ಮಂಗಳೂರು,ಮೇ.06 : ಎಂಎಸ್‍ಇಝಡ್‍ಗಾಗಿ ಜಾಗ ನೀಡಿ ತಮ್ಮ ಮೂಲ ಭೂಮಿ ಕಳೆದುಕೊಂಡು ಕೋಡಿ ಕೆರೆಯಲ್ಲಿ ಜಾಗ ಪಡೆದಿರುವ ನಿವಾಸಿಗಳು ಕುಡಿಯಲು ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಉರ್ವಾಸ್ಟೋರ್ ನಲ್ಲಿರುವ ಎಂಎಸ್‍ಇಝೆಡ್ ಪ್ರಧಾನ ವ್ಯವಸ್ಥಾಪಕರ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ನಿರ್ವಸಿತರಿಗೆ ಜಾಗ ನೀಡಿರುವ ಎಂಎಸ್‍ಇಝಡ್ ಕೋಡಿಕೆರೆ ನಿವಾಸಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಸದ್ಯ ಈ ವ್ಯವಸ್ಥೆ ಸ್ಥಗಿತಗೊಂಡಿದೆ.
ಬೋರ್‍ವೆಲ್ ನೀರಿನಲ್ಲಿ ಬರುವ ಕಲುಷಿತ ನೀರು ಕುಡಿಯಲು ಅಯೋಗ್ಯವಾಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಕೂಡಾ ನಿಂತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರಿನ ಕೊರತೆಯ ಬಗ್ಗೆ ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರಿಗಳನ್ನು ಕರೆದು ಜನರಿಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕೆಂದು ಸೂಚಿಸಿದ್ದರು. ನೀರು ಪೂರೈಕೆ ವ್ಯವಸ್ಥೆಯನ್ನು ಮೂಡಾಕ್ಕೆ ವರ್ಗಾಯಿಸುತ್ತೇವೆ ಎಂದಿದ್ದ ಅಧಿಕಾರಿಗಳು ಬಳಿಕ ನಿರ್ಲಕ್ಷ ವಹಿಸಿದ್ದರಿಂದ ಈ ಸಮಸ್ಯೆ ತಲೆದೋರಿದೆ ಎಂದು ಮೂಡಾದ ಮಾಜಿ ಅಧ್ಯಕ್ಷ ರಮೇಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಪೋರೇಟರ್ ಗಣೇಶ್ ಹೊಸಬೆಟ್ಟು ಅವರು ಸುಮಾರು 400 ಕುಟುಂಬಗಳು ಕುಡಿಯಲು ನೀರಿಲ್ಲದೆ ಜನರು ಕಂಗೆಟ್ಟಿದ್ದು, ಅಧಿಕಾರಿಗಳ ನಿರ್ಲಕ್ಷ ಮಿತಿ ಮೀರಿದೆ ಎಂದರು.
ಇದಕ್ಕೆಲ್ಲ ಪ್ರತಿಕ್ರಿಯಿಸಿದ ಎಂಎಸ್‍ಇಝೆಡ್ ಪ್ರಧಾನ ವ್ಯವಸ್ಥಾಪಕ ಎಸ್.ಟಿ. ಕರ್ಕೇರ, ಆಡಳಿತ ನಿರ್ದೇಶಕರಿಗೆ ಈ ಬಗ್ಗೆ ಮಾಹಿತಿ ನೀಡಿ, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೆ ತಾತ್ಕಾಲಿಕವಾಗಿ 10 ಟ್ಯಾಂಕರ್ ನೀರು ಪೂರೈಸುವುದಲ್ಲದೆ, ಹೆಚ್ಚಿಗೆ ನೀರು ಅಗತ್ಯವಿದ್ದಲ್ಲಿ ಪೂರೈಸಲಾಗುವುದು ಎಂದು ಆಶ್ವಾಸನೆ ನೀಡಿದರು.