ನವದೆಹಲಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಮೂರು ತಿಂಗಳೊಳಗಾಗಿ ಬಿಬಿಎಂಪಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಆರು ತಿಂಗಳ ಕಾಲ ತಡೆ ನೀಡಿದ್ದ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪನ್ನು ರದ್ದುಪಡಿಸಿರುವ ಸುಪ್ರೀಂಕೋರ್ಟ್ ಪೀಠ ಬಿಬಿಎಂಪಿಗೆ 3 ತಿಂಗಳೊಳಗೆ ಚುನಾವಣೆ ನಡೆಸುವಂತೆ ಸೂಚಿಸಿದೆ.
ಆಡಳಿತರೂಢ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಿಬಿಎಂಪಿ ವಿಭಜನೆ ಮಾಡಲು ಮತ್ತು ಚುನಾವಣೆ ತಡೆಯಲು ಸಾಕಷ್ಟು ಕಸರತ್ತು ನಡೆಸಿತ್ತು. ಏತನ್ಮಧ್ಯೆ ಕಾನೂನು ಹೋರಾಟದಲ್ಲಿ ಬಿಬಿಎಂಪಿ ಚುನಾವಣೆ ಕುರಿತಂತೆ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪನ್ನು ರದ್ದುಪಡಿಸಿ ಆರು ತಿಂಗಳೊಳಗೆ ಚುನಾವಣೆ ನಡೆಸಿ ಎಂದು ವಿಭಾಗೀಯ ಪೀಠ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಪ್ರಶ್ನಿಸಿ ಬಿಬಿಎಂಪಿ ಸದಸ್ಯರು, ರಾಜ್ಯ ಚುನಾವಣಾ ಆಯೋಗ, ರಾಜ್ಯ ಬಿಜೆಪಿ ಘಟಕ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮೇ 30ರೊಳಗೆ ಚುನಾವಣೆ ನಡೆಸಿ ಎಂದು ಮೊದಲು ಆದೇಶ ನೀಡಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿದಿದೆ.
ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ 3 ತಿಂಗಳ ಕಾಲಾವಕಾಶ ಕೋರಿದ್ದರು. ಆ ನಿಟ್ಟಿನಲ್ಲಿ ಮೊದಲು 3 ತಿಂಗಳೊಳಗೆ ಚುನಾವಣೆ ನಡೆಸಿ, ನಂತರ ಬಿಬಿಎಂಪಿ ವಿಭಜಿಸಿ ಎಂದು ಆದೇಶ ನೀಡಿದೆ.
ಮೂರು ತಿಂಗಳೊಳಗೆ ಚುನಾವಣೆ ನಡೆಸುತ್ತೇವೆ. ಚುನಾವಣೆ ಬಳಿಕವೇ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಶುರು ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.