ ಅಂತೆಲ್ಲ ಲೆಕ್ಕ ಹಾಕಿ ಮಕ್ಕಳಿಗೆ ಒಂದಷ್ಟು ಹೆಚ್ಚೇ ತೆಗೆದಿಡಬೇಕು. ಮೊಬೈಲ್, ಐಪ್ಯಾಡ್ ಚಾರ್ಜರ್‌ಗಳನ್ನು ಮರೆಯದೇ ಕೊಂಡೊಯ್ಯಬೇಕು. ಹೋಟೆಲ್ ರೂಮ್‌ಗಳಲ್ಲದೆ ಕೆಲವು ಕಡೆ ಅತಿಥಿಗೃಹಗಳು, ನೆಂಟರ ಮನೆ ಅಂತ ಬೇರೆ ಕಡೆ ತಂಗಬೇಕಾಗಿ ಬಂದರೆ ಇರಲಿ ಎಂದು ಸೋಪು, ಇಷ್ಟದ ಬ್ರಾಂಡ್‌ನ ಶಾಂಪೂ, ಟೂಥ್‌ಪೇಸ್ಟ್, ಬ್ರಶ್‌ಗಳನ್ನು, ಪುರುಷರು ಶೇವಿಂಗ್ ಕಿಟ್‌ಅನ್ನು, ಹೇರ್ ಆಯಿಲ್, ಬಾಚಣಿಕೆ, ಸನ್‌ಸ್ಕ್ರೀನ್, ಬಾಡಿಲೋಶನ್, ಬಾಡಿಸ್ಪ್ರೇ ಇತ್ಯಾದಿಗಳನ್ನು ಅಗತ್ಯ ಅನುಸರಿಸಿ ಒಂದು ಕಡೆ ಪಟ್ಟಿ ಮಾಡಿಡಬೇಕು.
ಅವುಗಳನ್ನೆಲ್ಲ ಬ್ಯಾಗಿಗೆ ಹಾಕುತ್ತಲೇ ಟಿಕ್ ಮಾಡುತ್ತ ಹೋದರೆ ಮರೆಯುವ ಸಾಧ್ಯತೆ ಇರುವುದಿಲ್ಲ. ಪುಟ್ಟ ಮಕ್ಕಳಾದರೆ ಅವರಿಗೆ ಸಿದ್ಧ ಆಹಾರ, ಕುರುಕಲು, ಅವರಿಷ್ಟಪಡುವ ಬಿಸ್ಕಿಟ್, ಬ್ರೆಡ್, ಜಾಮ್, ಹಣ್ಣುಗಳನ್ನು ಪ್ಯಾಕ್ ಮಾಡಿಕೊಳ್ಳಬೇಕು. ಊಟ ತಿಂಡಿಯ ಸಮಯದಲ್ಲಿ ಅವರಿಗೆ ಹಸಿವಾಗದೆ, ಇಷ್ಟವಾಗದೆ ಇದ್ದುಬಿಟ್ಟರೆ ದಾರಿಯಲ್ಲಿ ಅವರಿಗೆ ಅಗತ್ಯಬೀಳುತ್ತದೆ. ಯಾವಾಗಲೂ ಜೊತೆಯಲ್ಲಿ ಸಾಕಷ್ಟು ಕುಡಿಯುವ ನೀರು ಇರಿಸಿಕೊಳ್ಳಲೇಬೇಕು.
ಯಾರಿಗಾದರೂ ಪ್ರಯಾಣದ ಅಲರ್ಜಿ ಇದ್ದರೆ ಅದಕ್ಕೆ ಮುಂಜಾಗ್ರತೆ ಎಂದು ವಾಂತಿ ತಡೆಯುವ ಗುಳಿಗೆ ಮರೆಯದೇ ಇಡಬೇಕು. ನೀರಾಟ ಆಡಿ ಶೀತವಾದರೆ ವಿಕ್ಸ್, ಕೋಲ್ಡ್ ಸಿರಪ್, ಜ್ವರದ ಔಷಧ, ಹೊಟ್ಟೆನೋವು, ಬೇಧಿಗೆ ಔಷಧ ಬಳಿಯಲ್ಲೇ ಇರಲಿ. ದಿನವೂ ತೆಗೆದುಕೊಳ್ಳಲೇಬೇಕಾದ ಮಾತ್ರೆಗಳಿದ್ದರೆ ಅವನ್ನು ಪ್ರವಾಸದ ದಿನಗಳಿಗಿಂತಲೂ ಒಂದೆರಡು ಹೆಚ್ಚು ಸ್ಟಾಕ್ ಇಟ್ಟುಕೊಳ್ಳಬೇಕು. ಅದೇ ಕಂಪೆನಿಯ ಮಾತ್ರೆಗಳು ಹೊರರಾಜ್ಯಗಳಲ್ಲಿ, ಬೇರೆ ಊರುಗಳಲ್ಲಿ ಸಿಗದೇ ಹುಡುಕಾಟವೇ ಸಮಯ ತೆಗೆದುಕೊಳ್ಳಬಹುದು, ಸಿಗದಿದ್ದರೆ ಆತಂಕ, ಅನಾನುಕೂಲ.
ದಿನವಿಡಿ ಹೊರಗೆ ಸುತ್ತಾಡಿ ವಾಪಸು ರೂಮಿಗೆ ಬಂದಮೇಲೆ ಟಿವಿ ನೋಡಬಹುದು, ಮಕ್ಕಳಿಗೆ ಅದರಲ್ಲೆಲ್ಲ ಆಸಕ್ತಿ ಇಲ್ಲದಿದ್ದರೆ ಅವರು ಇಷ್ಟಪಡುವ ಮೊಬೈಲ್ ಗೇಮ್, ಇಲ್ಲವೆ ಬೇರಾವುದೇ ಒಳಾಂಗಣ ಆಟದಲ್ಲಿ ಅವರನ್ನು ತೊಡಗಿಸಬಹುದು. ಪ್ರಯಾಣ ಮಾಡುವಾಗಲೂ ಮಧುರ, ಉಲ್ಲಾಸಭರಿತ ಹಾಡುಗಳನ್ನು ಎಲ್ಲರೂ ಕೇಳುತ್ತ, ನೋಡುತ್ತ ಸಾಗಬಹುದು. ಊರು ಬರುವವರೆಗೆ ಪ್ರಯಾಣದಲ್ಲಿ ಟೈಮ್ ಪಾಸ್ ಹೇಗೆ ಎನ್ನುವ ಅಭಿಪ್ರಾಯ ಬೇಡ. ಪ್ರವಾಸಕ್ಕಿಂತ ಎಷ್ಟೋ ಸಲ ಪ್ರಯಾಣವೇ ಮುಖ್ಯಭಾಗವಾಗಿಬಿಡುತ್ತದೆ.
ಅದರಲ್ಲೂ ಸುದೀರ್ಘ ಪ್ರಯಾಣದಲ್ಲಿ ಸಾಗುವ ಹಾದಿಯುದ್ದಕೂ ಆಗುವ ಅನುಭವ ಅನನ್ಯ. ಊರು ಯಾವಾಗ ಬಂದೀತು ಎಂದು ಸುಮ್ಮನೇ ಬೇಸರದಿಂದ ಕಾಯುತ್ತ ಈಗಿರುವ ಕ್ಷಣಗಳನ್ನು ನೀರಸ ಮಾಡಿಕೊಳ್ಳುವುದೇಕೆ? ಜೊತೆ ಸಾಗುವುದು ಎಂದರೆ ಪರಸ್ಪರ ಸ್ಪಂದಿಸುತ್ತ ಜತೆಗೆ ಇರುವುದು. ಆಗ ಬೇಸರವೆಲ್ಲಿ? ಅಂದಹಾಗೆ ಸಂತೋಷ ಇರುವುದು ಗಮ್ಯದಲ್ಲಷ್ಟೆ ಅಲ್ಲ, ಪ್ರಯಾಣದಲ್ಲಿ ಎಂಬ ಸಾಲೊಂದು ಮನದಲ್ಲಿದ್ದರೆ ಜೊತೆ ಇರುವ ಎಲ್ಲ ಕ್ಷಣಗಳೂ ಸುಂದರ.