-ಸುರೇಖಾ ಹೆಗಡೆ
ಮಂಗಳೂರು ಮೂಲದ ಈ ಬೆಡಗಿಗೆ ನೃತೃ ಸಂಗೀತದ ನಂಟಿದೆ. ಸಿನಿಮಾ ಪ್ರೀತಿಯಿದೆ. ಕುಂಚ ಹಿಡಿದು ಚಿತ್ತಾರ ಮೂಡಿಸುವ ಕಲಾಭ್ಯಾಸವಿದೆ. ಸೌಂದರ್ಯದ ಹೊಳಪಲ್ಲಿ ಮಾಡೆಲಿಂಗ್ ಕನಸಿದೆ. ಅಂದಹಾಗೆ ಈಕೆಯ ಹೆಸರು ಅಶ್ವಿನಿ ಡಿ.ರಾವ್. ಶಾಲಾ ದಿನಗಳಲ್ಲಿಯೇ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ‘ದಂಡಪಿಂಡಗಳು’ ಧಾರಾವಾಹಿಯಲ್ಲಿ ಪುಟ್ಟ ಪಾತ್ರವಾದರು.
‘ವಿಲನ್‘ ಹಾಗೂ ‘ಹುಬ್ಬಳ್ಳಿ ಹುಡುಗರು’ ಚಿತ್ರಕ್ಕೂ ಬಣ್ಣ ಹಚ್ಚಿರುವ ಈ ಕಲಾವಿದೆ ಸದ್ಯ ಮೂರು ವರ್ಷಗಳಿಂದ ಮಾಡೆಲಿಂಗ್ ವೃತ್ತಿಯನ್ನು ನೆಚ್ಚಿಕೊಂಡಿದ್ದಾರೆ. ಸುಮಾರು ನೂರೈವತ್ತಕ್ಕೂ ಹೆಚ್ಚು ರ್‍ಯಾಂಪ್ ಷೋಗಳಲ್ಲಿ ಭಾಗವಹಿಸಿದ್ದು ಟಿ.ವಿ. ಹಾಗೂ ಪತ್ರಿಕಾ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಸುಮನಾ ರಂಜಾಲ್ಕರ್ ಅವರಿಂದ ಮೂರೂವರೆ ವರ್ಷದಿಂದ ಕಥಕ್ ನೃತ್ಯಾಭ್ಯಾಸ ಮಾಡುತ್ತಿರುವ ಅಶ್ವಿನಿ ನೃತ್ಯ ಕಲಾವಿದೆ ಕೂಡ. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹಾಗೂ ಒಳಾಂಗಣ ವಿನ್ಯಾಸದಲ್ಲೂ ಡಿಪ್ಲೊಮಾ ಮಾಡಿ ಉದ್ಯೋಗವನ್ನೂ ಗಿಟ್ಟಿಸಿಕೊಂಡಿದ್ದರು. ಆದರೆ ಕಲಾ ಪ್ರಪಂಚದ ಸೆಳೆತ ಹಾಗೂ ತಾನು ಬಯಸುವ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಬಹುದು ಎಂಬ ಕಾರಣಕ್ಕೆ ಮಾಡೆಲಿಂಗ್ ಕ್ಷೇತ್ರದತ್ತ ಮುಖ ಮಾಡಿದ್ದಾರೆ.
‘ಅಪ್ಪ ಕಲಾವಿದ ಹಾಗೂ ಹಾಡುಗಾರ. ಹೀಗಾಗಿ ಕಲಾ ಜಗತ್ತಿನ ಬಗ್ಗೆ ಪ್ರೀತಿ ಇದ್ದ ಅಪ್ಪ ಅಮ್ಮ ನನ್ನ ಕನಸುಗಳಿಗೆ ಬೆಂಬಲದ ರೆಕ್ಕೆ ಜೋಡಿಸಿದರು. ಸಂಬಂಧಿಕರೂ ನನ್ನ ಆಯ್ಕೆಯನ್ನು ಗೌರವಿಸಿ ಮೆಚ್ಚುಗೆಯ ಮಾತನಾಡುತ್ತಾರೆ. ಗಣೇಶ್ ದೇಸಾಯಿ ಅವರ ಬಳಿ ಹಿಂದೂಸ್ತಾನಿ ಸಂಗೀತವನ್ನು ಕಲಿಯುತ್ತಿರುವ ನಾನು ಸಮಯ ಸಿಕ್ಕಾಗಲೆಲ್ಲಾ ಆಯಿಲ್ ಹಾಗೂ ಆಕ್ರಿಲಿಕ್ ಮಾಧ್ಯಮದಲ್ಲಿ ಪೇಂಟಿಂಗ್, ಇಂಕ್ ವರ್ಕ್ ಮಾಡುತ್ತಾ ಕುಳಿತಿರುತ್ತೇನೆ. ದಿನವೆಲ್ಲಾ ಬೇರೆ ಬೇರೆ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ಖುಷಿಯಾಗಿದ್ದೇನೆ’ ಎನ್ನುತ್ತಾರೆ ಅಶ್ವಿನಿ.
ಇದುವರೆಗೆ ಐದಾರು ಬಾರಿ ಪೇಂಟಿಂಗ್ ಪ್ರದರ್ಶನದಲ್ಲೂ ಪಾಲ್ಗೊಂಡಿರುವ ಅಶ್ವಿನಿ ಇದೇ ಏಪ್ರಿಲ್ ಹದಿನೈದರಂದು ತಮ್ಮ ಚಿತ್ರಕಲೆಯನ್ನು ಚಿತ್ರಕಲಾಪರಿಷತ್‌ನಲ್ಲಿ ಪ್ರದರ್ಶನಕ್ಕಿಡಲಿದ್ದಾರೆ. ಸಿನಿಮಾ, ಧಾರಾವಾಹಿ, ಮಾಡೆಲಿಂಗ್ ಕ್ಷೇತ್ರದಲ್ಲಿರುವವರಿಗೆ ಮಾತ್ರವಲ್ಲ ಎಲ್ಲರಿಗೂ ಫಿಟ್‌ನೆಸ್ ಅವಶ್ಯಕತೆ ಇದೆ ಎನ್ನುತ್ತಾರವರು. ಹಳೆಯ ಕಾಲದವರ ಥರ ಯಾರೂ ಮೈಮುರಿದು ಕೆಲಸ ಮಾಡುವುದಿಲ್ಲ. ಈಗಿನ ಕಾಲದಲ್ಲಿ ನಡೆಯುವುದೂ ಕಮ್ಮಿಯಾಗಿದೆ. ಹೀಗಾಗಿ ಫಿಟ್‌ನೆಸ್‌ಗಾಗಿ ಸ್ವಲ್ಪ ಸಮಯ ಮೀಸಲಿಡಲೇಬೇಕು ಎನ್ನುವುದು ಅಶ್ವಿನಿ ಅನಿಸಿಕೆ.
ಅಂದಹಾಗೆ ಅಶ್ವಿನಿ ಅವರ ಫಿಟ್‌ನೆಸ್ ಗುಟ್ಟು ಪವರ್ ಯೋಗ. ತ್ವಚೆಯ ಕಾಂತಿ ಹಾಗೂ ಮಾನಸಿಕ ಆರೋಗ್ಯಕ್ಕೆ ಇದು ಹೆಚ್ಚು ಸಹಕಾರಿಯಂತೆ. ಅದೂ ಅಲ್ಲದೆ ಜಿಮ್, ವಾಕಿಂಗ್, ಜಾಗಿಂಗ್ ಅಭ್ಯಾಸವೂ ಇವರಿಗಿದೆ. ದಿನದ ಒಂದೂವರೆ ಗಂಟೆಯನ್ನು ಅಶ್ವಿನಿ ಫಿಟ್‌ನೆಸ್‌ಗಾಗಿಯೇ ಮೀಸಲಿಟ್ಟಿದ್ದಾರೆ. ದಿನಕ್ಕೊಂದು ವ್ಯಾಯಾಮ ಪದ್ಧತಿಯನ್ನು ಅವರು ಬಳಸಿಕೊಳ್ಳುತ್ತಾರೆ.
ಫಿಟ್‌ನೆಸ್‌ಗೂ ಡಯೆಟ್‌ಗೂ ಸಂಬಂಧವಿಲ್ಲ ಎಂದು ನಂಬಿರುವ ಅವರು ಯಾವುದೇ ಡಯೆಟ್ ಅನ್ನು ಅನುಸರಿಸುವುದಿಲ್ಲ. ಮಂಗಳೂರು ಸಂಪ್ರದಾಯದ ಅಮ್ಮ ಮಾಡಿದ ಊಟ ತಿಂಡಿಯನ್ನು ಅವರು ಸವಿಯುತ್ತಾರೆ. ಎಣ್ಣೆ ಪದಾರ್ಥ, ಜಂಕ್ ಫುಡ್ ಮೊದಲಿನಿಂದಲೂ ಇಷ್ಟವಿಲ್ಲ. ತೆಂಗಿನಕಾಯಿಯನ್ನು ಯಥೇಚ್ಛವಾಗಿ ಬಳಸುವುದರಿಂದ ತ್ವಚೆ ಚೆನ್ನಾಗಿರುತ್ತದೆಯಂತೆ.
ದಿನವಿಡೀ ಒಂದಲ್ಲಾ ಒಂದು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅಶ್ವಿನಿ ಇತ್ತೀಚೆಗೆ ರಂಗಭೂಮಿ ತರಬೇತಿಯ ಕಡೆಗೂ ಮನಸು ಮಾಡಿದ್ದಾರೆ. ತರಬೇತಿ ಪಡೆಯದೆ ನಟನಾ ರಂಗಕ್ಕೆ ಇಳಿದಿದ್ದ ಅವರೀಗ ‘ಬಿಂಬ’ದಲ್ಲಿ ನಟನಾ ಪಟ್ಟು ಅಭ್ಯಸಿಸುತ್ತಿದ್ದಾರೆ.
ಕೆಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದ ಇವರು ಇದುವರೆಗೆ ದುಬೈ, ದೆಹಲಿ, ಆಂಧ್ರ, ಕೇರಳ, ತಮಿಳುನಾಡು ಹೀಗೆ ವಿವಿಧೆಡೆ ರ್‍ಯಾಂಪ್ ಏರಿದ್ದಾರೆ.
ಸೌಂದರ್ಯ, ನೃತ್ಯ, ಸಂಗೀತ, ನಟನೆ ಇವೆಲ್ಲವನ್ನೂ ಒಳಗೊಂಡು ಪರಿಪೂರ್ಣತೆ ಪಡೆಯುವ ಸಿನಿಮಾ ಕ್ಷೇತ್ರ ಅವರಿಗೆ ಹೆಚ್ಚು ಇಷ್ಟ. ಆದರೆ ಒಳ್ಳೆಯ ಕಥೆ ಇರುವ ಅವಕಾಶಗಳು ಬಂದರೆ ಅವರು ಒಪ್ಪಿಕೊಳ್ಳುತ್ತಾರಂತೆ. ‘ಯಾವ ಕ್ಷೇತ್ರದಲ್ಲೂ ಎಲ್ಲವೂ ಸರಿ ಇರುವುದಿಲ್ಲ. ಆದರೆ ನಮ್ಮ ನಡತೆ ಹೇಗಿದೆ, ಸನ್ನಿವೇಶಕ್ಕೆ ತಕ್ಕಂತೆ ಹೇಗೆ ವರ್ತಿಸುತ್ತೇವೆ ಎಂಬುದರ ಮೇಲೆ ಆ ಕ್ಷೇತ್ರದ ಜನರೂ ನಮ್ಮನ್ನು ನಡೆಸಿಕೊಳ್ಳುತ್ತಾರೆ. ನಮ್ಮ ಇರುವಿಕೆಯಲ್ಲಿ ಕಟ್ಟುನಿಟ್ಟು ಬೆಳೆಸಿಕೊಂಡರೆ ತೊಂದರೆ ಎದುರಾಗುವುದು ಕಡಿಮೆ’ ಎನ್ನುತ್ತಾರೆ.
ಮಾಡೆಲಿಂಗ್ ಬಗ್ಗೆ ಒಲವಿದ್ದು ಈ ಕ್ಷೇತ್ರಕ್ಕೆ ಬರುವ ಮನಸ್ಸಿರುವವರು ತರಬೇತಿ ಪಡೆದುಬಂದರೆ ಯಶಸ್ಸು ಬೇಗ ದೊರೆಯುತ್ತದೆ ಎಂಬ ಸಲಹೆ ಅಶ್ವಿನಿ ಅವರದ್ದು. ಫ್ಯಾಷನ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಎಂ.ಎಸ್. ಶ್ರೀಧರ್ ಅವರ ಬಳಿ ತರಬೇತಿ ಪಡೆದಿರುವ ಅಶ್ವಿನಿ ಇದೀಗ ಶಿಲ್ಪಿ ಚೌಧರಿ ತಂಡದಲ್ಲಿದ್ದಾರೆ.