-ಪ್ರಕಾಶ ಭಟ್ ಕರ್ಕಿ
ಕುಮಟಾ ಈರುಳ್ಳಿ, ಸ್ವಾದಿಷ್ಟ ರುಚಿಯ ಅಪರೂಪದ ತಳಿ. ಅಪಾರ ಮಾನವಶ್ರಮ ಬೇಡುವ ಈ ಬೆಳೆಯನ್ನು ಉತ್ತರಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ವನ್ನಳ್ಳಿ, ಹಂದಿಗೋಣ, ಅಳ್ವೆಕೋಡಿ ಮತ್ತು ಭಟ್ಕಳದ ತೆಂಗಿನಗುಂಡಿ ಪ್ರದೇಶದಲ್ಲಿ ಬೆಳೆಯುತ್ತಾರೆ. ವಾರ್ಷಿಕ 30-50 ಸಾವಿರ ಟನ್ ಉತ್ಪಾದನೆಯಿದೆ.
ಪ್ರತಿವರ್ಷ, ‘ಹಾವುಸುಳಿ’ ರೋಗದಿಂದಾಗಿ ಶೇ 30ರಷ್ಟು ಇಳುವರಿ ನಷ್ಟವಾಗುತ್ತಿದೆ. ಈ ವರ್ಷವಂತೂ ನಾನಾ ಕಾರಣಗಳಿಗಾಗಿ ಶೇ 40ರಷ್ಟು ಇಳುವರಿ ಕಡಿಮೆಯಾಗಿದೆ. ಹಾಗಾಗಿಯೇ ಬೆಲೆಯಲ್ಲೂ ಏರಿಕೆಯಿದೆ (ಕೆ.ಜಿ ಒಂದಕ್ಕೆ ರೂ 25-28).
ಸಸಿಮಡಿಯ ಹಂತದಲ್ಲೇ ಬರುವ ಈ ರೋಗ ಆರಂಭದಲ್ಲೇ ರೈತರನ್ನು ಕಂಗಾಲು ಮಾಡುತ್ತದೆ. ‘ಇದು ಕೊಲ್ಲೆಟೊಟ್ರೈಕಮ್ ಮತ್ತು ಫ್ಲಯುಸೆರಿಯಮ್ ನಂಥ ಶಿಲೀಂಧ್ರದಿಂದ, ನೆಮೆಟೋಡಗಳಿಂದ ಮತ್ತು ಮಣ್ಣಿನ ಪೋಷಕಾಂಶಗಳ ಕೊರತೆಯಿಂದ ಬರುತ್ತದೆ’ ಎನ್ನುತ್ತಾರೆ ಸಸ್ಯರೋಗ ತಜ್ಞ ಡಾ. ಗುರುದತ್ ಹೆಗಡೆ.
ರೋಗ ಬಂದಾಗ ಗಡ್ಡೆಯಿಂದ ಮೇಲೇಳುವ ಕಾಂಡದ ಭಾಗ ಕೊಳೆಯುತ್ತ ಹಾವಿನಂತೇ ತಿರುಚಿ ಕೊಳ್ಳುತ್ತದೆ. ಮೂಲತಃ ಬೀಜಗಳಿಂದ ಹುಟ್ಟುವ ಈ ರೋಗ ನೀರಾವರಿಯಿಂದ ಮತ್ತು ಒದ್ದೆ ಮಣ್ಣಿನಲ್ಲಿ ವೇಗವಾಗಿ ಹರಡುತ್ತದೆ. ಕ್ರಮೇಣ ಗಡ್ಡೆಗಳು ಕೊಳೆತು ಎಲೆಗಳು ಒಣಗಿ ಬೆಳೆ ನಷ್ಟವಾಗುತ್ತದೆ.
ಡಾ. ಗುರುದತ್ ಹೆಗಡೆ, ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ಸಸ್ಯರೋಗ ವಿಜ್ಞಾನಿ. ಅವರ ನೇತೃತ್ವದಲ್ಲಿ 2011-12ರಲ್ಲಿ ಹಾವುಸುಳಿ ರೋಗದ ನಿರ್ವಹಣೆಯ ಅಧ್ಯಯನ ನಡೆಯಿತು. ಇದು ರೈತರ ಹೊಲಗಳಲ್ಲೇ ನಡೆದಿದ್ದು ವಿಶೇಷ. ಈ ಪ್ರಯೋಗಗಳು ಹಲವಾರು ಪರಿಹಾರಗಳನ್ನು ಸೂಚಿಸಿವೆ.
ಪರಿಹಾರ ಇದು
‘ಹಾವುಸುಳಿ’ ಮುಕ್ತ ಉತ್ತಮ ಬೆಳೆ ಪಡೆಯಲು ಮೂರು ಮುಖ್ಯ ಅಂಶಗಳನ್ನು ಗುರುತಿಸಲಾಗಿದೆ. ಮೊದಲನೆಯದು ಹಾಗೂ ಅತಿ ಮುಖ್ಯವಾದುದು ಜೈವಿಕ ಶಿಲೀಂಧ್ರನಾಶಕಗಳಿಂದ ಬೀಜೋಪಚಾರ ಮತ್ತು ನಾಟಿ ಮಾಡಲು ಸಿದ್ಧವಾದ ಸಸಿಗಳ ಉಪಚಾರ. ಎರಡು, ಜೈವಿಕ ಗೊಬ್ಬರ ಬಳಸಿ ಮಣ್ಣಿನ ಉಪಚಾರ. ಮೂರು, ಬೆಳೆಗೆ ಸೂಕ್ಷ್ಮ ಪೋಷಕಾಂಶಗಳ ಮತ್ತು ಕೀಟನಾಶಕದ (ಅವಶ್ಯಕತೆಯಿದ್ದರೆ) ಸಿಂಪಡಣೆ. ಈ ಬೆಳೆ ಕರಾವಳಿಯ ಮರಳು ಮಿಶ್ರಿತ ಮಣ್ಣಿನಲ್ಲಿ, ಭತ್ತದ ಬೆಳೆಯ ನಂತರ ಅದೇ ಜಾಗದಲ್ಲಿ ಬೆಳೆಯಲಾಗುತ್ತದೆ. ‘ಭತ್ತಕ್ಕೆ ಸಾಮಾನ್ಯವಾಗಿ ಬರುವಂಥ ನೆಮೆಟೊಡ್ ರೋಗಾಣುಗಳು ಈರುಳ್ಳಿಗೂ ಬರುತ್ತವೆ. ಹಾಗಾಗಿ ಬೆಳೆ ನಾಟಿಗೆ ಮುನ್ನ ಮಣ್ಣಿನ ಆರೈಕೆಯೂ ಮುಖ್ಯ’ ಎನ್ನುತ್ತಾರೆ ಡಾ. ಸುರೇಶ ಪಾಟಿಲ.
ವನ್ನಳ್ಳಿಯ ನಾಗೇಶ ನಾಯ್ಕ ವಿಜ್ಞಾನಿಗಳ ಸಲಹೆ ಯಂತೆ ಕೃಷಿ ಮಾಡಿ 16 ಗುಂಟೆಯಲ್ಲಿ 36-36 ಕ್ವಿಂಟಾಲ್ ಪಡೆದಿದ್ದಾರೆ. ‘ಇಳುವರಿಯಲ್ಲಿ ಸ್ವಲ್ಪ ಏರಿಕೆಯಾಗಿದೆ, ಬೆಳೆ ಹಾವು ಸುಳಿಯಿಂದ ಸಂಪೂರ್ಣ ಬಚಾವ್ ಆಗಿದೆ’ ಅನ್ನುತ್ತಾರೆ ಅವರು.
ನಾಯ್ಕ ಅವರು ಬೀಜವನ್ನು ಬಿತ್ತನೆಗೆ ಮೊದಲು ಟ್ರೈಕೊಡರ್ಮಾ ಹುಡಿಯಿಂದ ( ಪ್ರತಿ ಕಿಲೊ ಬೀಜಕ್ಕೆ 5 ಗ್ರಾಂ) ಉಪಚರಿಸಿ, ಒಂದು ದಿನ ಕಾದು ಬಿತ್ತಿದ್ದಾರೆ. ಸಸಿಮಡಿಗೆ ಮತ್ತು ಗದ್ದೆಗೆ ಬಿತ್ತನೆಗೆ ಮೊದಲೇ ಬೇವಿನ ಹಿಂಡಿ (ಗುಂಟೆಗೆ 10 ಕೆ.ಜಿಯಷ್ಟು) ಮಿಶ್ರಣ ಮಾಡಿದ್ದಾರೆ. ಸೆಗಣಿ ಗೊಬ್ಬರ ಹಾಕಿದ್ದಾರೆ.
ಸಸಿಮಡಿಯಿಂದ 25-30 ದಿನಗಳ ಸಸಿ ತೆಗೆದು, ಶಿಲೀಂಧ್ರನಾಶಕ ಸುಡೊಮೊನಾಸ್ ಫ್ಲಲೊರೆಸೆನ್ಸ್ ದ್ರಾವಣದಲ್ಲಿ (ಪ್ರತಿ ಲೀಟರ್‌ಗೆ 10ಗ್ರಾಂ) ಅದ್ದಿ ನಾಟಿ ಮಾಡಿದ್ದಾರೆ. ಸಸಿ ಬೆಳೆಯುವ ಹಂತದಲ್ಲಿ ಎರೆ ಗೊಬ್ಬರ ವನ್ನೂ ನೀಡಿದ್ದಾರೆ. ಪೋಷಕಾಂಶದ ಸಿಂಪಡಣೆ ಮಾಡಿದ್ದಾರೆ. ಹನುಮಂತ ನಾಯ್ಕ ಕುಮಟಾ ಸಮೀಪದ ಕಡ್ಲೆ ಗ್ರಾಮದವರು.ಮೂರು ಗುಂಟೆಯಲ್ಲಿ ಎಂಟು ಕ್ವಿಂಟಾಲ್ ಇಳುವರಿ. ಪ್ರಯೋಗದಲ್ಲಿ ಪಾಲ್ಗೊಂಡಿದ್ದ ಇವರೂ ರೋಗರಹಿತ ಬೆಳೆ ಪಡೆಯು ವಲ್ಲಿ ಗೆದ್ದಿದ್ದರು. ಈರುಳ್ಳಿಗೆ ಮಾಡಿದ ಬೀಜೋಪಚಾರ ಮತ್ತು ಬೇವಿನಹಿಂಡಿ ಉಪಚಾರಗಳನ್ನು ಇತರ ತರಕಾರಿ ಬೆಳೆಗಳಿಗೂ ವಿಸ್ತರಿಸಿದೆ. ಒಳ್ಳೆ ಪರಿಣಾಮ ಕಂಡಿದೆ ಎಂಬ ಸಂತಸ ಅವರಿಗೆ.
ಬೆಳವಣಿಗೆ ಹಂತದಲ್ಲಿ ಮಲ್ಟಿ ಕೆ (ಪೊಟಾಷಿಯಂ ನೈಟ್ರೇಟ್) ಮತ್ತು ಬೋರಾನ್ ಪೋಷಕಾಂಶ ಸಿಂಪ ಡಣೆ ರೋಗನಿರೊಧಕ ಶಕ್ತಿ ಬೆಳೆಸುತ್ತದೆ. ಗಡ್ಡೆಗಳಿಗೂ ಆಕರ್ಷಕ ಬಣ್ಣ ಬರುತ್ತದೆ ಎನ್ನುತ್ತಾರೆ ಡಾ. ಹೆಗಡೆ.
ಸಾಮಾಜಿಕ ಸಮಸ್ಯೆ
ಸುಧಾರಿತ ಕ್ರಮದಲ್ಲಿ ಬೇಸಾಯ ಮಾಡಿದ ಹಲವರಿಗೆ ಒಳ್ಳೆಯ ಬೆಳೆ ಬಂದಿದೆ. ಹಾಗೆಂದು ಅವೆಲ್ಲವೂ ಲಾಭವಾಗಿ ಪರಿವರ್ತನೆಗೊಂಡಿಲ್ಲ. ಇಲ್ಲಿ ‘ಬೆಳೆ’ ಮತ್ತು ‘ಮಾರಾಟ ಬೆಲೆ’ಗಳ ನಡುವೆ ಹಲವಾರು ಅಡೆತಡೆಗಳಿವೆ. ಬೆಳೆ ಮಾರುವ ಹಂತದಲ್ಲಿ ಆಂತರಿಕ ಸ್ಪರ್ಧೆ, ಬೆಳೆಗೆ ಬೆಲೆ ಸಿಗದೇ ಹೋದಿತೆಂಬ ಭಯ, ತಕ್ಷಣ ಬೆಳೆ ಮಾರಲೇಬೇಕಾದ ಆರ್ಥಿಕ ಅನಿವಾರ್ಯತೆ, ಮುಂತಾದವು ಬೆಳೆಗಾರರು ವ್ಯಾಪಾರದ ಹಂತದಲ್ಲಿ ಸೋಲಲು ಕಾರಣವಾಗಿವೆ. ಆಶಾ ಭಾವನೆ, ಉತ್ಸಾಹ ತುಂಬಿರುವ ರೈತರು ಕೆಲವರು ಇದ್ದರೂ ಅವರನ್ನು ಅನುಸರಿಸುವವರೇ ಕಡಿಮೆ.
ಮುಂದಿನ ದಿನಗಳಲ್ಲಿ ಈ ಒಳಸುರಿಗಳನ್ನೆಲ್ಲ (ಗೊಬ್ಬರ ಹೊರತುಪಡಿಸಿ) ಎಲ್ಲಿ, ಹೇಗೆ ಪಡೆಯಬಹುದು ಎಂಬ ಚಿಂತೆ ರೈತರಲ್ಲಿದೆ. ‘ರೈತರಿಗೆ ಬೇಕಾದ ಅರಿವನ್ನೂ, ಒಳಸುರಿಗಳನ್ನೂ ಒದಗಿಸುವಂತೆ ಸ್ಥಳೀಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ’ ಎನ್ನುತ್ತಾರೆ ಡಾ. ಗುರುದತ್.
‘ಸ್ಥಳೀಯ ಅಧಿಕಾರಿಗಳಿಂದ ಯಾವುದೇ ಸಹಾಯ ಸಿಕ್ಕುವುದಿಲ್ಲ, ನಮ್ಮನ್ನು ಕೇಳುವವರೂ ಯಾರೂ ಇಲ್ಲ’ ಎಂದು ದುಃಖ ತೋಡಿಕೊಳ್ಳುತ್ತಾರೆ ರೈತರು. ಬೆಳೆ ವಿಮೆ ಸೌಲಭ್ಯ ಕೂಡ ಈ ಬೆಳೆಗೆ ಸಿಗಲಿಕ್ಕಿಲ್ಲ. ಏಕೆಂದರೆ ಗ್ರಾಮದಲ್ಲಿ ಬೆಳೆಯುವ ನಿಯಮಿತ ಬೆಳೆಗಳ ದಾಖಲೆಯಲ್ಲಿ ಇದರ ಹೆಸರಿಲ್ಲ. ಸ್ಥಳೀಯ ಅಧಿಕಾರಿಗಳು, ಪಂಚಾಯತಿ ಈ ನಿಟ್ಟಿನಲ್ಲಿ ರೈತರ ಅಗತ್ಯಗಳನ್ನು ಅರಿತು ಸ್ಪಂದಿಸಬೇಕಿದೆ. ಕುಮಟಾ ಈರುಳ್ಳಿಯಂಥ ಅಪರೂಪದ ತಳಿ ಹಾಗೂ ರೈತರ ಹಿತ ಎರಡೂ ಮುಖ್ಯ.