ನವದೆಹಲಿ, ಮೇ 5-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೂರು ರಾಷ್ಟ್ರಗಳ ವಿದೇಶಿ ಪ್ರವಾಸ 14 ರಿಂದ ಆರಂಭಗೊಳ್ಳಲಿದೆ. ಮೇ 14 ರಿಂದ 19ರವರೆಗೆ ಪ್ರಧಾನಿಯವರು ಚೀನಾ, ಮಂಗೋಲಿಯಾ ಹಾಗೂ ಕೊರಿಯಾ ಗಣರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಇಂದು ಅಧಿಕೃತವಾಗಿ ಘೋಷಿಸಿದೆ. ತಮ್ಮ ಆರು ದಿನಗಳ ವಿದೇಶಿ ಪ್ರವಾಸದಲ್ಲಿ ಪ್ರಧಾನಿ ಜೊತೆ ಸಚಿವರು ಮತ್ತು ಉನ್ನತಾಧಿಕಾರಿಗಳ ನಿಯೋಗ ತೆರಳಲಿದೆ. ಪ್ರಮುಖವಾಗಿ ಚೀನಾ ಪ್ರವಾಸದ ವೇಳೆ ಭಾರತದಲ್ಲಿ
ಬಂಡವಾಳ ಹೂಡುವಂತೆ ಅಲ್ಲಿನ ಉದ್ಯಮಿಗಳನ್ನು ಆಹ್ವಾನಿಸಲಿದ್ದಾರೆ. ಪ್ರಧಾನಿ ಮೋದಿ ತಮ್ಮ ಪ್ರವಾಸದ ಸಂದರ್ಭದಲ್ಲಿ ಚೀನಾ ಅಧ್ಯಕ್ಷರು, ಅಲ್ಲಿನ ಪ್ರಧಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಪ್ರಮುಖವಾಗಿ 2 ರಾಷ್ಟ್ರಗಳ ನಡುವೆ ಉಂಟಾಗಿರುವ ಗಡಿ ವಿವಾದ ಪರಿಹರಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ವ್ಯಾಪಾರಕ್ಕೆ ಮುಕ್ತ ಅವಕಾಶ ಕಲ್ಪಿಸುವುದು, ಬಂಡವಾಳ ಹೂಡಿಕೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಇದೇ ವೇಳೆ ಚೀನಾದಲ್ಲಿ ಮೋದಿಯವರು ಭಾರತೀಯರನ್ನುದ್ದೇಶಿಸಿ ಬೀಜಿಂಗ್‌ನಲ್ಲಿ ಭಾಷಣ ಮಾಡಲಿದ್ದಾರೆ. ಹಲವು ವರ್ಷಗಳ ಬಳಿಕ ಮಂಗೋಲಿಯಾ ಮತ್ತು ಕೊರಿಯಾ ಗಣರಾಜ್ಯಕ್ಕೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಒಟ್ಟಿನಲ್ಲಿ ಮೋದಿ ಕೈಗೊಳ್ಳಲಿರುವ ಮೂರು ರಾಷ್ಟ್ರಗಳ ವಿದೇಶಿ ಪ್ರವಾಸ ಈ ಬಾರಿ ಹಲವು ಹೊಸ ಭಾಷ್ಯ ಬರೆಯಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.