ಬೆಂಗಳೂರು, ಮೇ 5: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ ಬುಧವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ಮಳೆ ಅಡ್ಡಿಯಾಗದಿರಲಿ ಎಂದು ಆರ್ಸಿಬಿ ಪ್ರಾರ್ಥಿಸುತ್ತಿದೆ.
ಆರ್ಸಿಬಿ 9 ಪಂದ್ಯಗಳಲ್ಲಿ 9 ಅಂಕವನ್ನು ಸಂಪಾದಿಸಿದ್ದರೆ, ಪಂಜಾಬ್ 9 ಪಂದ್ಯಗಳಲ್ಲಿ ಕೇವಲ 4 ಅಂಕವನ್ನು ಪಡೆದಿದೆ. 2ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 7 ಪಂದ್ಯಗಳಲ್ಲಿ ಸೋಲನುಭವಿಸಿದೆ.
ಆರ್ಸಿಬಿ ಈ ವರ್ಷ ತವರು ಮೈದಾನದಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದು ಕೇವಲ 1ರಲ್ಲಿ ಗೆಲುವು ಸಾಧಿಸಿದೆ. ಕಳೆದ ವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಮಳೆ ಬಾಧಿತ 10 ಓವರ್ಗಳ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಮಳೆರಾಯ ಮತ್ತೊಮ್ಮೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಮುಂದಿನ ನಾಲ್ಕು ದಿನಗಳ ಕಾಲ ಗುಡುಗು ಸಹಿತ ಮಳೆ ಆಗಮಿಸುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರ ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವ ಅವಕಾಶವಿದ್ದರೂ ಪಂದ್ಯವನ್ನು ಕೈಚೆಲ್ಲಿರುವ ವಿರಾಟ್ ಕೊಹ್ಲಿ ಪಡೆ ಮನೆಯಂಗಳದಲ್ಲಿ ಪಂಜಾಬ್ ಕಿಂಗ್ಸ್ನ್ನು ಕಟ್ಟಿಹಾಕಲು ರಣನೀತಿಯನ್ನು ರಚಿಸಬೇಕಾಗಿದೆ. ಆರ್ಸಿಬಿ ಪ್ಲೇ-ಆಫ್ಗೆ ಅರ್ಹತೆ ಪಡೆಯಬೇಕಾದರೆ ಇನ್ನುಳಿದಿರುವ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.
ಬುಧವಾರದ ಪಂದ್ಯದ ಬಳಿಕ ಆರ್ಸಿಬಿ ತಂಡ ಮೇ 17 ರಂದು ತವರು ಮೈದಾನದಲ್ಲಿ ಕೊನೆಯ ಲೀಗ್ ಪಂದ್ಯವನ್ನು ಆಡುತ್ತದೆ. ಈ ನಡುವೆ ಐದು ದಿನಗಳಲ್ಲಿ ಮುಂಬೈ, ಮೊಹಾಲಿ ಹಾಗೂ ಹೈದರಾಬಾದ್ನಲ್ಲಿ ಪಂದ್ಯವನ್ನು ಆಡಲಿದ್ದು, ಈ ಎಲ್ಲ ಪಂದ್ಯಗಳು ಆರ್ಸಿಬಿಯ ಪ್ಲೇ-ಆಫ್ ಅರ್ಹತೆಗೆ ಅತ್ಯಂತ ಮುಖ್ಯವಾಗಿದೆ.
ಇದೇ ವೇಳೆ, ಕಳೆದ ವರ್ಷದ ರನ್ನರ್ಸ್-ಅಪ್ ತಂಡ ಪಂಜಾಬ್ ಸತತ 5 ಪಂದ್ಯಗಳಲ್ಲಿನ ಸೋಲಿನಿಂದ ಕಂಗಾಲಾಗಿದೆ. ಕಳೆದ ವರ್ಷದ ಐಪಿಎಲ್ನಲ್ಲಿ ಒಟ್ಟು 528 ರನ್ ಗಳಿಸಿರುವ ಆಸ್ಟ್ರೇಲಿಯದ ಗ್ಲೆನ್ ಮ್ಯಾಕ್ಸ್ವೆಲ್ ಈ ವರ್ಷ ಅಂತಿಮ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಈ ವರ್ಷದ ಐಪಿಎಲ್ನಲ್ಲಿ ಮ್ಯಾಕ್ಸ್ವೆಲ್ ಮಾತ್ರವಲ್ಲ ಇನ್ನೋರ್ವ ಪ್ರಮುಖ ಆಟಗಾರ ವೀರೇಂದ್ರ ಸೆಹ್ವಾಗ್ ಸಂಪೂರ್ಣ ವಿಫಲರಾಗಿದ್ದಾರೆ. ಸೆಹ್ವಾಗ್ ಕಳೆದ ವರ್ಷ ಒಟ್ಟು 455 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದರು.
ಜಾರ್ಜ್ ಬೈಲಿ ನೇತೃತ್ವದ ಪಂಜಾಬ್ ತಂಡದ ಬೌಲಿಂಗ್ ಮೊನಚು ಕಳೆದುಕೊಂಡಿದೆ. ಮಿಚೆಲ್ ಜಾನ್ಸನ್ 8 ಪಂದ್ಯಗಳಲ್ಲಿ ಕೇವಲ 9 ವಿಕೆಟ್ ಕಬಳಿಸಿದ್ದಾರೆ. 9 ಪಂದ್ಯಗಳಲ್ಲಿ ಕೇವಲ ನಾಲ್ಕಂಕವನ್ನು ಗಳಿಸಿರುವ ಪಂಜಾಬ್ನ ಪ್ಲೇ-ಆಫ್ ಕನಸು ಈಗಾಗಲೇ ಭಗ್ನಗೊಂಡಿದೆ. ಇದೀಗ ಪ್ರತಿಷ್ಠೆಗಾಗಿ ಉಳಿದ ಪಂದ್ಯಗಳನ್ನು ಆಡಬೇಕಾಗಿದೆ.