-ಗಣೇಶ್ ವೈದ್ಯ
‘ನೆನಪಿರಲಿ’ ಎನ್ನುತ್ತಲೇ ಕನ್ನಡ ಚಿತ್ರರಂಗದ ‘ಪಲ್ಲಕ್ಕಿ’ ಏರಿದವರು ಲವ್ಲಿ ಸ್ಟಾರ್ ಪ್ರೇಮ್. ಒಮ್ಮೆ ಬಾಡಿ ಬಿಲ್ಡ್ ಮಾಡಿ ಸಿಕ್ಸ್ ಪ್ಯಾಕ್ ತೋರಿಸಿ ಮಾಸ್ ಪ್ರೇಕ್ಷಕರಿಗೆ ಹತ್ತಿರವಾದರೆ, ಮತ್ತೊಮ್ಮೆ ಕಾಲೇಜು ಹುಡುಗನಾಗಿ ಕನಸು ಕಂಗಳ ಲಲನೆಯರ ಹೃದಯ ಕದ್ದುಬಿಡುತ್ತಾರೆ. ಈ ವಿಭಿನ್ನ ಅವತಾರ ಸಾಧ್ಯವಾಗುವುದು ಅವರ ಸಿನಿಮಾ ಮೋಹದಿಂದ. ಹೀಗೆ ತಮ್ಮ ವಿಭಿನ್ನ ಗೆಟಪ್‌ಗಳಿಂದ ಸದ್ಯ ಚಂದನವನದ ಬೇಡಿಕೆಯ ನಟರಾಗಿರುವ ಪ್ರೇಮ್ ‘ಕಾಮನಬಿಲ್ಲು’ ಜೊತೆ ಮಾತಿಗಿಳಿದಾಗ…
*‘ನೆನಪಿರಲಿ’ ಪ್ರೇಮ್ ಮರೆಯದ ಸಂಗತಿ ಯಾವುದು?
‘ನೆನಪಿರಲಿ’ ಚಿತ್ರವೇ ನನಗೆ ಮರೆಯಲಾರದ ಸಂಗತಿ. ಏಕೆಂದರೆ, ಬೆಂಗಳೂರಲ್ಲೇ ಹುಟ್ಟಿ ಬೆಳೆದು, 20–25 ವರ್ಷಗಳಿಂದ ಇಲ್ಲೇ ಇದ್ದರೂ ಬೆಂಗಳೂರು ಅರಮನೆ ನೋಡಿರಲಿಲ್ಲ. ಅದನ್ನು ನೋಡಿದ್ದು ‘ನೆನಪಿರಲಿ’ ಚಿತ್ರೀಕರಣದಲ್ಲಿ. ನಾಯಕನಾಗ್ತೀನಿ ಅಂದುಕೊಳ್ಳದಿದ್ದೋನಿಗೆ, ನಾಯಕನಾದ ಮೊದಲ ಚಿತ್ರಕ್ಕೆ ಅರಮನೆ ಮುಂದೆ ಮುಹೂರ್ತ ಆಗಿದ್ದು ನನಗೆ ಒಂದು ರೀತಿಯಲ್ಲಿ ಕನಸು.
*ಸಿನಿಮಾ ನಿಮ್ಮ ಆತ್ಮಕ್ಕೆ ಎಷ್ಟು ಹತ್ತಿರ?
ನನಗೆ ಸಿನಿಮಾ ಬಿಟ್ಟು ಬೇರೆ ಆಯ್ಕೆಗಳೇ ಇಲ್ಲ. ಅಷ್ಟು ನನ್ನ ಆತ್ಮದ ಸಂಗಾತಿ ಈ ಸಿನಿಮಾ. ನಾನು ಸ್ಫುರದ್ರೂಪಿಯೋ ಕುರೂಪಿಯೋ ಎಂದು ಯಾರೂ ಹೇಳುತ್ತಿಲ್ಲ. ಒಟ್ಟಿನಲ್ಲಿ ನನಗೆ ಬೇರೆ ಯಾರೂ ಹೆಣ್ಣು ಕೊಡಲ್ಲ ಅಂದಾಗಿದೆ. ನನಗೆ ಸಿಕ್ಕ ಹೆಣ್ಣು ಎಂದರೆ ಸಿನಿಮಾ ಮಾತ್ರ. ಅವಳು ಸೌಂದರ್ಯವತಿಯೋ ಕುರೂಪಿಯೋ ತಿಳಿದಿಲ್ಲ. ಹೇಗಿದ್ದರೂ ಅದನ್ನೇ ವರಿಸಿ, ಅದನ್ನೇ ಹೃದಯಕ್ಕೆ ಹತ್ತಿರವಾಗಿಸಿಕೊಂಡು ಅದರೊಡನೆಯೇ ಬಾಳು ಸಾಗಿಸಬೇಕು. ಅಂದರೆ ಬೇರೆ ಯಾವ ಕೆಲಸವೂ ನನಗೆ ಸಿಕ್ಕಿಲ್ಲ. ನನಗೂ ‘ಸಿನಿಮಾಂಗನೆ’ಯನ್ನು ಬಿಡಲು ಇಷ್ಟವಿಲ್ಲ.
*ನೃತ್ಯ ಇಷ್ಟವೋ ಕಷ್ಟವೋ?
ಮೊದ ಮೊದಲು ಕಷ್ಟ ಆಗ್ತಿತ್ತು. ಆದರೆ ಸತತ ಅಭ್ಯಾಸ ಮಾಡಿ ಈಗ ಇಷ್ಟವಾಗತೊಡಗಿದೆ. ಸುಮ್ಮನೇ ನೋಡುತ್ತಿದ್ದರೆ ಯಾವುದೂ ಬರಲ್ಲ. ಅದರಲ್ಲಿ ತೊಡಗಿದಾಗ ‘ಓ, ಇದು ಇಷ್ಟೇನಾ’ ಅನ್ನಿಸುತ್ತೆ. ಈಗ ಡಾನ್ಸ್ ಮಾಡದೇ ಇದ್ದರೆ ಏನೋ ಕಳೆದುಕೊಂಡ ಅನುಭವ ಆಗುತ್ತದೆ. ಅಭಿಮಾನಿಗಳು ಚೆನ್ನಾಗಿ ಕುಣಿದಿದ್ದೀರರಿ ಎಂದಾಗ ಇನ್ನೂ ಉತ್ಸಾಹ ಬರುತ್ತೆ. ಇದು ಕೂಡ ಹುಡುಗಿಗೆ ಪ್ರೇಮ ನಿವೇದನೆ ಮಾಡಿದಂತೆಯೇ. ಪ್ರಪೋಸ್ ಮಾಡಿ, ಕಾಯಿಸಿ, ಕಾಡಿಸಿ ಆಮೇಲೆ ಒಪ್ಪಿಕೊಂಡಾಗ ಸಿಗುವ ಖುಷಿ ಇದೆಯಲ್ಲ, ಅಂಥದ್ದೇ ಖುಷಿ ಇದರಲ್ಲೂ ಸಿಗುತ್ತದೆ.
*ನಿಮ್ಮ ಜೀವನದ ‘ಜಸ್ಟ್ ಮಿಸ್’ ಅನ್ನೋ ಘಟನೆ ಯಾವುದು?
ಇಲ್ಲಿ ಎರಡು ಘಟನೆಗಳನ್ನ ಹೇಳಬೇಕು. ಒಂದಿನ ತೀರಾ ಹಣದ ಕೊರತೆ ಇತ್ತು. ಬಸ್‌ನಲ್ಲಿ ಹೋಗುತ್ತಿದ್ದೆ. ಎದುರು ಕೂತಿದ್ದ ಹೆಂಗಸಿನ ಕುತ್ತಿಗೆಯಲ್ಲಿ ದಪ್ಪದೊಂದು ಚಿನ್ನದ ಸರ ಇತ್ತು. ಅದನ್ನು ಹೇಗಾದರೂ ಎಗರಿಸಿದರೆ ಕೊಂಚ ಹಣದ ತೊಂದರೆ ಕಡಿಮೆ ಆಗಬಹುದು, ಹೇಗೆ ಎತ್ತಿಕೊಳ್ಳೋದು ಅಂತ ಯೋಚಿಸುತ್ತಲೇ ನನ್ನ ಸ್ಟಾಪ್‌ನಲ್ಲಿ ಇಳಿಯೋದು ಬಿಟ್ಟು ಕೊನೇ ಸ್ಟಾಪ್‌ವರೆಗೂ ಹೋಗಿಬಿಟ್ಟಿದ್ದೆ. ಆಮೇಲೆ ಜ್ಞಾನೋದಯವಾಯಿತು, ನಾನು ಎಂಥ ಕೆಟ್ಟ ವಿಚಾರ ಮಾಡುತ್ತಿದ್ದೆ ಎಂದು. ಹಾಗೆ ಕಳ್ಳನಾಗೋದರಿಂದ ಜಸ್ಟ್ ಮಿಸ್.
ಮತ್ತೊಮ್ಮೆ, ‘ಪಲ್ಲಕ್ಕಿ’ ಚಿತ್ರೀಕರಣ ಸಂದರ್ಭದಲ್ಲಿ ರೈಲ್ವೆ ಹಳಿ ಮೇಲೆ ನಡೆದು ಹೋಗುವ ದೃಶ್ಯ. ಆ ಸಂದರ್ಭದಲ್ಲಿ ಯಾವುದೇ ರೈಲು ಬರುವುದಿಲ್ಲ ಎಂದು ಖಚಿತ ಪಡಿಸಿಕೊಂಡು ಚಿತ್ರೀಕರಣ ಆರಂಭಿಸಿದ್ದೆವು. ಆದರೆ ಹಿಂದಿನಿಂದ ರೈಲು ಬಂದುಬಿಟ್ಟಿತ್ತು. ಯಾರಿಗೂ ಗೊತ್ತಾಗಲಿಲ್ಲ. ಇನ್ನೇನು ರೈಲು ನನ್ನ ಮೇಲೆ ಹಾಯುತ್ತದೆ ಎನ್ನುವಷ್ಟರಲ್ಲಿ ಪಕ್ಕಕ್ಕೆ ಹಾರಿ ಬಚಾವಾಗಿದ್ದೆ. ಆಮೇಲೆ ನಿರ್ದೇಶಕರು ನಾಪತ್ತೆ. ಆ ಘಟನೆಯ ಫಲಾನುಭವಿ ನಾನು. ನಾನು ಧೈರ್ಯವಾಗಿದ್ದೆ. ನಿರ್ದೇಶಕರಿಗೆ ಭೇದಿ ಶುರುವಾಗಿಬಿಟ್ಟಿತ್ತು.
*ನಿಮಗೆ ತುಂಬ ಕೋಪವಂತೆ?
ನಿದ್ದೆ ಮಾಡೋವಾಗ ಯಾರಾದರೂ ತೊಂದರೆ ಮಾಡಿದರೆ ಸಿಕ್ಕಾಪಟ್ಟೆ ಕೋಪ ಬರುತ್ತೆ. ಅದನ್ನ ನಿಯಂತ್ರಿಸ್ಕೊಳ್ಳೋಕೆ ಪ್ರಯತ್ನ ಮಾಡ್ತಿದ್ದೀನಿ, ಇನ್ನೂ ಸಾಧ್ಯವಾಗಿಲ್ಲ. ಈಗಲೂ ನಿದ್ದೆಯಿಂದ ಎದ್ದ ನಂತರವೇ ಮಾತಿಗೆ ಕರೆದಿದ್ದೀರಿ. ಅದಕ್ಕೇ ನೀವು ಬಚಾವ್! (ನಗು)
*ನೀವು ಫೋಟೊ ಪ್ರಿಯರಂತೆ?
ಹೌದು. ಚಿಕ್ಕವನಿದ್ದಾಗಿಂದಲೂ ವಿವಿಧ ಭಂಗಿಗಳಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದೆ. ಸ್ನೇಹಿತನೊಬ್ಬ ಫೋಟೊಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಅವನ ಕ್ಯಾಮೆರಾ ತರಿಸಿಕೊಂಡು, ಇನ್ನೊಬ್ಬ ಸ್ನೇಹಿತನಿಂದ ಗಿಟಾರ್ ತರಿಸಿಕೊಂಡು ತರಹೇವಾರಿ ಪೋಸ್ ಕೊಡುತ್ತಿದ್ದೆ. ಸಿಗರೇಟ್ ಸೇದುವ ಅಭ್ಯಾಸವಿಲ್ಲದಿದ್ದರೂ ಫೋಟೊಗಾಗಿ ಸಿಗರೇಟ್ ಬಾಯಿಗಿಟ್ಟಿದ್ದೂ ಇದೆ. ಈಗಲೂ ಸಿಗರೇಟ್ ಅಭ್ಯಾಸ ಇಲ್ಲ. ಆದರೆ ಸಿನಿಮಾಕ್ಕಾಗಿ ಸಿಗರೇಟ್ ಸೇದಲೂ, ಕುಡಿಯಲೂ ಸಿದ್ಧ. ಹಾಗಂತ ರೇಪ್ ಮಾಡ್ತೀರಾ ಅಂತ ಕೇಳ್ಬೇಡಿ.
*‘ಮಳೆ’ಯಲ್ಲಿ ನೆಂದ ಅನುಭವ ಹೇಗಿತ್ತು?
ಚಿತ್ರೀಕರಣದ ಸಂದರ್ಭದಲ್ಲಿ ಮಳೆ ಬೇಕೆಂದಾಗ ಬರುತ್ತಿರಲಿಲ್ಲ. ಕೃತಕ ಮಳೆ ಹರಿಸುವ ಸಂದರ್ಭದಲ್ಲಿ ಸಹಜ ಮಳೆಯೂ ಸುರಿದುಬಿಡುತ್ತಿತ್ತು. ಮತ್ತೊಂದು ವಿಚಿತ್ರ ಎಂದರೆ ಶೂಟಿಂಗ್ ವೇಳೆ ನನಗೆ ಕುತ್ತಿಗೆ ಉಳುಕಿತು. ನಂತರ ಅಮೂಲ್ಯ ಕಾಲಿಗೆ ಪೆಟ್ಟಾಯಿತು. ಆಮೇಲೆ ಶಿವತೇಜಸ್ ಕಾಲು ಪೆಟ್ಟಾಯ್ತು. ಮಳೆಯಲ್ಲಿ ನೆಂದವರಿಗೆ ಜ್ವರ, ಶೀತ ಸಾಮಾನ್ಯ. ಆದರೆ ಇದೇನು ಕಾಕತಾಳೀಯವೋ ತಿಳಿದಿಲ್ಲ.
*‘ಮಳೆ’ ಯಾವಾಗ ಬರಬಹುದು?
ಹವಾಮಾನ ವರದಿ ಪ್ರಕಾರ ಏಪ್ರಿಲ್ ಕೊನೆಯಲ್ಲಿ ಅಥವಾ ಮೇ ಆರಂಭದಲ್ಲಿ ‘ಮಳೆ’ ಬರುತ್ತೆ. ಒಟ್ಟಿನಲ್ಲಿ ಈ ಬೇಸಿಗೆಯಲ್ಲಿ ಮಳೆ ಬರೋದಂತೂ ಖಂಡಿತ. ನಂತರ ‘ಮಸ್ತ್ ಮೊಹಬ್ಬತ್’. ಆಮೇಲೆ ‘ದಳಪತಿ’ ಬರ್ತಾನೆ.