ಮನೋರಂಜನೆ

ಆಟದ ಪ್ರೀತಿ; ವಯಸ್ಸು, ಮನಸ್ಸು, ಯುವತ್ವ

Pinterest LinkedIn Tumblr

kbec09sport

-ವಿಶಾಖ ಎನ್‌.
ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಹತ್ತು ವರ್ಷಗಳ ಹಿಂದೆ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ನಡೆದಾಗ ತುಂಬುಕೆನ್ನೆಯ ದಪ್ಪಗಿನ ಕಪ್ಪು ಮಹಿಳೆ ಒಂದು ಜೊತೆ ಗ್ಲೌಸ್ ಹಿಡಿದು ಮೈದಾನಕ್ಕೆ ಬಂದಳು. ಆಗ ಚಪ್ಪಾಳೆ ತಟ್ಟಿದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇತ್ತು. ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ನಾಯಕಿ ಆಗಿದ್ದ ಅವಳನ್ನು ಆಕೆಯ ಆಪ್ತ ವಲಯದವರು ಬೆರಗುಗಣ್ಣಿನಿಂದ ನೋಡಿದ್ದರು. ಅವಳ ಹೆಸರು ಸ್ಟೆಫಾನಿ ಪವರ್; ವಿಕೆಟ್ ಕೀಪರ್ ಹಾಗೂ ಕ್ಯಾಪ್ಟನ್.

ಶಾಲೆಯಲ್ಲಿ ವರ್ಷಗಟ್ಟಲೆ ಪಾಠ ಹೇಳಿದ್ದ ಶಿಕ್ಷಕಿ ಆಕೆ. ವಿವಾಹ ವಿಚ್ಛೇದನದ ಕಷ್ಟಗಳನ್ನು ನುಂಗಿಕೊಂಡು ಬದುಕಿದ್ದ ಅವಳಿಗೆ ಮನಃತೃಪ್ತಿ ಕೊಟ್ಟಿದ್ದು ಆಟ. 47 ವರ್ಷ ತುಂಬಿದ ಮೇಲೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳುವ ಮಟ್ಟಕ್ಕೆ ಸ್ಟೆಫಾನಿ ಬೆಳೆದದ್ದು ಆಕಸ್ಮಿಕವಷ್ಟೆ. ಆದರೆ, ಅವಳಿಗಿದ್ದ ಆಟದ ಪ್ರೀತಿ ವಯಸ್ಸನ್ನು ಮರೆಮಾಚಿತು.

‘ಕ್ರಿಕೆಟ್ ನನಗೆ ಹಲವು ಮರೆಯಲಾಗದ ಕ್ಷಣಗಳನ್ನು ಕಟ್ಟಿಕೊಟ್ಟಿದೆ’ ಎಂದು ಅವಳು ಹೇಳುವ ಹೊತ್ತಿಗೆ ಅವಳ ಸ್ಫೂರ್ತಿಯಿಂದಲೇ ಇನ್ನಷ್ಟು ಹೆಣ್ಣುಮಕ್ಕಳು ವಿಂಡೀಸ್‌ನಲ್ಲಿ ಕ್ರಿಕೆಟ್‌ಮುಖಿಗಳಾಗಿದ್ದರು. ಯಾಕೆಂದರೆ, ಮೂರು ವಿಶ್ವಕಪ್‌ ಪಂದ್ಯಗಳಲ್ಲಿ ಆಡಿದ ಅನುಭವ ಅವಳ ಬೆನ್ನಿಗಿತ್ತು. ಆಟದ ವಿಷಯಕ್ಕೆ ಬಂದಾಗ ವಯಸ್ಸು ತುಂಬಾ ಮುಖ್ಯವಾಗುತ್ತದೆ. ಯುವಶಕ್ತಿಯ ಎದುರು ಅನುಭವ ಮುಕುಟ ಹೊತ್ತು ನಿಂತವರು ಕ್ಷಣ ಕ್ಷಣವೂ ಪರೀಕ್ಷೆಗೆ ಒಳಗಾಗುತ್ತಿರುತ್ತಾರೆ.

ಈ ಸಲ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ವಿಶ್ವಕಪ್ ಕ್ರಿಕೆಟ್ ನಡೆದಾಗ ಅನೇಕ ಮಾಧ್ಯಮಗಳಲ್ಲಿ ಅನುಭವ, ಯುವಶಕ್ತಿ ಕುರಿತ ಚರ್ಚಾರೂಪದ ಬರಹಗಳು ಪ್ರಕಟಗೊಂಡವು. ಭಾರತ ಕ್ರಿಕೆಟ್ ತಂಡ ಸೆಮಿಫೈನಲ್‌ವರೆಗೆ ಗೆಲುವಿನ ಹಳಿಯ ಮೇಲೆಯೇ ಇದ್ದಾಗ ಯುವಶಕ್ತಿಯನ್ನು ಕೊಂಡಾಡಿದ ಅನೇಕರು, ಆಸ್ಟ್ರೇಲಿಯಾ ಎದುರು ನಾಲ್ಕರ ಘಟ್ಟದಲ್ಲಿ ಸೋತಮೇಲೆ ಅನುಭವಿಗಳ ಗತವೈಭವವನ್ನು ಸ್ಮರಿಸಲಾರಂಭಿಸಿದರು. ‘ಎಕ್ಸ್‌ಪೀರಿಯೆನ್ಸ್ ಮೇಕ್ಸ್ ಎ ಟೀಮ್ ಪರ್ಫೆಕ್ಟ್’ ಎಂದು ಸುನಿಲ್ ಗಾವಸ್ಕರ್ ತರಹದವರು ಹೇಳಲು ಸ್ವಾನುಭವವೇ ಕಾರಣವಿರಬೇಕು.

ಎಲ್ಲಾ ಆಟಗಳಲ್ಲೂ ವಯಸ್ಸು ಮೂವತ್ತು ದಾಟಿದ ಮೇಲೆ ಮಿಂಚುವುದು ಬಲು ಕಷ್ಟ. ಟೆನಿಸ್, ಅಥ್ಲೆಟಿಕ್ಸ್‌ನಲ್ಲಿ ಸ್ನಾಯುಗಳಿಗೆ ವಯಸ್ಸಾದಷ್ಟೂ ಗೆಲುವು ದೂರವಾಗುತ್ತಾ ಹೋಗುತ್ತದೆ. ಯುವಶಕ್ತಿಯ ಸರ್ವ್‌ಗಳು, ಬ್ಯಾಕ್‌ಹ್ಯಾಂಡ್ ಸ್ಕ್ರೋಕ್‌ಗಳಿಗೆ ಇರುವ ವೇಗ ಅನುಭವಿಗಳ ಲಯದ ಆಟಕ್ಕೆ ಇರಲು ಸಾಧ್ಯವಿಲ್ಲ. ಹಾಗಿದ್ದೂ ಅನುಭವಿಗಳು ಆಟದ ಸೂಕ್ಷ್ಮಗಳಿಂದಲೇ ಯುವಕರಿಗೆ ನಿರಂತರವಾಗಿ ಪಾಠ ಹೇಳುತ್ತಾ ಹೋಗುತ್ತಾರಲ್ಲ; ಅದು ಕ್ರೀಡೆಯ ಮಜದ ವಿಷಯ.

ಚಿಕ್ಕ ಹುಡುಗ ಕಾರ್ಲ್‌ಸನ್ ಎದುರು ವಿಶ್ವನಾಥನ್ ಆನಂದ್ ಚೆಸ್ ಆಡುವ ಪ್ರಕ್ರಿಯೆಯೇ ರೋಚಕ. ಕಾರ್ಲ್‌ಸನ್ ಪದೇ ಪದೇ ತನ್ನ ಯುವ ಮನೋಬಲದಿಂದ ಗೆಲ್ಲುತ್ತಾನೆ ಎನ್ನುವುದು ಬೇರೆ ಮಾತು. ಚೆಸ್ ಬೋರ್ಡ್ ಇಟ್ಟುಕೊಂಡು ಎದುರು ಬದಿರಾದಾಗ, ಇಬ್ಬರ ಮನಸ್ಸಿನಲ್ಲೂ ನಡೆಯುವ ರಾಸಾಯನಿಕ ಕ್ರಿಯೆ, ಪರಸ್ಪರ ದಾಟಿಸಿಕೊಳ್ಳುವ ಪಂದ್ಯದ ರಸಾನುಭವಗಳು ಮಜವಾದದ್ದು. ಆಸ್ಟ್ರೇಲಿಯಾದ ಈಜುಗಾರ ಇಯಾನ್ ಥೋರ್ಪ್ ದಾಖಲೆಯನ್ನು ಅಳಿಸಿ ಅಮೆರಿಕದ ಮೈಕಲ್ ಫೆಲ್ಪ್ಸ್ ಬೀಗಿದಾಗ ಇಬ್ಬರ ನಡುವೆ ನಡೆದದ್ದು ಪ್ರೀತಿಯ ಸಂವಾದ.

ಪೀಟ್ ಸಾಂಪ್ರಾಸ್ ಮೆಚ್ಚಿ ತಬ್ಬಿಕೊಂಡ ರೋಜರ್ ಫೆಡರರ್, ಫೆಡರರ್ ಮೂಗು ತಿಕ್ಕಿಕೊಳ್ಳುವಂತೆ ಮಾಡಿದ ರಫೆಲ್ ನಡಾಲ್, ನಡಾಲ್ ಹೈರಾಣಾಗಿ ಅಂಗಾತ ಮಲಗಿ ಚಿಂತಾಕ್ರಾಂತನಾಗುವಂತೆ ಮಾಡಿದ ಜೋಕೋವಿಕ್– ಈ ಸರಪಳಿಯಲ್ಲಿ ಯುವಶಕ್ತಿಗೂ ಮೀರಿದ ಏನೋ ಒಂದು ಇದೆ ಅಲ್ಲವೇ? ಮೂವತ್ತೇಳು ವಯಸ್ಸು ದಾಟಿದ ಶ್ರೀಲಂಕಾದ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕಾರ ಒಂದರ ಹಿಂದೆ ಒಂದರಂತೆ ಈ ವಿಶ್ವಕಪ್‌ನಲ್ಲಿ ಶತಕಗಳನ್ನು ಹೊಡೆದಾಗ ಅವನಿಗಿಂತ ಸಾಕಷ್ಟು ಚಿಕ್ಕ ವಯಸ್ಸಿನವನಾದ, ನಾಯಕ ಆಂಜೆಲೊ ಮ್ಯಾಥ್ಯೂಸ್ ಕಲಿತ ಪಾಠಗಳು ಎಲ್ಲರಿಗೂ ಕಾಣುವುದಿಲ್ಲ.

ಡೀಪ್ ಫೈನ್‌ಲೆಗ್‌ನಲ್ಲೋ, ಥರ್ಡ್‌ಮನ್ ಬೌಂಡರಿ ಬಳಿಯೋ ನಿಂತು ಪದೇ ಪದೇ ಬರುವ ಚೆಂಡನ್ನು ವಿಕೆಟ್ ಕೀಪರ್‌ನತ್ತ ಎಸೆಯುವ ನ್ಯೂಜಿಲೆಂಡ್‌ನ ಆಲ್‌ರೌಂಡರ್ ಡೇನಿಯೆಲ್ ವೆಟೋರಿ ಆಟಪ್ರೀತಿ ಎಂಥದಲ್ಲವೇ? ಅವರು ವಿಶ್ವಕಪ್‌ ಕ್ವಾರ್ಟರ್‌ಫೈನಲ್‌ನಲ್ಲಿ ಚಂಗನೆ ಜಿಗಿದು, ಇನ್ನೇನು ಸಿಕ್ಸರ್‌ಗೆ ಹೋಗಿಯೇಬಿಟ್ಟತು ಎನ್ನುವಂತಿದ್ದ ಚೆಂಡನ್ನು ಡೀಪ್‌ ಪಾಯಿಂಟ್‌ನಲ್ಲಿ  ಕ್ಯಾಚ್ ಹಿಡಿದ ರಸ ಗಳಿಗೆ (ಅದು ಮರ್ಲಾನ್‌ ಸ್ಯಾಮ್ಯುಯಲ್ಸ್‌ ವಿಕೆಟ್‌) ಅದೆಷ್ಟೋ ಹುಡುಗರಿಗೆ ಪಾಠವಾಗಿರಲಿಕ್ಕೆ ಸಾಕು.

ಮೂವತ್ತೈದು ವಯಸ್ಸು ದಾಟಿದ, ವೆಸ್ಟ್‌ಇಂಡೀಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕುಂಟುಗಾಲಿಕ್ಕಿಕೊಂಡೇ ದ್ವಿಶತಕ ದಾಖಲಿಸಿದ್ದೂ ಇದೇ ವಿಶ್ವಕಪ್‌ನಲ್ಲಿ. ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಗೆದ್ದು ಬೀಗಿದಾಗ ನಕ್ಕವರ ಗುಂಪಿನಲ್ಲಿ ಎದ್ದುಕಂಡ ಬ್ರಾಡ್ ಹದಿನ್ ಮೂವತ್ತೇಳೂವರೆ ವಯಸ್ಸಿನ ಆಟಗಾರ. ಈ ವಯಸ್ಸಿನಲ್ಲಿ ವಿಕೆಟ್ ಕೀಪಿಂಗ್ ಹೊಣೆಗಾರಿಕೆಯನ್ನು ನಿರ್ವಹಿಸುವಷ್ಟು ಸಮರ್ಥವಾಗಿ ಸೊಂಟವನ್ನು ಇಟ್ಟುಕೊಂಡಿರುವ ಅವನಿಗೆ ಕೋಚ್ ಶಹಬ್ಬಾಸ್‌ಗಿರಿ ಕೊಟ್ಟ.

ನೆಟ್ಸ್‌ನಲ್ಲಿ ಶೇನ್ ವಾರ್ನ್ ಒಮ್ಮೆ ಬೌಲಿಂಗ್ ಮಾಡಿ, ಆ ಎಸೆತದಲ್ಲಿ ಹದಿನ್ ಔಟಾದಾಗ ಓಲ್ಡೀಸ್ ಲವ್ ಎಂದು ನಕ್ಕಿದ್ದನ್ನು ಕಾಮೆಂಟೇಟರ್‌ಗಳು ನೆನಪಿಸಿಕೊಂಡು ನಕ್ಕರು. ಪಿಳಿಪಿಳಿ ಕಣ್ಣು ಮಿಟುಕಿಸುತ್ತಾ ಪಂದ್ಯದ ಪ್ಲಾನಿಂಗ್ ಹೇಳಿಕೊಂಡು, ಪಾಕಿಸ್ತಾನದ ಅನನುಭವಿಗಳನ್ನೆಲ್ಲಾ ಕಟ್ಟಿಕೊಂಡು ಕಷ್ಟಪಟ್ಟು ಪದೇ ಪದೇ ಏದುಸಿರು ಹೊರಸೂಸುತ್ತಾ ಆಡಿದ ಮಿಸ್ಬಾ ಉಲ್ ಹಕ್ ವಯಸ್ಸು ಇನ್ನೇನು ನಲವತ್ತೊಂದಕ್ಕೆ  ಸಮೀಪಿಸಿದೆ ಎಂದು ಅನೇಕರಿಗೆ ಗೊತ್ತಾದದ್ದು ಅವನು ನಿವೃತ್ತಿಯಾದಾಗ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು, ಒತ್ತಡದ ನೊಗವನ್ನು ಹೊತ್ತು ಆಡಿದ ಅವನಿಗೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಒಂದು ಶತಕ ಗಳಿಸಲು ಆಗದೇಹೋದದ್ದು ದುರದೃಷ್ಟಕರ. ಇದನ್ನು ಅವನ ಆಟ ಎಷ್ಟು ನಿಸ್ವಾರ್ಥದಿಂದ ಕೂಡಿತ್ತು ಎಂದೂ ಅರ್ಥೈಸಬಹುದಲ್ಲವೇ? ಮೂವತ್ತು ದಾಟಿದ ಕ್ರಿಕೆಟಿಗರ ಪಟ್ಟಿ ಇನ್ನೂ ಉದ್ದವಿದೆ. ವಿಂಡೀಸ್‌ನ ಶಿವನಾರಾಯಣ ಚಂದ್ರಪಾಲ್ ಕೂಡ 40 ದಾಟಿದವನು.

ಶ್ರೀಲಂಕಾ ಕ್ರಿಕೆಟ್‌ನಲ್ಲಿ ಕುಮಾರ ಸಂಗಕ್ಕಾರನಷ್ಟೇ ಜನಪ್ರಿಯನಾದ, ಲೇಟ್ ಕಟ್ ನಿಸ್ಸೀಮ ಮಾಹೇಲ ಜಯವರ್ಧನೆ ವಯಸ್ಸೂ 37. ಅವರಿಬ್ಬರಿಗಿಂತ ದಾಳಿಕೋರನಂತೆ ಆಡುವ ತಿಲಕರತ್ನೆ ದಿಲ್ಶಾನ್ ವಯಸ್ಸಿನಲ್ಲಿ ಇನ್ನೂ ದೊಡ್ಡವನು ಎಂದರೆ ನಂಬುವುದು ಕಷ್ಟವಲ್ಲವೇ? ದಿಲ್ಶಾನ್ ವಯಸ್ಸೀಗ 38. ಅವನ ಫೀಲ್ಡಿಂಗ್ ಚುರುಕುತನ ನೋಡಿದರೆ ಯುವಕರೂ ನಾಚಿಯಾರು. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಈ ಸಲ ಪರಿಣಾಮಕಾರಿ ಎನಿಸಿಕೊಳ್ಳಲಿಲ್ಲ. ಅದೇ ತಂಡದ ಸ್ಪಿನ್ನರ್ ಇಮ್ರಾನ್ ತಾಹಿರ್ ಈಗೀಗ ಆ ತಂಡದಲ್ಲಿ ಜನಪ್ರಿಯನಾಗುತ್ತಿದ್ದಾನೆ.

ಅವನಿಗೆ ಈಗಾಗಲೇ 35 ವರ್ಷ ತುಂಬಿದೆ. ಯುಎಇ ತಂಡದ ನಾಯಕ ಮೊಹಮ್ಮದ್ ತಾಕಿರ್‌ಗೆ 42 ವರ್ಷ ತುಂಬಿತ್ತು. ಅವನಿಗಿಂತ ಮುಂಚೆ ಅದೇ ತಂಡದ ನಾಯಕನಾಗಿದ್ದ ಖುರ್ರಂ ಖಾನ್ 43ರ ವಯಸ್ಸಿನಲ್ಲ್ಲಿಯೂ ಆಡುವುದನ್ನು ಬಿಟ್ಟಿಲ್ಲ. ಇಂಗ್ಲೆಂಡ್, ವಿಂಡೀಸ್‌ನಂಥ ತಂಡಗಳಿಗೂ ನೀರಿಳಿಸಿದ ಐರ್ಲೆಂಡ್‌ನ ಬ್ಯಾಟಿಂಗ್ ದೈತ್ಯ ಎಡ್‌ಜಾಯ್ಸ್‌ಗೆ ಅದಾಗಲೇ ಮೂವತ್ತಾರೂವರೆ ವರ್ಷ ಆಗಿದೆ. ಆದರೂ ಅವನು ಕ್ರೀಸ್‌ನಲ್ಲಿ ಇರುವಷ್ಟು ಹೊತ್ತು ಎದುರಾಳಿಗಳು ಪರದಾಡುವುದು ಮಾಮೂಲು.

ದಕ್ಷಿಣ ಆಫ್ರಿಕಾದ ಬೌಲರ್‌ಗಳು ಸೆಮಿಫೈನಲ್‌ನಲ್ಲಿ ಸೋತು ಮಂಡಿ ಹಿಡಿದುಕೊಳ್ಳುವಂತೆ ಮಾಡಿದ ಗ್ರ್ಯಾಂಟ್ ಎಲಿಯೆಟ್ ತನ್ನ ವಯಸ್ಸಿಗಿಂತ ತುಂಬಾ ಚಿಕ್ಕವನಂತೆ ಕಾಣುತ್ತಾನೆ. ದಟ್ಟ ಕಪ್ಪಗಿನ ಗಡ್ಡ, ಹುರಿಗಟ್ಟಿದ ಮೈಕಟ್ಟಿನ ಅವನಿಗೂ ಮೂವತ್ತಾರು ತುಂಬಿದೆ.
ಇವೆಲ್ಲಾ ಈಗಿನವರ ವಯಸ್ಸಿನ ವಿಷಯವಾಯಿತು. ಬಹಳ ಹಿಂದೆ ನೆದರ್‌ಲ್ಯಾಂಡ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಒಬ್ಬ ತನ್ನ ವಯಸ್ಸಿನ ಕಾರಣಕ್ಕೆ ಬೆಚ್ಚಿ ಬೀಳಿಸಿದ್ದ. ಅವನ ಹೆಸರು ನೋಲನ್ ಕ್ಲಾರ್ಕ್.

1995–96ರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅವನು ತನ್ನ ನಲವತ್ತೇಳೂವರೆ ವಯಸ್ಸಿನಲ್ಲಿ ಆಡಿದ್ದು ಎಷ್ಟೋ ಜನರಿಗೆ ಮರೆತುಹೋಗಿದೆ. 1992-93ರಲ್ಲಿ ಪುಣೆಯಲ್ಲಿ ಒಂದು ಟೆಸ್ಟ್ ಆಡಿದ್ದನಲ್ಲ, ಜಿಂಬಾಬ್ವೆಯ ಜಾನ್ ಟ್ರೈಕಸ್; ಅವನ ವಯಸ್ಸು ಆಗ 45 ವರ್ಷ 315 ದಿನ. ಬ್ರೆಟ್ ಲೀ, ಸ್ಟೀವ್ ವಾ, ಅಲನ್ ಬಾರ್ಡರ್, ಅಲೆಕ್ ಸ್ಟುವರ್ಟ್, ನಮ್ಮ ಅನಿಲ್ ಕುಂಬ್ಳೆ, ಅರ್ಜುನ ರಣತುಂಗ, ಮುದ್ದು ವೇಗಿ ಕರ್ಟ್ನಿ ವಾಲ್ಶ್, ಹಟಮಾರಿಯಂತೆ ಕಾಣುವ ಯೂನಿಸ್ ಖಾನ್, ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಎಲ್ಲರೂ ಮೂವತ್ತು ದಾಟಿದ ಮೇಲೂ ಆಟದ ಯೌವನದ ಬಿಸುಪಿನ ನೆನಪು ಉಳಿಸಿದವರೇ.

ಈ ಸಲದ ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಟಗಾರರ ವಯಸ್ಸಿನ ಸರಾಸರಿಯಲ್ಲಿ ದೊಡ್ಡಣ್ಣ ಎನಿಸಿಕೊಂಡದ್ದು ಯುಎಇ (32.48 ವರ್ಷ). ನಂತರದ ಸ್ಥಾನ ಶ್ರೀಲಂಕಾಗೆ (31.07). ಭಾರತದವರ ಸರಾಸರಿ ವಯಸ್ಸು (27.35) ಆಸ್ಟ್ರೇಲಿಯಾದವರಿಗಿಂತ (28.62) ಕಡಿಮೆ. ಮೂವತ್ತೇಳು ದಾಟಿದ ಮೂವರ ಅನುಭವದ ಗಟ್ಟಿತನ ಇಟ್ಟುಕೊಂಡು ಶ್ರೀಲಂಕಾ ಎಷ್ಟು ಚೆನ್ನಾಗಿ ಆಡಿತು ಎನ್ನುವುದು ಕಣ್ಣಿಗೆ ಕಟ್ಟಿದಹಾಗಿದೆ. ಹದಿನೆಂಟು ತುಂಬಿದ, ಆಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ಉಸ್ಮಾನ್ ಘನಿ ಕಣ್ಣಿಗೆ ಅವರ ದುಪ್ಪಟ್ಟು ವಯಸ್ಸಿನ ಶ್ರೀಲಂಕಾ ಆಟಗಾರರು ಹೇಗೆ ಕಂಡಾರು ಎನ್ನುವುದೂ ಮಜದ ವಿಷಯ.

ವಯಸ್ಸಿನಲ್ಲಿ ಇಷ್ಟೆಲ್ಲಾ ಹಿರಿಯರಾದವರ ಬಗೆಗೆ ಬರೆಯುವಾಗ ಅವರನ್ನು ಏಕವಚನದಲ್ಲಿ ಸಂಬೋಧಿಸಲೂ ಕಾರಣವಿದೆ. ‘ಅವನು’ ಎನ್ನುವುದು ಕ್ರೀಡಾಸ್ಫೂರ್ತಿಯ, ನಮ್ಮ ನಡುವಿನ ಒಬ್ಬನೇ ಎಂಬ ಭಾವದ ಸಂಬೋಧನೆ ಅಲ್ಲವೇ? ಮೂವತ್ತೈದು ದಾಟಿದರೂ ಇವರನ್ನು ಯುವಕರು ಎನ್ನದೇ ಇರಲು ಹೇಗೆತಾನೆ ಸಾಧ್ಯ?

Write A Comment