ಅನುಷ್ಕಾ ಶರ್ಮಾ… ಎಂದೊಡನೆ ವಿಶ್ವಕಪ್, ವಿರಾಟ್ ಕೊಹ್ಲಿ ವಾದಗಳೇ ನೆನಪಾಗುತ್ತವೆ. ಅವುಗಳನ್ನೆಲ್ಲ ಬದಿಗಿರಿಸಿ ಅನುಷ್ಕಾಳ ಸ್ಟೈಲ್ ಬಗ್ಗೆ ತಿಳಿಯೋಣ… ‘ಟ್ರೆಂಡಿಯಾಗಿರಬೇಕು, ಆದರೆ ಆರಾಮದಾಯಕವಾಗಿರಬೇಕು’ ಅದೇ ನನ್ನ ಸ್ಟೈಲ್ ಎನ್ನುತ್ತಾರೆ ಅನುಷ್ಕಾ.
ಲೈಫ್‌ಸ್ಟೈಲ್‌ನ ರಾಯಭಾರಿಯಾಗಿರುವ ಅನುಷ್ಕಾಗೆ ಸ್ಟೈಲ್ ಎಂದರೆ ನಮ್ಮ ವ್ಯಕ್ತಿತ್ವದ ಒಂದು ವಿಸ್ತೃತ ಭಾಗ.
ನಾವೇನು ಉಡುತ್ತೇವೆ? ತೊಡುತ್ತೇವೆ? ಅದು ನಮ್ಮ ವ್ಯಕ್ತಿತ್ವವನ್ನೇ ಬಿಂಬಿಸುತ್ತದೆ. ಹಾಗಾಗಿ ಆಯ್ಕೆ ಮಾಡಿಕೊಳ್ಳುವಾಗಲೂ ನಮ್ಮ ಅಭಿರುಚಿಯೇ ಅಲ್ಲಿ ಎದ್ದು ಕಾಣುತ್ತದೆ. ನನ್ನದು ಚಿಕ್ ಕ್ಯಾಶ್ಯುವಲ್ ಸ್ಟೈಲ್. ಟ್ರೆಂಡಿಯಾದ ಬಣ್ಣಗಳಿರಬೇಕು. ಆರಾಮದಾಯಕವಾಗಿರಬೇಕು. ನನ್ನ ಉತ್ಸಾಹ, ಸ್ವಾಭಿಮಾನ ಎರಡನ್ನೂ ಬಿಂಬಿಸುವಂತಿರಬೇಕು. ದೇಹಸಿರಿಗಿಂತಲೂ ವ್ಯಕ್ತಿತ್ವವನ್ನು ಹೇಳುವಂತಿರಬೇಕು ಎನ್ನುತ್ತಾರೆ ಈ ನೀಳ ಸುಂದರಿ.
ಹ್ಯಾಂಡ್ ಬ್ಯಾಗುಗಳನ್ನು ಸಂಗ್ರಹಿಸುವುದು ಇವರ ಇಷ್ಟದ ಹವ್ಯಾಸವಂತೆ. ಒಂದು ಜಂಬದ ಚೀಲದಲ್ಲಿ ಮಹಿಳೆಯರ ಲೋಕವೇ ಅಡಗಿರುತ್ತದೆ. ನಮ್ಮೆಲ್ಲ ಅಗತ್ಯಗಳನ್ನು ತನ್ನ ಮಡಿಲೊಳಗೆ ಕಾಪಿಟ್ಟುಕೊಂಡು, ಹೆಗಲೊಳಗೆ ಬೆಚ್ಚಗಿರುವ ಈ ಸಂಗಾತಿಯೆಂದರೆ ಅತಿ ಪ್ರೀತಿ ಎನ್ನುವುದು ಅವರ ಒಕ್ಕಣೆ.
ಬಿಡುಗಡೆಯಾಗಲಿರುವ ‘ಬಾಂಬೆ ವೆಲ್ವೆಟ್’ ಚಿತ್ರದ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ‘ಜಾತಾ ಕಹಾಂ ಹೈ ದೀವಾನೆ’ ಹಾಡು ಇಷ್ಟವಾಗಿದೆಯಂತೆ. 1956ರಲ್ಲಿ ಬಿಡುಗಡೆಯಾದ ‘ಸಿಐಡಿ’ ಚಿತ್ರದ ಈ ಹಾಡನ್ನು ಗೀತಾ ದತ್ ಹಾಡಿದ್ದರು. ದೇವಾನಂದ್ ಜೊತೆಗೆ ವಹೀದಾ ರೆಹಮಾನ್ ನಟಿಸಿದ್ದರು. ಅದೇ ಹಾಡಿಗೆ ಸಮಕಾಲೀನ ಸ್ಪರ್ಶ ನೀಡುವಂತೆ ‘ಬಾಂಬೆ ವೆಲ್ವೆಟ್’ನಲ್ಲಿ ಚಿತ್ರೀಕರಿಸಲಾಗಿದೆ.
ರಣಬೀರ್ ಕಪೂರ್ ಜೊತೆಗೆ ಕರಣ್ ಜೋಹರ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಅನುಷ್ಕಾ ಈ ಚಿತ್ರದ ಬಿಡುಗಡೆಗೆ ಉತ್ಸಾಹದಿಂದ ಎದುರು ನೋಡುತ್ತಿದ್ದರೆ ಕರಣ್ ಜೋಹರ್‌ಗೆ ನರ್ವಸ್ ಆಗುತ್ತಿದೆ’ಯಂದೂ ಹೇಳುತ್ತಾರೆ ಅವರು. ‘ಇನ್ನು ಈ ಚಿತ್ರದ ನಂತರ ಕರಣ್ ಜೋಹರ್ ನಿರ್ದೇಶನದಲ್ಲಿ ಐಶ್ವರ್ಯ ರೈ ಜೊತೆಗೆ ‘ಯೇ ದಿಲ್ ಹೈ ಮುಷ್ಕಿಲ್’ ಚಿತ್ರೀಕರಣ ಆರಂಭವಾಗಲಿದೆ. ಅದಕ್ಕಾಗಿ ಉತ್ಸಾಹದಿಂದ ಎದಿರುನೋಡುತ್ತಿದ್ದೇನೆ’ ಎನ್ನುತ್ತಾರೆ ಅನುಷ್ಕಾ.