ಕರ್ನಾಟಕ

ಕುಂಚದೊಲುಮೆಗೆ ಒಂದು ದಿನ

Pinterest LinkedIn Tumblr

psmec15worldartday_0

– ಪದ್ಮನಾಭ್‌ ಭಟ್‌
ಏಪ್ರಿಲ್‌ 15 ವಿಶ್ವ ಕಲಾ ದಿನವೆಂದು ಯುನೆಸ್ಕೋ 2012ರಲ್ಲಿಯೇ ಘೋಷಿಸಿದೆ. ಆದರೆ ಇಂದಿಗೂ ಅನೇಕರಿಗೆ ಕಲೆಗಾಗಿಯೇ ಒಂದು ದಿನ ಇದೆ ಎಂಬುದೇ ತಿಳಿದಿಲ್ಲ.  ಈ ಬರಹದಲ್ಲಿ ಕಲಾದಿನದ ಅವಶ್ಯಕತೆ– ಸಾರ್ಥಕತೆಯ ಕುರಿತು ಹಿರಿಯ ಕಲಾವಿದರ ಅನಿಸಿಕೆಯೂ ಇದೆ.

ಮಾತು, ಅಕ್ಷರಗಳು ಸಂವಹನದ ಪ್ರಬಲ ಸಾಧನಗಳು. ಆದರೆ ಬದುಕಿನ ಸಂಕೀರ್ಣತೆಯನ್ನು ಅರಿತುಕೊಳ್ಳುವ ದಾರಿಯಲ್ಲಿ, ಅದರ ನಿಗೂಢತೆಯ ಶೋಧನೆಯಲ್ಲಿ ಈ ಸಾಧನಗಳು ಕೆಲವು ಆಯಾಮವನ್ನಷ್ಟೇ ಮುಟ್ಟಬಲ್ಲದು. ಹಾಗೆ ನೋಡಿದರೆ ಜಗತ್ತಿನ ಎಲ್ಲ ಸೃಜನಶೀಲ ಕಲೆಗಳೂ ಬದುಕನ್ನು ಅರಿಯುವ ಮನುಷ್ಯನ ಹಂಬಲದ ಫಲಗಳೇ. ಚಿತ್ರಕಲೆಯೂ ಅಂಥದ್ದೇ ಅರಿವಿನ– ಅರಿಕೆಯ ಒಂದು ಹಾದಿ.

ಅಂದಹಾಗೆ ಇಂದು ‘ವಿಶ್ವ ಕಲಾ ದಿನ’. ಚಿತ್ರಕಲೆಗೆ ಸುದೀರ್ಘವಾದ ಇತಿಹಾಸವಿದೆಯಾದರೂ, ‘ಕಲಾದಿನ’ದ ಪರಿಕಲ್ಪನೆ ಹೊಸದು.

ಕಲಾದಿನದ ಹಿನ್ನೋಟ
‘ದಿ ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಆರ್ಟ್ಸ್‌’ 2012ರಲ್ಲಿ ಮೆಕ್ಸಿಕೊ ದೇಶದ ಗುಡಲಾಜರಾ ಎಂಬಲ್ಲಿ ವಿಶ್ವ ಕಲಾವಿದರ ಸಭೆಯನ್ನು ನಡೆಸಿತು. 92 ದೇಶಗಳ ಕಲಾ ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ   ಏಪ್ರಿಲ್‌ 15ನ್ನು ‘ವಿಶ್ವ ಕಲಾ ದಿನ’ವನ್ನಾಗಿ ಆಚರಿಸುವ ಪ್ರಸ್ತಾಪ ಮಾಡಲಾಯಿತು. ಎಲ್ಲ ಪ್ರತಿನಿಧಿಗಳೂ ಈ ಪ್ರಸ್ತಾವನೆಗೆ ಬೆಂಬಲ ಸೂಚಿಸಿದ್ದರಿಂದ ಯುನೆಸ್ಕೊ ಏಪ್ರಿಲ್‌ 15ನ್ನು ವಿಶ್ವ ಕಲಾದಿನವನ್ನಾಗಿ ಘೋಷಿಸಿತು.
ಏಪ್ರಿಲ್‌ 15 ವಿಶ್ವವಿಖ್ಯಾತ ಮೋನಾಲಿಸಾ ಚಿತ್ರದ ಸೃಷ್ಟಿಕರ್ತನಾದ ಮೇರು ಕಲಾವಿದ ಲಿಯೋ ನಾರ್ಡೋ ದ ವಿಂಚಿ ಅವರ ಜನ್ಮದಿನವೂ ಹೌದು.

2012 ಏಪ್ರಿಲ್‌ 15ರಂದು ಮೊದಲ ‘ವಿಶ್ವ ಕಲಾ ದಿನ’ವನ್ನು ಆಚರಿಸಲಾಯಿತು. ಅಲ್ಲಿಂದ ಪ್ರತಿ ವರ್ಷ ಏಪ್ರಿಲ್‌ 15ರಂದು ವಿಶ್ವದಾದ್ಯಂತ ಕಲಾದಿನವನ್ನಾಗಿ ಆಚರಿಸಲಾಗುತ್ತಿದೆ.

ಕರ್ನಾಟಕದಲ್ಲಿ ಕಲಾದಿನ
ಯುನೆಸ್ಕೋ 2012ರಲ್ಲಿಯೇ ‘ವಿಶ್ವ ಕಲಾ ದಿನ’ವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರೂ ಎಷ್ಟೋ ದೇಶಗಳಿಗೆ ಆ ಸಂಗತಿ ತಿಳಿದೇ ಇರಲಿಲ್ಲ.

ಕರ್ನಾಟಕದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕಲಾವಿದರಿದ್ದರೂ ಕಲೆಗಾಗಿಯೇ ಒಂದು ದಿನವನ್ನು ಆಚರಿಸುವ ಪದ್ಧತಿ ಇರಲೇ ಇಲ್ಲ. ಕರ್ನಾಟಕದಲ್ಲಿ ಮೊದಲ ಬಾರಿಗೆ ಕಲಾವಿದರ ದಿನವನ್ನು ಆಚರಿಸಿದ್ದು 2013ರಲ್ಲಿ. ಆಗ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಚಿ.ಸು. ಕೃಷ್ಣ ಸೆಟ್ಟಿ ಅವರಿಗೆ ಕಲಾವಿದರಿಗಾಗಿಯೇ ಒಂದು ದಿನವನ್ನು ಆಚರಿಸಬೇಕು ಎಂಬ ಅಭಿಲಾಷೆ ತೀವ್ರವಾಗಿತ್ತು.

‘ರಂಗಭೂಮಿಗೆ, ಛಾಯಾ ಚಿತ್ರಕಾರರಿಗೆ, ಮಹಿಳೆಯರಿಗೆ, ಅಮ್ಮಂದಿರಿಗೆ ಹೀಗೆ ಎಲ್ಲರಿಗೂ ಒಂದೊಂದು ದಿನವಿದೆ. ಆದರೆ ಕಲಾವಿದರಿಗೆ ಅಂಥ ಯಾವ ದಿನವೂ ಇಲ್ಲವಲ್ಲ ಎಂಬ ಸಂಗತಿ ನನ್ನನ್ನು ಯಾವಾಗಲೂ ಕಾಡುತ್ತಿತ್ತು. 2013ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷನಾಗಿದ್ದೆ. ಆಗ ಕಲಾವಿದರಿಗಾಗಿಯೇ ಒಂದು ದಿನವನ್ನು ಆಚರಿಸಬೇಕು ಎಂಬ ಆಶಯದಿಂದ ಯಾವ ದಿನ ಸೂಕ್ತ ಎಂದು ಸೂಚಿಸುವಂತೆ ನಾಡಿನ ಹಿರಿಯ ಕಲಾವಿದರಿಗೆ ಮನವಿ ಮಾಡಿಕೊಂಡಿದ್ದೆ.

ಈ ಕುರಿತಾಗಿಯೇ ನಾವು ಕಲಾವಿದರೆಲ್ಲ ಸೇರಿಕೊಂಡು ಚರ್ಚಿಸುತ್ತಿದ್ದಾಗ ಯುನೆಸ್ಕೋ ಈಗಾಗಲೇ ಏಪ್ರಿಲ್‌ 15ನ್ನು ‘ವಿಶ್ವ ಕಲಾ ದಿನ’ವನ್ನಾಗಿ ಘೊಷಿಸಿದೆ ಎಂಬ ಸಂಗತಿ ತಿಳಿಯಿತು. ಅಂದೇ ನಾವೂ ಕಲಾವಿದರ ದಿನಾಚರಣೆ ಮಾಡಲು ನಿರ್ಧರಿಸಿದೆವು’ ಎಂದು ಕರ್ನಾಟಕದಲ್ಲಿ ಕಲಾದಿನದ ಪರಿಕಲ್ಪನೆ ರೂಪುಗೊಂಡ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ.

2013 ಏಪ್ರಿಲ್‌ 15ರಂದು ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ‘ವಿಶ್ವ ಕಲಾದಿನ’ವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೆಂಗಳೂರಿನಲ್ಲಷ್ಟೇ ಅಲ್ಲ, ಗುಲ್ಬರ್ಗ, ರಾಯಚೂರು, ಮಂಗಳೂರು, ಉಡುಪಿ, ಬೆಳಗಾವಿ ಹೀಗೆ ರಾಜ್ಯದ ಅನೇಕ ಕಡೆಗಳಲ್ಲಿ ಕಲಾದಿನವನ್ನು ಆಚರಿಸಲಾಯಿತು.

‘ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಕಲಾವಿದರಿಗೆ ಸಂಬಂಧಿಸಿದ ಸಂಘಟನೆಗಳು ಕಡಿಮೆ. ನಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಸರ್ಕಾರಕ್ಕೆ, ಜನ ಸಾಮಾನ್ಯರಿಗೆ ತಿಳಿಸಿಕೊಡುವಂತಹ ಯಾವುದೇ ಒಂದು ಪ್ರಾತಿನಿಧಿಕ ಸಂಘಟನೆ ಇಲ್ಲ. ಇದೊಂದು ದೊಡ್ಡ ಕೊರತೆ. ‘ವಿಶ್ವ ಕಲಾ ದಿನ’ ಈ ಕೊರತೆಯನ್ನು ನೀಗಿಸಲು ಒಂದು ವೇದಿಕೆಯಾಗಬೇಕು. ಕಲಾವಿದರನ್ನೆಲ್ಲ ಒಂದು ಕಡೆ ಸೇರಿಸಲು, ಪರಸ್ಪರ ಸಂವಾದ ನಡೆಸಲು ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ಈ ದಿನ ನೆಪವಾಗಬೇಕು’ ಎನ್ನುತ್ತಾರೆ ಕಲಾವಿದ ಚಿ. ಸು. ಕೃಷ್ಣ ಸೆಟ್ಟಿ.

‘ಆದರೂ ಉಳಿದೆಲ್ಲ ದಿನಾಚರಣೆಗಳಂತೇ ‘ವಿಶ್ವ ಕಲಾ ದಿನ’ದ ಬಗ್ಗೆ ಜನರಿಗೆ ಸರಿಯಾಗಿ ತಿಳಿದಿಲ್ಲ. ಮುಂದೆ ಕ್ರಮೇಣವಾಗಿ ಇದೂ ಜನಪ್ರಿಯವಾಗಬಹುದು’ ಎಂಬ ಆಶಾವಾದ ಅವರದು.

ನದಿ ತಟದಲ್ಲಿ ಕಾಲು ಇಳಿಬಿಟ್ಟು ಕೂತಂತೆ..
ಕಲೆ ಜನಸಾಮಾನ್ಯರಿಗೆ ತಲುಪಬೇಕು, ಅರ್ಥವಾಗಬೇಕು ಎನ್ನುತ್ತಾರೆ. ಆದರೆ ಈ ಜನಸಾಮಾನ್ಯರು ಎಂಬ ಪದವೇ ಗೊಂದಲಕಾರಿಯಾದದ್ದು. ಯಾಕೆಂದರೆ ಮನುಷ್ಯನ ಮೊದಲ ಪ್ರಾತಿನಿಧ್ಯ ಊಟ, ನಂತರ ಮನೆ, ಉದ್ಯೋಗ ಹೀಗೆ ಮುಂದುವರಿಯುತ್ತದೆ.
ಆದರೆ ಕಲೆ ಅವ್ಯಾವುದನ್ನೂ ಕೊಡುವುದಿಲ್ಲ. ಆದ್ದರಿಂದ ಕಲೆ ಮನುಷ್ಯನಿಗೆ ಕೊನೆಯ ಆಯ್ಕೆಯಾಗಿರುತ್ತದೆ.  ಹಾಗೆಯೇ ಅರ್ಥವಾಗುವುದು ಎನ್ನುವುದೆಂದರೆ ಏನು ಎನ್ನುವುದು ಇನ್ನೂ ಗೊಂದಲಕಾರಿಯಾದದ್ದು.  ಯಾರಿಗೆ ದಾಹವಿರುತ್ತದೆಯೋ ಅವರು ತಾವಾಗಿಯೇ ಹುಡುಕಿಕೊಂಡು ಬರುತ್ತಾರೆ. ಕಲೆ ಒಂದು ರೀತಿ ಅಂತರ್‌ವಾಹಿನಿಯಿದ್ದಂತೆ. ನದಿ ತಟದಲ್ಲಿ ಕಾಲು ಇಳಿಬಿಟ್ಟು ಕೂತಾಗ ನೀರು ತಣ್ಣಗೇ ಕಾಲಿಗೆ ಸೋಕುತ್ತದೆ. ಕಲೆಯೂ ಅಂಥದ್ದೇ ಅನುಭವ. ಅದು ಅರ್ಥವಾಗುವುದಲ್ಲ. ಅನುಭವಿಸುವ ಆನಂದವಷ್ಟೇ. ಆ ಆನಂದವನ್ನು ಕಾಣಲು ಬೇರೆಯದೇ ಕಣ್ಣು ಬೇಕು.

ಅದೇನೇ ಇದ್ದರೂ ಪ್ರತಿ ಮನುಷ್ಯನೂ ಸಮಾಜ ತನ್ನನ್ನು  ಗುರ್ತಿಸಬೇಕು ಎಂದು ಆಶಿಸುತ್ತಾನೆ. ಹಾಗೆಯೇ ಪ್ರತಿ ಸಮುದಾಯಕ್ಕೂ ಅಂಥದ್ದೇ ಆಸೆ ಇರುತ್ತದೆ. ಕಲಾವಿದರ ಸಮುದಾಯ ಜಗತ್ತಿಗೆ ನೀಡಿದ ಕೊಡುಗೆ ತುಂಬ ದೊಡ್ಡದು. ಸೌಂದರ್ಯೀಕರಣ ಎಂಬ ಪರಿಕಲ್ಪನೆ ಇದೆಯಲ್ಲವೇ? ಅದು ಕಲಾ ಸಮುದಾಯದ ಕೊಡುಗೆ. ಹೀಗೆ ಸಮಾಜದ ಭಾಗವಾಗಿರುವ ನಮ್ಮನ್ನು ಗುರ್ತಿಸಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿತ್ತು.
‘ವಿಶ್ವ ಕಲಾದಿನ’ ಎಂದು ನಮಗಾಗಿಯೇ ಒಂದು ದಿನವನ್ನು ನಿಗದಿಪಡಿಸಿರುವುದು ನನಗಂತೂ ತುಂಬ ಸಂತೋಷ ನೀಡಿದೆ. ಪರಮಾನ್ನ ಸಿಕ್ಕಂತಾಗಿದೆ.
ಪ. ಸ. ಕುಮಾರ್‌ , (ಹಿರಿಯ ಕಲಾವಿದ)

ರಂಗೋಲಿ ಕಲಾ ಕೇಂದ್ರದಲ್ಲಿ ಕಲಾದಿನ
ಇಂದು (ಏಪ್ರಿಲ್‌ 15) ಬೆಂಗಳೂರಿನ ರಂಗೋಲಿ ಮೆಟ್ರೋ ಕಲಾ ಗ್ಯಾಲರಿಯ ಆವರಣದಲ್ಲಿ ‘ವಿಶ್ವ ಕಲಾದಿನ’ವನ್ನು ಆಚರಿಸಲಾಗುತ್ತಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಕಾರ್ಟೂನಿಸ್ಟ್ ಮತ್ತು ಬೆಂಗಳೂರು ಫಿಲಂ ಸೊಸೈಟಿಗಳೂ ಈ ಆಚರಣೆಗೆ ಸಹಯೋಗ ಒದಗಿಸುತ್ತಿವೆ.

ಮೆಟ್ರೊ ರಂಗಸ್ಥಳದಲ್ಲಿ ಬೆಳಿಗ್ಗೆ 11 ಗಂಟೆಗೆ ಮತ್ತು ಸಾಯಂಕಾಲ 3ಗಂಟೆಗೆ ‘ದಿ ಟ್ರೈನ್’ ಎನ್ನುವ ಚಲನಚಿತ್ರ ಪ್ರದರ್ಶನ ಇರುತ್ತದೆ. ಸಂಜೆ 4ರಿಂದ ಬಯಲು ವೇದಿಕೆಯಲ್ಲಿ  ಹಲವಾರು ಹಿರಿಯ ಚಿತ್ರ ಕಲಾವಿದರು ಮತ್ತು ವ್ಯಂಗ್ಯಚಿತ್ರ ಕಲಾವಿದರು ಸ್ಥಳದಲ್ಲಿಯೇ ಚಿತ್ರಗಳನ್ನು ರಚಿಸಲಿದ್ದಾರೆ.

ಸಂಜೆ 6ರಿಂದ ಹಿರಿಯ ಕಲಾವಿದರು, ಕಲಾವಿಮರ್ಶಕರು ರಂಗಸ್ಥಳದಲ್ಲಿ ಚರ್ಚಾಕೂಟದಲ್ಲಿ ಭಾಗವಹಿಸಲಿದ್ದಾರೆ.

ವಿಶೇಷವಾಗಿ ಕರ್ನಾಟಕದ ಹಿರಿಯ ಕಲಾವಿದರಾದಂಥ ಎಸ್. ಜಿ. ವಾಸುದೇವ್, ಚಿ. ಸು. ಕೃಷ್ಣ ಸೆಟ್ಟಿ, ಪ. ಸ. ಕುಮಾರ್,  ಎಂ.ಬಿ. ಪಾಟೀಲ್, ವೆಂಕಟಾಚಲಪತಿ,  ಗಿರಿಧರ್  ಖಾಸನೀಸ್, ರಾಜಶೇಖರ್ ಬಿಲ್ವಪತ್ರಿ,  ರಾಯಚೂರಿನ ಕಲಾವಿದರಾದಂಥ ವಾಜಿದ್ ಸಾಜಿದ್,   ಎ. ಎಂ. ಪ್ರಕಾಶ್, ಎಂ. ಜಿ. ದೊಡ್ಡಮನಿ,  ಕೆ. ಎನ್‌. ರಾಮಚಂದ್ರನ್ ಸೇರಿದಂತೆ  ಹಲವರು ಕಲಾವಿದರು ಭಾಗವಹಿಸಲಿದ್ದಾರೆ.

Write A Comment