ರಾಷ್ಟ್ರೀಯ

ಯಾರ್ರೀ ಆ ಈಶ್ವರ.? :ಆರ್‌ಟಿಐ ಪ್ರಶ್ನೆಗೆ ದಿಕ್ಕು ತೋಚದೆ ಕುಳಿತ ಸರ್ಕಾರ.>!

Pinterest LinkedIn Tumblr

RTI-querry

ನವದೆಹಲಿ, ಮೇ 5- ಯಾರ್ರೀ ಆ ಈಶ್ವರ..? ಅದೇಕೆ… ಚುನಾಯಿತ ಪ್ರತಿನಿಧಿಗಳು ತಾವು ಅಧಿಕಾರ ಸ್ವೀಕರಿಸುವಾಗ ಅವನ ಹೆಸರಿನಲ್ಲಿ ಪ್ರಮಾಣ ಮಾಡುತ್ತೀರಿ..? ಇದು ಸಾಂವಿಧಾನಿಕವೇ..? ಆರ್‌ಟಿಐ ಕಾರ್ಯಕರ್ತರೊಬ್ಬರ ಈ ಪ್ರಶ್ನೆಗೆ ಕೇಂದ್ರ ಸರ್ಕಾರ ಈಗ ತಲೆ ಕೆಡಿಸಿಕೊಂಡು ಉತ್ತರ ಕೊಡಲು ತಿಣುಕಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಕ್ಕೇ ಸುಮ್ಮನಾಗದ ಆರ್‌ಟಿಐ ಕಾರ್ಯಕರ್ತ (ಅರ್ಜಿದಾರ) ಶ್ರದ್ಧಾನಂದ ಯೋಗಾಚಾರ್ಯ ಅವರು, ರಾಷ್ಟ್ರೀಯ ಚಿಹ್ನೆಯಂತೆ ಬಳಸಲಾಗುತ್ತಿರುವ ಸತ್ಯಮೇವ ಜಯತೇ ಪದಪುಂಜದ ಅರ್ಥವಾಪ್ತಿಯೇನು? ಅದನ್ನೇಕೆ ಬಳಸುತ್ತೀರಿ ಎಂದೂ ಪ್ರಶ್ನಿಸಿದ್ದಾರೆ.

ಈ ಆರ್‌ಟಿಐ ಅರ್ಜಿಯನ್ನು ಅಧ್ಯಕ್ಷರ ಕಾರ್ಯಾಲಯಕ್ಕೆ ಸಲ್ಲಿಸಿದ್ದು , ಅದನ್ನು ಗೃಹ ಸಚಿವಾಲಯಕ್ಕೆ ರವಾನಿಸಲಾಗಿತ್ತು. ಅವರು ಸಾಕಷ್ಟು ತಲೆ ಕೆಡಿಸಿಕೊಂಡು, ಉತ್ತರ ಹೇಳಲು ಸಾಧ್ಯವಾಗದೆ ಮತ್ತೆ ಅರ್ಜಿಯನ್ನು ಕಾನೂನು ಸಚಿವಾಲಯಕ್ಕೆ  ಸಾಗ ಹಾಕಿದ್ದಾರೆ. ಇದಕ್ಕೆ ಸಮರ್ಪಕ ಉತ್ತರ ಕಂಡು ಕೊಳ್ಳಲು ವಿಫಲವಾಗಿರುವ ಸರ್ಕಾರದ ಖಾತೆಗಳು ದಿಕ್ಕು ತೋಚದಂತಾಗಿವೆ.

ಆರ್‌ಟಿಐ ಕಾರ್ಯಕರ್ತ ಶ್ರದ್ಧಾನಂದ ಯೋಗಾಚಾರ್ಯ ಅವರು, ಕೇಂದ್ರ ವಾರ್ತಾ ಆಯುಕ್ತರ ಬಳಿಗೂ ಈ ಪ್ರಶ್ನೆ ಕೊಂಡೊಯ್ದಿದ್ದರು. ಇದನ್ನು ಪರಿಶೀಲಿಸಿದ ನಂತರ, ಹಳೆಯ ದಾಖಲೆಗಳಲ್ಲಿದ್ದಷ್ಟು ಮಾಹಿತಿಗಳನ್ನು ಮಾತ್ರ ನಾವು ನೀಡಬಲ್ಲೆವು ಎಂದು ಕಾನೂನು ಸಚಿವಾಲಯದ ಅಧಿಕಾರಿಯೊಬ್ಬರು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಹೇಳಿದ್ದರು. ಸತ್ಯಮೇವ ಜಯತೇ ಎಂಬುದು ಯಾವುದೇ ಸಾಂವಿಧಾನಿಕ ಪದವಲ್ಲ. ಮತ್ತು ಸತ್ಯ, ಧರ್ಮ, ಜಾತಿಯಂತಹ ಯಾವುದೇ ಶಬ್ದಗಳನ್ನೂ ಸಾಂವಿಧಾನಿಕವಾಗಿ ಬಳಸಿಲ್ಲ. ಸಂವಿಧಾನದ ಯಾವುದೇ ಭಾಗದಲ್ಲೂ ಈ ಶಬ್ದಗಳಿಗೆ ವ್ಯಾಖ್ಯಾನ ನೀಡಿಲ್ಲ. ಹಾಗಾಗಿ ಈ ಬಗ್ಗೆ ನಾವು ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಮೂಲಕ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ ಎಸ್.ಕೆ.ಚಿತ್ಕಾರ್ ಅವರು ಅರ್ಜಿದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದರು.

ಇವು ಸಾಂವಿಧಾನಿಕವಲ್ಲ:

ಇಂತಹ ಶಬ್ದಗಳನ್ನು ಸಂದರ್ಭೋಚಿತವಾಗಿ , ನ್ಯಾಯಾಲಯದ ತೀರ್ಪುಗಳು ಅಥವಾ ಕಾನೂನು ಪುಸ್ತಕಗಳಲ್ಲಿ ಬಳಸಲಾಗುತ್ತದೆ. ಈಶ್ವರ, ಸತ್ಯ, ಜಾತಿ, ನ್ಯಾಯ ಮತ್ತು ಧರ್ಮ ಮುಂತಾದ ಶಬ್ದಗಳಿಗೆ ಬೋಧಕರು, ಆಚಾರ್ಯರು ವ್ಯಾಖ್ಯಾನ ನೀಡಬಹುದೇ ಹೊರತು ಮಾಹಿತಿ ಹಕ್ಕು ಕಾನೂನಿನಡಿ ಅರ್ಥ ವಿವರಣೆ ಬಯಸಿದರೆ ವಿವರಣೆ ನೀಡುವುದು ಕಷ್ಟ. ಕಾನೂನಿನ ಬಗ್ಗೆ ಮಾತ್ರ ಇಲ್ಲಿ ಮಾಹಿತಿ ಒದಗಿಸಬಹುದಷ್ಟೇ ಎಂದು ಎಸ್.ಕೆ.ಚಿತ್ಕಾರ್ ಅವರು ಅರ್ಜಿದಾರ ಶ್ರದ್ಧಾನಂದ ಯೋಗಾಚಾರ್ಯರನ್ನು ಒಪ್ಪಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಈ ವಾದ ವಿವದಾಗಳಿಂದ ರೋಸಿ ಹೋಗಿರುವ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯಲು ಅವರು, ಈಶ್ವರ ಮತ್ತು ಸತ್ಯ ಶಬ್ದಗಳ ಬಗ್ಗೆ ನೀವು ವ್ಯಾಖ್ಯೆ ನೀಡಬಲ್ಲಿರಾ ಎಂದು ಅರ್ಜಿದಾರ ಶ್ರದ್ಧಾನಂದ ಯೋಗಾಚಾರ್ಯರನ್ನೇ ಪ್ರಶ್ನಿಸಿದ್ದಾರೆ.

Write A Comment