ಕನ್ನಡ ವಾರ್ತೆಗಳು

ಲಾಡ್ಜಿನಲ್ಲಿ ವೃದ್ಧೆ ನಿಗೂಢ ಸಾವು : ಜೊತೆಗಿದ್ದ ಯುವಕ ಮಹರಾಷ್ಟ್ರಕ್ಕೆ ಪರಾರಿ; ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ

Pinterest LinkedIn Tumblr

ಕುಂದಾಪುರ: ಬುಧವಾರ ಸಂಜೆ ನಗರದ ಪ್ರಸಿದ್ಧ ಲಾಡ್ಜೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಅರವತ್ತರ ವೃದ್ಧೆ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ನಿವಾಸಿ ಲಲಿತಾ ದೇವಾಡಿಗ(60) ಎಂದು ತಿಳಿದು ಬಂದಿದ್ದು, ಬಾಡಿಗೆ ಪಡೆದು ವೃದ್ದೆಯ ಸಾವಿನ ನಂತರ ನಾಪತ್ತೆಯಾದಗಿದ್ದ ಯುವಕ ಅಝರ್ ಅಪ್ಝಲ್ ಖಾನ್(36) ಎಂಬಾತ ಮಹರಾಷ್ಟ್ರಕ್ಕೆ ಪರಾರಿಯಾಗಿದ್ದಾನೆ.

ಆಕೆ ಯಾಕೆ ಲಾಡ್ಜಿಗೆ ಬಂದಿದ್ದಳು, ಹೇಗೆ ಸಾವನ್ನಪ್ಪಿದ್ದಾಳೆ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ನಾಪತ್ತೆಯಾದ ಯುವಕನನ್ನು ಆತ ಬಿಟ್ಟು ಹೋದ ಬ್ಯಾಗಿನಲ್ಲಿದ್ದ ಆಧಾರ್ ಕಾರ್ಡ್ ಆಧಾರದಲ್ಲಿ ಈಸ್ಟ್ ಮುಂಬೈ ನಿವಾಸಿ ಅಝರ್ ಅಫ್ಜಲ್ ಖಾನ್ ಎಂದು ಗುರುತಿಸಲಾಗಿತ್ತು.

kundapura_Lodge_Crime (8)

(ಮೃತಪಟ್ಟ ಮಹಿಳೆ ಲಲಿತಾ ದೇವಾಡಿಗ)

kundapura_Lodge_Crime

(ನಾಪತ್ತೆಯಾದ ಯುವಕ ಅಝರ್ ಅಪ್ಝಲ್ ಖಾನ)

ಘಟನೆಯ ವಿವರ: ಎಪ್ರಿಲ್ ನಾಲ್ಕರಂದು ನಗರದ ಲಾಡ್ಜ್‌ನಲ್ಲಿ ೨೦೩ ಸಂಖ್ಯೆಯ ಕೋಣೆಯನ್ನು ಆಧಾರ್ ಕಾರ್ಡ್ ದಾಖಲೆಯನ್ನಾಗಿ ಅಝರ್ ಅಫ್ಜಲ್ ಖಾನ್ ಬಾಡಿಗೆ ಪಡೆದಿದ್ದ. ಹತ್ತು ದಿನಗಳಿಂದ ಅಲ್ಲಿಯೇ ಇದ್ದ ಆತ ಹಗಲಿನಲ್ಲಿ ಹೊರಗಡೆ ಹೋಗಿ ಸಂಜೆ ವಾಪಾಸು ಬರುತ್ತಿದ್ದ. ಏಪ್ರಿಲ್ 14ರಂದೂ ಆತ ರಾತ್ರಿ ಪಾರ್ಟಿಯೊಂದಕ್ಕೆ ಹೋಗಿ ಬರುವುದಾಗಿ ರೂಂ ಬಾಯಿಗೆ ಹೇಳಿ ಹೋಗಿದ್ದ. ಏಪ್ರಿಲ್ 15ರಂದು ಬೆಳಿಗ್ಗೆ ಸುಮಾರು ಹನ್ನೊಂದೂವರೆ ಗಂಟೆ ಸುಮಾರಿಗೆ ವೃದ್ಧೆಯೊಬ್ಬಳು ಆತನನ್ನು ಕಾಣಲು ಲಾಡ್ಜಿಗೆ ಬಂದಿದ್ದು, ಆತ ರಿಸೆಪ್ಷನ್‌ಗೆ ಬಂದು ಆಕೆಯನ್ನು ತನ್ನ ರೂಮಿಗೆ ಕರೆದೊಯ್ದಿದ್ದ. ಮಧ್ಯಾಹ್ನ 12.30ರ ಸುಮಾರಿಗೆ ಅದೇ ಹೋಟೆಲ್‌ನಲ್ಲಿ ತರಕಾರಿ ಊಟ ಮಾಡಿದ್ದರು. ನಂತರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ಕೋಣೆಗೆ ಬಂದಿದ್ದ ರೂಮ್ ಬಾಯಿಗೆ ಆಕೆಯನ್ನು ಹಿಂದಿಯಲ್ಲಿ ಮಾ ಎಂದು ಪರಿಚಯಿಸಿಕೊಂಡಿದ್ದರಿಂದ ಮತ್ತು ವೃದ್ಧೆಯಾಗಿದ್ದರಿಂದ ಆತನ ತಾಯಿ ಇರಬಹುದು ಎಂದು ಅಂದಾಜಿಸಲಾಗಿತ್ತು. 4.30ರ ಸುಮಾರಿ ಮತ್ತೊಮ್ಮೆ ರೂಂ ಬಾಯಿ ಕೋಣೆಗೆ ಬಂದಾಗ ವೃದ್ಧೆ ಕೋಣೆಯಲ್ಲಿ ಅಂಗಾತ ಮಲಗಿದ್ದ ಸ್ಥಿತಿಯಲ್ಲಿ ಇದ್ದು, ಯಾಕೆ ಹೀಗೆ ಬಿದ್ದಿದ್ದಾರೆ ಎಂದು ರೂಂ ಬಾಯಿ ವಿಚಾರಿಸಿದಾಗ ಆಕೆಗೆ ಹುಷಾರಿಲ್ಲ ಡಾಕ್ಟರನ್ನು ಕರೆಯಿಸಿ ಎಂದಿದ್ದ ಯುವಕ ತಾನೇ ವೈದ್ಯರನ್ನು ಕರೆತರುವುದಾಗಿ ಹೊರಗೆ ಹೋಗಿದ್ದಾತ ಮತ್ತೆ ಹಿಂತಿರುಗಿರಲಿಲ್ಲ.

ಯುವಕ ಬಾರದೇ ಇರುವುದನ್ನು ಕಂಡು ಗಲಿಬಿಲಿಯಾದ ಲಾಡ್ಜ್ ಕೆಲಸದವರು ತಕ್ಷಣ ಪೊಲೀಸರಿಗೆ ಹಾಗೂ ವೈದ್ಯರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದಾಗ ಆಕೆ ಮೃತಪಟ್ಟಿರುವುದು ಖಚಿತವಾಗಿದೆ. ಮೃತ ದೇಹವನ್ನು ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ಸಾಗಿಸಿ ನಂತರ ಮರಣೋತ್ತರ ಶವಪರೀಕ್ಷೆ ನಡೆಸಲು ಮಣಿಪಾಲಕ್ಕೆ ಕೊಂಡೊಯ್ಯಲಾಗಿದೆ. ಈ ಮಧ್ಯೆ ಸತ್ತ ವೃದ್ಧೆ ಯಾರು ಎಂಬುದು ನಿಗೂಢವಾಗಿದ್ದ ಬೆನ್ನಲ್ಲಿಯೇ ಯುವಕ ನಾಪತ್ತೆಯಾಗಲು ಕಾರಣವೇನು ಎನ್ನುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ಅಲ್ಲದೇ ವೃದ್ಧೆ ಹೇಗೆ ಸತ್ತಳು ಎನ್ನುವುದೂ ಆತಂಕಕ್ಕೆ ಕಾರಣವಾಗಿತ್ತು.

kundapura_Lodge_Crime (7) kundapura_Lodge_Crime (6) kundapura_Lodge_Crime (3) kundapura_Lodge_Crime (1) kundapura_Lodge_Crime (2) kundapura_Lodge_Crime (4) kundapura_Lodge_Crime (5)

ಆಕೆ ಗಂಗೊಳ್ಳಿಯವಳು: ನಾಪತ್ತೆಯಾದ ಯುವಕ ಆತನ ಒಂದು ಬ್ಯಾಗನ್ನು ಅಲ್ಲಿಯೇ ಬಿಟ್ಟು ಹೋಗಿದ್ದು, ಎರಡು ಮೊಬೈಲ್‌ಗಳು, ಕೆಲವು ಹುಡುಗಿಯರ ಫೋಟೋಗಳು ಆತನ ಆಧಾರ್ ಕಾರ್ಡ್ ಹಾಗೂ ಬಟ್ಟೆಗಳು ಪತ್ತೆಯಾಗಿದ್ದವು. ಆತನ ಮೊಬೈಲ್‌ನಲ್ಲಿ ಕರೆ ಮಾಡಿದ ಸಂಖ್ಯೆಗಳಿಗೆ ಫೋನ್ ಮಾಡಿದಾಗ ಒಂದು ಕರೆ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ನಿವಾಸಿ ಲಲಿತಾ ದೇವಾಡಿಗ ಎಂಬುವರ ತಂಗಿ ಉಪ್ಪುಂದ ನಿವಾಸಿ ಪ್ರಸ್ತುತ ಪುಣೆಯಲ್ಲಿರುವ ಸೀತಾ ದೇವಾಡಿಗ ಎಂಬುವರದ್ದು ಎಂದು ತಿಳಿದು ಬಂದಿತ್ತು. ಅದರ ಆಧಾರದಲ್ಲಿ ಮೃತ ಮಹಿಳೆ ಗಂಗೊಳ್ಳಿವಳು ಎಂದು ಅಂದಾಜಿಸಿ ಶೋಧ ನಡೆಸಲಾಯಿತು. ಇತ್ತ ಗಂಗೊಳ್ಳಿಯ ನಿವಾಸಿ ಲಲಿತಾ ದೇವಾಡಿಗ ಪಾಸ್‌ಪೋರ್ಟ್ ಮಾಡಿಸಲೆಂದು ದಾಖಲೆ ಪತ್ರಗಳನ್ನು ತೆತೆದುಕೊಂಡು ಹೋಗಿರುವುದಾಗಿಯೂ ಸಂಜೆಯಾದರೂ ಮನೆಗೆ ಬಂದಿಲ್ಲವೆಂದೂ ಆಕೆ ಮಗಳು ಅಕ್ಕ ಪಕ್ಕದ ಮನೆಯವರಿಗೆ ಸುದ್ಧಿ ನೀಡಿದ ಹಿನ್ನೆಲೆಯಲ್ಲಿ ಗಂಗೊಳ್ಳಿ ಪೊಲೀಸರಿಗೆ ದೂರು ನೀಡಲು ಸಿದ್ಧತೆ ನಡೆಸಿದ್ದರು. ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸಿದಾಗ ಮೃತಳಾದ ವೃದ್ಧೆ ಗಂಗೊಳ್ಳಿಯ ನಿವಾಸಿ ಲಲಿತಾ ದೇವಾಡಿಗ ಎಂಬುದು ಖಚಿತವಾಗಿತ್ತು.

ಆತ ಮುಂಬೈಯವ: ನಾಪತ್ತೆಯಾದ ಯುವಕ ಮೂಲತಃ ದೆಹಲಿಯವನಾಗಿದ್ದು, ಅಪಘಾತವೊಂದರಲ್ಲಿ ಆತನ ಕುಟುಂಬ ಸಾವಿಗೀಡಾಗಿತ್ತು ಎನ್ನಲಾಗುತ್ತಿದೆ. ಆದರೆ ಆತ ಶ್ರೀಮಂತನಾಗಿದ್ದು, ದೆಹಲಿ ಹಾಗೂ ಮುಂಬೈನಲ್ಲಿ ಆಸ್ತಿ ಹೊಂದಿದ್ದಾನೆನ್ನಲಾಗಿದ್ದು, ಮುಂಬೈಯಲ್ಲಿ ವಾಸವಾಗಿದ್ದಾನೆ. ಸುಮಾರು ಎಂಟು ವರ್ಷಗಳಿಂದ ಆತನಿಗೆ ಪುಣೆಯಲ್ಲಿರುವ ಸೀತಾ ದೇವಾಡಿಗರ ಪರಿಚಯವಿತ್ತೆನ್ನಲಾಗಿದೆ. ಅಲ್ಲದೇ ಮೃತಳಾದ ಲಲಿತಾ ದೇವಾಡಿಗರ ಮಗಳು ಮುಂಬೈಯಲ್ಲಿ ವಾಸವಿದ್ದು, ಆಕೆಯ ಪರಿಚಯವೂ ಇದ್ದು, ಈ ಹಿಂದೆ ಹಲವು ಬಾರಿ ಈ ಯುವಕ ಗಂಗೊಳ್ಳಿಗೆ ಬಂದಿದ್ದ. ಅಲ್ಲದೇ ಗಂಗೊಳ್ಳಿ ಶ್ರೀ ಜಟ್ಟಿಗೇಶ್ವರ ದೇವಸ್ಥಾನಕ್ಕೆ ಒಂದು ಲಕ್ಷದ ಇಪ್ಪತ್ತಾರು ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲು ಒಪ್ಪಿಕೊಂಡಿದ್ದ ಎನ್ನಲಾಗಿದೆ. ಅಲ್ಲದೇ ಗಂಗೊಳ್ಳಿಯ ಲಲಿತಾ ದೇವಾಡಿಗರ ಮನೆ ಕಟ್ಟಿಕೊಡಲು ಹಣ ಸಹಾಯವನ್ನೂ ಮಾಡಿದ್ದ ಎನ್ನಲಾಗಿದೆ. ಆದರೆ ಅಲ್ಲಿ ಆತ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದು, ಅಜಯ್ ಬಾಬು ಎಂದು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ.

ಮುಂಬೈ ಮೂಲದ ಯುವಕನಿಗೆ ಕುಂದಾಪುರದಲ್ಲಿ ಏನು ಕೆಲಸ ಎಂಬ ಬಗ್ಗೆ ಈಗ ಪ್ರಶ್ನೆಗಳು ಹುಟ್ಟಿಕೊಂಡಿದೆ. ಒಂದೊಮ್ಮೆ ಆತ ಲಲಿತಾ ದೇವಾಡಿಗಳ ಕುಟುಂಬ ಸ್ನೇಹಿತನಾಗಿದ್ದರೆ ಆಕೆ ಸತ್ತ ತಕ್ಷಣ ಅಲ್ಲಿಂದ ಪಲಾಯನ ಮಾಡಿದ್ದೇಕೆ? ಅಥವಾ ಆಕೆಯ ಮನೆಯಲ್ಲಿಯೇ ಉಳಿಯದೇ ಹೊರಗಡೆ ಅಷ್ಟೊಂದು ದಿನಗಳ ಕಾಲ ರೂಂ ಮಾಡಿ ಉಳಿದಿದ್ದೇಕೆ ಎನ್ನುವ ಪ್ರಶ್ನೆಗಳು ಪೊಲೀಸರನ್ನು ಕಾಡತೊಡಗಿದೆ. ಮೂಲದ ಪ್ರಕಾರ ಆಕೆ ಸತ್ತ ನಂತರವೂ ಪುಣೆಯಲ್ಲಿರುವ ಲಲಿತಾರ ತಂಗಿ ಸೀತಾಗೆ ದೂರವಾಣಿ ಕರೆ ಮಾಡಿ ಕುಶಲೋಪರಿ ಮಾತನಾಡಿದ್ದಾನೆ. ಅಲ್ಲದೇ ಲಲಿತಾರ ಮಗಳು ಶೋಭಾ ಯಾನೆ ವೈಷ್ಣವಿ ಎಂಬಾಕೆಗೂ ಹಲವು ಬಾರಿ ಕರೆ ಮಾಡಿದ್ದು ಗಂಟೆಗಟ್ಟಲೆ ಮಾತನಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆದರೆ ಆಕೆ ಮೃತಪಟ್ಟಿದ್ದನ್ನು ಆತ ಹೇಳಿರಲಿಲ್ಲ ಎಂದು ತಿಳಿದುಬಂದಿದೆ. ಇದೆಲ್ಲದರ ಹಿಂದೆ ಇನ್ನೇನಾದರೂ ಕೃತ್ಯದ ಶಂಕೆ ಅಡಗಿದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆದರೆ ಆತ ನಾಪತ್ತೆಯಾದ ಸಂದರ್ಭದಲ್ಲಿ ಒಂದು ಮೊಬೈಲ್ ಫೋನನ್ನು ತನ್ನ ಬಳಿ ಇಟ್ಟುಕೊಂಡಿದ್ದು, ಸುಮಾರು ರಾತ್ರಿ ಹತ್ತು ಗಂಟೆಯ ತನಕವೂ ಬೈಂದೂರು ನೆಟ್‌ವರ್ಕಿನಲ್ಲಿತ್ತೆನ್ನಲಾಗಿದೆ. ಮೊಬೈಲ್ ಟವರ್ ಆಧರಿಸಿ ಪೊಲೀಸರು ಬೈಂದೂರು ರೈಲ್ವೇ ನಿಲ್ದಾಣಕ್ಕೆ ಹೋದರಾದರೂ ಅಲ್ಲಿ ಆತನ ಪತ್ತೆಯಾಗಿಲ್ಲ ಎನ್ನಲಾಗಿದೆ. ಬೆಳಗ್ಗೆ ಆತನ ಮೊಬೈಲ್ ರಿಂಗಾಗಿದ್ದು ರಿಸೀವ್ ಮಾಡಿರಲಿಲ್ಲ. ಆದರೆ ಅದಾಗಲೇ ಆತನ ಮೊಬೈಲ್ ಮಹರಾಷ್ಟ್ರದ ಗಡಿಯೊಳಕ್ಕೆ ಪ್ರವೇಶಿಸಿತ್ತು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.. ಕುಂದಾಪುರ ಪೊಲೀಸರಿಗೆ ಇದೊಂದು ಸವಾಲಾಗಿದ್ದು ನಾಪತ್ತೆಯಾದ ಯುವಕನನ್ನು ವಶಕ್ಕೆ ತೆಗೆದುಕೊಂಡು ಸತ್ಯಾಂಶ ಹೊರತೆಗೆಯಬೇಕಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಲಾಡ್ಜ್‌ಗೆ ಉಡುಪಿ ಎಸ್ಪಿ ಭೇಟಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗಂಗೊಳ್ಳಿಯ ವೃದ್ಧೆ ಹಾಗೂ ನಾಪತ್ತೆಯಾದ ಯುವಕನ ಪ್ರಕರಣಕ್ಕೆ ಸಂಬಂಧಿಸಿ ಘಟನೆ ನಡೆದಿದ್ದ ಲಾಡ್ಜ್‌ನ ಕೋಣೆಗೆ ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ ಮುಂಬೈ ಮೂಲದ ಯುವಕ ಅಝರ್ ಅಫ್ಝಲ್ ಖಾನ್ ಬಿಟ್ಟು ಹೋದ ಬ್ಯಾಗ್, ಆತನ ಬಳಿಯಿದ್ದ ಫೋಟೋಗಳು, ಹಾಗೂ ಕಳೆದ ಒಂದು ವಾರ ಆತನ ಚಲನವಲನಗಳ ಬಗ್ಗೆ ರೂಂ ಬಾಯ್ ಹಾಗೂ ಹೋಟೆಲ್ ಮಾಲೀಕರಿಂದ ಮಾಹಿತಿ ಪಡೆದರು. ಈ ಸಂದರ್ಭ ವೃತ್ತ ನಿರೀಕ್ಷಕ ಪಿ.ಎಂ ದಿವಾಕರ, ಎಸೈ ನಾಸಿರ್ ಹುಸೇನ್ ಮೊದಲಾದವರಿದ್ದರು. ಗುರುವಾರ ಮಧ್ಯಾಹ್ನ ಬೆರಳಚ್ಚು ತಜ್ಞರು ಹಾಗೂ ಫೊರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Write A Comment