ವೇಲೂರು: 350 ಅಡಿ ಆಳವಿರುವ ಕೊಳವೆ ಬಾವಿಗೆ ಬಿದ್ದಿದ್ದ ಎರಡೂವರೆ ವರ್ಷದ ಮಗುವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಯಿತಾದರೂ, ಮಗು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿರುವ ಘಟನೆ ಭಾನುವಾರ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ವೇಲೂರು ಜಿಲ್ಲೆಯ ಆರ್ಕಾಟ್ ತಾಲೂಕಿನ ಕೂರಾಂಪಾಡಿ ಗ್ರಾಮದಲ್ಲಿ ಬೆಳಗ್ಗೆ 9.30ರ ಸುಮಾರಿನಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ತಮಿಳರಸನ್ 350 ಅಡಿ ಬಾವಿಯಲ್ಲಿ 28ನೇ ಅಡಿಯಲ್ಲಿ ಸಿಲುಕಿದ್ದನು.
ಕುತ್ತಿ ಪೂಂಗವನಂ ಮತ್ತು ಗೀತಾ ದಂಪತಿ ಪುತ್ರ ಬಾಲಕ ತಮಿಳರಸನ್ ಗೆ ಆಕ್ಸಿಜನ್ ಪೂರೈಸಿ, ಸತತ 9 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬಾಲಕನ ಜೀವಂತ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎಂದು ಮೂಲಗಳು ತಿಳಿಸಿವೆ.