ಕಡಬ, ಎ.23 : ಆವರಣವಿಲ್ಲದ ಪಾಳು ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖಾಧಿಕಾರಿಗಳು ಸೆರೆಹಿಡಿಯಲು ಯತ್ನಿಸಿದರೂ, ಚಿರತೆಯು ತಪ್ಪಿಸಿಕೊಂಡು ಮರಳಿ ಕಾಡಿನತ್ತ ಓಡಿ ಹೋದ ಘಟನೆ ಕೊಲ ಗ್ರಾಮದ ವಳಕಡಮ ಪಡೆಚ್ಚಾರು ಎಂಬಲ್ಲಿ ಬುಧವಾರ ನಡೆದಿದೆ. ಕೋಳಿ ಬೇಟೆಯಾಡಲು ಬಂದಿದ್ದ ಚಿರತೆಯು ಪಡೆಚ್ಚಾರು ಕಮಲಾ ಎಂಬವರಿಗೆ ಸೇರಿದ ಆವರಣವಿಲ್ಲದ ಸುಮಾರು 20 ಅಡಿ ಆಳದ ಸುತ್ತಲತೆಯ ಪಾಲು ಬಾವಿಗೆ ಗುರುವಾರ ಮುಂಜಾವಿನ ವೇಳೆಗೆ ಬಿದ್ದಿದ್ದು, ಬಾವಿಯಲ್ಲಿ ನೀರು ಇಲ್ಲದ ಕಾರಣ ಬದುಕುಳಿದಿತ್ತು. ಚಿರತೆ ಮೇಲೆ ಬರಲು ಒದ್ದಾಡಿದ್ದರೂ ಸಫಲವಾಗಿರಲಿಲ್ಲ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸುಮಾರು 30ಕ್ಕೂ ಅಧಿಕ ಅರಣ್ಯ ಸಿಬ್ಬಂದಿಯ ತಂಡ ಚಿರತೆಯನ್ನು ಸೆರೆಹಿಡಿಯಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಪಡೆಚ್ಚಾರು ಪ್ರದೇಶದ ಪಕ್ಕದಲ್ಲಿ ಹರಿಯುತ್ತಿರುವ ಕುಮಾರಧಾರ ನದಿಯ ಇನ್ನೊಂದು ಪಾರ್ಶ್ವದ ಶಾಂತಿಗೋಡು ಕಾಡಿನಿಂದ ಬಂದಿದೆ ಎನ್ನಲಾದ ಚಿರತೆ, ಕಮಲಾ ಅವರ ಮನೆಯಲ್ಲಿನ ಸಾಕು ಕೋಳಿಯನ್ನು ಹಿಡಿಯಲು ಪ್ರಯತ್ನಿಸಿದೆ.
ಕೋಳಿ ತಪ್ಪಿಸಿಕೊಂಡು ಬಾವಿಯ ಹತ್ತಿರ ಬಂದಾಗ ಚಿರತೆ ಕೋಳಿಯನ್ನು ಅಟ್ಟಿಸಿಕೊಂಡು ಬಂದು ಬಾವಿಗೆ ಬಿದ್ದಿದೆ. ಕೋಳಿಯ ಚೀರಾಟ ಹಾಗೂ ನಾಯಿಗಳು ಬೊಗಳಿದ್ದರಿಂದಾಗಿ ಎಚ್ಚರಗೊಂಡಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆ ಸುಮಾರು 9 ಗಂಟೆಯಿಂದ ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಸೆರೆಹಿಡಿಯುವ ಪ್ರಯತ್ನ ನಡೆಸಿದರು. ಬಾವಿಯ ಸುತ್ತ ತಾತ್ಕಾಲಿಕ ಆವರಣ ರಚಿಸಿದರು. 11 ಗಂಟೆ ಸುಮಾರಿಗೆ ಮಂಗಳೂರಿನಿಂದ ತರಿಸಲಾದ ಬೋನು ಹಾಗೂ ಬಲೆಯನ್ನು, ಸ್ಥಳೀಯರು ರಚಿಸಿಕೊಟ್ಟ ಏಣಿಯನ್ನು ಬಳಸಿಕೊಂಡು ಅಧಿಕಾರಿಗಳು ಕಾರ್ಯಾಚರಣೆ ಪ್ರಾರಂಭಿಸಿದರು. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಬಾವಿಯ ಪಕ್ಕದಲ್ಲಿ ಬೋನು ಇಟ್ಟು, ಬಾವಿಯ ಸುತ್ತ ಬಳೆಯನ್ನು ಹಾಕಿ ಕಾರ್ಯಾಚರಣೆಯ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಲಾಯಿತು. ಬಳಿಕ ಚಿರತೆಯನ್ನು ಮೇಲಿನಿಂದ ನೀರು ಹಾಕಿ ಬಾವಿಯಿಂದ ಮೇಲೆತ್ತುವ ಪ್ರಯತ್ನ ನಡೆಸಲಾಯಿತು. ಈ ವೇಳೆ ಬಾವಿಯಿಂದ ಮೇಲೆಬಂದ ಚಿರತೆ ಬಲೆಯಿಂದ ತಪ್ಪಿಸಿಕೊಂಡು ಅಧಿಕಾರಿಗಳ ಕಣ್ಣು ತಪ್ಪಿಸಿ ಮರಳಿ ಕಾಡಿನತ್ತ ಪರಾರಿಯಾಯಿತು. ಪುತ್ತೂರು ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಹರೀಶ್ ಮಾರ್ಗದರ್ಶನದಲ್ಲಿ ಆರ್.ಎಫ್.ಒ. ಶ್ರೀಧರ್, ಪಂಜ ವಲಯ ಅರಣ್ಯಧಿಕಾರಿ ಪ್ರವೀಣ್, ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಹರ್ಷ ಸೇರಿದಂತೆ 30ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸುಳ್ಯ ಎ.ಸಿ.ಎಫ್. ಡಾ.ದಿನೇಶ್ ಕುಮಾರ್ ಉಪಸ್ಥಿತರಿದ್ದರು. ಕಡಬ ಪೊಲೀಸ್ ಸಿಬ್ಬಂದಿ ಮೋನಪ್ಪ, ಪಂಪಾಪತಿ ಬಂದೋಬಸ್ತ್ ಒದಗಿಸಿದರು.
ಅರಣ್ಯ ಅಧಿಕಾರಿಗಳೊಂದಿಗೆ ಸ್ಥಳೀಯರ ವಾಗ್ವಾದ ಸುಮಾರು ನೂರಕ್ಕೂ ಹೆಚ್ಚು ಸ್ಥಳೀಯರು ಆಗಮಿಸಿ ಕುತೂಹಲದಿಂದ ಕಾರ್ಯಾಚರಣೆಯನ್ನು ಗಮನಿಸುತ್ತಿದ್ದರು. ಚಿರತೆ ಬೋನಿಗೆ ಈಗ ಬೀಳುತ್ತದೆ ಎನ್ನುವಷ್ಟರಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿಕೊಂಡು ಪರಾರಿಯಾದಾಗ ಸ್ಥಳೀಯರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಎ.ಪಿ.ಎಂ.ಸಿ. ಸದಸ್ಯ ಶೀನಪ್ಪ ಗೌಡ, ಕೊಲ ಗ್ರಾಮ ಪಂಚಾಯತ್ ಸದಸ್ಯೆ ಪುಷ್ಪಾ, ಸ್ಥಳೀಯರಾದ ಮಾಧವ, ಸೋವಿತ್ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಚಿರತೆಯು ತಪ್ಪಿಸಿಕೊಳ್ಳುವಂತಾಗಿದೆ ಎಂದು ದೂರಿದರು. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ ಆದರೆ ಸಾರ್ವಜನಿಕರು ಜಮಾಯಿಸಿ ಗದ್ದಲ ಉಂಟು ಮಾಡಿದ್ದರಿಂದ ತಪ್ಪಿಕೊಂಡಿದೆ. ಈ ಹಿಂದೆ ವಿಟ್ಲ, ಕೋಳ್ನಾಡು ಮೊದಲಾದ ಪ್ರದೇಶಗಳಲ್ಲಿ ನಾಡಿಗೆ ಬಂದ ಚಿರತೆಯನ್ನು ಬೋನಿನಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡಿದೆ ಎಂದು ಸಮಜಾಯಿಷಿ ನೀಡುತ್ತಿದ್ದರೂ ಯಾವುದನ್ನ್ನೂ ಕಿವಿಗೆ ಹಾಕಿಕೊಳ್ಳದ ಮುಖಂಡರು ಸರಕಾರದ ಗಮನಕ್ಕೆ ತಂದು ಅಧಿಕಾರಿಗಳ ವಿರುದ್ಧ್ದ ಶಿಸ್ತು ಕ್ರಮಕ್ಕೆ ಆಗ್ರಹಿಸಲಾಗುವುದು. ತಪ್ಪಿಸಿಕೊಂಡ ಚಿರತೆ ಮತ್ತೆ ಈ ಭಾಗದಲ್ಲಿ ಉಪಟಲ ಶುರುವಿಟ್ಟುಕೊಂಡರೆ ಅದರಿಂದ ಆಗುವ ನಷ್ಟಕ್ಕೆ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.