ಮಂಗಳೂರು,ಮೇ.09: ಮ.ನ.ಪಾ ವ್ಯಾಪ್ತಿಯಲ್ಲಿ ಮನೆ, ವಸತಿ ಸಮುಚ್ಛಯ ಸೇರಿದಂತೆ ಕಾನೂನುಬದ್ಧವಾಗಿ ನಿರ್ಮಾಣವಾಗುವ ಕಟ್ಟಡಗಳಿಗೆ ತ್ವರಿತಗತಿಯಲ್ಲಿ ಲೈಸನ್ಸ್ ಹಾಗೂ ಪೂರ್ಣಗೊಂಡಿರುವ ಕಟ್ಟಡಗಳಿಗೆ ವಾಸ್ತವ್ಯದ ಪರವಾನಗಿಯನ್ನು ತ್ವರಿತ ಗತಿಯಲ್ಲಿ ನೀಡಬೇಕು ಎಂದು ಎಂದು ನಗರಾಭಿವೃದ್ಧಿ ಖಾತೆ ಸಚಿವ ವಿನಯ ಕುಮಾರ್ ಸೊರಕೆ ಅಧಿಕಾರಿಗಳಿಗೆ ಸೂಚಿಸಿದರು. ಅವರು ಮ.ನ.ಪಾ ಸಭಾಂಗಣದಲ್ಲಿ ಶುಕ್ರವಾರ ನಾನಾ ಅಭಿವೃದ್ಧಿ ವಿಚಾರಗಳ ಬಗ್ಗೆ ಅಭಿಯಂತರರು ಮತ್ತು ಸಂಬಂಧಿತರ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಕ್ರೈಡಾಯ್ ಸಂಸ್ಥೆ, ಕಾರ್ಪೊರೇಟರ್ಗಳು, ಶಾಸಕರು ಸೇರಿದಂತೆ ಅನೇಕ ಮಂದಿ, ಕಟ್ಟಡ ನಿರ್ಮಾಣದ ಲೈಸನ್ಸ್ ಕುರಿತಂತೆ ಕಾರ್ಪೊರೇಶನ್ ಅಧಿಕಾರಿಗಳ ವಿಳಂಬ ನೀತಿಯ ಬೇಸರ ವ್ಯಕ್ತಪಡಿಸಿದರು. ಕ್ರೈಡಾಯ್ ಸಂಸ್ಥೆ ಅಧ್ಯಕ್ಷ ಡಿ.ಬಿ. ಮೆಹ್ತಾ ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಎರಡು ತಿಂಗಳಿಂದ ಲೈಸನ್ಸ್ ನೀಡುತ್ತಿಲ್ಲ. ಇದರಿಂದ ಕಟ್ಟಡ ನಿರ್ಮಾಣದ ಒಟ್ಟು ಖರ್ಚು ಹೆಚ್ಚಾಗಿ, ಅಂತಿಮವಾಗಿ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ನಗರದಲ್ಲಿ ಬಿಲ್ಡಿಂಗ್ ಬೈಲಾ ಇಲ್ಲದೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕಟ್ಟಡ ನಿರ್ಮಾಣ ಪೂರ್ಣಗೊಂಡು ಹಣ ಕಟ್ಟಿದರೂ, ವಾಸ್ತವ್ಯ ಸರ್ಟಿಫಿಕೇಟ್ ನೀಡುತ್ತಿಲ್ಲ. 1 ಕೋಟಿಯಷ್ಟಿರುವ ಭದ್ರತಾ ಠೇವಣಿ ಮರುಪಾವತಿಯಾಗಿಲ್ಲ. ನೀರಿನ ಸಂಪರ್ಕದ ಠೇವಣಿಯನ್ನು ಕಟ್ಟಡ ನಿರ್ಮಾಣದಾರರಿಗೆ ಮರಳಿಸಿಲ್ಲ ಮುಂತಾದ ಸಮಸ್ಯೆಗಳ ಬಗ್ಗೆ ಗಮನಕ್ಕೆ ಸೆಳೆದರು.
ಸಣ್ಣ ಮನೆ ಕಟ್ಟಲು ಲೈಸನ್ಸ್ ಪಡೆದುಕೊಳ್ಳುವುದಕ್ಕೆ ಇತರ ನಗರಗಳಂತೆ ಸಿಂಗಲ್ ವಿಂಡೋ ಸಿಸ್ಟಮ್ ತರಬೇಕು ಎಂದು ಎಂಜಿನಿಯರ್ ವಿಜಯವಿಷ್ಣು ಮಯ್ಯ ಆಗ್ರಹಿಸಿದರು. ಶಾಸಕ ಜೆ.ಆರ್. ಲೋಬೋ ಅವರು ಲೈಸನ್ಸ್ ನೀಡಲು ಯಾಕೆ ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿದರು.
ಮಧ್ಯಪ್ರವೇಶ ಮಾಡಿದ ಸಚಿವ ವಿನಯ ಕುಮಾರ್ ಸೊರಕೆ, ಬಂದಿರುವ ಅರ್ಜಿಗಳೆಷ್ಟು, ಲೈಸನ್ಸ್ ನೀಡಿದ್ದೆಷ್ಟು ಎಂದು ಕೇಳಿದಾಗ ನಗರ ಯೋಜನೆಯ ಅಧಿಕಾರಿ ಬಾಲಕೃಷ್ಣ ವಿವರ ನೀಡಿ, ಹೊಸ ಕಟ್ಟಡ ನಿರ್ಮಾಣಕ್ಕೆ 2233 ಅರ್ಜಿಗಳು ಬಂದಿದ್ದು, 1907ಕ್ಕೆ ಲೈಸನ್ಸ್ ನೀಡಲಾಗಿದೆ. 331 ಪ್ರಕ್ರಿಯೆಯಲ್ಲಿದೆ. ಕೆಲವೊಂದು ಕಾನೂನು ಉಲ್ಲಂಘನೆ ಮಾಡಿರುವುದರಿಂದ ಲೈಸನ್ಸ್ ನೀಡಿಲ್ಲ. ಅರ್ಜಿ ಬಂದ ಏಳು ದಿನದೊಳಗೆ ಉತ್ತರ ನೀಡುತ್ತೇವೆ ಎಂದು ವಿವರಿಸಿದರು. ಲೈಸನ್ಸ್ ಅರ್ಜಿಗಳನ್ನು ಎರಡು ವರ್ಷದ ವರೆಗೆ ಇಟ್ಟುಕೊಳ್ಳಬಹುದೇ ಎಂದು ಮಾಜಿ ಮೇಯರ್ ಮಹಾಬಲ ಮಾರ್ಲ, ಶಶಿಧರ ಹೆಗ್ಡೆ, ನವೀನ್ ಡಿಸೋಜ ಪ್ರಶ್ನಿಸಿದರು.
ಆಯುಕ್ತೆ ಹೆಪ್ಸಿಬಾ ರಾಣಿ ಕೊರ್ಲಾಪಟಿ ಮಾತನಾಡಿ, ಚೆಕ್ಲಿಸ್ಟ್ಗಳನ್ನು ಸರಿಯಾಗಿ ನೀಡುತ್ತಿಲ್ಲ. ಇದರಿಂದಾಗಿ ಪರಿಶೀಲನೆ, ಮರುಪರಿಶೀಲನೆ ಸಂದರ್ಭ ತಡವಾಗುತ್ತದೆ. ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿಲ್ಲ . ಕಟ್ಟಡದ ಟ್ಯಾರಿಸ್ ಮೇಲೆ ಶೀಟ್ ಹಾಕಬಹುದು. ಆದರೆ ಅದನ್ನು ಇತರ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಕಾನೂನು ಉಲ್ಲಂಘನೆಯಾಗುತ್ತದೆ. ನನಗೆ 17 ಫೈಲ್ ಬಂದಿದೆ. ಅದರಲ್ಲಿ ಬಹುತೇಕ ಕ್ಲೀಯರ್ ಆಗಿದೆ ಎಂದರು.