ಮಂಗಳೂರು,ಮೇ.11: ಅಭಿವೃದ್ಧಿ ಹೆಸರಿನಲ್ಲಿ ಹಿಂದೂ ದೇವಸ್ಥಾನಗಳಲ್ಲಿನ ಬಂಗಾರ ತೆಗೆದುಕೊಳ್ಳುವ ಸರಕಾರದ ನಿರ್ಧಾರ ಹಾಗೂ ಯೋಗದಿಂದ ‘ಓಂ‘ ಪದ ತೆಗೆಯುವುದನ್ನು ವಿರೋಧಿಸಿ ಹಿಂದೂ ಮಹಾಸಭಾ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಶ್ರಯದಲ್ಲಿ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿಂದೂ ಮಹಾಸಭಾದ ಧರ್ಮೇಂದ್ರ, ಭಕ್ತರು ದೇವಸ್ಥಾನಗಳಿಗೆ ದಾನ ನೀಡಿದ ಬಂಗಾರವನ್ನು ಬ್ಯಾಂಕಿನಲ್ಲಿ ಸಂಗ್ರಹಿಸಿಡುವ ನಿರ್ಧಾರಕ್ಕೆ ಸರಕಾರ ಬಂದಿರುವುದು ವಿಪರ್ಯಾಸ. ಅರ್ಥ ವ್ಯವಸ್ಥೆಯನ್ನು ಸುಧಾರಿಸಲು ದೇವಸ್ಥಾನಗಳ ಬಂಗಾರ ತೆಗೆದುಕೊಳ್ಳುವ ವಿಚಾರ ಮಾಡುವ ಸರಕಾರ ಮುಸಲ್ಮಾನ ಮತ್ತು ಕ್ರೈಸ್ತ ಧರ್ಮೀಯರ ಪ್ರಾರ್ಥನಾ ಸ್ಥಳಗಳ ಬಗ್ಗೆ ಇದೇ ರೀತಿಯ ನಿರ್ಧಾರಕ್ಕೆ ಬರುವುದೇ ಎಂದು ಪ್ರಶ್ನಿಸಿದರು.
ಕೇಂದ್ರ ಸರಕಾರ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಎಂದು ಆಚರಿಸುವ ನಿರ್ಣಯವನ್ನು ತೆಗೆದುಕೊಂಡಿದೆ. ಆದರೆ ಈ ಕಾರ್ಯಕ್ರಮಗಳಿಂದ ಯೋಗವನ್ನು ಜಾತ್ಯತೀತಗೊಳಿಸಲು ಯೋಗದಿಂದ ‘ಓಂ’ ತೆಗೆಯುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ವಾಸ್ತವದಲ್ಲಿ ಜೈನ, ಬೌದ್ಧ, ಸಿಕ್ಖ್ ಇಂತಹ ಇತರ ಧರ್ಮಗಳಲ್ಲಿಯೂ ಓಂ ಗೆ ಮಹತ್ವವಿದೆ. ಓಂ ನ್ನು ಸೃಷ್ಟಿಯ ಉತ್ಪತ್ತಿ ಕೇಂದ್ರವೆಂದೇ ತಿಳಿಯಲಾಗಿದೆ. ತೋರಿಕೆಯ ಜಾತ್ಯತೀತತೆಗಾಗಿ ಯೋಗದಿಂದ ಓಂ ತೆಗೆಯುವುದೆಂದರೆ ಅದು ದೊಡ್ಡ ಅಪಮಾನ. ಇಂತಹ ಕಾರ್ಯಕ್ಕೆ ಸರಕಾರ ಮುಂದಾಗಬಾರದು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಿವೇಕ ಪೈ, ಧರ್ಮಾಭಿಮಾನಿ ವಿವೇಕ್ ಅಂಚನ್, ಸನಾತನ ಸಂಸ್ಥೆಯ ಸಂಗೀತ ಪ್ರಭು ಉಪಸ್ಥಿತರಿದ್ದರು.