ಮುಂಬೈ, ಮೇ 6: ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ 2002ರ ಹಿಟ್ ಅಂಡ್ ರನ್ (ಗುದ್ದೋಡು) ಪ್ರಕರಣದಲ್ಲಿ ಬಾಲಿವುಡ್ ಚಿತ್ರರಂಗದ ಬ್ಯಾಡ್ಬಾಯ್ ಎಂದೇ ಖ್ಯಾತಿಯಾಗಿದ್ದ ಸೂಪರ್ಸ್ಟಾರ್ ಸಲ್ಮಾನ್ಖಾನ್ ಎಲ್ಲ ಆರೋಪಗಳು ಸಾಬೀತಾಗಿದ್ದು,ಆರೋಪಿಯಾದ ಸಲ್ಮಾನ್ಖಾನ್ಗೆ ಮುಂಬೈನ ಸೆಷನ್ಸ್ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಅವರ ಮೇಲೆ ದಾಖಲಾಗಿರುವ ಐಪಿಸಿ ಸೆಕ್ಷನ್-279 (ನಿರ್ಲಕ್ಷ್ಯ ಮತ್ತು ವೇಗಚಾಲನೆ), 304 ಪಾರ್ಟ್-2 (ಉದ್ದೇಶಪೂರ್ವಕ ಮಾನವ ಹತ್ಯೆ ಆರೋಪಿ) ಪ್ರಕಾರ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವಅವಕಾಶವಿತ್ತು.
ವಾದ-ವಿವಾದದ ಬಳಿಕ ಮಧ್ಯಾಹ್ನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಮೂರ್ತಿ ದೇಶಪಾಂಡೆ ಅವರು, ಸಲ್ಮಾನ್ ಖಾನ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದರು.
ತೀರ್ಪು ಪ್ರಕಟವಾಗುತ್ತಿದ್ದಂತೆ ಪೊಲೀಸರು ಸಲ್ಮಾನ್ ಖಾನ್ ಅವರನ್ನು ವಶಕ್ಕೆ ಪಡೆದಿದ್ದು, ಕೋರ್ಟ್ ನಿಂದ ನೇರವಾಗಿ ಮುಂಬೈನ ಆರ್ಥರ್ ರಸ್ತೆ ಜೈಲಿಗೆ ಕರೆದೊಯ್ಯಲಿದ್ದಾರೆ.
ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಕಟಕಟೆಯಲ್ಲಿ ನಿಂತಿದ್ದ ಸಲ್ಮಾನ್ಖಾನ್ ಒಂದು ಕ್ಷಣ ಸ್ಥಂಭೀಭೂತರಾದರು. ತಕ್ಷಣವೇ ವಕೀಲರು ಅವರನ್ನು ಸಮಾಧಾನಪಡಿಸಿದರು. ಇಡೀ ಬಾಲಿವುಡ್ ಚಿತ್ರರಂಗವೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಇಂದಿನ ತೀರ್ಪು ಸಲ್ಮಾನ್ಖಾನ್ ವೃತ್ತಿ ಜೀವನದ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಚಿತ್ರರಂಗದ ತಜ್ಞರು ವ್ಯಾಖ್ಯಾನಿಸಿದ್ದಾರೆ. ಏಕೆಂದರೆ, ಸಲ್ಮಾನ್ಖಾನ್ ನೆಚ್ಚಿಕೊಂಡು ಅನೇಕ ಚಿತ್ರನಿರ್ಮಾಪಕರು 600 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿದ್ದರು. ಈಗ ಇವರ ಸ್ಥಿತಿ ಡೋಲಾಯಮಾನವಾಗಿದೆ.
ಆರೋಪ ಸಾಬೀತು
ಸಲ್ಮಾನ್ಖಾನ್ ಮೇಲೆ ದಾಖಲಾಗಿದ್ದ ಎಂಟು ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಧೀಶರು ಹೇಳಿದರು. ನೀವು ಮದ್ಯಪಾನ ಸೇವಿಸಿ ಅದರ ಉತ್ತೇಜನದಿಂದಲೇ ಕಾರು ಚಾಲನೆ ಮಾಡಿದ್ದೀರಿ. ನಿಮ್ಮ ಚಾಲಕ ಅಶೋಕ್ಸಿಂಗ್ ಕಾರು ಚಾಲನೆ ಮಾಡುತ್ತಿರಲಿಲ್ಲ. ಈ ಪ್ರಕರಣದಲ್ಲಿ ನೀವು ಆರೋಪಿಯಾಗಿದ್ದೀರಿ ಎಂದು ನ್ಯಾಯಾಧೀಶರು ಹೇಳುತ್ತಿದ್ದಂತೆ ಸಲ್ಮಾನ್ಖಾನ್ ತಲೆ ತಗ್ಗಿಸಿ ಕಟಕಟೆಯಲ್ಲಿ ನಿಂತಿದ್ದರು. ಏನು ಶಿಕ್ಷೆ ನೀಡಬೇಕು..? ತೀರ್ಪು ಪ್ರಕಟವಾದ ಬಳಿಕ ನ್ಯಾಯಾಧೀಶ ದೇಶಪಾಂಡೆ ಅವರು ಉದ್ದೇಶಪೂರ್ವಕ ಮಾನವ ಹತ್ಯೆ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿರುವ ನಿಮಗೆ ಏನು ಶಿಕ್ಷೆ ನೀಡಬೇಕೆಂದು ಸಲ್ಮಾನ್ಖಾನ್ಗೆ ಪ್ರಶ್ನೆ ಮಾಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಲ್ಮಾನ್ಖಾನ್ ಪರ ವಕೀಲರು ನ್ಯಾಯಾಲಯವು ಮಾನವೀಯತೆ ದೃಷ್ಟಿಯಿಂದ ಕಡಿಮೆ ಪ್ರಮಾಣದ ಶಿಕ್ಷೆ ನೀಡಬೇಕೆಂದು ಕೋರಿಕೊಂಡರು. ನಾಳೆ ಸಲ್ಮಾನ್ಖಾನ್ಗೆ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.
ಫಲ ಕೊಡದ ಪ್ರಾರ್ಥನೆ
ಇದಕ್ಕೂ ಮುನ್ನ ಮುಂಬೈನ ತಮ್ಮ ನಿವಾಸದಿಂದ ಬೆಳಗ್ಗೆ 10 ಗಂಟೆಗೆ ತಮ್ಮ ನಿವಾಸದಿಂದ ಕಾರಿನಲ್ಲಿ ಸೆಷನ್ಸ್ ನ್ಯಾಯಾಲಯದತ್ತ ಹೊರಟರು. ತಂದೆ ಸಲೀಂಖಾನ್, ಸಹೋದರರಾದ ಅರ್ಭಜ್ಖಾನ್, ಸೋಹಿಲ್ಖಾನ್, ಸಹೋದರಿ ಅರ್ಪಿತಾ ಜತೆ ನ್ಯಾಯಾಲಯಕ್ಕೆ ಆಗಮಿಸಿದರು. ಈ ವೇಳೆ ದೇಶದ ನಾನಾ ಭಾಗಗಳಲ್ಲಿ ಸಲ್ಮಾನ್ಖಾನ್ ಅಭಿಮಾನಿಗಳು, ಬಂಧು-ಬಳಗದವರು ವಿಶೇಷ ಪೂಜೆ, ಹೋಮ, ಹವನ ಮಾಡಿ ನ್ಯಾಯಾಲಯದಲ್ಲಿ ಅವರಿಗೆ ಶಿಕ್ಷೆ ಕೊಡದಂತೆ ದೇವರಲ್ಲಿ ಪ್ರಾರ್ಥನೆ ಮಾಡಿದರು. ಆದರೆ, ನ್ಯಾಯದೇವತೆ ಮಾತ್ರ ಸಲ್ಮಾನ್ಖಾನ್ಗೆ ಕರುಣೆ ತೋರಲಿಲ್ಲ. ಕಟಕಟೆ ಪ್ರವೇಶಿಸುತ್ತಿದ್ದಂತೆ ನ್ಯಾಯಾಧೀಶರು ನೀವು ಈ ಪ್ರಕರಣದಲ್ಲಿ ಆರೋಪಿಯಾಗಿದ್ದೀರಿ. ಏನು ಶಿಕ್ಷೆ ನೀಡಬೇಕೆಂದು ಪ್ರಶ್ನಿಸಿದಾಗ, ಮೌನವೇ ಉತ್ತರವಾಗಿತ್ತು.
ತೀರ್ಪಿನ ಹಿನ್ನೆಲೆ
ಬಾಲಿವುಡ್ ಚಿತ್ರರಂಗದಲ್ಲಿ ಬಹುಬೇಗನೆ ಎತ್ತರಕ್ಕೆ ಬೆಳೆದ ಸೂಪರ್ ಸ್ಟಾರ್ ಸಲ್ಮಾನ್ಖಾನ್ ತಮ್ಮ ವಿವಾದದಿಂದಲೂ ಕುಖ್ಯಾತಿ ಗಳಿಸಿದ ಸ್ಫುರದ್ರೂಪಿ ನಟ. ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದ್ದ ಸಲ್ಮಾನ್ಖಾನ್ ನೋಡನೋಡುತ್ತಲೇ ಬಾಲಿವುಡ್ ಚಿತ್ರರಂಗದ ಕಣ್ಣು ಕುಕ್ಕುವಂತೆ ಎತ್ತರಕ್ಕೆ ಬೆಳೆದಿದ್ದರು. ಕೆಲವು ಬಾರಿ ಹಣ ಹೆಚ್ಚಾದಂತೆ ಮನುಷ್ಯನಿಗೆ ಅಹಂಕಾರವೂ ಹೆಚ್ಚಾಗುತ್ತದೆ ಎಂಬುದಕ್ಕೆ ಈ ನಟನ ವಿವಾದಗಳೇ ತಾಜಾ ನಿದರ್ಶನವಾಗಿವೆ. 2002 ಸೆಪ್ಟೆಂಬರ್ 28ರಂದು ಮುಂಬೈನ ಬಾಂದ್ರಾ ಹಿಲ್ ರಸ್ತೆಯಲ್ಲಿರುವ ಅಮೆರಿಕನ್ ಎಕ್ಸ್ಪ್ರೆಸ್ ಬೇಕರಿ ಬಳಿ ತಮ್ಮ ಲ್ಯಾಂಡ್ ಕ್ರೂಸರ್ ಕಾರನ್ನು ಚಾಲನೆ ಮಾಡುವಾಗ ಫುಟ್ಪಾತ್ ಮೇಲೆ ಮಲಗಿದ್ದ ಐದು ಜನರ ಮೇಲೆ ಸಲ್ಮಾನ್ಖಾನ್ ಹರಿಸಿದ್ದರು. ಮದ್ಯಪಾನ ಸೇವಿಸಿದ್ದ ಸಲ್ಮಾನ್ಖಾನ್ ಅವರ ಕಾರು ಹರಿದ ಪರಿಣಾಮ ಓರ್ವ ಸಾವನ್ನಪ್ಪಿ , ನಾಲ್ವರು ತೀವ್ರವಾಗಿ ಗಾಯಗೊಂಡಿದ್ದರು.
ಮುಂಬೈನ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿ, 2002 ಅಕ್ಟೋಬರ್ 7ರಂದು ಸಲ್ಮಾನ್ಖಾನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ನಂತರ ಇದೇ ತಿಂಗಳ 24ರಂದು ನ್ಯಾಯಾಲಯ ಜಾಮೀನು ನೀಡಿತ್ತು. ರಕ್ತಮಾದರಿ ಪರೀಕ್ಷೆಯಲ್ಲಿ ಸಲ್ಮಾನ್ಖಾನ್ ಶೇ.62ರಷ್ಟು ಆಲ್ಕೋಹಾಲ್ ಸೇವಿಸಿ ಕಾರು ಚಾಲನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿತ್ತು. 13 ವರ್ಷಗಳ ಸುದೀರ್ಘ ವಿಚಾರಣೆ ನಡೆದು ಇಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಮದ್ಯಪಾನ ಸೇವಿಸಿ ಚಾಲನೆ ಮಾಡುವವರಿಗೆ ಸಲ್ಮಾನ್ಖಾನ್ ಪ್ರಕರಣ ಎಚ್ಚರಿಕೆ ಗಂಟೆ ಎಂದರೂ ಅತಿಶಯೋಕ್ತಿಯಾಗಲಾರದು.