ಚಿತ್ರದುರ್ಗ: ವ್ಯಕ್ತಿಯೊಬ್ಬನೊಂದಿಗೆ ತನ್ನ ತಾಯಿ ಅನೈತಿಕ ಸಂಬಂಧ ಹೊಂದಿದ್ದರಿಂದ ಬೇಸತ್ತ ಮಗಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಿಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಿಂಗೇನಹಳ್ಳಿಯ 16 ವರ್ಷದ ಶೃತಿ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು, ಈಕೆ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳೆಂದು ತಿಳಿದುಬಂದಿದೆ. ತನ್ನ ತಾಯಿ ಅದೇ ಗ್ರಾಮದ ವ್ಯಕ್ತಿಯೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು ಅರಿತಿದ್ದ ಶೃತಿ ಹಲವು ಬಾರಿ ಇಬ್ಬರಿಗೂ ಬುದ್ದಿ ಹೇಳಿದ್ದಳೆನ್ನಲಾಗಿದೆ.
ಅಲ್ಲದೇ ಗ್ರಾಮದ ಹಿರಿಯರನ್ನು ಸೇರಿಸಿ ಪಂಚಾಯಿತಿ ಸಹ ನಡೆಸಿದ್ದು, ಇದರಿಂದ ಅಕ್ರೋಶಗೊಂಡಿದ್ದ ಆಕೆಯ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಪಾನಮತ್ತನಾಗಿ ಬಂದು ಮನೆ ಮುಂದೆ ಗಲಾಟೆ ಮಾಡಿದ್ದನೆನ್ನಲಾಗಿದೆ. ಇದೆಲ್ಲದರಿಂದ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ಬರೆದಿಟ್ಟಿರುವ ಆಕೆ, ತಮ್ಮ ಕುಟುಂಬದ ನೆಮ್ಮದಿ ಹಾಳು ಮಾಡಿರುವ ವ್ಯಕ್ತಿಯನ್ನು ಜೀವನಪರ್ಯಂತ ಜೈಲಿಗೆ ಕಳುಹಿಸಿ ಎಂದು ಮನವಿ ಮಾಡಿದ್ದಾಳಲ್ಲದೇ ತನ್ನ ಸಾವಿಗೆ ಆತನೇ ಕಾರಣವೆಂದು ತಿಳಿಸಿದ್ದಾಳೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.