ಮಂಗಳೂರು,ಮೇ.04: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡ 2015-16 ಕೊಂಕಣಿ ಕಲಿಕಾ ವರ್ಷದ ಪ್ರಾರಂಭೋತ್ಸವ ಮತ್ತು ಆಂದೋಲನದ ಉದ್ಘಾಟನೆಯನ್ನು ನಗರದ ಲಾಲ್ಬಾಗ್ನಲ್ಲಿ ಅಕಾಡೆಮಿ ಕಚೇರಿ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಬೆಸೆಂಟ್ ಕಾಲೇಜಿನ ಸಂಚಾಲಕ ಕುಡ್ಪಿ ಜಗದೀಶ್ ಶೆಣೈ “ಯೆಯಾ ಕೊಂಕ್ಣಿ ಶಿಕುಯಾ’ ಎಂದು ಬೋರ್ಡ್ನಲ್ಲಿ ಬರೆಯುವ ಮೂಲಕ ಈ ಆಂದೋಲನಕ್ಕೆ ಚಾಲನೆ ನೀಡಿದರು ಹಾಗೂ ದೈಜಿವರ್ಲ್ಡ್ ಪತ್ರಿಕೆ ಸಂಪಾದಕ ಹೇಮಾಚಾರ್ಯ, ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷೆ ಗೀತಾ ಸಿ. ಕಿಣಿ, ಕೊಂಕಣಿ ಶಿಕ್ಷಕಿ ಚಂದ್ರಿಕಾ ಶೆಣೈ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಮತ್ತು ರಿಜಿಸ್ಟ್ರಾರ್ ಡಾ| ದೇವದಾಸ್ ಪೈ ಇದಕ್ಕೆ ಸಹಿ ಮಾಡಿದರು.
ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಮಾತನಾಡಿ, ಅಕಾಡೆಮಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗ ತಾನು ಕೊಂಕಣಿ ಸಾಹಿತ್ಯ, ಸಂಸ್ಕತಿ ಮತ್ತು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲು ನಿರ್ಧರಿಸಿ ಕಳೆದ 14 ತಿಂಗಳಲ್ಲಿ ಈ ದಿಶೆಯಲ್ಲಿ ಕಾರ್ಯ ಪ್ರವೃತ್ತನಾಗಿದ್ದೇನೆ. 60 ಪ್ರಾಥಮಿಕ ಶಾಲೆ, 20 ಪ್ರೌಢ ಶಾಲೆ ಮತ್ತು 4 ಪದವಿ ಕಾಲೇಜುಗಳಲ್ಲಿ ಕೊಂಕಣಿ ಕಲಿಸಲಾಗುತ್ತಿದೆ. ತೃತೀಯ ಭಾಷೆಯಾಗಿ ಕೊಂಕಣಿ ಆಯ್ದುಕೊಂಡ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಎಸೆಸೆಲ್ಸಿ ಪರೀಕ್ಷೆ ಪಾಸಾಗಿದ್ದಾರೆ. ಸರಕಾರದ ವತಿಯಿಂದಲೇ ಕೊಂಕಣಿ ಶಿಕ್ಷಕರ ನೇಮಕಾತಿ ಆಗಬೇಕಾದರೆ ಕೊಂಕಣಿ ಕಲಿಸುವ ಶಾಲೆಗಳ ಮತ್ತು ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಕನಿಷ್ಠ 100 ಶಾಲೆಗಳಲ್ಲಿ 5,000 ವಿದ್ಯಾರ್ಥಿಗಳು ಕೊಂಕಣಿ ಕಲಿಯಬೇಕೆಂಬ ಗುರಿ ಇರಿಸಲಾಗಿದೆ. ಆದ್ದರಿಂದ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳು ಪೂರ್ತಿ ಈ ಅಭಿಯಾನ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಸುಮಾರು 50ರಷ್ಟು ಕೊಂಕಣಿ ಮಕ್ಕಳು ಭಾಗವಹಿಸಿದ್ದರು.
ಅಕಾಡೆಮಿ ಸದಸ್ಯ ಹಾಗೂ ಆಂದೋಲನದ ಸಂಯೋಜಕ ಲಾರೆನ್ಸ್ ಡಿ’ಸೋಜಾ, ಸದಸ್ಯರಾದ ಡಾ| ವಾರಿಜಾ ನಿರೆಬೈಲ್, ಶೇಖರ ಗೌಡ, ಕೊಚ್ಚಿಕಾರ್ ದೇವದಾಸ್ ಪೈ ಮೊದಲಾದವರು ಉಪಸ್ಥಿತರಿದ್ದರು.
ರಿಜಿಸ್ಟ್ರಾರ್ ಡಾ| ದೇವದಾಸ್ ಪೈ ಸ್ವಾಗತಿಸಿ, ಕೊಂಕಣಿ ಪ್ರಚಾರ ಸಂಚಾಲನದ ಕಾರ್ಯಕಾರಿ ಕಾರ್ಯದರ್ಶಿ ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರ್ವಹಿಸಿದರು. ಲಾರೆನ್ಸ್ ಡಿ’ಸೋಜಾ ವಂದಿಸಿದರು.