ಮಂಗಳೂರು,ಮೇ.06 : ಬೆಂಕಿ ತಗುಲಿ ತೀವ್ರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾಗರ ಮೂಲದ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಯಬೇಕಾಗಿದ್ದು, ಪರೀಕ್ಷಾ ವರದಿಗೆ ತಹಸೀಲ್ದಾರ್ ಸಹಿ ಹಾಕಲು ತಡಮಾಡಿದರು ಎನ್ನಲಾಗಿದ್ದು, ಇದರಿಂದ ಕುಪಿತರಾದ ಸಂಬಂಧಿಕರು ಆಕೆಯ ಶವವಿಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ.
ಪರೀಕ್ಷಾ ವರದಿಯ ಸಹಿಗಾಗಿ ಬಂದಾಗ ಪ್ರಭಾರ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಉಪತಹಶೀಲ್ದಾರ್ ಯಾವುದೋ ಕೆಲಸದ ಕಾರಣ ಹೊರಗಡೆ ಹೋಗಿದ್ದರು. ಇದರಿಂದ ಆಕ್ರೋಶಗೊಂಡ ಆಕೆಯ ಸಂಬಂಧಿಕರು ಹೆಣವನ್ನು ಇಟ್ಟು ಪ್ರತಿಭಟಿಸಲು ಮುಂದಾಗಲಾರಂಭಿಸಿದ್ದಾರೆ. ಆದರೆ ಅದೇ ಕ್ಷಣ ಉಪ ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಸಹಿ ಹಾಕಿದ ಕಾರಣ ಸಂಬಂಧಿಕರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದು, ಗೊಂದಲ ನಿವಾರಣೆಗೊಂಡಿದೆ.