(ಸಾವನ್ನಪ್ಪಿದ ಮಹಿಳೆ)
ಕುಂದಾಪುರ: ಬುಧವಾರ ರಾತ್ರಿ ನಗರ ಪ್ರಸಿದ್ಧ ಲಾಡ್ಜೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ವೃದ್ಧೆಯ ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು, ಆಕೆಯ ಸಾವಿನ ದಿನವೇ ಕುಂದಾಪುರದಿಂದ ನಾಪತ್ತೆಯಾದ ಮುಂಬೈ ಮೂಲದ ಯುವಕನ ಜೊತೆಗೆ ಮುಂಬೈಯಲ್ಲಿ ವಾಸವಿದ್ದ ವೃದ್ಧೆಯ ಮಗಳು ತನ್ನಿಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
(ಪರಾರಿಯಾದ ಯುವಕ ಅಝರ್)
ಬುಧವಾರ ಸಂಜೆ ಮುಂಬೈ ಮೂಲದವನೆನ್ನಲಾದ ಅಝರ್ ಅಪ್ಝಲ್ ಖಾನ್ ಯಾನೇ ಅಜಯ್ ಬಾಬು ಎಂಬಾತ ಉಳಿದುಕೊಂಡಿದ್ದ ಕೋಣೆಯಲ್ಲಿ ಗಂಗೊಳ್ಳಿ ನಿವಾಸಿ ಲಲಿತಾ ದೇವಾಡಿಗ ಎಂಬ ಅರವತ್ತರ ವೃದ್ಧೆ ನಿಗೂಢವಾಗಿ ಸಾವನ್ನಪ್ಪಿದ್ದರು. ಆಕೆಯ ಶುಶ್ರೂಷೆಗೆಂದು ವೈದ್ಯರನ್ನು ಕರೆತರುವ ನೆಪದಲ್ಲಿ ಹೊರ ಹೋಗಿದ್ದ ಅಝರ್ ನಾಪತ್ತೆಯಾಗಿದ್ದ. ಗುರುವಾರ ಬೆಳಿಗ್ಗೆ ಆತನ ಮೊಬೈಲ್ ಮಹರಾಷ್ಟ್ರದ ಗಡಿ ಪ್ರವೇಶಿಸಿತ್ತು. ಇದೀಗ ಮುಂಬೈಯಲ್ಲಿ ವಾಸವಿರುವ ಲಲಿತಾ ದೇವಾಡಿಗರ ಮಗಳು ಶೋಭಾ ಯಾನೇ ವೈಷ್ಣವಿ ಎಂಬಾಕೆಯೂ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. ಆಕೆ ಮನೆಯಿಂದ ಹೊರ ಹೋಗುವ ಮುನ್ನ ಆಕೆಯ ಗಂಡನಿಗೆ ಮೊಬೈಲ್‌ಗೆ ಕರೆ ಮಾಡಿದ್ದು ಆತ ಕಾಲ್ ರಿಸೀವ್ ಮಾಡಿರಲಿಲ್ಲ. ಆಕೆ ಮತ್ತೆ ಪುನಃ ಆತನ ಗಂಡನ ಮೊಬೈಲ್‌ಗೆ ಐ ಮಿಸ್ ಯೂ ಎಂದು ಸಂದೇಶ ಕಳಿಸಿದ್ದಳು ಎಂದು ತಿಳಿದು ಬಂದಿದೆ. ಆಕೆಯ ಮನೆ ಸಮೀಪದಲ್ಲಿಯೇ ಆಕೆಯ ಅಣ್ಣನ ಮನೆಯಿದ್ದರೂ ಅವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ಕುಂದಾಪುರದಿಂದ ನಾಪತ್ತೆಯಾದ ಯುವಕ ಹಾಗೂ ಆಕೆ ಇಬ್ಬರೂ ನಾಪತ್ತೆಯಾಗಿರುವುದರಿಂದ ಪ್ರಕರಣ ಇನ್ನಷ್ಟು ಕಗ್ಗಂಟಾಗಿದ್ದು, ನಾಪತ್ತೆಗೆ ಕಾರಣ ತಿಳಿದು ಬಂದಿಲ್ಲ. ಮೃತ ಲಲಿತಾರ ಮಗ ಮುಂಬೈಯಿಂದ ಆಗಮಿಸಿದ್ದು, ಘಟನಾ ಸ್ಥಳವನ್ನು ಶುಕ್ರವಾರ ಸಂಜೆ ವೀಕ್ಷಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ನಾಪತ್ತೆಯಾದವರಿಬ್ಬರೂ ಮುಂಬೈ ನಗರದ ಹೊರವಲಯದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದೆ. ಇಬ್ಬರ ಪತ್ತೆಯ ನಂತರವಷ್ಟೆ ಸತ್ಯ ತಿಳಿಯಬೇಕಿದೆ.
ಇನ್ನೂ ನಿಗೂಢ: ಪ್ರಸಿದ್ಧ ಲಾಡ್ಜೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ವೃದ್ಧೆಯ ಪ್ರಕರಣಕ್ಕೆ ದಿನವೂ ಒಂದೊಂದು ತಿರುವು ದೊರಕುತ್ತಿದ್ದು, ವೃದ್ಧೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪೂರಕವಾಗಿ ಮರಣೋತ್ತರ ಶವ ಪರೀಕ್ಷೆಯ ಸಂದರ್ಭ ಲಲಿತಾ ದೇವಾಡಿಗರ ಕುತ್ತಿಗೆಗೆ ತೆಳ್ಳನೆಯ ಬಟ್ಟೆಯಲ್ಲಿ ಸುತ್ತಿದ ಗುರುತುಗಳು ಪತ್ತೆಯಾಗಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಘಟನಾ ಸ್ಥಳದಲ್ಲಿ ಈ ಬಗ್ಗೆ ಪೊಲೀಸರಿಗಾಗಲೀ ಅಥವಾ ಸ್ಥಳೀಯರಿಗಾಗಲೀ ಯಾವುದೇ ಮಾಹಿತಿ ದೊರಕಿಲ್ಲವೆನ್ನಲಾಗಿದ್ದು, ತಕ್ಷಣ ಸರ್ಕಾರೀ ಆಸ್ಪತ್ರೆಗೆ ಸಾಗಿಸಿದ್ದು, ಮಣಿಪಾಲಕ್ಕೆ ಸಾಗಿಸಿದ್ದರಿಂದ ದೇಹವನ್ನು ವೀಕ್ಷಿಸಲು ಅಸಾಧ್ಯವಾಗಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಾಪತ್ತೆಯಾದ ಯುವಕ ಟವೆಲ್ಲಿನಲ್ಲಿ ಕುತ್ತಿಗೆಗೆ ಸುತ್ತಿ ಕೊಲೆಗೈದಿರಬಹುದೆಂದು ಶಂಕಿಸಲಾಗಿದೆಯಾದರೂ ಮರಣೋತ್ತರ ಶವ ಪರೀಕ್ಷೆಯ ವರದಿ ಲಭಿಸಿದ ನಂತರವಷ್ಟೇ ಖಚಿತ ನಿರ್ಧಾರಕ್ಕೆ ಬರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತ ಯುವಕ ಹಾಗೂ ಲಲಿತಾ ದೇವಾಡಿಗರ ಪುತ್ರಿ ಮತ್ತು ಆಕೆಯ ಮಕ್ಕಳು ನಾಫತ್ತೆಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕುಂದಾಪುರ ಪೊಲೀಸರು ಮಹರಾಷ್ಟ್ರಕ್ಕೆ ತೆರಳಿ ನಾಪತ್ತೆಯಾದವರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.