ಕಠ್ಮಂಡು(ಪಿಟಿಐ): ನೇಪಾಳ ಭೂಕಂಪದಲ್ಲಿ ಮೃತಪಟ್ಟ 530ಕ್ಕೂ ಅಧಿಕ ಜನರನ್ನು ಪಶುಪಾತಿನಾಥ ದೇವಾಲಯದ ಘಟ್ಟಗಳ ಬಳಿ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರದವರೆಗೆ ಒಂಬತ್ತು ಮಕ್ಕಳು ಸೇರಿದಂತೆ 533 ಜನರ ಶವ ಸಂಸ್ಕಾರ ಮಾಡಲಾಗಿದೆ. ಬಹುತೇಕ ಶವಗಳ ಅಂತ್ಯ ಸಂಸ್ಕಾರವನ್ನು ಚಿತೆಯ ಮೇಲೆ ನಡೆಸಲಾಗಿದೆ.
‘ಭೀಕರ ಭೂಕಂಪ ಸಂಭವಿಸಿದ ಮರುದಿನವೇ 82 ಜನರ ಅಂತ್ಯಸಂಸ್ಕಾರ ನಡೆಸಲಾಗಿದೆ. ಅದೊಂದು ಭೀಕರ ದೃಶ್ಯವಾಗಿತ್ತು. ಆದರೆ ಅದರ ಮರುದಿನ ಅದಕ್ಕಿಂತ ಭಯಾನಕ. ಏಕೆಂದರೆ ಅಂದು 152 ಮೃತದೇಹಗಳಿಗೆ ಅಗ್ನಿಸ್ಪರ್ಶ ಮಾಡಲಾಗಿತ್ತು’ ಎನ್ನುತ್ತಾರೆ ದೇವಾಲಯದ ಶವಸಂಸ್ಕಾರ ನೆರವು ಕೇಂದ್ರದ ಅಧಿಕಾರಿ ರಿತೇಶ್ ಕುಮಾರ್ .
ಭೂಕಂಪ ಸಂಭವಿಸಿದ ಒಂಬತ್ತು ದಿನಗಳ ನಂತರವೂ ಧ್ವಂಸಗೊಂಡ ಕಟ್ಟಡಗಳ ಅವಶೇಷಗಳಡಿಯಿಂದ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ.
ನೇಪಾಳಕ್ಕೆ ಬಾಂಗ್ಲಾ ನೆರವು ಢಾಕಾ(ಐಎಎನ್‌ಎಸ್): ಭೀಕರ ಭೂಕಂಪದಿಂದ ನಲುಗಿರುವ ನೇಪಾಳದ ಜನರಿಗಾಗಿ ಬಾಂಗ್ಲಾ ದೇಶವು ಕುಡಿಯುವ ನೀರು ಸೇರಿದಂತೆ ಒಂದು ಲಕ್ಷಟನ್ ಅಕ್ಕಿ ಒದಗಿಸಲು ಮುಂದಾಗಿದೆ.