ಸದಾ ರಾಜಕೀಯ ಮುಖಂಡರ ಬಗೆಗೆ ಕಿಡಿ ಕಾರುತ್ತಿದ್ದ ಶಿವಸೇನೆ ಇದೀಗ ನ್ಯಾಯಾಂಗ ವ್ಯವಸ್ಥೆಯ ಬಗೆಗೆ ಕಿಡಿ ಕಾರುವ ಮೂಲಕ ಅಚ್ಚರಿಗೆ ಕಾರಣವಾಗಿದೆ.
ಸರ್ಕಾರಿ ಜಾಹೀರಾತಿನಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ಅವರ ಛಾಯಾಚಿತ್ರಗಳನ್ನು ಮಾತ್ರ ಪ್ರಕಟಿಸಬೇಕೆಂಬ ಸುಪ್ರೀಂನ ಆದೇಶವನ್ನು ಟೀಕಿಸಿರುವ ಶಿವಸೇನೆ ತನ್ನ ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಸುಪ್ರೀಂಕೋರ್ಟ್ನ ಇತ್ತೀಚಿನ ಆದೇಶವನ್ನು ಉಲ್ಲೇಖಿಸಿ ನ್ಯಾಯಾಂಗವನ್ನು ಅಪಹಾಸ್ಯ ಮಾಡಿದೆ.
‘ಜೀ ಮಹಾರಾಜಾ’ ತಲೆಬರಹದಲ್ಲಿರುವ ಈ ಸಂಪಾದಕೀಯದಲ್ಲಿ, ‘ನ್ಯಾಯಾಲಯದ ಆದೇಶಗಳಿಗೆಲ್ಲಾ ‘ಸರಿ ಮಹಾಪ್ರಭು, ನಾವು ಪಾಲಿಸುತ್ತೇವೆ’ ಎಂದು ತಲೆ ಬಾಗಿ ಒಪ್ಪಿಕೊಳ್ಳುತ್ತೇವೆ. ಆದರೆ, ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವ ಧೈರ್ಯವನ್ನು ಯಾರೂ ಮಾಡುವುದಿಲ್ಲ ಆದರೆ ಯಾರು ಯಾರನ್ನು ಮದುವೆಯಾಗಬೇಕು, ಪತಿ ಪತ್ನಿ ಹೇಗೆ ವರ್ತಿಸಬೇಕು, ಅವರು ಮಲಗುವ ಕೋಣೆಯ ಪರದೆಯ ಬಣ್ಣ ಯಾವುದಾಗಿರಬೇಕು, ಅವರು ಏನನ್ನು ತಿನ್ನಬೇಕು, ಏನನ್ನು ಕುಡಿಯಬೇಕು, ರಾಮ ಮಂದಿರವನ್ನು ಏನು ಮಾಡಬೇಕು..?ಈ ಎಲ್ಲವನ್ನೂ ನ್ಯಾಯಾಲಯಗಳೇ ನಿರ್ಧರಿಸಬೇಕೇ ಎಂದು ಖಾರವಾಗಿ ಪ್ರಶ್ನಿಸಿದೆ.
ಅಲ್ಲದೇ ಇತ್ತೀಚೆಗೆ ಸುಪ್ರೀಂಕೋರ್ಟ್ ಚುನಾಯಿತ ಸರ್ಕಾರವನ್ನು ಹಿಂದಿಕ್ಕಿ ಆಡಳಿತದ ವಿಷಯಗಳ ಬಗ್ಗೆ ನಿರ್ದೇಶನ ನೀಡಲು ಮುಂದಾಗಿದ್ದು ಈ ಕುರಿತು ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸದೆ ಆದೇಶವನ್ನು ಒಪ್ಪಿಕೊಳ್ಳುವುದು ಮಾತ್ರ ನಮಗುಳಿದಿರುವ ಆಯ್ಕೆ ಎಂದು ಶಿವಸೇನೆ ತನ್ನ ಅಸಮಧಾನ ವ್ಯಕ್ತಪಡಿಸಿದೆ.