ಬೆಂಗಳೂರು: ನಿರ್ಮಾಪಕರು ಎಂದು ಸಬೂಬು ಹೇಳಿದ್ದ ನಗರದ ಇಬ್ಬರು ವ್ಯಕ್ತಿಗಳು ಮುಂಬೈ ಮೂಲದ ಕಿರುತೆರೆ ನಟಿಯೋರ್ವಳ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಇಲ್ಲಿನ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರಕ್ಕೊಳಗಾದ ಯುವತಿ ಕಿರುತೆರೆ ನಟಿಯಾಗಿದ್ದು, ಮಹಾರಾಷ್ಟ್ರ ಮೂಲದವಳಾಗಿದ್ದಾಳೆ. ಈಕೆಯನ್ನು ನಟನೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿ ಕರೆಸಿಕೊಂಡ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ಮಾರ್ಚ್ 25ರಂದು ಅತ್ಯಾಚಾರ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿ ಪೊಲೀಸ್ ಠಾಣೆಯ್ಲಲಿ ದೂರು ದಾಖಲಿಸಿದ್ದು, ನ್ಯಾಯದ ಮೊರೆ ಹೋಗಿದ್ದಾಳೆ.
ಇನ್ನು ಈ ಪ್ರಕರಣವು ಕಳೆದ ಮಾರ್ಚ್ 25ರಂದು ನಡೆದಿದ್ದು, ಆಯ್ಕೆ ಪ್ರಕ್ರಿಯೆಗಾಗಿ ಕರೆಸಿಕೊಂಡ ವ್ಯಕ್ತಿಗಳು ನಗರದ ಲಾಡ್ಜ್ ವೊಂದರಲ್ಲಿ ಕೊಠಡಿಯನ್ನು ಪಡೆದು ತಂಗಿದ್ದರು. ಈ ವೇಳೆ ಹಾಲಿನಲ್ಲಿ ಮತ್ತು ಬರಿಸುವ ಮಾತ್ರೆಯನ್ನು ಮಿಶ್ರಣ ಮಾಡಿ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.
ಇನ್ನು ಘಟನೆ ನಡೆದು ಎರಡು ತಿಂಗಳು ಕಳೆದರೂ ಕೂಡ ತಾವು ಏಕೆ ದೂರು ದಾಖಲಿಸಿರಲಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಂತ್ರಸ್ತೆ, ಅತ್ಯಾಚಾರ ಸಂದರ್ಭದಲ್ಲಿನ ಎಲ್ಲಾ ವಿಡಿಯೋಗಳು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಅಲ್ಲದೆ ಏನಾದರೂ ಈ ವಿಷಯವನ್ನು ಬೇರೆಡೆ ತಿಳಿಸಿದಲ್ಲಿ ಈ ಎಲ್ಲಾ ವಿಡಿಯೋಗಳನ್ನು ಅಂತರ್ಜಾಲದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ದೂರು ನೀಡಿರಲಿಲ್ಲ ಎಂದಿದ್ದಾಳೆ.
ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಠಾಣೆ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.