ಕನ್ನಡ ವಾರ್ತೆಗಳು

ಲಾಡ್ಜ್‌ನಲ್ಲಿ ವೃದ್ಧೆ ಕೊಲೆ ಪ್ರಕರಣ; ಮುಂಬೈನಲ್ಲಿ ಆರೋಪಿ ಬಂಧನ : ಕುಂದಾಪುರ ಪೊಲೀಸರಿಂದ ಚುರುಕುಗೊಂಡ ತನಿಖೆ

Pinterest LinkedIn Tumblr

ಕುಂದಾಪುರ : ಎಪ್ರಿಲ್ ಹದಿನೈದರಂದು ಬುಧವಾರ ರಾತ್ರಿ ನಗರದ ವಸತಿ ಗೃಹವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ವೃದ್ಧೆಯ ಕೊಲೆ ಪ್ರಕರಣದ ಆರೋಪಿ ಅಜರ್ ಅಫ್ಜಲ್ ಖಾನ್ ಎಂಬಾತನನ್ನು ಕುಂದಾಪುರ ಪೊಲೀಸರು ಮುಂಬೈನಲ್ಲಿ ಬಂಧಿಸಿ ಕುಂದಾಪುರಕ್ಕೆ ಕರೆತಂದಿದ್ದಾರೆ. ಅಲ್ಲದೇ ಆತನೊಂದಿಗೆ ನಾಪತ್ತೆಯಾಗಿದ್ದ ವೈಷ್ಣವಿ ದೇವಾಡಿಗರನ್ನು ತನಿಖೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮುಂಬೈ ಪೊಲೀಸರ ಸಹಕಾರದಲ್ಲಿ ಅಹಮ್ಮದಾಬಾದ್‌ನಿಂದ ಇಬ್ಬರೂ ಮುಂಬೈಗೆ ಬಂದಿಳಿಯುವ ವೇಳೆ ಬಂಧಿಸಿರುವ ಮಾಹಿತಿಯಿದೆ.

Kndpr_Lodge_Murder Kndpr_Lodge_Murder (1)

(ಆರೋಪಿಯನ್ನು ಮುಂಬೈಯಿಂದ ಕರೆತರುತ್ತಿರುವ ಕುಂದಾಪುರ ಪೊಲೀಸರು)

ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ನಿವಾಸಿ ಲಲಿತಾ ದೇವಾಡಿಗರ ನಿಗೂಢ ಸಾವನ್ನು ಕೊಲೆ ಪ್ರಕರಣವೆಂದು ಮನೆಯವರು ನೀಡಿದ ದೂರಿನ ಆಧಾರದಲ್ಲಿ ಕುಂದಾಪುರ ಪೊಲೀಸರು ಆರೋಪಿಯ ಪತ್ತೆಗಾಗಿ ಎರಡೆರಡು ತಂಡಗಳಲ್ಲಿ ಮುಂಬೈ ಹಾಗೂ ಅಹಮದಾಬಾದ್‌ನಲ್ಲಿ ಶೋಧ ನಡೆಸಿದ್ದರಾದರೂ ಆರೋಪಿ ಅಝರ್ ಅಫ್ಝಲ್ ಖಾನ್ ಯಾನೇ ಅಜಯ್‌ಬಾಬುವನ್ನು ಹಾಗೂ ವೃದ್ಧೆಯ ಮಗಳು ಶೋಭಾ ಯಾನೇ ವೈಷ್ಣವಿಯನ್ನು ವಾರ ಕಳೆದರೂ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.

ಆರೋಪಿ ಮುಂಬೈಗೆ ತರಳಿರುವ ಬಗ್ಗೆ ಕುಂದಾಪುರ ಪೊಲೀಸರಿಗೆ ಮಾಹಿತಿ ಲಭಿಸಿದ ಕೂಡಲೇ ಒಂದು ತಂಡ ಮುಂಬೈಗೆ ಪ್ರಯಾಣಿಸಿತ್ತು. ಆಧರೆ ಅದಾಗಲೇ ಆರೋಪಿ ಅಝರ್, ಆತನ ಪ್ರೇಯಸಿ ಕೊಲೆಯಾದ ಲಲಿತಾ ದೇವಾಡಿರ ಮಗಳು ವೈಷ್ಣವಿಯೊಂದಿಗೆ ಅಹಮದಾಬಾದ್‌ಗೆ ತೆರಳಿರುವ ಬಗ್ಗೆ ಮಾಹಿತಿ ಪಡೆದು ಅಹಮದಾಬಾದ್‌ಗೆ ನಡೆದಿತ್ತು. ಅಷ್ಟು ಹೊತ್ತಿಗಾಗಲೇ ಅಝರ್ ಹಾಗೂ ವೈಷ್ಣವಿ ಮಕ್ಕಳನ್ನು ಬಿಡಲು ಮುಂಬೈಗೆ ಬಂದಿದ್ದರು. ಪುನಃ ಪೊಲೀಸರು ಮುಂಬೈಗೆ ಬಂದಾಗ ಅವರು ಅಲ್ಲಿಂದ ತಪ್ಪಿಸಿಕೊಂಡಿದ್ದರು.

kundapura_Lodge_Crime (8)

(ಕೊಲೆಗೀಡಾದ ಲಲಿತಾ ದೇವಾಡಿಗ)

ಚಿನ್ನಕ್ಕಾಗಿ ಕೊಲೆ: ಕಳೆದ ಎಂಟು ವರ್ಷಗಳ ಹಿಂದೆ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಆರೋಪಿ ಅಝರ್ ಅಂಗಡಿಯಿಂದ ಒಂದೂವರೆ ಲಕ್ಷ ರೂಪಾಯಿ ಲಪಟಾಯಿಸಿ ನಾಪತ್ತೆಯಾಗಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಅಲ್ಲದೇ ಆತ ಎಲ್ಲೆಡೆಯಲ್ಲಿಯೂ ತಾನು ಶ್ರೀಮಂತ ಎಂದು ನಂಬಿಸಿದ್ದನಾದರೂ ಆತನೊಬ್ಬ ಕ್ರಿಮಿನಲ್ ಎಂಬುದಾಗಿ ತಿಳಿದು ಬಂದಿದೆ. ಕೊಲೆಗೀಡಾದ ಲಲಿತಾ ದೇವಾಡಿಗರೂ ಲಾಡ್ಜ್‌ಗೆ ಬಂದಿದ್ದಾಗ ಸುಮಾರು ಹನ್ನೆರಡು ಪವನ್ ಬಂಗಾರದ ಸರ ಧರಿಸಿದ್ದು, ಕೈಬಳೆ ಧರಿಸಿದ್ದರು. ಅದನ್ನು ಲಪಟಾಯಿಸಿ ಮುಂಬೈಯ ಅಂಗಡಿಯೊಂದರಲ್ಲಿ ಮಾರಿದ್ದಾನೆ ಎಂಬುದಾಗಿಯೂ ಪೊಲೀಸರಿಗೆ ತನಿಖೆಯ ವೇಳೆ ತಿಳಿದು ಬಂದಿದೆ. ಅಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಅಝರ್ ಹಾಗೂ ವೈಷ್ಣವಿಗೆ ಪರಿಚಿತವಿರುವ ಮಹಿಳೆಯೊಬ್ಬಳು ವೈಷ್ಣವಿ ಮನೆಯಿಂದ ಹೊರಟ ರಾತ್ರಿ ಆಕೆಗೆ ಹಾಗೂ ಮಕ್ಕಳಿಗೆ ಉಳಿದುಕೊಳ್ಳಲು ಮನೆಯಲ್ಲಿಯೇ ಅವಕಾಶ ನೀಡಿರುವುದು ಬೆಳಕಿಗೆ ಬಂದಿತ್ತು.

ಆಕೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಪೊಲೀಸರು ಆಕೆಯನ್ನು ನಾಪತ್ತೆಯಾಧವರ ಜೊತೆ ಸಂಪರ್ಕದಲ್ಲಿರುವಂತೆ ತಾಕೀತು ಮಾಡಿದ್ದರು. ಈ ನಡುವೆ ವೈಷ್ಣವಿ ಇನ್ನೊಂದು ಮೊಬೈಲ್ ಬಳಸುತ್ತಿದ್ದು, ಅದನ್ನು ರೀಚಾರ್ಜ್ ಮಾಡಿದ ನಂತರ ಸಹಾಯ ಮಾಡಿದ ಮಹಿಳೆಗೆ ವೈಷ್ಣವಿ ಕರೆ ಮಾಡಿದ್ದು, ಮೂವತ್ತು ಸಾವಿರ ರೂಪಾಯಿ ಹೊಂದಿಸಿಕೊಡುವಂತೆ ಕೋರಿಕೊಂಡಿದ್ದಳು. ಇದನ್ನೇ ಬಳಸಿಕೊಂಡ ಪೊಲೀಸರು ಆರೋಪಿಗಳು ಮುಂಬೈಗೆ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆದುಕೊಂಡಿದ್ದು, ಭಾನುವಾರ ಸಂಜೆ ಆರೋಪಿಗಳನ್ನು ಕುಂದಾಪುರ ಠಾಣೆಗೆ ಕರೆತಂದಿದ್ದಾರೆ.

ಕಳೆದ ಹದಿನೆಂಟು ದಿನಗಳಿಂದ ನಾಪತ್ತೆಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಅಝರ್ ಮತ್ತು ವೈಷ್ಣವಿ ಬಂಧನಕ್ಕೆ ಕುಂದಾಪುರದ ಡಿವೈ‌ಎಸ್ಪಿ ಎಂ. ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ ಜಾಲ ಬೀಸಿದ್ದ ವೃತ್ತ ನಿರೀಕ್ಷಕ ಪಿ.ಎಂ ದಿವಾಕರ ಹಾಗೂ ಕುಂದಾಪುರ ಉಪನಿರೀಕ್ಷಕ ನಾಸೀರ್ ಹುಸೇನ್ ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದರು. ಕಳೆದ ಒಂದು ವಾರದಿಂದ ಉಪ ನಿರೀಕ್ಷಕ ನಾಸೀರ್ ಹುಸೇನ್ ಸಂಪೂರ್ಣವಾಗಿ ಆರೋಪಿಗಳ ಪತ್ತೆಗಾಗಿ ಜಾಲ ರೂಪಿಸುವ ಮೂಲಕ ಲಲಿತಾ ದೇವಾಡಿಗ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಲಿತಾ ಮಗಳನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದಾಗ ಕೋಪಗೊಂಡ ಲಲಿತಾ ಅಝರ್‌ಗೆ ಬೈದಿದ್ದು, ಇದರಿಂದ ಸಿಟ್ಟುಗೊಂಡು ಕೊಲೆ ಮಾಡಿದ ಬಗ್ಗೆ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದಿದೆ ಎನ್ನಲಾಗಿದೆ.

Write A Comment