– ದಯಾನಂದ
ತರಗತಿಯಲ್ಲಿ ಕುಳಿತು ಉಪನ್ಯಾಸಕರ ಪಾಠ ಕೇಳಿ, ನೋಟ್ಸ್ ಮಾಡಿಕೊಂಡು ಅದನ್ನೇ ವೇದವೆಂಬಂತೆ ಉರು ಹೊಡೆದು ಪರೀಕ್ಷೆ ಎದುರಿಸುವ ಕಾಲ ಇದಲ್ಲ. ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ಬಹುತೇಕರು ಈಗ ಆನ್ಲೈನ್ ಮೇಸ್ಟ್ರುಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಕಂಪ್ಯೂಟರ್ ಪರದೆಯ ಮೇಲೆ ಮೂಡುವ ಉಪನ್ಯಾಕರ ಪಾಠದ ಜತೆಗೆ ತಮ್ಮ ಸಂದೇಹಗಳನ್ನು ವಿದ್ಯಾರ್ಥಿಗಳು ನೇರವಾಗಿ ಆನ್ಲೈನ್ ಚಾಟಿಂಗ್ ಅಥವಾ ಲೈವ್ ವಿಡಿಯೊ ಮೂಲಕ ಬಗೆಹರಿಸಿಕೊಳ್ಳಬಹುದು. ಐಐಟಿ-ಜೆಇಇ, ಜಿಎಟಿಇ, ಸಿಎ, ಸಿಎಸ್ ಜತೆಗೆ ಐಎಎಸ್, ಬ್ಯಾಂಕಿಂಗ್ ಪರೀಕ್ಷೆಗಳಿಗೂ ಆನ್ಲೈನ್ ತರಗತಿಗಳಲ್ಲಿ ಕಲಿಯುವವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ.
ಆನ್ಲೈನ್ ತರಗತಿಗಳಲ್ಲಿ ತಮಗೆ ಬೇಕಾದ ವಿಷಯಕ್ಕೆ ಬೇಕಾದ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಈಗ ವಿದ್ಯಾರ್ಥಿಗಳಿಗಿದೆ. ಉಪನ್ಯಾಸಕರು ನೀಡಿರುವ ಆನ್ಲೈನ್ ತರಗತಿಗಳ ಡೆಮೊ (ಮಾದರಿ ತರಗತಿ) ಹಾಗೂ ಉಪನ್ಯಾಸಕರ ‘ಸಾಧನೆ ಪಟ್ಟಿ’ ನೋಡಿ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲವೇ ಮೌಸ್ ಮುಂದೊತ್ತಿದರೆ ಆಯಿತು, ಮತ್ತೊಬ್ಬ ಉಪನ್ಯಾಸಕರು ಕಂಪ್ಯೂಟರ್ ಪರದೆಯ ಮೇಲಿರುತ್ತಾರೆ!
ಉಪನ್ಯಾಸಕರನ್ನು ನೀವೇ ಆಯ್ಕೆ ಮಾಡಿಕೊಂಡರೆ ಅವರು ನಮೂದಿಸಿರುವಷ್ಟು ಹಣ ಪಾವತಿ ಮಾಡಿ ಅವರ ಶಿಷ್ಯರಾಗಬಹುದು. ಎರಡು ಸಾವಿರದಿಂದ ಹಿಡಿದು ಹತ್ತು ಸಾವಿರದವರೆಗೂ ಶುಲ್ಕ ಪಡೆಯುವ ಉಪನ್ಯಾಸಕರು ಆನ್ಲೈನ್ ತರಗತಿಗಳಲ್ಲಿ ಸಿಗುತ್ತಾರೆ. ಶುಲ್ಕ ಪಾವತಿಯನ್ನೂ ಆನ್ಲೈನ್ ಮೂಲಕವೇ ಮಾಡಬಹುದು. www.superprofs.com ನಲ್ಲಿ ಆನ್ಲೈನ್ ಮೇಸ್ಟ್ರುಗಳ ಆಯ್ಕೆಗೆ ಹೆಚ್ಚಿನ ಅವಕಾಶವಿದೆ.
ಉಚಿತ ತರಗತಿಗಳು
ಸಾಮಾನ್ಯವಾಗಿ ಆನ್ಲೈನ್ ತರಗತಿಗಳಲ್ಲಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆಗೆ ಶುಲ್ಕ ಪಾವತಿಸಲೇಬೇಕು.
www.learnerstv.com ನಲ್ಲಿ ಬಹುತೇಕ ವಿಷಯಗಳ ಆನ್ಲೈನ್ ತರಗತಿಗಳು ಉಚಿತವಾಗಿ ಲಭ್ಯವಿವೆ. ಜೀವವಿಜ್ಞಾನ, ಗಣಿತ, ಕಂಪ್ಯೂಟರ್ ಅಪ್ಲಿಕೇಷನ್ಸ್, ಎಂಜಿನಿಯರಿಂಗ್, ನಿರ್ವಹಣೆ, ಅಕೌಂಟಿಂಗ್, ನರ್ಸಿಂಗ್, ಮನೋವಿಜ್ಞಾನದಿಂದ ಹಿಡಿದು ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್ ಭಾಷಾ ಕಲಿಕೆಯ ಮುದ್ರಿತ ವಿಡಿಯೊಗಳು ಈ ಜಾಲತಾಣದಲ್ಲಿ ಉಚಿತವಾಗಿ ಲಭ್ಯ.
ಸಿಎ ಮಾಡುವವರಿಗೆ ಭಾರತೀಯ ಚಾರ್ಟೆಡ್ ಅಕೌಂಟಂಟ್ಸ್ ಸಂಸ್ಥೆ (ಐಸಿಎಐ) ಉಚಿತ ಆನ್ಲೈನ್ ತರಗತಿಗಳನ್ನು ನೀಡುತ್ತಿದೆ. www.icaitv.com ನಲ್ಲಿ ಸಿಎ ಪರೀಕ್ಷೆಗೆ ತರಗತಿಗಳು ಉಚಿತವಾಗಿ ಲಭ್ಯ. ಮುದ್ರಿತ ವಿಡಿಯೊ ಜೊತೆಗೆ ಪರೀಕ್ಷೆ ಸಮೀಪಿಸಿದಾಗ ಲೈವ್ ವಿಡಿಯೊ ತರಗತಿಗಳೂ ಇಲ್ಲಿ ಸಿಗುತ್ತವೆ. ಐಐಟಿ – ಜೆಇಇ ಪ್ರವೇಶ ಪರೀಕ್ಷೆಗೆ www.freeiitcoaching.com ನಲ್ಲಿ ತರಗತಿಗಳ ವಿಡಿಯೊಗಳು ಉಚಿತವಾಗಿ ಲಭ್ಯ.
ಪರೀಕ್ಷೆಗೆ ಬೇಕಾದ ಪಠ್ಯದ ಪಿಡಿಎಫ್ ಫೈಲ್ಗಳನ್ನು ಈ ಜಾಲತಾಣದಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇನ್ನು GATE ಪರೀಕ್ಷೆಗೆ www.thegateacademy.com ನಲ್ಲಿ ವಿಡಿಯೊ ತರಗತಿಗಳು ಉಚಿತವಾಗಿ ಸಿಗಲಿವೆ. ಆನ್ಲೈನ್ ತರಗತಿಗಳ ಪಾಠಗಳೆಲ್ಲಾ ಹೆಚ್ಚಾಗಿ ಇಂಗ್ಲಿಷ್ನಲ್ಲೇ ಇರುತ್ತವೆ. ಅಲ್ಲಲ್ಲಿ ಹಿಂದಿ ಭಾಷೆಯಲ್ಲೂ ಪಾಠ ಮಾಡುವ ಉಪನ್ಯಾಸಕರು ಸಿಗುತ್ತಾರೆ.
ಇನ್ನು ಯೂಟ್ಯೂಬ್ನಲ್ಲಿ ಹುಡುಕಾಡಿದರೆ ಕನ್ನಡದ ಆನ್ಲೈನ್ ಪಾಠದ ತರಗತಿಗಳು ಸಿಗುತ್ತವಾದರೂ ಗುಣಮಟ್ಟದ ಕನ್ನಡ ವಿಡಿಯೊ ತರಗತಿಗಳನ್ನು ಒದೆಡೆ ಒಟ್ಟುಗೂಡಿಸುವ ಯತ್ನಗಳು ಕಾಣುವುದಿಲ್ಲ. ಹಣವಿದ್ದವರು ತಮಗಿಷ್ಟದ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಂಡು ಜ್ಞಾನಾರ್ಜನೆ ಮಾಡಿಕೊಳ್ಳಬಹುದು. ಹಣದ ಕೊರತೆ ಇರುವವರೂ ಹುಡುಕಾಡಿ ಸೂಕ್ತವೆನಿಸುವ ಉತ್ತಮ ಉಪನ್ಯಾಸಕರ ಪಾಠಗಳನ್ನು ನೋಡಿ, ಕೇಳಿ ಕಲಿಯಬಹುದು. ಇನ್ನು ತಡವೇಕೆ ಕಲಿಕೆಗೆ, ಗೆಲುವಿಗೆ ಒಂದೇ ಕ್ಲಿಕ್!
*
ಸಮಯದ ಉಳಿತಾಯ
‘ಆನ್ಲೈನ್ ತರಗತಿಗಳಿಂದ ಸಮಯದ ಉಳಿತಾಯವಾಗುವುದಂತೂ ಸತ್ಯ. ಅಲ್ಲದೆ ಅಂಗವಿಕಲರು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಮನೆಯಲ್ಲೇ ಕುಳಿತು ಪಾಠ ಕೇಳಬಹುದು. ನಾನು ಸಿಎ ಮಾಡುವಾಗ ಆನ್ಲೈನ್ ತರಗತಿಗಳಿಂದ ಹೆಚ್ಚು ಉಪಯೋಗ ಪಡೆದಿದ್ದೇನೆ’.
– ಪ್ರಕಾಶ್, ಸಿಎ
*
ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ಸೂಕ್ತ
‘ಐಎಎಸ್, ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡುವ ದೊಡ್ಡ ಸಂಸ್ಥೆಗಳು ದೆಹಲಿಯಲ್ಲಿವೆ. ಆದರೆ, ಆರ್ಥಿಕವಾಗಿ ಹಿಂದುಳಿದಿರುವವರು ದೆಹಲಿಗೆ ಹೋಗಿ ತರಬೇತಿ ಪಡೆಯುವುದು ಕಷ್ಟಸಾಧ್ಯ. ಅಂಥವರಿಗೆ ಆನ್ಲೈನ್ ತರಗತಿಗಳು ಹೆಚ್ಚು ಅನುಕೂಲ. ಮನೆಯಲ್ಲೇ ಕುಳಿತು ದೆಹಲಿಯಲ್ಲಿರುವ ಉಪನ್ಯಾಸಕರಿಂದ ಪಾಠ ಕೇಳಬಹುದು. ಜತೆಗೆ ನಮ್ಮ ಸಂದೇಹಗಳನ್ನೂ ಪರಿಹರಿಸಿಕೊಳ್ಳಬಹುದು’
– ಶ್ರೀಕಂಠ, ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿ
*
ತಂತ್ರಜ್ಞಾನದ ವರ
ಆನ್ಲೈನ್ ತರಗತಿಗಳು ತಂತ್ರಜ್ಞಾನದ ವರ ಎಂದೇ ಹೇಳಬೇಕು. ಎಲ್ಲೋ ಇರುವ ಉಪನ್ಯಾಸಕರೊಂದಿಗೆ ಇನ್ನೆಲ್ಲೋ ಇರುವ ವಿದ್ಯಾರ್ಥಿ ಸಂಪರ್ಕ ಸಾಧಿಸಿ ಅವರೊಂದಿಗೆ ಸಂವಾದ ನಡೆಸಬಹುದು. ವಿಡಿಯೊ ತಗರತಿಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದರಿಂದ ಪುನರ್ಮನನಕ್ಕೆ ಅದು ಹೆಚ್ಚು ಸಹಕಾರಿ.
– ರೂಪೇಶ್, ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿ
*
ಸ್ಮಾರ್ಟ್ಫೋನ್ ಪಾಠ
ಆನ್ಲೈನ್ ತರಗತಿಗಳನ್ನು ಸ್ಮಾರ್ಟ್ಫೋನ್ಗಳಲ್ಲೇ ನೋಡಬಹುದು. ಒಮ್ಮೆ ಡೌನ್ಲೋಡ್ ಮಾಡಿಕೊಂಡ ಪಾಠವನ್ನು ಸಮಯ ಸಿಕ್ಕಾಗೆಲ್ಲಾ ಮತ್ತೆ ಮತ್ತೆ ನೋಡಿ ಕಲಿಯಬಹುದು. ಸ್ಮಾರ್ಟ್ಫೋನ್ ಮೂಲಕವೇ ವಿಡಿಯೊ ಚಾಟಿಂಗ್ ಮಾಡುವುದರಿಂದಲೂ ಮಾರ್ಗದರ್ಶನ ಪಡೆಯಬಹುದು. ಒಮ್ಮೆ ಇ–ಕಲಿಕೆಯನ್ನು ಆರಂಭಿಸಿದರೆ ಓದು, ಬರಹವೂ ಗೀಳಾಗಿ ಪರಿಣಮಿಸುತ್ತದೆ. ಇದೂ ಇ–ಕಲಿಕೆಯ ಲಾಭವೆಂದೇ ಹೇಳಬಹುದು. ಅಂಗೈಯಲ್ಲಿ ಶಿಕ್ಷಣದ ಸಕಲ ಸಾಧನಗಳೂ ಇರುವಾಗ ಕಲಿಯುವ ಮನಸ್ಸು ನಿಮಗಿರಬೇಕು. ಆಸಕ್ತಿ ಇದ್ದರೆ ಉಪನ್ಯಾಸಕರು ನಿಮ್ಮ ಅಣತಿಯಂತೆ ಬಂದು ಪಾಠ ಮಾಡುತ್ತಾರೆ. ಶ್ರವಣಕ್ಕೂ ಸ್ಮರಣಕ್ಕೂ ಮನನಕ್ಕೂ ಅನುಕೂಲವಾಗುವಂತಿದೆ ಇ–ಕಲಿಕೆ.