ಅಲ್ ಖೈದಾ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ನನ್ನು ಹತ್ಯೆ ಮಾಡಿ ಬೀಗಿದ್ದ ಅಮೆರಿಕಾ ಪಾಕಿಸ್ತಾನದ ಐಎಸ್ಐ ಏಜೆಂಟ್ ಒಬ್ಬನಿಗೆ ಬರೋಬ್ಬರಿ 155 ಕೋಟಿ ಹಣ ನೀಡಿ ಮಾಹಿತಿ ಪಡೆದಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
9/11 ದಾಳಿಯ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಅಮೆರಿಕದ ಸೀಲ್ ಪಡೆ ಅಬೊಟ್ಟಾಬಾದ್ ನ ಅಡಗುದಾಣಕ್ಕೆ ನುಗ್ಗಿ ಲಾಡೆನ್‘ನನ್ನ ಕೊಂದು ಹಾಕಿತ್ತು. ಅಲ್ಲದೇ ತಾನು ಮಾಹಿತಿಯನ್ನು ಸಂಗ್ರಹಿಸಿ ಖಚಿತ ಪಡಿಸಿಕೊಂಡ ನಂತರವೇ ದಾಳಿ ನಡೆಸಿದ್ದಾಗಿ ಎದೆಯುಬ್ಬಿಸಿ ಹೇಳಿತ್ತು. ಆದರೆ, ಇದೀಗ ಹೊರಬಂದಿರುವ ಸುದ್ದಿಯ ಪ್ರಕಾರ, ಲಾಡೆನ್ ಬಗೆಗೆ ಪಾಕಿಸ್ತಾನದ ಐಎಸ್ಐ ಏಜೆಂಟ್ ಗೆ ಹಣ ನೀಡಿ ಪಡೆದಿತ್ತು ಎನ್ನಲಾಗಿದೆ.
ಪಾಕಿಸ್ತಾನದಲ್ಲಿದ್ದ ಅಮೆರಿಕದ ರಾಯಭಾರ ಕಚೇರಿಗೆ ಬೇಟಿ ನೀಡಿದ್ದ ಏಜೆಂಟ್ ಲಾಡೆನ್ ತಲೆಗೆ ವಿಧಿಸಿರುವ ಹಣವನ್ನು ತನಗೆ ಕೊಟ್ಟರೆ ಅವನ ಅಡಗುದಾಣದ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದ. ಅದರಂತೆ ಅಮೆರಿಕ 25 ಮಿಲಿಯನ್ ಡಾಲರ್(155 ಕೋಟಿ ರೂ.)ಹಣ ನೀಡಿ ಮಾಹಿತಿ ಪಡೆದಿತ್ತು ಎಂದು ಅಮೆರಿಕದ ಹಿರಿಯ ಪತ್ರಕರ್ತ ಪುಲಿಟ್ಜರ್ ಪ್ರಶಸ್ತಿ ವಿಜೇತ ಸೀಮೌರ್ ಹೆರ್ಶ ಈ ಸ್ಫೋಟಕ ಸುದ್ದಿಯನ್ನು ಹೊರ ಹಾಕಿದ್ದಾರೆ.
ಅಲ್ಲದೇ 2011ರಲ್ಲಿ ಲಾಡೆನ್ ಹತ್ಯೆಯ ದಿನ ಸೀಲ್ ಪಡೆ ಇದ್ದ ಅಮೆರಿಕದ ಹೆಲಿಕಾಪ್ಟರ್ ಗಳು ಪಾಕಿಸ್ತಾನಕ್ಕೆ ಬಂದ ಬಗ್ಗೆ ಅಂದಿನ ಸೇನಾ ಮುಖ್ಯಸ್ಥ ಖಯಾನಿ, ಐಎಸ್‘ಐ ಮುಖ್ಯಸ್ಥ ಅಹಮ್ಮದ್ ಪಾಶಾಗೆ ತಿಳಿದಿತ್ತು ಎಂದು ಪತ್ರಿಕೆಯೊಂದು ವರದಿ ಮಾಡುವ ಮೂಲಕ ಆಚ್ಚರಿಗೆ ಕಾರಣವಾಗಿದೆ.